ನೀವು ನಗರದಲ್ಲಿ ವಾಸಿಸುತ್ತಿದ್ದೀರಿ ಎಂದರೆ, ನಿಮ್ಮ ಪ್ರದೇಶದ ಸುತ್ತಲೂ ಕಸದ ಪರ್ವತಗಳನ್ನು ನೋಡಿಯೇ ಇರುತ್ತೀರಿ. ನಗರದ ಕೆಲವು ಪ್ರದೇಶಗಳು ಡಂಪಿಂಗ್ ಗ್ರೌಂಡ್ ಎಂದೇ ಪ್ರಸಿದ್ಧವಾಗಿರುತ್ತದೆ. ಉದಾಹರಣೆಗೆ ಡಿಯೊನಾರ್ ಮುಂಬಯಿ ನಗರದ ಅತಿದೊಡ್ಡ ಡಂಪಿಂಗ್ ಗ್ರೌಂಡ್ ಆಗಿದೆ. ಬೆಂಗಳೂರಿನಲ್ಲೂ ಅನೇಕ ಡಂಪಿಂಗ್ ಗ್ರೌಂಡ್ ಇವೆ. ಈ ಸಮಸ್ಯೆ ಬೆಂಗಳೂರು, ಮುಂಬಯಿಗೆ ಮಾತ್ರ ಸೀಮಿತವಾಗಿಲ್ಲ. ಮಿಲಿಯನ್ಗಟ್ಟಲೆ ಜನಸಂಖ್ಯೆ ಹೊಂದಿರುವ ಪ್ರತಿಯೊಂದು ನಗರವು ತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳನ್ನು ಎದುರಿಸುತ್ತಿದೆ.
ಹೆಚ್ಚುತ್ತಿರುವ ನಗರೀಕರಣದ ಪ್ರಮಾಣ ಮತ್ತು ಸಂಪನ್ಮೂಲಗಳ ಬಳಕೆ ಹೆಚ್ಚುತ್ತಿರುವುದರಿಂದ ತ್ಯಾಜ್ಯ ನಿರ್ವಹಣೆ ಪುರಸಭೆಗಳಿಗೆ ದೊಡ್ಡ ಸಮಸ್ಯೆಯಾಗುತ್ತಿದೆ. ದೇಶವು ಪ್ರತಿವರ್ಷ 62 ದಶಲಕ್ಷ ಟನ್ ಮುನ್ಸಿಪಲ್ ಘನ ತ್ಯಾಜ್ಯವನ್ನು (ಎಂಎಸ್ಡಬ್ಲ್ಯು) ಉತ್ಪಾದಿಸುತ್ತದೆ ಮತ್ತು ತ್ಯಾಜ್ಯ ಉತ್ಪಾದನೆಯು ವರ್ಷಕ್ಕೆ ಶೇ.5ರಷ್ಟು ಬೆಳೆಯುತ್ತಲೇ ಇದೆ.
ಆದರೆ ನಗರೀಕರಣದ ವೇಗವನ್ನು ಕಡಿಮೆ ಮಾಡಲು ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ, ಯಾಕೆಂದರೆ ನಗರಗಳು ಉತ್ಪಾದಕತೆ ಮತ್ತು ಉತ್ತಮ ಗುಣಮಟ್ಟದ ಜೀವನದ ವಿಷಯದಲ್ಲಿ ಅದರದ್ದೇ ಆದ ಪ್ರಯೋಜನಗಳನ್ನು ಹೊಂದಿವೆ.
