ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ಕೊಟ್ಟ ಘಟನೆಯೆಂದರೆ 1919 ರ ಏಪ್ರಿಲ್ 13 ರಂದು ಘಟಿಸಿದ ಜಲಿಯನ್ವಾಲಾ ಬಾಗ್ ಘೋರ ದುರಂತ ವಿದ್ಯಮಾನ. ಅಂದು ಸಿಕ್ಖರ ಬೈಸಾಕಿ ಹಬ್ಬದ ಸಂಭ್ರಮ. ಜೊತೆಗೆ ಬ್ರಿಟಿಷರ ಕ್ರೂರ ರೌಲತ್ ಕಾಯ್ದೆಯ ವಿರುದ್ಧ ದೇಶಪ್ರೇಮಿಗಳ ಕ್ರೋಧ ನೆತ್ತಿಗೇರಿದ ದಿನ. ಯಾವ ಕಾರಣವನ್ನೂ ಕೊಡದೆ ಯಾರನ್ನು ಯಾವಾಗ ಬೇಕಾದರೂ ಎಷ್ಟು ದಿನ ಬೇಕಾದರೂ ಬಂಧನದಲ್ಲಿರಿಸಬಹುದು. ಅದನ್ನು ಕೇಳುವ ಹಕ್ಕು ಯಾರಿಗೂ ಇಲ್ಲ ಎಂದು ಸಾರುವ ರೌಲತ್ ಕಾಯ್ದೆ ಜಾರಿಗೆಯಿಂದ ಜನರು ಕುದ್ದು ಹೋಗಿದ್ದರು. ಈ ಕಾಯ್ದೆ ವಿರುದ್ಧ ಪ್ರತಿಭಟಿಸಲೆಂದೇ ಸಾವಿರಾರು ಮಂದಿ ಗಂಡಸರು, ಹೆಂಗಸರು, ಮಕ್ಕಳು, ವಯೋವೃದ್ಧರು ಅಮೃತಸರದ ಸ್ವರ್ಣ ಮಂದಿರದ ಸಮೀಪವೇ ಇರುವ ಜಲಿಯನ್ ವಾಲಾಬಾಗ್ ಪಾರ್ಕ್ನಲ್ಲಿ ಜಮಾಯಿಸಿದ್ದರು. ಅಮೃತಸರ ಆಡಳಿತದ ಮುಖ್ಯಸ್ಥನಾಗಿದ್ದ ಜನರಲ್ ಡೈಯರ್ಗೆ ಇದರ ಸುಳಿವು ಸಿಕ್ಕಿತ್ತು. ಜನರ ಮೇಲೆ ಸೇಡು ತೀರಿಸಿಕೊಳ್ಳಲು ಆತ ಕಾಯುತ್ತಿದ್ದ. ಜಲಿಯನ್ ವಾಲಾಬಾಗ್ ಒಳಕ್ಕೆ ಹೋಗುವ ಎಲ್ಲಾ ಬಾಗಿಲುಗಳನ್ನು ಬಂದ್ ಮಾಡಿ ಆತ ಏಕಾಏಕಿ ಯಾವ ಮುನ್ಸೂಚನೆಯನ್ನೂ ನೀಡದೆ ಅಹಿಂಸಾತ್ಮಕ ಸತ್ಯಾಗ್ರಹ ನಡೆಸುತ್ತಿದ್ದವರ ಮೇಲೆ ಮೆಷಿನ್ಗನ್ ಮತ್ತು ರೈಫಲ್ಗಳಿಂದ ಗುಂಡು ಹಾರಿಸಲು ತನ್ನ ಸೈನಿಕರಿಗೆ ಆಜ್ಞೆ ನೀಡಿದ. ಏಕಾಏಕಿ ಗುಂಡು ಹಾರಾಟದಿಂದ ಜನರೂ ಗಾಬರಿಯಾದರು. ಸಿಕ್ಕಸಿಕ್ಕಲೆಲ್ಲ ಓಡಿದರು. ಕೆಲವು ಹೆಂಗಸರು ತಪ್ಪಿಸಿಕೊಳ್ಳಲೆಂದು ಹತ್ತಿರದಲ್ಲಿದ್ದ ಬಾವಿಯೊಳಗೆ ಹಾರಿದರು. ಜನರ ಚೀರಾಟ ಆಕ್ರಂದನ, ಪ್ರಾಣಕ್ಕಾಗಿ ಮೊರೆ- ಯಾವುದೂ ಡೈಯರ್ ಎಂಬ ಕ್ರೂರಿಯನ್ನು ಅಲುಗಾಡಿಸಲಿಲ್ಲ. ಜನರ ಚೀರಾಟ ಹೆಚ್ಚುತ್ತಿದ್ದಂತೆ ಆತನ ಕೋಪ ಇನ್ನಷ್ಟು ಹೆಚ್ಚುತ್ತಿತ್ತು. ಮತ್ತಷ್ಟು ಗುಂಡು ಹಾರಿಸಿ ಸಾಯಿಸುವಂತೆ ತನ್ನ ಸೈನಿಕರಿಗೆ ಆದೇಶಿಸುತ್ತಲೇ ಇದ್ದ. ಬ್ರಿಟಿಷ್ ಸೈನಿಕರ ಬಂದೂಕುಗಳಿಂದ ಒಟ್ಟು ಸಿಡಿದಿದ್ದು 1650 ಸುತ್ತು ಗುಂಡುಗಳು.
