ಭಾರತದ ಕ್ಷಾತ್ರ ಪರಂಪರೆಗೆ ಪಂಚನದಿಯ ನಾಡು ಪಂಜಾಬಿನ ಕೊಡುಗೆ ಅಪಾರ. ಅದರ ಇತಿಹಾಸ ವೈದಿಕ ಕಾಲದಿಂದ ಮೊದಲ್ಗೊಂಡು ಆಧುನಿಕ ಕಾಲದ ಸೈನ್ಯದವರೆಗೆ ಅವಿಚ್ಛಿನ್ನವಾಗಿ ಹರಿದು ಬಂದಿದೆ. ಹಿಂದೂಧರ್ಮದ ಉಳಿವಿಗಾಗಿ ಗುರುನಾನಕರ ದೂರದೃಷ್ಟಿಯಿಂದ ‘ಸಿಖ್’ ಸಂಪ್ರದಾಯದ ಜನನವಾಯಿತು. ಸಿಕ್ಖರ ಹತ್ತು ಗುರುಗಳು ಕಾಲಕಾಲಕ್ಕೆ ಹಿಂದೂ ಧರ್ಮ ಹಾಗೂ ಭಾರತ ವಿರೋಧಿಗಳ ವಿರುದ್ಧ ತೀವ್ರವಾಗಿ ಹೋರಾಡಿದವರು. ಇದೇ ಪರಂಪರೆಯಲ್ಲಿ ಉಜ್ವಲವಾಗಿ ಕಾಣುವ ಹೆಸರು ಸಿಖ್ ಸಂಪ್ರದಾಯದ ಹತ್ತನೆಯ ಹಾಗೂ ಕೊನೆಯ ಗುರುಗಳಾಗಿದ್ದ ಗುರು ಗೋವಿಂದಸಿಂಗರದ್ದು.
1675 ರಲ್ಲಿ ಮೊಘಲರ ಉಪದ್ರವದ ವಿರುದ್ಧ ಹೋರಾಡಲು ಗುರು ಗೋವಿಂದಸಿಂಗರ ತಂದೆ ಗುರು ತೇಗ್ ಬಹದ್ದೂರರ ನೆರವನ್ನು ಕೋರಲು ಮಟ್ಟನ್ (ಮಾರ್ತಾಂಡ್ಯ) ನಗರದ ಪಂಡಿತ ಕೃಪಾರಾಮ್ನ ನೇತೃತ್ವದಲ್ಲಿ ಕೆಲ ಕಾಶ್ಮೀರಿ ಪಂಡಿತರು ಪಂಜಾಬಿನ ಆನಂದಪುರಕ್ಕೆ ಭೇಟಿ ನೀಡಿದರು. ಗುರು ತೇಗ್ ಬಹದ್ದೂರ್ ಔರಂಗಜೇಬ್ನ ಹಿಂದೂ ವಿರೋಧಿ ರಾಜನೀತಿಯ ಬಗ್ಗೆ ಆತನ ಸಮಕ್ಷಮದಲ್ಲೇ ಚರ್ಚಿಸಿ ಬುದ್ಧಿಹೇಳಲು ಮೊಘಲರ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸಿದರು. ಆದರೆ, ಔರಂಗಜೇಬನ ಮತಾಂಧತೆ ಮತ್ತು ಕುಟಿಲತೆಗೆ 11 ನವೆಂಬರ್ 1675 ರಂದು ದೆಹಲಿಯ ಚಾಂದನಿ ಚೌಕ್ ಎಂಬಲ್ಲಿ ಗುರು ತೇಗ್ ಬಹಾದೂರ್ ಸಿಂಗ್ ಸಾರ್ವಜನಿಕ ಶಿರಚ್ಚೇದನಕ್ಕೆ ಒಳಗಾಗಬೇಕಾಯಿತು. ಇದರಿಂದ ಅವರ ಅನುಯಾಯಿಗಳಲ್ಲಿ ಕ್ಷೋಭೆ ಮತ್ತು ಮತ್ತು ಭಯಗಳು ಮನೆಮಾಡಿದ್ದವು.