ಆದ್ದರಿಂದ, ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೆ ಏಕೈಕ ಪರಿಹಾರವೆಂದರೆ ಸಂಪನ್ಮೂಲಗಳ ಅತ್ಯುತ್ತಮ ಬಳಕೆ. ಸಮಗ್ರ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡಲು ಸರ್ಕಾರ ರಾಷ್ಟ್ರೀಯ ಸಂಪನ್ಮೂಲ ದಕ್ಷತೆ ನೀತಿಯನ್ನು (National Resource Efficiency Policy (ಎನ್ಆರ್ಇಪಿ)) ತಂದಿದೆ. ಪತ್ರಿಕಾ ಪ್ರಕಟಣೆಯ ಪ್ರಕಾರ, “ಪರಿಸರ ಸುಸ್ಥಿರ ಮತ್ತು ಸಮನಾದ ಆರ್ಥಿಕ ಬೆಳವಣಿಗೆ, ಸಂಪನ್ಮೂಲ ಸುರಕ್ಷತೆ, ಆರೋಗ್ಯಕರ ಪರಿಸರ (ಗಾಳಿ, ನೀರು ಮತ್ತು ಭೂಮಿ), ಮತ್ತು ಸಮೃದ್ಧ ಪರಿಸರ ವಿಜ್ಞಾನ ಮತ್ತು ಜೀವವೈವಿಧ್ಯತೆಯೊಂದಿಗೆ ಪುನಃಸ್ಥಾಪಿಸಲಾದ ಪರಿಸರ ವ್ಯವಸ್ಥೆಯನ್ನು ಹೊಂದಿರುವ ಭವಿಷ್ಯವನ್ನು ರೂಪಿಸುವುದು ಎನ್ಆರ್ಇಪಿಯ ಉದ್ದೇಶವಾಗಿದೆ”.
ಲ್ಯಾಂಡ್ಫಿಲ್ ತೆರಿಗೆಗಳು, ಬೃಹತ್ ತ್ಯಾಜ್ಯ ಉತ್ಪಾದಕಗಳಿಗೆ ಹೆಚ್ಚಿನ ಟಿಪ್ಪಿಂಗ್ ಶುಲ್ಕಗಳು ಮತ್ತು ನಿಯಂತ್ರಣ ಕಾನೂನುಗಳ ಕಟ್ಟುನಿಟ್ಟಿನ ಅನುಷ್ಠಾನ ಮುಂತಾದ ನೀತಿ ಸಾಧನಗಳನ್ನು ಕರಡು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಕರಡು, ರಾಷ್ಟ್ರೀಯ ಸಂಪನ್ಮೂಲ ದಕ್ಷತೆ ಪ್ರಾಧಿಕಾರವನ್ನು (ಎನ್ಆರ್ಇಎ) ಪ್ರಸ್ತಾಪಿಸುತ್ತದೆ, ಇದು ಸೆಬಿ ಅಥವಾ ಟ್ರಾಯ್ನಂತಹ ಸ್ವತಂತ್ರ ಸಂಸ್ಥೆಯಾಗಲಿದೆ.
ಕರಡು ನೀತಿಯು ಒತ್ತು ಲೋಹ ಮತ್ತು ಪ್ಲಾಸ್ಟಿಕ್ ಮರುಬಳಕೆಗೆ ಹೆಚ್ಚಿನ ಒತ್ತನ್ನು ನೀಡಿದೆ. ಯಾಕೆಂದರೆ ಇವುಗಳು ತ್ಯಾಜ್ಯದಲ್ಲಿನ ಪ್ರಮುಖ ಕೊಡುಗೆದಾರರಾಗಿವೆ. ನೀತಿ ಕರಡು ಪ್ರಕಾರ, “ಫೆರಸ್ ಲೋಹಗಳು ಒಟ್ಟು ಅಂದಾಜು ಬೇಡಿಕೆಯ ಶೇ.53ರಷ್ಟು ಕೊಡುಗೆಯನ್ನು ನೀಡುತ್ತವೆ, ನಂತರ ಪ್ಲಾಸ್ಟಿಕ್ ಮತ್ತು ಸಿಂಥೆಟಿಕ್ಸ್ ಶೇ.17.4ರಷ್ಟು, ಅಲ್ಯೂಮೀನಿಯಂ ಶೇ.2.5ರಷ್ಟು ಮತ್ತು ತಾಮ್ರ ಶೇ.7.2% ಕೊಡುಗೆ ನೀಡುತ್ತದೆ.