ಸೈನಿಕ ಬಂದೂಕುಗಳಲ್ಲಿದ್ದ ಗುಂಡುಗಳೆಲ್ಲ ಮುಗಿದ ಮೇಲೆಯೇ ಡೈಯರ್ನ ಈ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇಡೀ ಪಾರ್ಕ್ ಮೈದಾನದಲ್ಲಿ ಎಲ್ಲೆಂದರಲ್ಲಿ ಗುಂಡೇಟಿಗೆ ಬಲಿಯಾದ ಶವಗಳು, ಕೈಕಾಲಿನಲ್ಲಿ ರಕ್ತ ಸುರಿಸುತ್ತಾ ಬಿದ್ದಿದ್ದ ನಿಸ್ಸಹಾಯಕ ಹೆಂಗಸರು, ಮಕ್ಕಳು. ಪ್ರಜ್ಞೆ ಕಳೆದುಕೊಂಡಿದ್ದ ಇನ್ನೂ ಅದೆಷ್ಟೋ ಜನರು. ಇಂಥ ಘೋರ ದೃಶ್ಯ ನೋಡಿದ ಮೇಲೂ ಕ್ರೂರಿ ಡೈಯರ್ನ ಮನಸ್ಸು ಕರಗಿರಲಿಲ್ಲ. ಜಲಿಯನ್ ವಾಲಬಾಗ್ನತ್ತ ನೆರವಿಗೆ ಯಾರೂ ಧಾವಿಸದಂತೆ ಸೆಕ್ಷನ್ ವಿಧಿಸಿದ. ಹೀಗಾಗಿ ನೆರವೂ ಸಿಗದೆ ಇನ್ನಷ್ಟು ಮಂದಿ ಸತ್ತರು. ಒಂದು ಅಂದಾಜಿನ ಪ್ರಕಾರ, ಅಲ್ಲಿ ಸತ್ತವರು ೧೭೫೦ಕ್ಕೂ ಹೆಚ್ಚು. ತೀವ್ರ ಗಾಯಗೊಂಡವರು 1500 ಕ್ಕೂ ಅಧಿಕ.
ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ, ಇಂತಹ ಭೀಕರ ದುರಂತ ನಡೆದು, ಸಾವಿರಾರು ಮಂದಿ ಭಾರತೀಯರು ಬಲಿದಾನ ಮಾಡಿದರೂ ಅದರ ಸ್ಮರಣೆ ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಾಗಲಿ, ಬೇರೆಬೇರೆ ವೇದಿಕೆಗಳಲ್ಲಾಗಲೀ ನಡೆಯುವುದೇ ಇಲ್ಲ. ಸ್ವಾತಂತ್ರ್ಯೋತ್ಸವದಂದು ಶಾಲಾ ಕಾಲೇಜಗಳಲ್ಲಿ, ಕಚೇರಿ ಕಾರ್ಖಾನೆಗಳಲ್ಲಿ ‘ನೆಹರೂ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು’ ಎಂದು ಅದೇ ಕಾಗಕ್ಕ -ಗುಬ್ಬಕ್ಕನ ಕಥೆಯನ್ನೇ ಉರು ಹೊಡೆದು ಹೇಳಲಾಗುತ್ತದೆ. ಜಲಿಯನ್ವಾಲಾಬಾಗ್ ದುರಂತದಲ್ಲಿ ರಕ್ತ ಬಸಿದು ಪ್ರಾಣವರ್ಪಿಸಿದವರ ಬಗ್ಗೆ ಒಂದೇ ಒಂದು ನುಡಿಯೂ ಕೇಳಿಬರುವುದಿಲ್ಲ.
