19ನೇಯ ಶತಮಾನದ ಪ್ರಾರಂಭದ ದಿನಗಳು. ಪುರುಷ ಪ್ರಧಾನವಾದ ಸಮಾಜ ಹಾಗೂ ಆಂದಿನ ಸಾಂಪ್ರದಾಯಕ ಆಚರಣೆಗಳ ಹಿನ್ನೆಲೆಯಲ್ಲಿ ಪ್ರಥಮ ಮಹಿಳಾ ಇಂಜಿನಿಯರ್ ಅವರ ಯಶೋಗಾಥೆ ವಿಸ್ಮಯವಾದುದು. ಅವರ ಹೆಸರು ಎ. ಲಲಿತಾ. ಅವರು ಅಗಸ್ಟ್ 27, 1919 ರಂದು ಚೆನೈನಲ್ಲಿ ಜನಿಸಿದರು. ಅವರ ಕುಟುಂಬ ಮಧ್ಯಮ ವರ್ಗದ ತೆಲುಗು ಮಾತನಾಡುವ ಕುಟುಂಬ ಆಗಿತ್ತು. ಅವರು ತಂದೆ -ತಾಯಿಗಳಿಗೆ ಒಟ್ಟು ಏಳು ಜನ ಮಕ್ಕಳು. ಅವರಲ್ಲಿ ಲಲಿತಾ ಅವರು 5ನೇಯವರಾಗಿದ್ದರು. ಆಗಿನ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಅವರು ತಂದೆ ಪಿ ಸುಬ್ಬರಾವ್ ಅವರು 1934 ರಲ್ಲಿ ಬಾಲ್ಯ ವಿವಾಹದ ಮಾಡಿದರು. ಅವರ ತಂದೆ ಕೂಡ ವಿದ್ಯುತ್ ಇಂಜಿನಿಯರ್ ಅಗಿದ್ದರು. ಮದುವೆಯ ವೇಳೆ ಲಲಿತಾ ಅವರ ವಯಸ್ಸು ಕೇವಲ 15 ವರ್ಷ.
ತಂದೆಯ ಆಶೆಯಂತೆ ಲಲಿತಾ ಅವರು ತಮ್ಮ ಶಿಕ್ಷಣವನ್ನು ವಿವಾಹದ ನಂತರವೂ ಮುಂದುವರೆಸಿದರು. ಅಂದಿನ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಪಾಸು ಮಾಡಿದರು. ಅವರ ಮಗಳು ಶ್ಯಾಮಲಾ ಸೆಪ್ಟೆಂಬರ್ 1937 ರಲ್ಲಿ ಜನಿಸಿದರು. ದುರ್ದೈವವಶಾತ್ ಮಗುವಿಗೆ ನಾಲ್ಕು ತಿಂಗಳಾದ ಸಮಯದಲ್ಲಿ ಲಲಿತಾ ಅವರ ಪತಿ ನಿಧನರಾದರು. ನಂತರ ವಿಧವೆಯ ಪಟ್ಟಕಟ್ಟಿಕೊಂಡು ಅವರು ಅನೇಕ ಸಂಕಷ್ಟಗಳನ್ನು ಅನುಭವಿಸಬೇಕಾಯಿತು. ವಿಧವೆಯ ಜೀವನವು ಅತೀ ದುಸ್ತರವಾಗಿತ್ತು. ಅಗ ಅವರ ತಂದೆಯ ಪ್ರೋತ್ಸಾಹದಿಂದ ಚೆನೈನ ರಾಣಿ ಮೇರಿ ಕಾಲೇಜಿನಲ್ಲಿ ಇಂಟರ್ಮಿಡಿಯೇಟ್ ಪರೀಕ್ಷೆಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸ್ ಅದರು. ಅಂದು ಅನೇಕ ಮಹಿಳೆಯರು ವೈದ್ಯಕೀಯ ಕಲಿಯಲು ಆಸಕ್ತಿ ತೋರಿಸುತ್ತಿದ್ದರು. ಲಲಿತಾ ಅವರಿಗೂ ವೈದ್ಯಕೀಯ ಕಲಿಯುವ ಮನಸ್ಸಿತ್ತು ಆದರೆ ಚಿಕ್ಕ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಅವರ ಮೇಲೆ ಇತ್ತು. ಅವರ ತಂದೆ, ಅಣ್ಣಂದಿರ ಸಲಹೆಯಂತೆ ಇಂಜಿನಿಯರಿಂಗ್ ಸೇರಿದರೆ, ಮಗುವನ್ನು ನೋಡಿಕೊಳಲು ಹೆಚ್ಚಿನ ಸಮಯ ಸಿಗುತ್ತದೆ ಎಂದು ವಿಚಾರ ಮಾಡತೊಡಗಿದರು. ಆಗ ಇಂಜಿನೀಯರಿಂಗ್ ಶಿಕ್ಷಣವನ್ನು ಕೇವಲ ಪುರುಷ ವಿದ್ಯಾರ್ಥಿಗಳೇ ಕಲಿಯುತ್ತಿದ್ದರು.
