ಕಾಪು : ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಗುಡಿ, ಹೊಸಮಾರಿಗುಡಿ ಮತ್ತು ಕಲ್ಯ ಮಾರಿಗುಡಿಯಲ್ಲಿ ಕಳೆದ ಮಂಗಳವಾರ ಮತ್ತು ಬುಧವಾರ ಮಾರಿ ಪೂಜಾ ಮಹೋತ್ಸವ ನಡೆದಿದ್ದರೂ, ಹೊಸಮಾರಿಗುಡಿಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಳಿ ಬಲಿ ನೀಡಿದ ಕುರುಹು ಇನ್ನೂ ಅಲ್ಲಿದ್ದುದು ಕೋಳಿ ಕುರಿ ಬಲಿಯನ್ನು ವಿರೋಧಿಸುವವರ ಮಾತಿಗೆ ಗ್ರಾಸ ಒದಗಿಸಿದಂತಿದೆ.
ಮಾರಿ ಪೂಜೆಯ ವೇಳೆ ಪ್ರಾಣಿ ಬಲಿಯನ್ನು ತಡೆಯಲು ಮುಂದಾಗಬೇಕೆಂದು ಜಿಲ್ಲಾಡಳಿತ ‘ಕರ್ನಾಟಕ ಪ್ರಾಣಿ ಬಲಿ ನಿಬಂಧಕ ಕಾಯ್ದೆ೧೯೫೯’ರ ಪ್ರಕಾರ ಕಾಪುವಿನ ಮೂರು ಮಾರಿಗುಡಿಗಳಿಗೆ ಆದೇಶ ನೀಡಿತ್ತು. ಪ್ರಾಣಿ ಬಲಿ ನಡೆಸಿದಲ್ಲಿ 1959ರ ಸೆಕ್ಷನ್3, 4, 5ರಂತೆ ಶಿಕ್ಷಾರ್ಹ ಅಪರಾಧ. ಇದಕ್ಕೆ ಬೆಂಬಲಿಸಿದ ಯಾರೇ ವ್ಯಕ್ತಿಯನ್ನು ವಾರಂಟ್ ಇಲ್ಲದೆ ಬಂಧಿಸಲಾಗುವುದು. ಸದರಿ ಅಪರಾಧ ಸಾಬೀತಾದರೆ, ಆರು ತಿಂಗಳ ಸೆರೆವಾಸ ಮತ್ತು 500ರುಪಾಯಿ ದಂಡ ವಿಧಿಸಲಾಗುವುದು. ಆದ್ದರಿಂದ ಜಿಲ್ಲಾಡಳಿತ ಆದೇಶವನ್ನು ಪಾಲಿಸಿ ಸಹಕರಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿತ್ತು.
ಕಳೆದ ಮಂಗಳವಾರ ಆತಂಕಿತ ಭಕ್ತರು ಮಾರಿಗುಡಿಗೆ ಆಗಮಿಸಿದಾಗ ಅಂತಹಾ ಬಿಗುವಿನ ವಾತಾವರಣ ಇಲ್ಲದ್ದು ತಿಳಿದು, ಹೊಸಮಾರಿಗುಡಿ ಹಿಂಬದಿಯಲ್ಲಿ ಕೋಳಿ, ಕುರಿ ಬಲಿ ನೀಡಿ ಕೃಥಾರ್ಥರಾಗಿದ್ದಾರೆ.