ಕರಡು ನೀತಿಯು, ಶೇ.100ರಷ್ಟು ಪೆಟ್ ಪ್ಲಾಸ್ಟಿಕ್ ಮರುಬಳಕೆ ಮತ್ತು ರಿಸೈಕಲ್ ಅನ್ನು ಪ್ರಸ್ತಾಪಿಸಿದೆ. ಶೇ.75ರಷ್ಟು ಪ್ಯಾಕೇಜಿಂಗ್ ಮೆಟಿರಿಯಲ್ಗಳ ಮರುಬಳಕೆ ಮತ್ತು ರಿಸೈಕಲ್ ಅನ್ನು ಪ್ರಸ್ತಾಪಿಸಿದೆ. ಕರಡು ನೀತಿಯು ಏಳು (ಆಟೋಮೋಟಿವ್, ಪ್ಲಾಸ್ಟಿಕ್ ಪ್ಯಾಕೇಜಿಂಗ್, ಕಟ್ಟಡ ಮತ್ತು ನಿರ್ಮಾಣ, ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು, ಸೋಲಾರ್ ಫೋಟೋ ವೋಲ್ಟಾಯಿಕ್, ಸ್ಟೀಲ್ ಮತ್ತು ಅಲ್ಯೂಮಿನಿಯಂ) ಕ್ಷೇತ್ರಗಳಿಗೆ ನಿರ್ದಿಷ್ಟ ದಕ್ಷತೆಯ ತಂತ್ರಗಳನ್ನು ಹೊಂದಿದೆ.
ಉಪಯೋಗಿಸಿದ ಕಾರುಗಳನ್ನು ಮರುಬಳಕೆ ಮಾಡಲು 2020 ರ ವೇಳೆಗೆ 20 ಅಧಿಕೃತ ಡಿಸ್ಮೆಂಟ್ಲರ್ಗಳನ್ನು ಸ್ಥಾಪಿಸಲು ಮತ್ತು 2030 ರ ವೇಳೆಗೆ ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳಲ್ಲಿ ಶೇ.25ರಷ್ಟು ಮರುಬಳಕೆಯ ವಸ್ತುಗಳನ್ನು ಬಳಸಲು ನೀತಿಯು ಪ್ರಸ್ತಾಪಿಸಿದೆ. 1990ರ ಮೊದಲು ತಯಾರಿಸಿದ ವಾಹನಗಳಿಗೆ ಶೇ.75% ರಷ್ಟು ಮರುಬಳಕೆ ದರವನ್ನು ನಿಗದಿಪಡಿಸಲಾಗಿದೆ. 1990 ಮತ್ತು 2000 ರ ನಡುವೆ ತಯಾರಾದ 65 ವಾಹನಗಳಿಗೆ ಶೇ.85ರಷ್ಟು ಮರುಬಳಕೆ ದರವನ್ನು ಮತ್ತು 2000 ರ ನಂತರ ಉತ್ಪಾದಿಸಲಾದ 66 ವಾಹನಗಳಿಗೆ ಶೇ.90ರಷ್ಟಯ ಮರುಬಳಕೆ ದರವನ್ನು ನಿಗದಿಪಡಿಸುವ ಗುರಿಯನ್ನು ಹೊಂದಲಾಗಿದೆ.
ಸಂಪನ್ಮೂಲ ದಕ್ಷತೆಯ ಉತ್ತೇಜನವು ದೇಶಕ್ಕಾಗಿ ನಿರ್ಣಾಯಕ ಸಂಪನ್ಮೂಲಗಳನ್ನು ಉಳಿಸಲು ಸಹಾಯ ಮಾಡಲಿದೆ. ಭಾರತವು ಪ್ರಮುಖ ನೈಸರ್ಗಿಕ ಸಂಪನ್ಮೂಲಗಳಿಗೆ ಆಮದನ್ನು ಅವಲಂಬಿಸಿದೆ, ವಿಶೇಷವಾಗಿ ಇಂಧನ ಕ್ಷೇತ್ರದ ಆಮದನ್ನು ಅವಲಂಬಿಸಿದೆ. ದೇಶವು ತನ್ನ ತೈಲ ಮತ್ತು ಅನಿಲ ಅವಶ್ಯಕತೆಗಳಲ್ಲಿ ಸುಮಾರು ಶೇ.80ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಿಂದಾಗಿ ದಕ್ಷತೆಯ ಉತ್ತೇಜನವು ಆಮದು ದರಗಳನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ, ಇದು ವಿದೇಶಿ ನಿಕ್ಷೇಪಗಳ ಸಂಗ್ರಹಕ್ಕೂ ಸಹಾಯ ಮಾಡಲಿದೆ.