ಲಲಿತಾ ತಂದೆ ಪಿ ಸುಬ್ಬಾರಾವ್ ಮೂಲತಃ ವಿದ್ಯುತ್ ಇಂಜಿನಿಯರಿಂಗ್ ಪ್ರಾಧ್ಯಾಪಕರು. ಚೆನೈನಲ್ಲಿಯ ಗಿಂಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ತಂದೆ, ತಮ್ಮ ಮಗಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ. ಸಿ. ಚಾಕೋ ಅವರಲ್ಲಿ ಪ್ರಸ್ತಾಪ ಮಾಡಿದರು. ಅದಕ್ಕೆ ಬೇಕಾದ ಎಲ್ಲರಿಂದಲೂ ಒಪ್ಪಿಗೆಯನ್ನು ಪಡೆದರು. ನಂತರ 1940ರಲ್ಲಿ ಲಲಿತಾ ನಾಲ್ಕು ವರ್ಷಗಳ ವಿದ್ಯುತ್ ವಿಭಾಗದ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿ ಕಾಲೇಜಿಗೆ ಸೇರಿದರು. ಅವರೇ ಪ್ರಥಮ ಮಹಿಳಾ ವಿದ್ಯಾರ್ಥಿನಿಯಾಗಿದ್ದರು.
ಕಾಲೇಜಿನ ವಸತಿಗೃಹದಲ್ಲಿ ಒಬ್ಬರೇ ಇರುತ್ತಿದ್ದರು. ಇದರಿಂದ ಅವರಿಗೆ ಅನೇಕ ಸಮಸ್ಯೆಗಳು ಉದ್ಭವವಾದವು. ಇದನ್ನು ಅರಿತ ಪ್ರಾಚಾರ್ಯರು, ವಿದ್ಯಾರ್ಥಿನಿಯರಿಗೆ ಕಾಲೇಜಿನಲ್ಲಿ ಮುಕ್ತ ಪ್ರವೇಶ ಅವಕಾಶ ಹಾಗೂ ವಸತಿಗೃಹದಲ್ಲಿ ಅವಕಾಶವನ್ನು ಮಾಡುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದರು. ಮರುವರ್ಷವೇ ಸಿವ್ಹಿಲ್ ಇಂಜಿನೀಯರಿಂಗ್ ವಿಭಾಗಕ್ಕೆ ಲೀಲಮ್ಮ ಜಾರ್ಜ್ ಹಾಗೂ ಪಿ. ಕೆ. ಥೆರಿಸಾ 1940 ರಲ್ಲಿ ಸೇರಿದರು. ವಿದ್ಯಾರ್ಥಿಗಳಷ್ಟೇ ಇರುವ ತರಗತಿಯಲ್ಲಿ ವಿದ್ಯಾರ್ಥಿನಿಯ ಕಲಿಕೆಯನ್ನು ಅಂದಿನ ಸನ್ನಿವೇಶದಲ್ಲಿ ಊಹಿಸಲೂ ಅಸಾಧ್ಯ. ವಿದ್ಯಾರ್ಥಿಗಳಿಂದ ಅಸಹಕಾರ, ಅಸಡ್ಡೆ ಪ್ರತಿ ಕ್ಷಣದಲ್ಲೂ ಎದುರಾಗುತ್ತಿದ್ದವು. ತಂದೆ ಅದೇ ಕಾಲೇಜಿನಲ್ಲಿ ಅಧ್ಯಾಪಕರು ಆಗಿದ್ದರಿಂದ ಲಲಿತಾ ಎಲ್ಲವನ್ನು ಧ್ಯೆರ್ಯದಿಂದ ಎದುರಿಸಿದರು. ಫೆಬ್ರವರಿ 1944 ರಲ್ಲಿ ವಿದ್ಯುತ್ ವಿಭಾಗ ಪದವಿಯನ್ನು ಪಡೆದರು. ಪದವಿ ಪ್ರಮಾಣ ಪತ್ರದಲ್ಲಿ ‘ಹಿ’ ಅಂತ ಇದ್ದುದ್ದನ್ನು ಮಾರ್ಪಡಿಸಿ ‘ಶಿ’ ಎಂದು ಬರೆಯಲಾಯಿತು. ನಂತರ ಒಂದು ವರ್ಷದ ಅಪರೆಂಟಿಶ್ ತರಬೇತಿಯನ್ನು ಜಮಾಲಾಪುರ ರೇಲ್ವೆಯ ಯಂತ್ರಗಾರದಲ್ಲಿ ಪೂರೈಸಿದರು.
