ವೈದ್ಯರಾಗುವ ಕನಸನ್ನು ಹೆಚ್ಚಿನ ಮಕ್ಕಳು ಕಾಣುತ್ತಾರೆ. ಆದರೆ ಅದಕ್ಕಾಗಿ ಅತೀ ಕ್ಲಿಷ್ಟಕರವಾದ NEET ಪರೀಕ್ಷೆಯನ್ನು ತೇರ್ಗಡೆಯಾಗುವುದು ಅಷ್ಟು ಸುಲಭದ ಮಾತಾಗಿರುವುದಿಲ್ಲ. ಅವಿರತ ಪರಿಶ್ರಮ, ದುಬಾರಿ ತರಬೇತಿಯನ್ನು ಪಡೆಯಬೇಕಾಗುತ್ತದೆ. ಆದರೆ ಒರಿಸ್ಸಾದ ಬಡ ಕುಟುಂಬದ 14 ಮಂದಿ ವಿದ್ಯಾರ್ಥಿಗಳು ಈ ಸಾಧನೆಯನ್ನು ಮಾಡಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಆದರೆ ಅವರ ಸಾಧನೆಯ ಶ್ರೇಯಸ್ಸು ಸಲ್ಲಬೇಕಾಗಿದ್ದು 47 ವರ್ಷದ ಅಜಯ್ ಬಹದ್ದೂರ್ ಸಿಂಗ್ ಅವರಿಗೆ.
ಸಿಂಗ್ ಅವರು ಒರಿಸ್ಸಾದವರಾಗಿದ್ದು ವೈದ್ಯನಾಗಬೇಕು ಎಂಬ ಕನಸನ್ನು ಹೊತ್ತಿದ್ದರು, ಆದರೆ ಅವರಿಗೆ ಅವರ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಬದಲಾಗಿ ಅವರು ‘ಜಿಂದಗಿ’ ಫೌಂಡೇಶನ್ ಅನ್ನು 2017ರಲ್ಲಿ ಸ್ಥಾಪನೆ ಮಾಡಿ ಅದರ ಮೂಲಕ ಬಡ ವಿದ್ಯಾರ್ಥಿಗಳ ವೈದ್ಯರಾಗುವ ಕನಸನ್ನು ನನಸು ಮಾಡುತ್ತಿದ್ದಾರೆ.
ಬಿಹಾರದ ಪ್ರಸಿದ್ಧ ಗಣಿತಜ್ಞ ಆನಂದ್ ಕುಮಾರ್ ಅವರು ‘ಸೂಪರ್ 30’ ಎಂಬ ತಂಡವನ್ನು ಕಟ್ಟಿಕೊಂಡು ವರ್ಷಕ್ಕೆ 30 ಮಂದಿಗೆ ತರಬೇತಿಯನ್ನು ನೀಡುತ್ತಿರುವ ಮಾದರಿಯಲ್ಲಿಯೇ ಸಿಂಗ್ ಅವರು ‘ಜಿಂದಗಿ’ಯನ್ನು ನಡೆಸುತ್ತಿದ್ದಾರೆ. “2018ರಲ್ಲಿ ಅನೇಕ ವಿದ್ಯಾರ್ಥಿಗಳು ಜಿಂದಗಿಗೆ ಬಂದರು, ಇವರಲ್ಲಿ 18 ಮಂದಿ ಅರ್ಹತೆಯನ್ನು ಗಿಟ್ಟಿಸಿಕೊಂಡರು, ಇವರಲ್ಲಿ 12 ಮಂದಿ ವಿವಿಧ ಒರಿಸ್ಸಾದ ವೈದ್ಯಕೀಯ ಕಾಲೇಜುಗಳಲ್ಲಿ ಅಡ್ಮಿಷನ್ ಪಡೆದುಕೊಳ್ಳಲು ಯಶಸ್ವಿಯಾದರು” ಎಂದು ಸಿಂಗ್ ಹೇಳುತ್ತಾರೆ.