ಅಂತಹ ವಿಪ್ಲವ ಕಾಲದಲ್ಲಿ ಸಿಕ್ಖರ ಮಾರ್ಗದರ್ಶಕರಾದ ಗುರು ಗೋವಿಂದಸಿಂಗರು ತಮ್ಮ ಅನುಯಾಯಿಗಳಿಗೆ ಆಧ್ಯಾತ್ಮಿಕತೆಯ ಜೊತೆಗೇ ಧರ್ಮ-ದೇಶಗಳ ಕುರಿತು ಕರ್ತವ್ಯ ಭಾವವನ್ನು ಜಾಗೃತಗೊಳಿಸುವ ಬೋಧನೆಗಳನ್ನು ನೀಡತೊಡಗಿದರು. ಪರಿಣಾಮವಾಗಿ ಸಿಕ್ಖರಲ್ಲಿ ಮತ್ತೆ ಧೈರ್ಯ-ಸ್ಥೈರ್ಯಗಳು ಮರಳಿದವು. ಸಹಜವಾಗಿಯೇ ಇದು ಮೊಘಲರ ಕಣ್ಣುಕುಕ್ಕಲು ಸಾಕಾಗಿತ್ತು. ಔರಂಗಜೇಬನು ಗುರು ಗೋವಿಂದಸಿಂಗರು ಆಲಂಪುರದಲ್ಲಿ ತಂಗಿದ್ದಾಗ ಅವರನ್ನು ಮಟ್ಟ ಹಾಕಲೆಂದೇ ಅಲ್ಲಿ ಸೈನ್ಯ ಸಹಿತವಾಗಿ ಪೈಂದೇ ಖಾನ್ ಮತ್ತು ದೀನಾಬೇಗ್ರೆಂಬ ತನ್ನ ಸರದಾರರನ್ನು ಕಳುಹಿಸಿದನು. ಗುರು ಗೋವಿಂದಸಿಂಗ್ರ ಕೈಯ್ಯಲ್ಲಿ ಪೈಂದೇಖಾನ್ ಗಾಯಗೊಂಡರೆ ದೀನಾ ಬೇಗ್ ಕಾಲಿಗೆ ಬುದ್ಧಿಹೇಳಿದನು.
ಸಿಕ್ಖರ ಗುರುಗಳು ತನ್ನ ಬೆದರಿಕೆಯ ತಂತ್ರಕ್ಕೆ ಶರಣಾಗುವವರಲ್ಲ ಎಂದು ಔರಂಗಜೇಬನಿಗೆ ಖಚಿತವಾಯ್ತು. ಅವನು ಆನಂದಪುರಕ್ಕೆ ಸಿರ್ಹಿಂದ್ನ ನವಾಬ ವಜೀರಖಾನನ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಕಳುಹಿಸಿದನು. ಈ ಯುದ್ಧದಲ್ಲಿ ಅನೇಕ ಸಿಖ್ಖರು ಪ್ರಾಣ ಕಳೆದುಕೊಂಡರು. ಕೊನೆಗೆ 6.12.1705 ರಂದು ರಾತ್ರಿ ಗುರುಗಳು ತಮ್ಮ ಪರಿವಾರ ಸಹಿತ ಮೊಘಲರ ಕಣ್ತಪ್ಪಿಸಿ ಹೊರಟರು. ಹಾಗೆ ಹೋಗುವ ಮೊದಲು ಸಾಧ್ಯವಾದಷ್ಟೂ ಶತ್ರು ಸೈನ್ಯಕ್ಕೆ ಘಾಸಿಗೊಳಿಸಿಯೇ ಹೋದರು.
