ಅಮೆರಿಕಾದ ಹೋಸ್ಟನ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸುವುದಕ್ಕಾಗಿ ಭಾರತೀಯ ಸಮುದಾಯವು ಮುಂದಿನ ಭಾನುವಾರ “ಹೌಡಿ, ಮೋದಿ!” ಎಂಬ ಮೆಗಾ ಕಾರ್ಯಕ್ರಮವನ್ನು ಆಯೋಜನೆಗೊಳಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ಈ ಸಮಾರಂಭದಲ್ಲಿ ಮೋದಿಯೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.
ಈ ಕಾರ್ಯಕ್ರಮವು ಅಮೆರಿಕದ ಸಂಸ್ಕೃತಿ, ಬೌದ್ಧಿಕತೆ ಮತ್ತು ಸಾಮಾಜಿಕ ಚಿತ್ರಣಕ್ಕೆ ಭಾರತೀಯ-ಅಮೆರಿಕನ್ನರು ನೀಡಿದ ಅಮೂಲ್ಯ ಕೊಡುಗೆಗಳ ಒಂದು ನೋಟವನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ 22 ರ ‘ಹೌಡಿ, ಮೋದಿ!’ ಸಮಾರಂಭದಲ್ಲಿ 50,000 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರ ಸಮ್ಮುಖದಲ್ಲಿ ವೇದಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ. “ಹಂಚಿದ ಕನಸುಗಳು, ಪ್ರಕಾಶಮಾನವಾದ ಭವಿಷ್ಯ” ಎಂಬ ಸೆಷನ್ ವೇಳೆ ಇವರಿಬ್ಬರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಸೆಷನ್ ಭಾರತೀಯ-ಅಮೆರಿಕನ್ನರ ಯಶಸ್ಸಿನ ಮೇಲೆ ಮತ್ತು ಯುಎಸ್-ಭಾರತ ಸಂಬಂಧದ ಬಲಿಷ್ಠತೆಯ ಮೇಲೆ ಕೇಂದ್ರೀಕೃತವಾಗಿರಲಿದೆ.
ಉಭಯ ನಾಯಕರ ಜಂಟಿ ಉಪಸ್ಥಿತಿಯನ್ನು “ಅಸಾಧಾರಣ ಮತ್ತು ವಿಶಿಷ್ಟ” ಎಂದು ಬಣ್ಣಿಸಿರುವ ಅಮೆರಿಕದ ಭಾರತೀಯ ರಾಯಭಾರಿ ಹರ್ಷ್ವರ್ಧನ್ ಶಿಂಗ್ಲಾ ಅವರು, “ಈ ಸಮಾರಂಭವು ಯುಎಸ್-ಭಾರತ ಸಂಬಂಧಗಳಿಗೆ ದೊರೆತ ಬಲವಾದ ಉಭಯಪಕ್ಷೀಯ ಬೆಂಬಲವನ್ನು ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.
“ಭಾರತೀಯ-ಅಮೆರಿಕನ್ನರು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಸ್ವಾಭಾವಿಕ ಸೇತುವೆಯಾಗಿದ್ದಾರೆ” ಎಂದು ಅವರು ಬಣ್ಣಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಅಧಿವೇಶನದಲ್ಲಿ ಭಾಗಿಯಾಗುವ ಸಲುವಾಗಿ ಪ್ರಧಾನಿ ಮೋದಿ ಸೆಪ್ಟೆಂಬರ್ 21 ರಿಂದ ಸೆಪ್ಟೆಂಬರ್ 27 ರವರೆಗೆ ಅಮೆರಿಕಾಗೆ ಭೇಟಿ ನೀಡುತ್ತಿದ್ದಾರೆ. ಮೇ ತಿಂಗಳಲ್ಲಿ ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ನಂತರ ಇದು ಅವರ ಮೊದಲ ಯುಎಸ್ ಭೇಟಿಯಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಗಾಗಿ ನ್ಯೂಯಾರ್ಕ್ಗೆ ತೆರಳುವ ಮುನ್ನ ಅವರು ಹೋಸ್ಟನ್ನಲ್ಲಿರುವ ಇಂಧನ ಕಂಪನಿಗಳ ಸಿಇಒಗಳೊಂದಿಗೆ ಸಭೆ ನಡೆಸಲಿದ್ದಾರೆ.
“‘ಹೌಡಿ, ಮೋದಿ!’ ಸಮಾರಂಭ ಪೋಪ್ ಹೊರತುಪಡಿಸಿ ಅಮೆರಿಕಾಗೆ ಭೇಟಿ ನೀಡಿದ ಆಹ್ವಾನಿತ ವಿದೇಶಿ ನಾಯಕನ ಅತಿದೊಡ್ಡ ಸಭೆ” ಎಂದು ಸಮಾರಂಭದ ಮುಖ್ಯ ಸಂಘಟಕರಾದ ಟೆಕ್ಸಾಸ್ ಇಂಡಿಯಾ ಫೋರಂ (ಟಿಐಎಫ್) ಸದಸ್ಯ ಜುಗಲ್ ಮಾಲಿನಿ ಹೇಳಿದ್ದಾರೆ.