ಪದವಿ ನಂತರ 1944 ರಲ್ಲಿ ಸಿಮ್ಲಾದಲ್ಲಿಯ ಕೇಂದ್ರಿಯ ಗುಣಮಟ್ಟದ ಕಚೇರಿಯಲ್ಲಿ ಕೆಲಸವನ್ನು ಪ್ರಾರಂಭಿಸಿದರು. ಆಗ 6 ವರ್ಷದ ಮಗಳೊಂದಿಗೆ ತಮ್ಮನ ಮನೆಯಲ್ಲಿ ಇರುತ್ತಿದ್ದರು. ಡಿಸೆಂಬರ್ 1946 ರವರಗೆ ಅಲ್ಲಿ ಕೆಲಸಮಾಡಿದರು. ನಂತರ ಇನ್ಸ್ಟಿಟ್ಯೂಶನ್ ಆಫ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನಡೆಸುತ್ತಿದ್ದ ಪರೀಕ್ಷೆಯನ್ನು ಪಾಸು ಮಾಡಿದರು. ನಂತರ ತಂದೆ ಡಾ.ಪಿ. ಸುಬ್ಬಾರಾವ್ ನಡೆಸುತ್ತಿದ್ದ ಸಂಶೋಧನೆಗೆ ಸಹಾಯ ಮಾಡತೊಡಗಿದರು, ಅವರು ಶೋಧಿಸಿದ ಜಲಕ್ಟ್ರೋಮೇನಿಯಂ (ಸಂಗೀತದ ಉಪಕರಣ), ಹೊಗೆರಹಿತ ಒಲೆ, ವಿದ್ಯುತ್ ಜ್ಯಾಲೆಯ ಒಲೆಗಳಲ್ಲಿ ಇವರ ಪಾತ್ರವೂ ಇತ್ತು. ನಂತರ 1946 ಕೋಲ್ಕತ್ತಾದ ಅಸೋಸಿಯೇಟೆಡ್ ವಿದ್ಯುತ್ ಕಾರ್ಖಾನೆಯಲ್ಲಿ ಸೇರಿದರು. ಅಲ್ಲಿ ಅವರ ಎರಡನೇಯ ಅಣ್ಣನೂ ಕೆಲಸ ಮಾಡುತ್ತಿದ್ದರು. ಅಲ್ಲಿ ವಿದ್ಯುತ್ಗೆ ಸಂಬಂಧ ಪಟ್ಟ ವಿನ್ಯಾಸಗಳು, ವಿದ್ಯುತ್ ವಿತರಣಾ ಕೇಂದ್ರಗಳು ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರು. ಭಾಕ್ರಾ-ನಂಗಲ ಆಣೆಕಟ್ಟಿನಿಂದ ವಿದ್ಯುತ್ ಉತ್ಪಾದನೆಯಲ್ಲಿ ಕಾರ್ಯಮಾಡಿದರು. ನಂತರ ಅವರ ಕಾರ್ಖಾನೆಯೂ ಜನರಲ್ ಇಲೆಕ್ಟ್ರಿಕ್ ಕಂಪನಿಯೊಂದಿಗೆ ಸೇರಿಕೊಂಡಿತು. ಅನೇಕ ಹೊಸ ಕ್ಷೇತ್ರಗಳಿಗೆ, ಪ್ರಾಜೆಕ್ಟ್ಗಳಿಗೆ ಹೋಗಬೇಕಾಗುತ್ತಿತ್ತು. ಆಗ ತಮ್ಮ ಮಗಳನ್ನು ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆಯೂ ಇತ್ತು. 1965 ರಲ್ಲಿ ನ್ಯೂಯಾರ್ಕ್ನಲ್ಲಿ ನಡೆದ ಪ್ರಥಮ ಮಹಿಳಾ ಇಂಜಿನಿಯರಿಂಗ್ ಮತ್ತು ವಿಜ್ಞಾನಿಗಳ ಸಮಾವೇಶದಲ್ಲಿ ಭಾಗವಹಿಸಿದರು. 