ಮೊಘಲ್ ಸೈನ್ಯ ಅವರನ್ನು ಬೆನ್ನಟ್ಟಿತು, ’ಶಿರಸಾ’ ನದಿಯ ತೀರದಲ್ಲಿ ಘೋರ ಕಾಳಗವಾಯಿತು. ಈ ಕಾಳಗದಲ್ಲಿ ಸಿಕ್ಖರ ಪ್ರಖ್ಯಾತ ಸೇನಾಪತಿ ಭಾಯಿ ಉದಯಸಿಂಗ್ ಮರಣಹೊಂದಿದರು. ಗುರು ಗೋವಿಂದಸಿಂಹರು ನದಿಯನ್ನು ದಾಟಿ ಛಾಮಖೌರನ್ನು ತಲುಪಿ ತಮ್ಮ ಪರಿವಾರದೊಂದಿಗೆ ಅಲ್ಲಿನ ಕೋಟೆಯಲ್ಲಿ ಆಶ್ರಯ ಪಡೆದರು. ಮೊಘಲರ ಸೈನ್ಯವು ಬೆನ್ನಟ್ಟಿ ಬಂದು ಆ ಕೋಟೆಗೂ ಮುತ್ತಿಗೆ ಹಾಕಿತು. ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಗುರುಗಳು ಹಾಗೂ ಅವರ ಪರಿವಾರ ನಿಶ್ಶಸ್ತ್ರರಾಗಿದ್ದರು. ಬಳಿಯ ಧಾನ್ಯ ಸಂಗ್ರಹ ಕರಗಿತ್ತು. ಮುತ್ತಿಗೆಯನ್ನು ಒಡೆಯುವ ಪ್ರಯತ್ನದಲ್ಲಿ ಅವರ ಹಿರಿಯ ಪುತ್ರರಾದ ಅಜೀತಸಿಂಗ್ ಮತ್ತು ಝುಜರಸಿಂಗ್ ವೀರಮರಣವನ್ನಪ್ಪಿದರು.
ಗುರುಗಳು ತಮ್ಮ ಮೂವರು ವಿಶ್ವಾಸಿ ಅನುಯಾಯಿಗಳಾದ ಭಾಯಿ ದಯಾಸಿಂಗ್, ಧರಮಸಿಂಗ್ ಹಾಗೂ ಮಾನಸಿಂಗರೊಂದಿಗೆ ಶತ್ರುಸೈನ್ಯದ ಕಣ್ತಪ್ಪಿಸಿ ಹೊರಟರು. ಶತ್ರುವಿನ ವಿರುದ್ಧ ಮತ್ತೆ ಸಜ್ಜಿತರಾಗಿ ಒಗ್ಗಟ್ಟಾಗಿ ಹೋರಾಡುವ ಸಂಕಲ್ಪದೊಡನೆ ಪರಸ್ಪರ ಅಗಲಿದರು. ಗುರುಗಳು ಈಗ ಒಬ್ಬಂಟಿಯಾದರು. ಅವರ ಬಳಿ ಸೈನ್ಯ, ಅಂಗರಕ್ಷಕರು, ಸಂಪತ್ತು, ಮಿತ್ರರು ಯಾರೂ ಇರಲಿಲ್ಲ; ಆದರೂ ಧರ್ಮಾಭಿಮಾನ ಕುಂದಲಿಲ್ಲ. ಮೈಮೇಲಿನ ಬಟ್ಟೆಗಳು ಹರಿದುಹೋದವು, ಕಾಲಿಗೆ ಪಾದರಕ್ಷೆಗಳಿರಲಿಲ್ಲ. ಮಲಗಲು ಬಂಡೆಗಲ್ಲೇ ದಿಂಬಾಗಿ ಭೂಮಿಯೇ ಹಾಸಿಗೆಯಾಗಿತ್ತು.ಆದರೆ ದೇಶ ಮತ್ತು ಧರ್ಮವಿರೋಧಿಗಳನ್ನು ಮಟ್ಟಹಾಕುವ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ. ಈ ಮಧ್ಯೆ ವಜೀರ್ ಖಾನ್ ಗುರು ಗೋವಿಂದಸಿಂಗರ ಪತ್ನಿ ಹಾಗೂ ಇಬ್ಬರು ಕಿರಿಯ ಮಕ್ಕಳನ್ನು ಬಂಧಿಸಿ ಮೃತ್ಯು ಅಥವಾ ಮತಾಂತರದ ಪರ್ಯಾಯವನ್ನು ಮುಂದಿಟ್ಟನು. ಆಗ ಆ ಮಕ್ಕಳ ಆಯಸ್ಸು ಹತ್ತುವರ್ಷಕ್ಕಿಂತ ಕಡಿಮೆ; ಅಂತಹ ಎಳವೆಯಲ್ಲಿಯೂ ಆ ಮಕ್ಕಳು ಮತಾಂತರವನ್ನು ತಿರಸ್ಕರಿಸಿದರು. ಪರಿಣಾಮವಾಗಿ 12.12.1705 ರಂದು ನವಾಬ ಅವರಿಬ್ಬರನ್ನೂ ಗೋಡೆಗಪ್ಪಳಿಸಿ ಕೊಂದುಹಾಕಿದನು.