ಜಲಿಯನ್ ವಾಲಾಬಾಗ್ ದುರಂತ ಮಾನವ ಹಕ್ಕಿನ ಪರಮೋಚ್ಚ ಉಲ್ಲಂಘನೆ. ಆದರೆ ಆ ಘಟನೆ ನಡೆದು ಬರೋಬ್ಬರಿ ಒಂದು ನೂರು ವರ್ಷ (1919-2019) ಉರುಳಿದರೂ ಇದುವರೆಗೂ ಈ ಬ್ರಿಟನ್ ಸರಕಾರದ ಯಾರೊಬ್ಬ ಮುಖ್ಯಸ್ಥರೂ ಅದಕ್ಕಾಗಿ ಕ್ಷಮೆ ಕೋರಿಲ್ಲ. ೧೯೨೦ರಲ್ಲಿ ಅಂದಿನ ಬ್ರಿಟನ್ ಪ್ರಧಾನಿ ಚರ್ಚಿಲ್ ಕ್ಷಮೆ ಕೋರುವಂತೆ ಬ್ರಿಟನ್ ಅರಮನೆಗೆ ನಿವೇದಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಸಾವಿರಾರು ಜನರನ್ನು ವಿನಾ ಕಾರಣ ನಿರ್ದಯವಾಗಿ ಕೊಂದು ಬಿಸಾಕಿದ ಡೈಯರ್ನಿಗೆ ನಿಜವಾಗಿ ಶಿಕ್ಷೆ ವಿಧಿಸಬೇಕಿತ್ತು. ಆದರೆ ಆತನನ್ನು ಭಾರತದಿಂದ ಇಂಗ್ಲೆಂಡ್ಗೆ ಕರೆಸಿಕೊಂಡು ಪೌರ ಸನ್ಮಾನ ನೀಡಲಾಯ್ತು! ಖಳನಾಯಕನನ್ನು ‘ಹೀರೋ’ ಆಗಿ ಗೌರವಿಸಲಾಯಿತು!
ಆದರೇನು? ಒಬ್ಬ ಗಂಡೆದೆಯ ಸಾಹಸಿ ಮಾತ್ರ ಡೈಯರ್ನ ಈ ನೀಚ ಕೃತ್ಯಕ್ಕೆ ಪ್ರತೀಕಾರ ಕೈಗೊಳ್ಳಲು ಅಂದೇ ನಿರ್ಧರಿಸಿದ್ದ. ಜಲಿಯನ್ ವಾಲಾಬಾಗ್ ದುರಂತ ಆ ಯುವಕನ ಮೈಮನಗಳಲ್ಲಿ ಆಕ್ರೋಶದ ಜ್ವಾಲಾಮುಖಿ ಎಬ್ಬಿಸಿಬಿಟ್ಟಿತ್ತು. ಆತನೆ ಸರ್ದಾರ್ ಉಧಮ್ ಸಿಂಗ್. ಘಟನೆ ನಡೆದು 21 ವರ್ಷಕ್ಕೆ ಸರಿಯಾಗಿ, 1940 ರ ಮಾಚ್ 13 ರಂದು ಲಂಡನ್ನ ಕಾಕ್ಸ್ಟನ್ಹಾಲ್ನಲ್ಲಿ ಜರುಗಿದ ಸಮಾರಂಭದ ಸಂದರ್ಭದಲ್ಲಿ ಸಮಯ ನೋಡಿ, ಗುರಿ ಹಿಡಿದು ಡೈಯರ್ಗೆ ಗುಂಡು ಹೊಡೆದು ಎಲ್ಲರೆದುರೇ ಸಾಯಿಸಿದ್ದ. ಜಲಿಯನ್ವಾಲಾ ಬಾಗ್ ದುರಂತದಲ್ಲಿ ಮಡಿದ ಸಾವಿರಾರು ಆತ್ಮಗಳಿಗೆ ಬಹುಶಃ ಅಂದು ನೆಮ್ಮದಿ ದೊರಕಿರಬಹುದು ಉಧಮ್ ಸಿಂಗ್ಗೆ ಬ್ರಿಟಿಷ್ ಸರ್ಕಾರದಿಂದ ಗಲ್ಲು ಶಿಕ್ಷೆಯೂ ಆಯಿತು. ಆತ ಶಹೀದ್ – ಇ- ಆಜಂ ( ಶ್ರೇಷ್ಠ ಹುತಾತ್ಮ) ಎಂಬ ಬಿರುದಿಗೆ ಪಾತ್ರನಾದ. 1995 ರಲ್ಲಿ ಈತನ ನೆನಪು ಶಾಶ್ವತವಾಗುಳಿಯಲು ಉತ್ತರಾಖಂಡದ ಒಂದು ಜಿಲ್ಲೆಗೆ ಉಧಮ್ಸಿಂಗ್ ನಗರವೆಂದು ಹೆಸರಿಡಲಾಯಿತು (ಪಂಜಾಬ್ನಲ್ಲಿ ಯಾವ ಊರಿಗೂ ಉದಮ್ಸಿಂಗ್ ನಾಮಕರಣ ಮಾಡದಿರುವುದು ಅತ್ಯಾಶ್ಚರ್ಯ!)
ಇಂದು ಈ ಎಲ್ಲ ಇತಿಹಾಸಕ್ಕೆ ಮೂಕಸಾಕ್ಷಿಯಾಗಿ ಅಮೃತಸರದ ಸ್ವರ್ಣಮಂದಿರದ ಸಮೀಪವೇ ಜಲಿಯನ್ ವಾಲಾಬಾಗ್ ಸ್ಮಾರಕ ನಿಂತಿದೆ. ಆದರೆ ಆ ಸ್ಮಾರಕದ ಸ್ಥಿತಿ ಗಮನಿಸಿದರೆ, ‘ಅಯ್ಯೋ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರಿಗೆ ನಾವು ಕೊಡುವ ಗೌರವ ಇಷ್ಟೇನಾ’ ಎಂದು ಖೇದವಾಗುತ್ತದೆ. ಜಲಿಯನ್ ವಾಲಾಬಾಗ್ ದುರಂತ ನಡೆದ 6.7 ಎಕರೆ ಪ್ರದೇಶವನ್ನು ನವೀಕರಣಗೊಳಿಸಲು ಇಂಡಿಯನ್ ಆಯಿಲ್ ಕಂಪೆನಿಗೆ ಸರ್ಕಾರ ವಹಿಸಿ, ಕೈ ತೊಳೆದುಕೊಂಡಿದೆ. ಇಂಡಿಯನ್ ಆಯಿಲ್ ಕಂಪೆನಿ ತನ್ನ ಕಲ್ಪನೆಗಳನ್ನು ಸಾಕಾರಗೊಳಿಸಲು ಎಲ್ಲೆಂದರಲ್ಲಿ ಅಗೆದು ಹಾಕಿದೆ. ಕೆಲವೆಡೆ ವಿಜಯಸ್ತಂಭ ನಿರ್ಮಿಸಲಾಗಿದೆ. ಡೈಯರ್ ಗುಂಡೇಟಿಗೆ ಹೆದರಿ, ಬಾವಿಗೆ ಹಾರಿದ ಜಾಗ ಈಗ ಮುಚ್ಚಲಾಗಿದೆ. ಅದರ ಮೇಲ್ಭಾಗದಲ್ಲಿ ಒಂದು ಸಿಮೆಂಟಿನ ಕಾರಂಜಿ ನಿರ್ಮಿಸಲಾಗಿದೆ. ಗುಂಡೇಟು ತಗಲಿದ ಗೋಡೆಯ ಒಂದಷ್ಟು ಜಾಗಗಳಿಗೆ ಪೆಯಿಂಟ್ನಿಂದ ಮಾರ್ಕ್ ಮಾಡಿ ಹಾಗೇ ಉಳಿಸಲಾಗಿದೆ. ಹುತಾತ್ಮರಾದ ಕೆಲವರ ತೈಲಚಿತ್ರಗಳನ್ನು ಒಂದು ಪುಟ್ಟ ಗಾಜಿನ ಪೆಟ್ಟಿಗೆಯಲ್ಲಿಡಲಾಗಿದೆ. ಎಲ್ಲೋ ಒಂದು ಕಡೆ ಕಂಡೂ ಕಾಣದಂತೆ ಉಧಮ್ಸಿಂಗ್ ಫೋಟೋ ಇಡಲಾಗಿದೆ.
