ಮಂಗಳೂರು : ತುಳು ಸಿನಿಮಾ ರಂಗದಲ್ಲಿ ಈಗ ಸಮೃದ್ಧಿಯ ಕಾಲ. ಹಲವಾರು ಸಿನಿಮಾಗಳು ತೆರೆ ಕಾಣುತ್ತಿವೆ. ಈ ಪೈಕಿ ಜಯಕಿರಣ ಲಾಂಛನದಡಿಯಲ್ಲಿ ಪ್ರಕಾಶ್ ಪಾಂಡೇಶ್ವರ ಅವರು ಯುವ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರ್ ಅವರ ನಿರ್ದೇಶನದಲ್ಲಿ ನಿರ್ಮಾಣ ಮಾಡಿದ ಚಾಲಿಪೋಲಿಲು ಸಿನಿಮಾ ಜು.7ನೇ ತಾರೀಕಿಗೆ 250 ದಿನಗಳ ಪ್ರದರ್ಶನ ಕಂಡು ಒಂದು ಅದ್ಭುತ ದಾಖಲೆ ಬರೆದಿದೆ.
ಕೇವಲ 60 ಲ.ರೂ. ಬಜೆಟ್ನಲ್ಲಿ ತಯಾರಿಸಿದ ಚಾಲಿಪೋಲಿಲು ಉತ್ತಮ ಸಿನಿಮಾದ ಸಾಲಿಗೆ ಸೇರಿದೆ. 11 ಟಾಕೀಸ್ಗಳಲ್ಲಿ ತೆರೆ ಕಂಡಿರುವ ಈ ಸಿನಿಮಾಕ್ಕೆ ಆರಂಭದಿಂದಲೇ ಉತ್ತಮ ಜನಬೆಂಬಲ ವ್ಯಕ್ತವಾಗಿತ್ತು. ಆದ್ದರಿಂದಲೇ ಇದು 5 ಟಾಕೀಸ್ಗಳಲ್ಲಿ 75 ದಿನ ಮತ್ತು 3 ಟಾಕೀಸ್ಗಳಲ್ಲಿ 100 ದಿನಗಳಿಗೂ ಮಿಕ್ಕಿ ಪ್ರದರ್ಶನ ಕಂಡಿದೆ.ಪ್ರಸ್ತುತ ಪಾಂಡೇಶ್ವರ ಪಿವಿಆರ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ದಿನಂಪ್ರತಿ ಪ್ರದರ್ಶನ ಕಾಣುತ್ತಿದ್ದು, ಜು. 7 ರಂದು 250ನೇ ದಿನದ ಪ್ರದರ್ಶನ ನೀಡಿದೆ. ದೇಶವ್ಯಾಪಿಯಾಗಿ ಇರುವ ಪಿವಿಆರ್ನ ಯಾವುದೇ ಚಿತ್ರಮಂದಿರದಲ್ಲಿ ಪ್ರಾದೇಶಿಕ ಭಾಷೆಯ ಸಿನಿಮಾವೊಂದು ಈ ರೀತಿಯ ಪ್ರದರ್ಶನ ಕಂಡಿಲ್ಲ ಎಂದು ಚಿತ್ರಮಂದಿರದವರು ಹೇಳುತ್ತಿರುವುದು ತುಳುವರಿಗೆ ಒಂದು ಹೆಮ್ಮೆಯ ಸಂಗತಿಯೇ.
ಚಾಲಿಪೋಲಿಲು ಕೇವಲ ಮಂಗಳೂರು, ಉಡುಪಿಯಲ್ಲಿ ಮಾತ್ರವಲ್ಲದೆ ಬೆಂಗಳೂರು, ಕಾಸರಗೋಡು, ಮಡಿಕೇರಿ, ಮುಂಬಯಿ, ಪೂನಾದಂಥ ದೇಶದ ಪ್ರಮುಖ ನಗರಗಳಲ್ಲೂ ಪ್ರದರ್ಶನ ಕಂಡಿದೆ. ಬಹ್ರೈನ್ನಲ್ಲೂ ಇದು ಬಿಡುಗಡೆಯಾಗಿ ಅಲ್ಲಿನ ತುಳು ಸಿನಿಮಾ ಪ್ರಿಯರನ್ನೂ ರಂಜಿಸಿದೆ. ತುಳು ಸಿನಿಮಾ ಪ್ರಶಸ್ತಿ ಸ್ಪರ್ಧೆಯಲ್ಲಿ ಚಾಲಿಪೋಲಿಲು 8ಪ್ರಶಸ್ತಿಯನ್ನೂ ಬಾಚಿಕೊಂಡಿತ್ತು. ಈ ಸಿನಿಮಾವನ್ನು ಈಗಲೂ ಕೂಡಾ ನೋಡಿದವರೇ ಮತ್ತೆ ಮತ್ತೆ ಕುಟುಂಬ ಸಮೇತರಾಗಿ ನೋಡುತ್ತಿದ್ದಾರೆ.
