ಶೈಕ್ಷಣಿಕ ವರ್ಷದಲ್ಲಿ ಬಡ ವಿದ್ಯಾರ್ಥಿಗಳಿಗೆ ದೊರಯಬೇಕಿದ್ದ ಸಾವಿರಾರು ಸರ್ಕಾರಿ ಕೋಟಾದ ಸೀಟುಗಳುಲ್ಲಿ ಹಲವು ಅಕ್ರಮ ವೆಸಗಿರುವ ಕಾಮೆಡ್-ಕೆಯನ್ನು ಅಧಿಕೃತಗೊಳಿಸಿ, ಬಡ ವಿದ್ಯಾರ್ಥಿಗಳ ಸೀಟುಗಳನ್ನು ಕಡಿತಗೊಳಿಸಿ ಹಾಗೂ ಶೇ.20% ಹೆಚ್ಚು (ಸುಮಾರು ಇಪ್ಪತ್ತು ಸಾವಿರದವರೆಗೆ) ಶುಲ್ಕ ಹೆಚ್ಚಳವನ್ನು ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕೋರ್ಸ್ಗಳಿಗೆ ನಿಗದಿಪಡಿಸಿದೆ. ಅಲ್ಲದೇ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿಯೂ ಸಹ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವನ್ನು ಮಾಡುತ್ತಿರುವ ಕೆ.ಇ.ಎ ಕ್ರಮವನ್ನು ಎಬಿವಿಪಿ ತೀವ್ರವಾಗಿ ಖಂಡಿಸಿದೆ.
ಪ್ರಸ್ತುತ ಸಿಇಟಿಯ ಮೆಡಿಕಲ್, ಡೆಂಟಲ್, ಇಂಜಿನಿಯರಿಂಗ್, ಕೃಷಿ, ಆರ್ಯುವೇದಿಕ್ ಹಾಗೂ ಮುಂತಾದ ಅತ್ಯಮೂಲ್ಯವಾದ ಸೀಟುಗಳನ್ನು ಬಡ ವಿದ್ಯಾರ್ಥಿಗಳಿಗೆ ಹಂಚಬೇಕಾದ ಸರ್ಕಾರವೇ ವಿದ್ಯಾರ್ಥಿಗಳಿಗೆ ಆಫ್ಷನ್ ಎಂಟ್ರೀ ಅವಕಾಶ ನೀಡದೇ, ಚಾಯ್ಸ್ ಎಂಟ್ರೀಗೂ ಸಹ ಅವಕಾಶ ಕಡಿತಗೊಳಿಸಿ, ಹಿಂದುಳಿದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡದೇ ಹಾಗೂ ಹೆಚ್ಚುವರಿ (20 ಸಾವಿರಕ್ಕಿಂತ ಹೆಚ್ಚು) ಶುಲ್ಕವನ್ನು ವಸೂಲಿ ಮಾಡುತ್ತಿರುವ ಖಾಸಗಿ ಕಾಲೇಜುಗಳನ್ನು ಕಂಡು ಕಾಣದಂತೆ ಕ್ರಮ ಕೈಗೊಳ್ಳದಿರುವ ಸಿ.ಇ.ಟಿ.ಯ (ಕೆ.ಇ.ಎ) ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸುಸಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಸಮಸ್ಯೆ ನಿರ್ಮಿಸಿ ಸರ್ಕಾರಿ ಕೋಟಾದ ಸೀಟುಗಳು ಉಳಿಸಿ ನಂತರ ಖಾಸಗಿಯವರಿಗೆ ಹಿಂದಿರುಗಿಸುವ ಮೂಲಕ ಕೋಟ್ಯಾಂತರ ಮೌಲ್ಯದ ಸೀಟುಗಳು ಮಾರಲು ಅವಕಾಶ ಕಲ್ಪಿಸಿರುವುದರ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಿಯನ್ನು ಸಹ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ.
ಆಫ್ಷನ್ ಎಂಟ್ರಿಗೆ ಅವಕಾಶವಿಲ್ಲ : ಸೀಟು ಹಂಚಿಕೆಯ ಕೌನ್ಸಲಿಂಗ್ ಒಂದು ಸುತ್ತಿನ ನಂತರ ಕಾಲೇಜುಗಳಲ್ಲಿ ಸೀಟುಗಳು ವಿದ್ಯಾರ್ಥಿಗಳಿಗೆ ಲಭ್ಯವಿಲ್ಲದಿದ್ದರೆ ಹೊಸ ಹಾಗೂ ಹೆಚ್ಚು ಕಾಲೇಜುಗಳ ಹೆಸರನ್ನು ಆಫ್ಷನ್ ಎಂಟ್ರಿಯ ಮೂಲಕ ನಮೂದಿಸಲು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಅವಕಾಶವಿರುತ್ತಿತ್ತು. ಆದರೆ ಈಬಾರಿ ಈ ಅವಕಾಶವಿಲ್ಲದಿರುವುದರಿಂದ ಸುಮಾರು 50 ಸಾವಿರ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟು ಸಿಗದಿರುವ ಆತಂಕವಿದೆ. ಅಲ್ಲದೇ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಗೊಂದಲವಾಗಿ ಸಮಸ್ಯೆಯಾಗಿದೆ. ಈ ದುರುದ್ದೇಶ ಕ್ರಮದಿಂದ ರಾಜ್ಯದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳ ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿವೆ.
ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ ವಸೂಲಿ : ರಾಜ್ಯದಲ್ಲಿ ಸಿಇಟಿ ಸೀಟು ಹಂಚಿಕೆ ರಾಷ್ಟ್ರದಲ್ಲಿಯೇ ಮಾದರಿಯಾಗಿತ್ತು. ಅಲ್ಲದೇ ವಿದ್ಯಾರ್ಥಿ ಪರಿಷತ್ನ ಹೋರಾಟದಿಂದ ಸರ್ಕಾರಿ ಕೋಟಾ ಸೀಟುಗಳು ಶುಲ್ಕ ನಿಯಂತ್ರಣ ಹಾಗೂ ಬಡ ವಿದ್ಯಾರ್ಥಿಗಳು ಭರಿಸಬಹುದಾದ ಶುಲ್ಕ ನಿಗದಿಯಾಗಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಸರ್ಕಾರವು ಶೇ.5%, ಶೇ.10% ನಂತರ ಪ್ರಸಕ್ತ ವರ್ಷದಲ್ಲಿ ಸಾಮಾನ್ಯ ಬಡ ವಿದ್ಯಾರ್ಥಿಗಳು ಬರಿಸಲಾಗದ ಹಾಗೆ ಶೇ.20ರಷ್ಟು ಶುಲ್ಕವನ್ನು ಹೆಚ್ಚಳಗೊಳಿಸಿದೆ. ಈ ಶುಲ್ಕ ಹೆಚ್ಚಳಕ್ಕೆ ಯಾವುದೇ ಕಾರಣ ನೀಡದೇ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಿಗೆ ಮಣಿದಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣವನ್ನು ಕಬ್ಬಿಣದ ಕಡಲೆಯಂತೆ ಮಾಡಿದೆ. ಇನ್ನೊಂದೆಡೆ ಸಾಲಮಾಡಿಯಾದರೂ ಸರ್ಕಾರಿ ಶುಲ್ಕ ಭರಿಸಿ ಸೀಟು ಪಡೆದರೂ ಖಾಸಗೀ ಕಾಲೇಜುಗಳಲ್ಲಿನ ಹೆಚ್ಚುವರಿ ಶುಲ್ಕ ವಸೂಲಿಯಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇತ್ತ ಸರ್ಕಾರವೂ ಸರ್ಕಾರಿ ಸೀಟುಗಳಿಗೆ ಶೇ.20%ಶುಲ್ಕ ಏರಿಕೆ ಮಾಡಿದರೂ ಸಹ 20 ರಿಂದ 40 ಸಾವಿರ ಹೆಚ್ಚುವರಿ ಶುಲ್ಕವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸುಲಿಗೆ ಮಾಡತ್ತಿದ್ದರೂ ಸಹ ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಇದನ್ನು ಅಭಾವಿಪ ತೀವ್ರವಾಗಿ ಖಂಡಿಸಿದೆ.
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಿಲ್ಲ ಶುಲ್ಕ ವಿನಾಯಿತಿ ಭಾಗ್ಯ : ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗದ ಬಡ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯನ್ನು ನೀಡಲಾಗುತ್ತಿದೆ. ಆದರೆ ಸಿಇಟಿಯ ಮೂಲಕ ಸೀಟು ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೌಲಭ್ಯದ ಅವಕಾಶವನ್ನೂ ಸರ್ಕಾರವು ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡದೇ ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಸೀಟುಗಳು ಸಿಕ್ಕರೂ ಸಹ ಪ್ರವೇಶ ಪಡೆಯಲು ಹಣವಿಲ್ಲದೇ ಸಾಮಾನ್ಯ ಪದವಿಗಳಿಗೆ ತೃಪ್ತಿ ಪಡೆಯುವ ಸಂದರ್ಭ ನಿರ್ಮಾಣವಾಗಿದೆ. ಸರ್ಕಾರವು ಹಿಂದುಳಿದ ವರ್ಗದ ಪರ ಎಂದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ. ಆದರೆ ಹಿಂದುಳಿದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಾರೀ ಸಮಸ್ಯೆಯನ್ನು ಸೃಷ್ಟಿಸಿ ಸೌಲಭ್ಯ ವಂಚಿತರನ್ನಾಗಿ ಮಾಡಿದೆ.