ಕಚ್ಛಾ ವಸ್ತುಗಳ ಬಳಕೆ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ- 1970 ರಲ್ಲಿ 1.18 ಬಿಲಿಯನ್ ಟನ್ಗಳಿಂದ 2015 ರಲ್ಲಿ 7 ಬಿಲಿಯನ್ ಟನ್ಗಳಿಗೆ ಇದು ಏರಿದೆ. ಭಾರತದಂತಹ ಸೀಮಿತ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ದೇಶಗಳು ಪೂರೈಕೆಯ ಆಘಾತಗಳಿಗೆ ಗುರಿಯಾಗುತ್ತಿವೆ. ಆದ್ದರಿಂದ, ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವುದು ಮತ್ತು ದಕ್ಷತೆಯನ್ನು ಹೆಚ್ಚಿಸುವುದು ತುಂಬಾ ಮುಖ್ಯವಾಗಿದೆ.
“ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಕ್ಷೇತ್ರ, ಪ್ಲಾಸ್ಟಿಕ್ ಉದ್ಯಮ, ಫೋಟೋ-ವೋಲ್ಟಾಯಿಕ್, ಬ್ಯಾಟರಿ ಉತ್ಪಾದನೆ ಮತ್ತು ಸಂಗ್ರಹಣೆ ಇತ್ಯಾದಿ ಯಾವುದೇ ಆಗಿರಲಿ, ಅಗತ್ಯವಿರುವ ಕಚ್ಛಾ ವಸ್ತುಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸುತ್ತೇವೆ, ನಾವು ಹೇಗೆ ಜಾಗರೂಕ ರೀತಿಯಲ್ಲಿ ಸಂಪನ್ಮೂಲಗಳನ್ನು ಹೊರಗಿನಿಂದ ಸಂಗ್ರಹಿಸುತ್ತೇವೆ ಮತ್ತು ಲಭ್ಯವಿರುವ ವಸ್ತುಗಳ ಸಮರ್ಥ ಬಳಕೆಯನ್ನು ಖಚಿತಪಡಿಸಿಕೊಳ್ಳುತ್ತೇವೆ, ವ್ಯರ್ಥವಾಗುವುದನ್ನು ಕಡಿಮೆ ಮಾಡುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯವು ನಿಂತಿದೆ. ಇದು ಕೇವಲ ಕಚ್ಚಾ ವಸ್ತುಗಳ ಬಗ್ಗೆ ಮಾತ್ರವಲ್ಲ, ನೀರಿನಂತಹ ನಿರ್ಣಾಯಕ ಸಂಪನ್ಮೂಲಗಳಿಗೂ ಅನ್ವಯವಾಗುತ್ತದೆ” ಎಂದು ನವದೆಹಲಿಯ ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ (ಟೆರಿ) ಯ ಸಹವರ್ತಿ ಸೌವಿಕ್ ಭಟ್ಟಾಚಾರ್ಯ ಹೇಳುತ್ತಾರೆ.
ಭಾರತವು ಹೆಚ್ಚು ಹೆಚ್ಚು ಗ್ರಾಹಕ ಸಮಾಜವಾಗುತ್ತಿದೆ ಆದರೆ ನೈಸರ್ಗಿಕ ಸಂಪನ್ಮೂಲ ಬಳಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಭಾರತವು 7.42 ಬಿಲಿಯನ್ ಟನ್ ನೈಸರ್ಗಿಕ ಸಂಪನ್ಮೂಲವನ್ನು ಬಳಕೆ ಮಾಡುತ್ತಿದೆ, ಆದರೆ ಚೀನಾ ಬಳಸುತ್ತಿರುವುದು ಕೇವಲ 34 ಬಿಲಿಯನ್. ಆದರೆ ಮುಂಬರುವ ವರ್ಷಗಳಲ್ಲಿ ಇದು ಅಪಾಯಕಾರಿಯಾಗಿ ಬೆಳೆಯುವ ನಿರೀಕ್ಷೆಯಿದೆ ಮತ್ತು ಆದ್ದರಿಂದ 6 ‘ಆರ್’ಗಳಾದ (reduce, reuse, recycle, refurbish, remanufacture and redesign) ತತ್ವಗಳನ್ನು ಆಧರಿಸಿ ಸಮಗ್ರ ಆರ್ಥಿಕತೆಯನ್ನು ಉತ್ತೇಜಿಸುವುದು ಸುಸ್ಥಿರ ಅಭಿವೃದ್ಧಿಗೆ ಅತ್ಯಗತ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.