ಬೆಂಗಳೂರು: ದೇಶದ ಸುರಕ್ಷತೆ, ಅಭಿವೃದ್ಧಿಗಾಗಿ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಮತದಾರರಿಂದ ತಕ್ಕ ಉತ್ತರ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ವಾಸದಿಂದ ನುಡಿದರು.
ಅರವಿಂದ ನಗರದ ಹುಬ್ಬಳ್ಳಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬಿಸಿ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಡಲು ಸರಕಾರ ಮುಂದಾಗಿದೆ. ಇದೆಲ್ಲಕ್ಕೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ತಿಳಿಸಿದರು. ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ ಪರ ವಾತಾವರಣ ಇದೆ ಎಂದು ತಿಳಿಸಿದರು.
ರಾಜ್ಯದೆಲ್ಲೆಡೆ ಪ್ರವಾಸ ಮಾಡಿದ್ದೇನೆ. ಕಳೆದ ಒಂದು ವಾರದಿಂದ ಕಲ್ಯಾಣ ಕರ್ನಾಟಕ ಭಾಗದ ಪ್ರವಾಸ ಮಾಡಿದ್ದೇನೆ. ಇವತ್ತು ಬೆಳಗಾವಿ ಭಾಗದಲ್ಲಿ ಪ್ರವಾಸ ಮಾಡಲಿದ್ದೇನೆ. ಉತ್ತರ ಕನ್ನಡ ಜಿಲ್ಲೆಗೂ ಭೇಟಿ ಕೊಡಲಿದ್ದೇನೆ ಎಂದು ತಿಳಿಸಿದರು. ನಮ್ಮ ನಿರೀಕ್ಷೆಗೂ ಮೀರಿ ಮತದಾರರು ಸ್ಪಂದಿಸುತ್ತಿದ್ದಾರೆ. ನರೇಂದ್ರ ಮೋದಿಜೀ ಅವರು ಮತ್ತೊಮ್ಮೆ ದೇಶದ ಪ್ರಧಾನಮಂತ್ರಿ ಆಗಬೇಕೆಂಬ ಸಂಕಲ್ಪ ಬಿಜೆಪಿ- ಜೆಡಿಎಸ್ ಕಾರ್ಯಕರ್ತರಿಗಷ್ಟೇ ಅಲ್ಲ; ದೇಶದ ಭದ್ರತೆ, ಅಭಿವೃದ್ಧಿ ಮತ್ತು ಸುರಕ್ಷತೆ ದೃಷ್ಟಿಯಿಂದ ಮೋದಿಜೀ ಅವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು. ಬಿಜೆಪಿ ನೇತೃತ್ವದ ಎನ್ಡಿಎ ಕೂಟದಿಂದ ಮಾತ್ರ ದೇಶದ ಒಳಿತಾಗಲು ಸಾಧ್ಯ ಎಂಬ ಭಾವನೆ ದೇಶ- ರಾಜ್ಯದ ಪ್ರತಿಯೊಬ್ಬ ಮತದಾರರಲ್ಲಿದೆ ಎಂದರು.
ಎರಡೂ ಪಕ್ಷಗಳ ಕಾರ್ಯಕರ್ತರು ಉತ್ಸಾಹದಿಂದ ದುಡಿಯುತ್ತಿದ್ದಾರೆ. ಇದರ ಪರಿಣಾಮವಾಗಿ ಇದೇ 7ರಂದು ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದೇ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಲೆಗಡುಕರಿಗೂ ರಾಜ್ಯ ಸರಕಾರವೇ ಒಂದು ರೀತಿ ಆಶ್ರಯ ಕೊಡುತ್ತಿದೆ. ಹಿಂದೂ ಹೆಣ್ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ಸರಕಾರದ ಈ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗಡೆಲು ಕಾರಣವಾಗಿದೆ. ಲವ್ ಜಿಹಾದ್ ಪ್ರಕರಣಗಳೂ ಜಾಸ್ತಿ ಆಗುತ್ತಿವೆ. ಸದ್ದಾಂ ಹುಸೇನ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಬ್ಬಿಣದ ಸರಳಿನಿಂದ ಹಲ್ಲೆ ಮಾಡಲು ಮುಂದಾದುದು ರಾಜ್ಯ ಸರಕಾರ ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ವಿಜಯೇಂದ್ರ ಅವರು ವಿವರಿಸಿದರು.
ರಾಜ್ಯದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ತಮ್ಮ ಗ್ಯಾರಂಟಿಯಿಂದಲೇ 20ಕ್ಕೂ ಹೆಚ್ಚು ಸಂಸದರನ್ನು ಗೆಲ್ಲ್ಲುವುದಾಗಿ ಭಾಷಣ ಮಾಡುತ್ತಿದ್ದರು. ಅವರು ಗ್ಯಾರಂಟಿ ಬಗ್ಗೆ ಮರೆತು ಪೆನ್ ಡ್ರೈವ್ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇಡೀ ಸರಕಾರ ಅದರ ಹಿಂದೆ ಬಿದ್ದಿದೆ. ಆ ಘಟನೆ ಪರವಾಗಿರುವ ಪ್ರಶ್ನೆ ಇಲ್ಲ. ಬಿಜೆಪಿ ನಿಲುವು ಸ್ಪಷ್ಟವಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಡಿ ಯಾರೂ ಕೂಡ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ; ರಾಜ್ಯ ಸರಕಾರ ಎಸ್ಐಟಿ ರಚಿಸಿ ತನಿಖೆ ಪ್ರಾರಂಭಿಸಿದೆ. ಆದರೆ, ರಾಜ್ಯ ಸರಕಾರಕ್ಕೆ ಗ್ಯಾರಂಟಿಗಳ ಕುರಿತ ಭರವಸೆ ಕಳಕೊಂಡು ಪೆನ್ ಡ್ರೈವ್ ಹಿಂದೆ ಬಿದ್ದಂತಿದೆ ಎಂದು ವಿಶ್ಲೇಷಿಸಿದರು.