ಗರಿಷ್ಠ ಮೊತ್ತಕ್ಕೆ ವೀಡಿಯೋ ಮಾರಾಟ : ಇದರ ವಿಡಿಯೋ ಹಕ್ಕು ಕೂಡ 11 ಲಕ್ಷ ರೂಪಾಯಿ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿದೆ. ಮಂಗಳೂರಿನ ಮ್ಯೂಸಿಕ್ ಹೌಸ್ ಸಂಸ್ಥೆಯೊಂದು ಈ ಸಿನಿಮಾದ ವಿಡಿಯೋ ಹಕ್ಕನ್ನು ಪಡೆದುಕೊಂಡಿದ್ದು, ತುಳು ಸಿನಿಮಾ ರಂಗದಲ್ಲಿ ಇದೂ ಕೂಡ ಒಂದು ಹೊಸ ದಾಖಲೆಯಾಗಿದೆ.
ಆಸ್ಟ್ರೇಲಿಯಾದಲ್ಲಿ ಪ್ರದರ್ಶನ : `ಚಾಲಿಪೋಲಿಲು’ ಈ ತಿಂಗಳಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರದರ್ಶನಗೊಳ್ಳಲಿದೆ. ಅಲ್ಲದೆ ಮುಂದಿನ ವಾರ ಮುಂಬಾಯಿ ಮತ್ತು ಬೆಂಗಳೂರಿನಲ್ಲಿ ಮರು ಪ್ರದರ್ಶನಗೊಳ್ಳಲಿದೆ.
ಹೊಸಬರ ಸಿನಿಮಾ : ಸಿನಿಮಾ ರಂಗಕ್ಕೆ ಪ್ರಕಾಶ್ ಪಾಂಡೇಶ್ವರ ಮತ್ತು ವೀರೇಂದ್ರ ಶೆಟ್ಟಿ ಅವರಿಬ್ಬರೂ ಹೊಸಬರು. ಈ ಜೋಡಿಯಿಂದ ತುಳುವರಿಗೆ ಸಿಕ್ಕ ಕಲಾಕಾಣಿಕೆ ಚಾಲಿಪೋಲಿಲು ಇಂಥದ್ದೊಂದು ಸಾಧನೆ ಮಾಡಲು ಅದರ ಗುಣಮಟ್ಟವೇ ಕಾರಣ. ಹೊಸಬರಲ್ಲೂ ಹೊಸತನವಿದೆ, ಸಾಮರ್ಥ್ಯವಿದೆ ಎಂಬುದನ್ನು ತೋರಿಸಿಕೊಟ್ಟ ಸಿನಿಮಾವಿದು. ಕೇರಳದ ಖ್ಯಾತ ಕೆಮರಾಮ್ಯಾನ್ ಉತ್ಪಲ್ ನಾಯನಾರ್ ಅವರ ಕೆಮರಾ ಮತ್ತು ಕೈಚಳಕದಿಂದ ಅದ್ಭುತವಾಗಿ ಸೆರೆ ಹಿಡಿಯಲ್ಪಟ್ಟ ಈ ಸಿನಿಮಾಕ್ಕೆ ವಿ. ಮನೋಹರ್ ಸಂಗೀತ, ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತ, ಕೂಲ್ ಜಯಂತ್ ಅವರ ನೃತ್ಯ ನಿರ್ದೇಶನ ಸಿಕ್ಕಿರುವುದು ಕೂಡ ಗುಣಮಟ್ಟ ಹೆಚ್ಚಲು ಕಾರಣವಾಯಿತು. ತುಳುರಂಗಭೂಮಿಯ ಪ್ರಮುಖರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್ ಸುಂದರ್ ರೈ ಮಂದಾರ, ಚೇತನ್ ರೈ, ಲಕ್ಷ್ಮಣ್ ಕುಮಾರ್ ಮಲ್ಲೂರು, ರಾಘವೇಂದ್ರ ರೈ, ಸರೋಜಿನಿ ಶೆಟ್ಟಿ, ದಿವ್ಯಶ್ರೀ ಸೇರಿದಂತೆ ಪ್ರಮುಖರೆಲ್ಲರೂ ನಟಿಸಿದ್ದರೂ ಇದು ನಾಟಕಕ್ಕಿಂತ ತುಂಬಾ ಭಿನ್ನವಾಗಿ ಹೊರ ಬಂದಿದೆ. ಖ್ಯಾತ ಕನ್ನಡ ಸಿನಿಮಾ ನಟಿ ಪದ್ಮಜಾ ರಾವ್ ಅವರು ಕೂಡ ಇಲ್ಲಿ ಭಿನ್ನ ಪಾತ್ರದಲ್ಲಿ ನಟಿಸಿರುವುದು ಅವರ ನಟನಾ ಕೌಶಲವನ್ನು ಪ್ರೇಕ್ಷಕರೆದುರು ಸಾಬೀತು ಮಾಡಲು ಅವಕಾಶ ಮಾಡಿಕೊಟ್ಟಿತು.