ಪೋಲಿಸರು ಸ್ವಲ್ಪ ಮಾನವೀಯತೆ ತೋರಿದ ಪರಿಣಾಮ, ನಿರಾಂತಕವಾಗಿ ಬಲಿ ನಡೆದಿದೆ. ಇದನ್ನೇ ದಾಳವಾಗಿ ಉಪಯೋಗಿಸಿದ ಭಕ್ತಾಧಿಗಳು ಎಲ್ಲೆಂದರಲ್ಲಿ ಕೋಳಿ ಕಡಿಯಲು ಪ್ರಾರಂಬಿಸಿದ್ದೇ ಆತಂಕಕ್ಕೆ ಕಾರಣ ಆಗಿದೆ. ಉಂಡಾಡಿಗಳಂತೆ ತಿರುಗುವವರೂ ಚಾಕು ಹಿಡಿದು ಎಲ್ಲೆಂದರಲ್ಲಿ ಕೋಳಿಗಳನ್ನು ತುಂಡರಿಸಿ ಭಕ್ತಾಧಿಗಳಿಂದಹಣ ಪೀಕಿಸುತ್ತಿದ್ದುದು ಈಗಿನ ಅವಾಂತರಕ್ಕೆ ಕಾರಣ ಆಗಿದೆ.
ಇದೇ ವೇಳೆ ಹೊಸ ಮಾರಿಗುಡಿಯ ಆಡಳಿತ ಭಕ್ತಾಧಿಗಳಲ್ಲಿ ವಿನಂತಿಸಿ ಮಾರಿಗುಡಿಯ ಹಿಂಬದಿಗೆ ಕಳುಹಿಸುತ್ತಿದ್ದರೆ, ಈಗಿನ ಪರಿಸ್ಥಿತಿ ತಲೆದೋರುತ್ತಿರಲಿಲ್ಲ. ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಹೆಗ್ಡೆ ಮತ್ತು ಸದಸ್ಯರ, ಆಡಳಿತಾಧಿಕಾರಿ ಪ್ರಶಾಂತ್ ಶೆಟ್ಟಿಯವರ ಅಸಡ್ಡೆಯಿಂದಾಗಿ ಈ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಭಕ್ತರು ದೂರುತ್ತಿದ್ದಾರೆ.ಭಕ್ತಾಧಿಗಳು ಮತ್ತು ಅಲೆಮಾರಿಗಳು ಎಲ್ಲೆಂದರಲ್ಲಿ ಕೋಳಿ ಕಡಿದು ಅದರ ರುಂಡವನ್ನು ಅಲ್ಲೇ ಬಿಸಾಕಿದ ಪರಿಣಾಮ ಸಹ್ಯ ಪರಿಸ್ಥಿತಿ ನಿರ್ಮಾಣ ಆಗಿದೆ.
ಈ ಎಲ್ಲಾ ಪ್ರಕ್ರಿಯೆಯಲ್ಲಿ ಕಾಪು ಗ್ರಾಮ ಪಂಚಾಯತ್ ಸಮಾನ ಭಾಗಿ ಆಗಿದ್ದು ಕಂಡು ಬಂದಿದೆ. ಗ್ರಾಮ ಪಂಚಾಯತ್ ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡಿದ್ದರೂ, ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾಗಿದೆ. ಹೆಸರು ಹೇಳಲು ಇಚ್ಛಿಸದ ಹಿರಿಯ ಪೋಲಿಸ್ ಅಧಿಕಾರಿಯವರೊಬ್ಬರು ಮಾಧ್ಯಮದೊಂದಿಗೆ ಮಾತನಾಡಿ, ಆಟಿ ಮಾರಿ ಪೂಜೆಯ ಸಂದರ್ಭ ಸೌಚ್ಛತೆಯ ಕಾರಣವನ್ನು ಮುಂದಿಟ್ಟು, ಜಿಲ್ಲಾಧಿಕಾರಿಯವರು ಕೋಳಿ ಕುರಿ ಕಡಿಯದಂತೆ ಕಠಿಣವಾಗಿ ವರ್ತಿಸಿದರೆ ಅದಕ್ಕೆ ಉತ್ತರದಾಯಿತ್ವವನ್ನು ಆಡಳಿತ ಮಂಡಳಿ ಮತ್ತು ಕಾಪು ಗ್ರಾಮ ಪಂಚಾಯತ್ ವಹಿಸಬೇಕಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.