ಜೂನ್ನಲ್ಲಿ ಜಪಾನ್ನಲ್ಲಿ ನಡೆದ ಜಿ 20 ಶೃಂಗಸಭೆ ಮತ್ತು ಕಳೆದ ತಿಂಗಳು ಫ್ರಾನ್ಸ್ನಲ್ಲಿ ನಡೆದ ಜಿ 7 ಶೃಂಗಸಭೆಯ ನಂತರ ಮೂರು ತಿಂಗಳ ಅವಧಿಯೊಳಗೆ ಡೊನಾಲ್ಡ್ ಟ್ರಂಪ್ ಮತ್ತು ಮೋದಿ ಅವರ ಮೂರನೇ ಭೇಟಿಗೆ ‘ಹೌಡಿ, ಮೋದಿ!’ ಅವಕಾಶ ಕಲ್ಪಿಸಿಕೊಡುತ್ತಿದೆ. ಸಮಾರಂಭವನ್ನು ಪಕ್ಷಾತೀತವಾಗಿಡಲು ಸಂಘಟಕರು ಆಶಿಸಿದ್ದಾರೆ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ನಂ. 2 ಡೆಮೋಕ್ರಾಟ್ ಆದ ಸ್ಟೆನಿ ಹೋಯರ್ ಸೇರಿದಂತೆ ಹಲವು ಭಾಷಣಕಾರರನ್ನು ಆಹ್ವಾನಿಸಿದ್ದಾರೆ.
ಇಂಡೋ-ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್ ಆಫ್ ಗ್ರೇಟರ್ ಹೋಸ್ಟನ್ (ಐಎಸಿಸಿಜಿಹೆಚ್)ನ ಸ್ಥಾಪಕ ಕಾರ್ಯದರ್ಶಿ ಮತ್ತು ಹಾಲಿ ಕಾರ್ಯನಿರ್ವಾಹಕ ನಿರ್ದೇಶಕರಾದ ಜಗದೀಪ್ ಅಹ್ಲುವಾಲಿಯಾ ಅವರು ಸಮಾರಂಭದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಿದ್ದು, ನಗರದ 90 ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ ಎಂದಿದ್ದಾರೆ.
ಗ್ರೇಟರ್ ಹೋಸ್ಟನ್ನ ಇಂಡೋ-ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ವಿಶೇಷ ಜಾಹೀರಾತು ಫಲಕವನ್ನು ರಚಿಸಿದೆ.
ಹೋಸ್ಟನ್ ಅನ್ನು ವಿಶ್ವದ ಶಕ್ತಿ ಬಂಡವಾಳವೆಂದು ಪರಿಗಣಿಸಲಾಗಿದೆ ಮತ್ತು ಅಮೆರಿಕದ ಅತ್ಯಂತ ವೈವಿಧ್ಯಮಯ ನಗರಗಳಲ್ಲಿ ಒಂದಾಗಿದೆ. ಅಧ್ಯಕ್ಷ ಟ್ರಂಪ್ ‘ಹೌಡಿ, ಮೋದಿ!’ ಸಮಾರಂಭದಲ್ಲಿ ಭಾಗಿಯಾಗುತ್ತಿರುವುದು ಯುಎಸ್-ಇಂಡಿಯಾ ಸಂಬಂಧದ ಹೆಚ್ಚುತ್ತಿರುವ ಪ್ರಾಮುಖ್ಯತೆಯ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.
ನೂರಾರು ಸ್ವಯಂಸೇವಕರು, ಟೆಕ್ಸಾಸ್ ಇಂಡಿಯಾ ಫೋರಂ, ಹೋಸ್ಟನ್ನಲ್ಲಿರುವ ಭಾರತೀಯ ದೂತಾವಾಸ, ನಗರದ ಅಧಿಕಾರಿಗಳು, ಗವರ್ನರ್ ಕಚೇರಿ ಎಲ್ಲರೂ ಒಟ್ಟಾಗಿ ‘ಹೌಡಿ, ಮೋದಿ!’ ಸಮಾರಂಭವನ್ನು ಭರ್ಜರಿಯಾಗಿ ಯಶಸ್ಸು ಪಡಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
‘ಹೌಡಿ, ಮೋದಿ’ ಕಾರ್ಯಕ್ರಮವು ಮೋದಿಯ ಮೇಲೆ ಅನಿವಾಸಿ ಭಾರತೀಯರು ಇಟ್ಟಿರುವ ಪ್ರೀತಿಯ ದ್ಯೋತಕವಾಗಿದೆ. ಈ ಕಾರ್ಯಕ್ರಮಕ್ಕೆ ಡೊನಾಲ್ಡ್ ಟ್ರಂಪ್ ಆಗಮಿಸುತ್ತಿರುವುದು ಜಗತ್ತಿನಾದ್ಯಂತ ಮೋದಿ ಬೀರಿರುವ ಪ್ರಭಾವದ ದ್ಯೋತಕವಾಗಿದೆ. 50 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ವಿದೇಶಿ ನೆಲದಲ್ಲಿ ಭಾರತೀಯ ಶ್ರೇಷ್ಠತೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.