ತುಳುನಾಡಿಗೆ ಹೊಂದಿಕೊಂಡಿರುವ ಕಥೆ, ಗುಣಮಟ್ಟದ ಹಾಸ್ಯ, ಉತ್ತಮ ಸಂದೇಶವೂ ಇದರಲ್ಲಿದೆ. ನಾಟಕದವರಿಂದಲೇ ನಾಟಕವಲ್ಲದ ಶ್ರೇಷ್ಠ ಮಟ್ಟದ ಸಿನಿಮಾ ನಿರ್ಮಾಣ ಮಾಡಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಲು ಚಾಲಿಪೋಲಿಲು ವೇದಿಕೆ ಒದಗಿಸಿತು. ಹೀಗೆ ಹಲವಾರು ಕಾರಣಗಳಿಂದ ಒಂದು ಉತ್ಕೃಷ್ಟ ಗುಣಮಟ್ಟದ ಸಿನಿಮಾ ಎಂದು ಗುರುತಿಸಿಕೊಂಡಿರುವ ಚಾಲಿಪೋಲಿಲು ತುಳು ಸಿನಿಮಾ ರಂಗಕ್ಕೆ ಹೊಸ ಪ್ರೇಕ್ಷಕರು ಮತ್ತು ಹೊಸ ರೂಪ ನೀಡಿದೆ. ಇದರ ಸಾಧನೆಯಿಂದಾಗಿ ಒಮ್ಮೆ ಗಾಂಧೀನಗರವೂ ಇತ್ತ ಮುಖ ಮಾಡುವಂತಾಗಿದೆ. ಪಿವಿಆರ್ನಲ್ಲಿ ಈಗಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ನಿರ್ಮಾಪಕರು ಹೇಳುತ್ತಿದ್ದು, ೩೦೦ ದಿನಗಳ ಪ್ರದರ್ಶನ ಕಾಣುವ ಸಾಧ್ಯತೆಯೂ ಇದೆ ಎನ್ನುತ್ತಿದ್ದಾರೆ.
ದಬಕ್ ದಬಾ ಐಸಾ ಹೊಸ ತುಳು ಚಿತ್ರ : ಸೆಪ್ಟಂಬರ್ ತಿಂಗಳಲ್ಲಿ ಉದ್ಯಮಿ ರೋಹನ್ ಮೊಂತೆರೋ ನಿರ್ಮಾಣದಲ್ಲಿ ದಬಕ್ ದಬಾ ಐಸಾ ತುಳು ಚಿತ್ರ ಚಿತ್ರೀಕರಣಗೊಳ್ಳಲಿದೆ.ಪ್ರಕಾಶ್ ಪಾಂಡೇಶ್ವರ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಶಶಿರಾಜ್ ಕಾವೂರ್ ಸಾಹಿತ್ಯ ಸಂಭಾಷಣೆ ರಚಿಸಿದ್ದಾರೆ. ದೇವದಾಸ್ ಕಾಪಿಕಾಡ್, ಕದ್ರಿ ನವನೀತ ಶೆಟ್ಟಿ ವೀರೇಂದ್ರ ಶೆಟ್ಟಿ, ಶಶಿರಾಜ್ ಕಾವೂರ್ ಗೀತಾ ಸಾಹಿತ್ಯ ಒದಗಿಸಿದ್ದಾರೆ. ಯುವ ಸಂಗೀತ ನಿರ್ದೇಶಕ ರಾಜೇಶ್ ಸಂಗೀತ ನೀಡಲಿದ್ದಾರೆ. ಈ ಚಿತ್ರದಲ್ಲಿ ಕೂಡಾ ಚಾಲಿಪೋಲಿಲು ಚಿತ್ರದಲ್ಲಿ ನಟಿಸಿದ ಕಲಾವಿದರು ಅಭಿನಯಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.