ಹೈದರಾಬಾದ್ ಕರ್ನಾಟಕ ಈಗ ಕಲ್ಯಾಣ ಕರ್ನಾಟಕವಾಗಿ ಉದಯವಾಗಿದೆ. 71 ವರ್ಷಗಳ ಹಿಂದೆ ಅದು ನಿಜಾಮರ ದಬ್ಬಾಳಿಕೆಯ ಆಡಳಿತದಿಂದ ಸ್ವಾತಂತ್ರ್ಯವನ್ನು ಪಡೆದಿತ್ತು. ಆದರೆ ಅಭಿವೃದ್ಧಿಯಿಂದ ಅದು ಬಹಳ ದೂರವೇ ಉಳಿದಿತ್ತು. ಇದೀಗ ಏಳು ದಶಕಗಳ ನಂತರ ಅದು ಕಲ್ಯಾಣ ಕರ್ನಾಟಕವಾಗಿದೆ ಮತ್ತು ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಈ ಹಿಂದೆ ಹೈದರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿದ್ದ ಈ ಪ್ರದೇಶ ಕರ್ನಾಟಕದ ಎರಡನೇ ಅತಿದೊಡ್ಡ ಪ್ರದೇಶ. ಇದೀಗ ಅಧಿಕೃತವಾಗಿ ಕಲ್ಯಾಣ ಕರ್ನಾಟಕ ಎಂದು ಅದಕ್ಕೆ ಮರುನಾಕರಣ ಮಾಡಲಾಗಿದೆ.
ಸ್ವಾತಂತ್ರ್ಯ ಪೂರ್ವದ ಹೈದರಾಬಾದ್ ಪ್ರಾಂತ್ಯದಲ್ಲಿ ನಿಜಾಮರ ಆಳ್ವಿಕೆಯಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ರಾಜ್ಯಗಳ ರಚನೆಯಾದ ಬಳಿಕವೂ ಅದನ್ನು ಹೈದರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಅದನ್ನು ಕಲ್ಯಾಣ ಕರ್ನಾಟಕ ಮಾಡಬೇಕು ಎಂಬುದು ಈ ಭಾಗದ ಜನರ ಬಹು ಕಾಲದ ಬೇಡಿಕೆಯಾಗಿತ್ತು. ಈ ಪ್ರದೇಶದ ಜನಪ್ರತಿನಿಧಿಗಳೂ ಸತತವಾಗಿ ಒತ್ತಾಯಿಸುತ್ತಾ ಬಂದಿದ್ದರು. ಎಲ್ಲರ ಬೇಡಿಕೆಯನ್ನು ಪ್ರಸ್ತುತ ಸರ್ಕಾರ ಈಡೇರಿಕೆ ಮಾಡಿದೆ.
ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಎಂದು ಇದಕ್ಕೆ ಮರುನಾಮಕರಣ ಮಾಡಿದರು. ಈ ನಾಮಕರಣರೊಂದಿಗೆ ರಾಜ್ಯ ಸರ್ಕಾರವು ‘ನಿಜಾಮರ ಯುಗ’ದ ಗುರುತಿಸುವಿಕೆಯನ್ನು ತೊಡೆದು ಹಾಕಿ ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಆ ಪ್ರದೇಶದ ಬೇಡಿಕೆಯನ್ನು ಈಡೇರಿಸುಲು ಬದ್ಧತೆಯನ್ನು ತೋರಿಸಿದೆ.
ಸಂತ ಕವಿ ಬಸವಣ್ಣ ನೇತೃತ್ವದ ಶರಣ ಚಳುವಳಿ ಮತ್ತು ವಚನ ಸಾಹಿತ್ಯದ ಉಗಮಕ್ಕೆ ಸಾಕ್ಷಿಯಾದ ಕಲ್ಯಾಣ ಸಾಮ್ರಾಜ್ಯದ ಆಳ್ವಿಕೆಯ ಸೂಚಕವಾಗಿ, ಅಭಿವೃದ್ಧಿಯ ಸೂಚಕವಾಗಿ ಇದಕ್ಕೆ ‘ಕಲ್ಯಾಣ’ ಕರ್ನಾಟಕ ಎಂದು ಹೆಸರಿಡಲಾಗಿದೆ.