1965 ರಲ್ಲಿ ಮಹಿಳಾ ಇಂಜಿನಿಯರಿಂಗ್ ಸೊಸೈಟಿಯ ಸದಸ್ಯರಾದರು. 1967 ರಲ್ಲಿ ನಡೆದ ದ್ವಿತೀಯ ಮಹಿಳಾ ಇಂಜಿನಿಯರಿಂಗ್ ಮತ್ತು ವಿಜ್ಞಾನಿಗಳ ಸಮಾವೇಶವು ಕೆಂಬ್ರಿಜ್, ಇಂಗ್ಲೆಂಡಿನಲ್ಲಿ ನಡೆಯಿತು ಅದರಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅವರೊಂದಿಗೆ ಇನ್ನೂ ನಾಲ್ವರು ಮಹಿಳೆಯರೂ ಪಾಲ್ಗೊಂಡಿದ್ದರು. ಅಲ್ಲಿಂದ ಬಂದ ನಂತರ ಅವರ ಸಾಧನೆಗಳ ವಿಷಯವಾಗಿ ಫೇಮಿನಾ ಮತ್ತು ಇವ್ವ ವೀಕ್ಲಿಯಲ್ಲಿ ಸಂದರ್ಶನಗಳು ಪ್ರಕಟವಾದವು. ಕಲ್ಕತ್ತೆಯಲ್ಲಿ 35 ವರ್ಷಗಳ ಕಾಲ ಅಣ್ಣನ ಮನೆಯಲ್ಲಿ ಅವರು ಇದ್ದರು. ತಮ್ಮ ಕಾರ್ಯದಿಂದ 1977 ರಲ್ಲಿ ನಿವೃತ್ತಿ ಹೊಂದಿದರು.
ಶ್ರೀಮತಿ ಎ. ಲಲಿತಾ ಅವರ ಬಗ್ಗೆ ಅವರ ಮಗಳಾದ ಶ್ಯಾಮಲಾ ಚೆನಾಲು ಅವರು ಅನೇಕ ಲೇಖನಗಳನ್ನು ಕೂಡ ಬರೆದಿದ್ದಾರೆ. ಅವರ ಮಗಳು ಪ್ರಸ್ತುತ ಅಮೇರಿಕೆಯಲ್ಲಿ ಪತಿಯೊಂದಿಗೆ ವಾಸವಾಗಿದ್ದಾರೆ. ಅವರ ಕುಟುಂಬದಲ್ಲಿ ತಂದೆ, ನಾಲ್ವರು ಸಹೋದರರು, ಇಬ್ಬರು ಅಳಿಯಂದಿರು ವಿದ್ಯುತ್ ಇಂಜಿನಿಯರ್ಳಾಗಿದ್ದಾರೆ. ನಿವೃತ್ತಿಯ ನಂತರ ದಕ್ಷಿಣ ಭಾರತದಲ್ಲಿ ಸಹೋದರಿಯೊಂದಿಗೆ ಪ್ರಯಾಣ ಮಾಡಿದರು. ಅವರಿಗೆ 60 ವರ್ಷವಾದಾಗ ಮೆದುಳು ಬೇನೆಗೆ ತುತ್ತಾದರು. ನಂತರ ಕೆಲವೇ ವಾರಗಳಲ್ಲಿ ಅಕ್ಟೋಬರ್ 12, 1997 ರಲ್ಲಿ ನಿಧನ ಹೊಂದಿದರು.
✍ ಡಾ|| ಗೋಪಾಲಕೃಷ್ಣ ಧೃವರಾಜ ಕಮಲಾಪೂರ
ಅಧ್ಯಾಪಕರು, ವಿದ್ಯುತ್ ವಿಭಾಗ
ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು, ಧಾರವಾಡ- 580002
ಮೋ. ನಂ.: 9480248486
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.