ಅಲ್ಲದೇ ಸರ್ಕಾರ ಹಾಗೂ ಕೆ.ಇ.ಎ ಕ್ರಮದಿಂದ ಸೀಟು ಹಂಚಿಕೆಯಲ್ಲಿ ಸಮಸ್ಯೆಗಳನ್ನು ಹೆಚ್ಚಿಸಿ ವಿದ್ಯಾರ್ಥಿಗಳ ಸರ್ಕಾರಿ ಕೋಟಾದ ಸೀಟುಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗುತ್ತಿರುವುದಕ್ಕೆ ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ ಹಾಗೂ ಈ ಕೆಳಕಂಡ ಬೇಡಿಕೆಗಳನ್ನು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.
ಎ.ಬಿ.ವಿ.ಪಿ ಬೇಡಿಕೆಗಳು : ವಿದ್ಯಾರ್ಥಿಗಳಿಗೆ ಆಫ್ಷನ್ ಎಂಟ್ರಿಯ (Option Entry) ಮೂಲಕ ಕಾಲೇಜು ಹಾಗೂ ಕೋರ್ಸ್ ಸೇರ್ಪಡೆಗೆ ತಕ್ಷಣವೇ ೨ನೇ ಸುತ್ತು ಹಾಗೂ ನಂತರದ ಸುತ್ತಿನ ಕೌನ್ಸಲಿಂಗ್ನಲ್ಲಿ ಅವಕಾಶ ಕಲ್ಪಿಸಬೇಕು.ವಿದ್ಯಾರ್ಥಿಗಳಿಗೆ ಚಾಯ್ಸ್ಎಂಟ್ರಿ (Choice Entry)ಗೆ ಪ್ರತಿ ಸುತ್ತಿನ ಕೊನೆಯ ದಿನಾಂಕವರೆಗೂ ಬದಲಾವಣೆಗೆ ಅವಕಾಶವನ್ನು ವಿಸ್ತರಿಸಬೇಕು.
ಹಿಂದುಳಿದ ವರ್ಗದ ಬಡ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಸೌಲಭ್ಯವನ್ನು ದಾಖಲಾತಿ ಸಂದರ್ಭದಲ್ಲೇ ನೀಡಬೇಕು. ಯಾವುದೇ ಕಾಲೇಜಿನಲ್ಲಿ ಯಾವುದೇ ಕಾರಣಕ್ಕೂ ಸರ್ಕಾರಿ ಕೋಟಾದ ಸೀಟಿಗೆ ಹೆಚ್ಚವರಿ ಶುಲ್ಕವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಲು ಅವಕಾಶ ನೀಡಬಾರದು. ಈ ಬಗ್ಗೆ ಸ್ಪಷ್ಟವಾಗಿ ದಾಖಲಾತಿ ಪತ್ರದಲ್ಲಿ ನಮೂದಿಸಬೇಕು.
ವಿದ್ಯಾರ್ಥಿಯು ಸಿಇಟಿಗೆ ಅರ್ಜಿ ಹಾಕಿದ ನಂತರ ಅವರ ಸೀಟು ಆಯ್ಕೆ ಮಾಡಿ ಕಾಲೇಜಿಗೆ ದಾಖಲಾಗುವವರೆಗೂ ಕೆ.ಇ.ಎ ನೇರ ಜವಾಬ್ದಾರಿ ಹೊರಬೇಕು. ಏಕೆಂದರೆ ಕೆಲವು ಖಾಸಗಿ ಕಾಲೇಜುಗಳು ಸಾವಿರಾರು ರೂ.ಗಳ ಹೆಚ್ಚುವರಿ ಶುಲ್ಕದ ಬೇಡಿಕೆಯಿಟ್ಟು ವಿದ್ಯಾರ್ಥಿ ದಾಖಲಾತಿ ನಿರಾಕರಿಸುತ್ತಿವೆ. ಆದ್ದರಿಂದ ಇಂತಹ ಪ್ರಕರಣಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಹಾಗೂ ದೂರು ದಾಖಲಿಸಲು ವೆಬ್ಸೈಟ್ನಲ್ಲಿ ಅವಕಾಶ ಕಲ್ಪಿಸಬೇಕು ಎಂದು ಎ.ಬಿ.ವಿ.ಪಿ. ಆಗ್ರಹಿಸಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.