ಕಲ್ಯಾಣ ಕರ್ನಾಟಕ ಭಾಗ ಪ್ರಗತಿಯಲ್ಲಿ ಹಿಂದುಳಿದಿದ್ದು, ಇದರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಪ್ರತ್ಯೇಕವಾದ ಸಚಿವರನ್ನೇ ನೇಮಿಸಲಾಗುವುದು ಎಂದು ಹೇಳುವ ಮೂಲಕ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಸರಕಾರದ ಬದ್ಧತೆಯನ್ನು ಹೊಂದಿದೆ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು. ಸಂವಿಧಾನದ 371ಜೆ ಅಡಿ ಜನರ ಕುಂದುಕೊರತೆ, ಸಮಸ್ಯೆಗಳ ನಿವಾರಣೆಗೆ ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಯಲ್ಲಿ ಇರುವ ಹೈದರಾಬಾದ್ ಕರ್ನಾಟಕದ ವಿಶೇಷ ಕೋಶದ ಪ್ರಾದೇಶಿಕ ಕಚೇರಿಯನ್ನು ಕಲಬುರ್ಗಿಯಲ್ಲಿ ತೆರೆಯಲಾಗುವುದು ಎಂದರು.
ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಕಲ್ಬುರ್ಗಿ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡಿರುವ ಈ ಪ್ರದೇಶವು ಭಾರತದ ಸ್ವಾತಂತ್ರ್ಯದ ನಂತರವೂ ಕೊನೆಯ ನಿಜಾಮನಾದ ಮಿರ್ ಉಸ್ಮಾನ್ ಅಲಿ ಖಾನ್ ಬಹದ್ದೂರ್ ಆಡಳಿತದಡಿ ಇತ್ತು. ಈತ ಇಲ್ಲಿನ ಜನರನ್ನು ತೀವ್ರ ಸ್ವರೂಪದಲ್ಲಿ ದೌರ್ಜನ್ಯಕ್ಕೀಡು ಮಾಡಿದ್ದ. ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಾಬಾಯ್ ಅವರು ಪೊಲೀಸ್ ಕ್ರಮದ ಎಚ್ಚರಿಕೆಯನ್ನು ನೀಡಿದ ಬಳಿಕವಷ್ಟೇ ಈತ 1954ರ ಸೆ.17 ರಂದು ಭಾರತಕ್ಕೆ ಒಳಪಡುವ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದ.
“ರಜಾಕರುಗಳ ದೌರ್ಜನ್ಯ ಮತ್ತು ಹೈದರಾಬಾದ್ನ ನಿಜಾಮನ ದಬ್ಬಾಳಿಕೆಯ ಕೆಟ್ಟ ನೆನಪುಗಳನ್ನು ಅಳಿಸಿಹಾಕುವ ಮತ್ತು ಶರಣ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ನಾನು ಈ ಪ್ರದೇಶವನ್ನು ಮರುಹೆಸರಿಸಿದ್ದೇನೆ. ಇದು ಈ ಪ್ರದೇಶದ ಅಭಿವೃದ್ಧಿಯ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ” ಎಂದು ಯಡಿಯೂರಪ್ಪ ಉಲ್ಲೇಖ ಮಾಡಿದ್ದಾರೆ.
ಈ ಪ್ರದೇಶವನ್ನು ಬೌದ್ಧಿಕ ಕೇಂದ್ರವಾಗಿ ಪರಿವರ್ತಿಸಿದ ಬಸವಣ್ಣನ ದಿನಗಳನ್ನು, ಕ್ರಾಂತಿಗಳನ್ನು ಜ್ಞಾಪಿಸಿದ ಯಡಿಯೂರಪ್ಪನವರು, ಪ್ರದೇಶದಲ್ಲಿ ಶಿಕ್ಷಣ ಮತ್ತು ಉದ್ಯೋಗವನ್ನು ಹೆಚ್ಚಿಸಬೇಕಾದರೆ ಕಲಂ 371 (ಜೆ) ಗೆ ತಿದ್ದುಪಡಿ ತರುವುದು ಅಗತ್ಯ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಹೆಚ್ಚು ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ವೇಗವರ್ಧಕವೆಂದೇ ಮರುನಾಮಕರಣವನ್ನು ಬಿಂಬಿಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸಲು ಯಡಿಯೂರಪ್ಪ ಸರ್ಕಾರ ಘೋಷಿಸಿದ ಕ್ರಮಗಳು ಇಂತಿವೆ.