ಎಂತಹ ಅನ್ಯಾಯವಿದಲ್ಲವೆ? ಸ್ವಾತಂತ್ರ್ಯ ಹೋರಾಟದ ಇತಿಹಾಸಕ್ಕೆ ಎಸಗಿದ ಘೋರ ಅಪಚಾರವಲ್ಲವೆ? ಜಲಿಯಾನ್ ವಾಲಾಬಾಗ್ ಸುತ್ತ ಸಿಮೆಂಟ್ ಕಟ್ಟಡ ನಿರ್ಮಿಸಿದರೆ ಅದನ್ನು ಸ್ಮಾರಕ ಎನ್ನಲು ಸಾಧ್ಯವೆ? 1919 ರ ಏಪ್ರಿಲ್ 13 ರಂದು ಹೇಗಿತ್ತೋ ಹಾಗೆಯೇ ಆ ವೀರ, ಹುತಾತ್ಮ ಭೂಮಿಯನ್ನು ಸಂರಕ್ಷಿಸುವುದು, ಮುಂದಿನ ಪೀಳಿಗೆಗಳಿಗೆ ಅದನ್ನು ಪರಿಣಾಮಕಾರಿಯಾಗಿ ತೋರಿಸುವುದು ಸರ್ಕಾರದ ಕರ್ತವ್ಯವಲ್ಲವೇ? ಅಲ್ಲೊಂದು ವೀಡಿಯೋ ಪ್ರದರ್ಶನ ಅಥವಾ ವಾಟರ್ ಶೋ ಏರ್ಪಡಿಸಿ , ಜಲಿಯನ್ವಾಲಾ ಬಾಗ್ ದುರಂತ, ಉಧಮ್ಸಿಂಗ್ ಸೇಡು ತೀರಿಸಿಕೊಂಡ ಬಗೆಯನ್ನು ಪರಿಣಾಮಕಾರಿಯಾಗಿ ತೋರಿಸಿದ್ದರೆ ಇಂದಿನ ಯುವ ಪೀಳಿಗೆಯ ಮನಕ್ಕೆ ಆ ದುರಂತ ಘಟನೆ ನಾಟುತ್ತಿತ್ತು. ಅಳಿಸಲಾರದ ನೆನಪುಗಳಾಗಿ ಅವು ಉಳಿಯುತ್ತಿದ್ದವು.
ಪಂಜಾಬ್ನಲ್ಲಿ ಈಗಿರುವುದು ಕ್ಯಾ. ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ. ಎರಡನೇ ಅವಧಿಗೆ ಅಧಿಕಾರಕ್ಕೇರಿರುವ ಅಮರಿಂದರ್ ಸಿಂಗ್ ಮನಸ್ಸು ಮಾಡಿದರೆ ಜಲಿಯನ್ ವಾಲಾಬಾಗ್ ಸ್ಮಾರಕ ಇಡೀ ದೇಶದ ಜನರ ಮನದಲ್ಲಿ ಶಾಶ್ವತ ನೆನಪಾಗಿ ಉಳಿಯುವಂತೆ ಮಾಡಲು ಸಾಧ್ಯ.