ಎರಡ್ಮೂರು ಆತ್ಮಹತ್ಯೆಗಳು ನಡೆದಿವೆ. ಹತ್ಯೆ ಪ್ರಕರಣಗಳು ದಿನೇದಿನೇ ಜಾಸ್ತಿ ಆಗುತ್ತಿವೆ. ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಜಾಸ್ತಿ ಆಗುತ್ತಿವೆ. ರಾಜ್ಯದ ತಾಯಂದಿರು ಆತಂಕದಲ್ಲಿದ್ದಾರೆ. ಈ ಪ್ರದೇಶದ ಒಬ್ಬ ದಲಿತ ಹೆಣ್ಮಗಳ ಮೇಲೆ ಸದ್ದಾಂ ಹುಸೇನ್ ಎಂಬಾತ ನೀಚ ಕೃತ್ಯ ಎಸಗಿದ್ದಾನೆ. ರಾಜ್ಯ ಸರಕಾರ ಕಣ್ಮುಚ್ಚಿ ಕೂತಿದೆ ಎಂದು ಟೀಕಿಸಿದರು.
ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದಾಗಲೇ ಸರಕಾರವು ದೇಶದ್ರೋಹಿಗಳನ್ನು ಒದ್ದು ಒಳಗೆ ಹಾಕಬೇಕಿತ್ತು. ರಾಜ್ಯ ಸರಕಾರವು ಮೀನಮೇಷ ಮಾಡಿತ್ತು. ರಾಜ್ಯ ಸರಕಾರವು ಅಲ್ಪಸಂಖ್ಯಾತ ಕೊಲೆಗಡುಕರನ್ನು ಬಂಧಿಸಲು ನೂರು ಬಾರಿ ಯೋಚಿಸುತ್ತದೆ. ಲವ್ ಜಿಹಾದ್ ಪ್ರಕರಣದಡಿ ಸಿಲುಕಿದವರನ್ನು ಬಂಧಿಸಲು ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಎಂಬ ಧೋರಣೆ ಹೊಂದಿದಂತಿದೆ. ಸಿದ್ದರಾಮಯ್ಯನವರ ಸರಕಾರವು ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಹೊಂದಿದ್ದು, ರಾಜ್ಯವು ಕೇರಳ ಮಾದರಿಯಲ್ಲಿ ಸಾಗುವಂತಾಗಿದೆ. ಲವ್ ಜಿಹಾದ್ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದೆ. ಮಹಿಳೆಯರ ವಿರುದ್ಧ ಅಪರಾಧದ ಇಂಥ ದುಷ್ಕøತ್ಯ ಎಸಗುವ ದೇಶದ್ರೋಹಿಗಳಿಗೆ ನಾವೇನು ಮಾಡಿದರೂ ರಾಜ್ಯ ಸರಕಾರ ಬೆಂಬಲ ಕೊಡುತ್ತದೆ; ನಮ್ಮನ್ಯಾರೂ ಕೂಡ ಏನೂ ಮಾಡಲು ಸಾಧ್ಯವಿಲ್ಲ ಎಂದು ಭಾವಿಸುವಂತಾಗಿದೆ ಎಂದು ವಿಜಯೇಂದ್ರ ಅವರು ಆರೋಪಿಸಿದರು.
ಈಗ ಬರುತ್ತಿರುವ ಮಾಹಿತಿ ಪ್ರಕಾರ ಈ ಪೆನ್ ಡ್ರೈವ್ ಮುಂಚಿತವಾಗಿಯೇ ಕಾಂಗ್ರೆಸ್ ಸರಕಾರಕ್ಕೆ ಸಿಕ್ಕಿತ್ತು. ಮೊದಲ ಹಂತದ ಚುನಾವಣೆ ಮುಗಿಯುವವರೆಗೆ ಕಾದಿದ್ದು, ಕೊನೆಯ ಒಂದು ದಿನ ಇರುವಾಗ ಬಿಡುಗಡೆ ಮಾಡಿಸಿದ್ದಾರೆಂಬ ಚರ್ಚೆಗಳು ರಾಜ್ಯದಲ್ಲಿ ನಡೆಯುತ್ತಿವೆ ಎಂದು ಆರೋಪಿಸಿದರು. ಇದಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸರಕಾರ ಉತ್ತರ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಇಂಥ ಪ್ರಕರಣದಿಂದ ಚುನಾವಣೆ ಮೇಲೆ ಪರಿಣಾಮ ಆಗುವುದಿಲ್ಲ ಎಂದ ಅವರು, ಈ ಕುರಿತಂತೆ ನನಗೆ ಈ ಕ್ಷಣದವರೆಗೆ ಯಾವುದೇ ಪತ್ರ ಸಿಕ್ಕಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ಶಾಸಕ ಅರವಿಂದ ಬೆಲ್ಲದ, ಹುಬ್ಬಳ್ಳಿ-ಧಾರವಾಡ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪ್ರಮುಖರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.