ನಾಲ್ಕೂ ಮೊಮ್ಮಕ್ಕಳ ಮರಣದಿಂದ ಗುರುಗಳ ಮಾತೆ ಗುಜರಿಗೆ ದುಃಖ ತೀರದಾಯಿತು. ಸಂತಾಪದಲ್ಲಿ ಆಕೆ ಗುರು ಗೋವಿಂದಸಿಂಗರೆದುರು ‘ನನ್ನ ಮಕ್ಕಳೆಲ್ಲಿದ್ದಾರೆ?’ ಎಂದು ವಿಲಪಿಸಿದಳು. ಆಗ ಗುರುಗಳು ಮುಂದೆ ನೆರೆದಿದ್ದ ತಮ್ಮ ಶಿಷ್ಯರ ಕಡೆಗೆ ಬೆರಳು ತೋರಿಸಿ ‘ಇವರೆಲ್ಲರೂ ನಿನ್ನ ಮಕ್ಕಳೇ’ ಎಂಬ ಸಾಂತ್ವನ ನೀಡಿದರು.
ಇತ್ತ ನವಾಬ ವಜೀರ್ ಖಾನ್, ಜಮ್ಷೆಡ್ ಖಾನ್ ಹಾಗೂ ವಾಸಿಲ್ ಬೇಗ್ ಎಂಬ ಇಬ್ಬರು ಪಠಾಣರನ್ನು ಗುರುಗಳ ಹತ್ಯೆಗೆಂದೇ ನೇಮಿಸಿದ. ಅವರಿಬ್ಬರೂ ರಹಸ್ಯವಾಗಿ ಗುರುಗಳನ್ನು ಹಿಂಬಾಲಿಸುತ್ತಿದ್ದರು. ಗೋದಾವರಿ ತೀರದ ನಾಂದೇಡ್ನಲ್ಲಿ ಅದೊಮ್ಮೆ ಗುರುಗಳು ಪ್ರಾರ್ಥನೆಯ ಬಳಿಕ ತಮ್ಮ ಕೊಠಡಿಯೊಳಗೆ ವಿಶ್ರಾಂತಿ ಪಡೆಯುತ್ತಿದ್ದಾಗ ಜಮ್ಷೆಡ್ ಖಾನ್ ಗುರುಗಳಿಗೆ ಎದೆಯಲ್ಲಿ ಇರಿದನು. ಸ್ವತಃ ಗಂಭೀರವಾಗಿ ಗಾಯಾಳುಗಳಾಗಿದ್ದರೂ ಗುರುಗಳು ತಮ್ಮ ಬಾಗುಕತ್ತಿಯಿಂದಲೇ ಅವನನ್ನು ಕೊಂದರು. ಉಳಿದವನೊಬ್ಬನನ್ನು ಶಿಷ್ಯರು ಗತಿ ಕಾಣಿಸಿದರು.
ಕೆಲ ದಿನಗಳ ನಂತರ ಗುರುಗಳು ಬಿರುಸಾದ ಬಿಲ್ಲನ್ನು ಹೆದೆಯೇರಿಸಲು ಎಳೆದಾಗ ಮೊದಲೇ ಆದ ಗಾಯ ಕೆರಳಿ ಅಪಾರ ರಕ್ತಸ್ರಾವವಾಯಿತು. ತಮಗೆ ಮುಕ್ತಿ ಸಮೀಪಿಸುತ್ತಿರುವುದೆಂದು ತಿಳಿದ ಗುರುಗಳು ಗ್ರಂಥ ಸಾಹಿಬ್ ಅನ್ನು ಸಿಕ್ಖರ ಮುಂದಿನ ಗುರುವಾಗಿ ಘೋಷಿಸಿ ಅಕ್ಟೋಬರ್ 7, 1708 ರಂದು ಜೀವನ್ಮುಕ್ತರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.