🔹 ಮುಂದಿನ ಬಜೆಟ್ನಲ್ಲಿ ಅಭಿವೃದ್ಧಿ ಮಂಡಳಿಗೆ ನೀಡುವ ವಿಶೇಷ ಅನುದಾನದಲ್ಲಿ ಹೆಚ್ಚಳ
🔹 ಈ ಪ್ರದೇಶದಲ್ಲಿ ಖಾಲಿ ಇರುವ 10,748 ಹುದ್ದೆಗಳನ್ನು ಭರ್ತಿ ಮಾಡುವ ಪ್ರಯತ್ನ. ಇದರಿಂದ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯುತ್ತದೆ. ಈ ಪ್ರದೇಶದ ಆರು ಜಿಲ್ಲೆಗಳಲ್ಲಿ, 32,343 ಸರ್ಕಾರಿ ಹುದ್ದೆಗಳಲ್ಲಿದ್ದು ಇವುಗಳಲ್ಲಿ ಕೇವಲ 13,619 ಮಾತ್ರ ಭರ್ತಿಯಾಗಿವೆ.
🔹 ಕಲಬುರ್ಗಿಯಲ್ಲಿ ಅನುಭವ ಮಂಟಪ ನಿರ್ಮಿಸಲು 20 ಎಕರೆ ಜಮೀನು ಮತ್ತು 50 ಕೋಟಿ ರೂ.ಗಳ ಅನುದಾನವನ್ನು ನೀಡಲಾಗುತ್ತಿದೆ. ಇದರಲ್ಲಿ 20 ಕೋಟಿ ಅನುದಾನವನ್ನು ಮುಂದಿನ ಹದಿನೈದು ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದನ್ನು ಬಸವಣ್ಣ ನಿರ್ಮಿಸಿದ ಅನುಭವ ಮಂಟಪದ ಮಾದರಿಯಲ್ಲೇ ರೂಪಿಸಲಾಗುತ್ತಿದೆ.
🔹 ಕಲಬುರ್ಗಿಯಲ್ಲಿ ವೀರಶೈವ ಹಾಸ್ಟೆಲ್ ನಿರ್ಮಿಸಲು 3 ಕೋಟಿ ರೂಪಾಯಿ.
🔹 ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕದ ವಿಶೇಷ ಶಾಖಾ ಕಚೇರಿ
🔹 ಮುಂದಿನ ತಿಂಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಲಬುರ್ಗಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಅಂದಿನಿಂದ ವಾಣಿಜ್ಯ ಕಾರ್ಯಾಚರಣೆಗಳು ಇಲ್ಲಿ ನಡೆಯಲಿವೆ. ಈ ಪ್ರದೇಶದಲ್ಲಿನ ಕೈಗಾರಿಕೆಗಳ ಅಭಿವೃದ್ಧಿಯನ್ನು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿ ಇದು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.
🔹 ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುವುದು.
🔹 ಈ ಪ್ರದೇಶದ ಮರೆತುಹೋದ ಇತಿಹಾಸವನ್ನು ಶಾಲಾ ಪಠ್ಯಕ್ರಮದ ಭಾಗವಾಗಿಸಲು ಪ್ರಯತ್ನ.
🔹 ಪ್ರದೇಶದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯವನ್ನೂ ಘೋಷಿಸಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಈ ಪ್ರದೇಶಕ್ಕೆ ಉತ್ತಮ ಪ್ರಾತಿನಿಧ್ಯ ಸಿಗಲಿದೆ.
ಒಟ್ಟಿನಲ್ಲಿ ಕಲ್ಯಾಣ ಕರ್ನಾಟಕವಾಗಿ ಉದಯವಾಗಿರುವ ಹಿಂದುಳಿದ ಜಿಲ್ಲೆಗಳು ಹೊಸ ಹುರುಪು ಮತ್ತು ಉತ್ಸಾಹದೊಂದಿಗೆ ಅಭಿವೃದ್ಧಿಯತ್ತ ಮುನ್ನುಗ್ಗುವ ಆಶಾವಾದವನ್ನು ಹೊಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.