ಜಲಿಯನ್ ವಾಲಾಬಾಗ್ಗೆ ತಾಗಿಕೊಂಡೇ ಇರುವ ಅಮೃತಸರದ ‘ಸ್ವರ್ಣಮಂದಿರ’ ಗುರುದ್ವಾರ ಈಗ ಹಿಂದೆಂದಿಗಿಂತಲೂ ಸುಸಜ್ಜಿತವಾಗಿ ನಿರ್ಮಿಸಲಾಗಿದೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಸ್ವರ್ಣಮಂದಿರಕ್ಕೆ ಭೇಟಿ ನೀಡಿದವರು, ಜಲಿಯನ್ವಾಲಾ ಬಾಗ್ಗೆ ಬಂದರೆ ನಿರಾಶೆ ಕಾದಿಟ್ಟ ಬುತ್ತಿ. ಅಲ್ಲೇಕೆ ಹಾಗೆ? ಇಲ್ಲೇಕೆ ಹೀಗೆ? ಎಂಬ ಪ್ರಶ್ನೆಗಳು ಅವರನ್ನು ಕಾಡದೆ ಇರದು. ಜಲಿಯನ್ ವಾಲಾಬಾಗ್ ಸುತ್ತ ಯಾವ ಯಾವುದೋ ಕಟ್ಟಡಗಳೆದ್ದು, ಜಲಿಯನ್ ವಾಲಾಬಾಗ್ ಸ್ಥಳದ ಮಹತ್ವವೇ ನಶಿಸಿಹೋಗುವಂತಾಗಿದೆ.
ಜಲಿಯನ್ ವಾಲಾಬಾಗ್ ದುರಂತದಲ್ಲಿ ಅಸುನೀಗಿದವರಲ್ಲಿ ಬಹುಪಾಲು ಸಿಕ್ಖರೇ. ಜನರಲ್ ಡೈಯರ್ನನ್ನು ಹತ್ಯೆ ಮಾಡಿದ ಸರ್ದಾರ್ ಉಧಮ್ಸಿಂಗ್ ಕೂಡ ಸಿಖ್ ಸಮುದಾಯಕ್ಕೆ ಸೇರಿದ ಧೀರ ಸಾಹಸಿ. ಹೀಗಿದ್ದರೂ ಉಧಮ್ಸಿಂಗ್ ಸೇರಿದಂತೆ ತಮ್ಮ ಸಮುದಾಯದ ಎಲ್ಲ ಹುತಾತ್ಮರನ್ನು ಶಾಶ್ವತವಾಗಿ ನೆನಪು ಮಾಡಿಕೊಳ್ಳುವ ಅಚ್ಚುಕಟ್ಟಾದ ಒಂದು ಮ್ಯೂಸಿಯಂ, ಒಂದು ವ್ಯವಸ್ಥಿತ ಸ್ಮಾರಕವನ್ನು ನಿರ್ಮಿಸಬೇಕೆಂದು ಪಂಜಾಬ್ ಸರ್ಕಾರವನ್ನು ಸಿಖ್ ಮುಖಂಡರು ಏಕೆ ಆಗ್ರಹಿಸುತ್ತಿಲ್ಲ? ಹಿಂದೆ ಮುಖ್ಯಮಂತ್ರಿಯಾಗಿದ್ದ ಸುರ್ಜಿತ್ ಸಿಂಗ್ ಬರ್ನಾಲ ಸಿಖ್ ಧರ್ಮ ವಿರೋಧಿಯಾಗಿ ನಡೆದುಕೊಂಡರೆಂದು ಅವರಿಗೆ, ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯು (ಸಿಖ್ಖರ ಪ್ರಬಲ ನಿರ್ಣಯ ಕೇಂದ್ರ) ಗುರುದ್ವಾರದೆದುರು ಒಂದು ದಿನ ಎಲ್ಲ ಯಾತ್ರಿಕರ ಚಪ್ಪಲಿ ಒರೆಸಿ ಶುಭ್ರಗೊಳಿಸುವ ಶಿಕ್ಷೆ ವಿಧಿಸಿತ್ತು. ಅದನ್ನು ಬರ್ನಾಲಾ ಪಾಲಿಸಿಯೂ ಇದ್ದರು. ಇಷ್ಟೆಲ್ಲ ಪವರ್ಫುಲ್ ಆಗಿರುವ ಸಿಖ್ಖರು ಉಧಮ್ಸಿಂಗ್ ಎಂಬ ‘ಶಹೀದ್-ಇ-ಅಜಂ’ನನ್ನು ಕಡೆಗಣಿಸಿದರೆ ಹೇಗೆ?
✍ ದು.ಗು. ಲಕ್ಷ್ಮಣ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.