ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದುಗೊಂಡ ಎರಡು ತಿಂಗಳ ಬಳಿಕ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಸೋಮವಾರ ರಾಜ್ಯದ ಅನೇಕ ಭಾಗಗಳಲ್ಲಿ ಪೋಸ್ಟ್ಪೇಯ್ಡ್ ಮೊಬೈಲ್ ಸೇವೆಗಳನ್ನು ಮರುಸ್ಥಾಪಿಸಿದೆ. ಸೇವೆಗಳನ್ನು ಮಧ್ಯಾಹ್ನ 12 ಗಂಟೆಗೆ ಕಾರ್ಯರೂಪಕ್ಕೆ ತರಲಾಯಿತು. ಇದರೊಂದಿಗೆ, ಕಣಿವೆಯಲ್ಲಿ ಕನಿಷ್ಠ 40 ಲಕ್ಷ ಪೋಸ್ಟ್ಪೇಯ್ಡ್ ಸಂಪರ್ಕಗಳನ್ನು ಇಂದಿನಿಂದ ಕಾರ್ಯರೂಪಕ್ಕೆ ತರಲಾಗಿದೆ. 20 ಲಕ್ಷಕ್ಕೂ ಹೆಚ್ಚು ಪ್ರಿಪೇಯ್ಡ್ ಮೊಬೈಲ್ ಸಂಪರ್ಕಗಳು ಮತ್ತು ಇತರ ಇಂಟರ್ನೆಟ್ ಸೇವೆಗಳು ಈಗಲೂ ನಿಷ್ಕ್ರಿಯಗೊಂಡಿವೆ.
ದೂರಸಂಪರ್ಕ ಸೇವೆಗಳನ್ನು ಮರುಸ್ಥಾಪಿಸುವುದರ ಹೊರತಾಗಿ, ಜಮ್ಮು ಮತ್ತು ಕಾಶ್ಮೀರದ ಶೇ.99ರಷ್ಟು ಪ್ರದೇಶಗಳಲ್ಲಿ ಚಲನ ವಲನದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಲ್ಯಾಂಡ್ಲೈನ್ ಸೇವೆಗಳನ್ನು ಸಹ ರಾಜ್ಯದಲ್ಲಿ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ ಮತ್ತು ಆರು ವಾರಗಳಿಂದ ಕಾರ್ಯನಿರ್ವಹಿಸುತ್ತಿದೆ.
ಅಕ್ಟೋಬರ್ 10 ರಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಪ್ರವಾಸಿಗರಿಗೆ ನಿರ್ಬಂಧವನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಮೊಬೈಲ್ ಫೋನ್ ಸೇವೆಗಳನ್ನು ಪುನಃಸ್ಥಾಪಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಪ್ರದೇಶಕ್ಕೆ ಭೇಟಿ ನೀಡಲು ಬಯಸುವ ಪ್ರವಾಸಿಗರಿಗೆ ಅಗತ್ಯ ನೆರವು ಮತ್ತು ಸೌಲಭ್ಯ ನೀಡಲಾಗುವುದು ಎಂದು ಆಡಳಿತ ಹೇಳಿದೆ.
ಕಳೆದ ವಾರ, ಜಮ್ಮು ಮತ್ತು ಕಾಶ್ಮೀರ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಅವರು ಈ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಪೋಸ್ಟ್ಪೇಯ್ಡ್ ಮೊಬೈಲ್ ಸೇವೆಗಳನ್ನು ಪುನಃಸ್ಥಾಪಿಸಲಾಗುವುದು ಎಂದು ಹೇಳಿದ್ದರು. ಲ್ಯಾಂಡ್ಲೈನ್ ನೆಟ್ವರ್ಕ್ ಅನ್ನು ಹಂತಗಳಲ್ಲಿ ಪುನಃಸ್ಥಾಪಿಸಲಾಗಿದ್ದರೂ, ಕಣಿವೆಯ ವಿವಿಧ ಭಾಗಗಳಲ್ಲಿ ಮೊಬೈಲ್ ಸಾಧನಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ.
“ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದ ಉಳಿದ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಸೇವೆಗಳನ್ನು ಪುನಃಸ್ಥಾಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಟೆಲಿಕಾಂ ಎಲ್ಲಾ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳು ಪುನಃಸ್ಥಾಪನೆಯಾಗುತ್ತವೆ ಮತ್ತು ಅಕ್ಟೋಬರ್ 14 ಸೋಮವಾರ ಮಧ್ಯಾಹ್ನ 12 ರಿಂದ ಕಾರ್ಯನಿರ್ವಹಿಸುತ್ತವೆ. ಇದು ಕಾಶ್ಮೀರ ಪ್ರಾಂತ್ಯದ ಎಲ್ಲಾ 10 ಜಿಲ್ಲೆಗಳನ್ನು ಒಳಗೊಳ್ಳುತ್ತದೆ” ಎಂದು ಕನ್ಸಾಲ್ ಅಕ್ಟೋಬರ್ 12 ರಂದು ಹೇಳಿಕೆ ನೀಡಿದ್ದರು.
ಜಮ್ಮು ಕಾಶ್ಮೀರದಲ್ಲಿ ಪೋಸ್ಟ್ಪೇಯ್ಡ್ ಮೊಬೈಲ್ ಸೇವೆಗಳು ಪುನರಾರಂಭಗೊಂಡಿದ್ದು, ಅಲ್ಲಿ ಹಂತ ಹಂತವಾಗಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ ಎಂಬ ಭರವಸೆಯನ್ನು ದೃಢಗೊಳಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.