ಸಿಂಗ್ ಅವರು ವೈದ್ಯರಾಗಬೇಕೆಂದು ಆಶಿಸಿದ್ದರು, ಆದರೆ ಕುಟುಂಬದ ದುಃಸ್ಥಿತಿ ಅವರನ್ನು ಉನ್ನತ ಶಿಕ್ಷಣವನ್ನು ಪಡೆಯುವುದಂತೆ ತಡೆಯಿತು. ಅವರ ತಂದೆ ಎಂಜಿನಿಯರ್ ಆಗಿದ್ದರು ಮತ್ತು ಅವರಿಗೂ ಮಗನನ್ನು ವೈದ್ಯನನ್ನಾಗಿ ಮಾಡುವ ಆಸೆ ಇತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಸಿಂಗ್ ಅವರ ತಂದೆಗೆ ಕಿಡ್ನಿ ಕಸಿ ಮಾಡಬೇಕಾಗಿ ಬಂತು ಮತ್ತು ಇದಕ್ಕಾಗಿ ಅವರ ಕುಟುಂಬವು ತನ್ನ ಆಸ್ತಿಯನ್ನು ಮಾರಾಟ ಬೇಕಾಯಿತು. ಇದರಿಂದಾಗಿ ಅವರು ಆರ್ಥಿಕವಾಗಿ ಸಂಕಷ್ಟಕ್ಕೊಳಗಾದರು. ತನ್ನ ಕುಟುಂಬವನ್ನು ಪೋಷಿಸಲು ಸಿಂಗ್ ಚಹಾವನ್ನೂ ಮಾರಾಟ ಮಾಡಬೇಕಾಯಿತು. ಆದರೂ ಕಷ್ಟಪಟ್ಟು ಸೋಶಾಲಜಿ ಹಾನರ್ಸ್ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿದರು.
“ನಾನು ನಿತ್ಯ ವೈದ್ಯನಾಗಬೇಕು ಎಂಬ ಕನಸನ್ನು ಕಾಣುತ್ತಿದ್ದೆ ಮತ್ತು ಅದಕ್ಕಾಗಿ ತಯಾರಿಯನ್ನೂ ಮಾಡಿಕೊಂಡಿದ್ದೆ. ಆದರೆ ನನ್ನ ತಂದೆಯ ಕಿಡ್ನಿ ಕಸಿಯಿಂದಾಗಿ ನನ್ನ ಅಧ್ಯಯನ ಸಂಕಷ್ಟಕ್ಕೀಡಾಯಿತು. ನನ್ನ ವೃತ್ತಿಯನ್ನು ಚಹಾ ಮಾರಟದೊಂದಿಗೆ ಆರಂಭಿಸಬೇಕಾಯಿತು. ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದ ಬಳಿಕ, ನಾನು ಸೋಡಾ ಮೇಕಿಂಗ್ ಮೆಶಿನ್ ಮಾರಾಟದಲ್ಲಿ ತೊಡಗಿಕೊಂಡೆ. ಶಿಕ್ಷಣವನ್ನು ಪೂರ್ಣಗೊಳಿಸಲು ಟ್ಯೂಶನ್ ಅನ್ನೂ ನೀಡುತ್ತಿದ್ದೆ” ಎಂದು ಸಿಂಗ್ ಹೇಳುತ್ತಾರೆ.
ಬಳಿಕ ಆರ್ಥಿಕ ಸಂಕಷ್ಟಗಳೆಲ್ಲಾ ದೂರವಾದ ಬಳಿಕ ಸಿಂಗ್ ಅವರು ಬಡ ವಿದ್ಯಾರ್ಥಿಗಳಿಗೆ ಅವರ ಕನಸನ್ನು ಈಡೇರಿಸುವಲ್ಲಿ ಸಹಾಯ ಮಾಡುವ ಪ್ರತಿಜ್ಞೆಯನ್ನು ಕೈಗೊಂಡರು.
“ನಾನು ಈಗ ಉತ್ತಮ ಸ್ಥಿತಿಯಲ್ಲಿದ್ದೇನೆ, ಹೀಗಾಗಿ ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮುಂದಾಗುತ್ತಿದ್ದೇವೆ. ಬಡ ವಿದ್ಯಾರ್ಥಿಗಳು ನಮ್ಮ ಫೌಂಡೇಶನ್ಗೆ ಸೇರಿಕೊಳ್ಳಬಹದು. ಅವರ ವಸತಿ, ಆಹಾರ, ಅಧ್ಯಯನ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳ ತರಬೇತಿಯ ವೆಚ್ಚಗಳನ್ನು ನಾವು ಭರಿಸುತ್ತೇವೆ”ಎಂದು ಅವರು ಹೇಳುತ್ತಾರೆ.
“ಈ ವರ್ಷ ನಾನು 14 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದೇನೆ ಮತ್ತು ಅವರೆಲ್ಲರೂ NEET ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ” ಎಂದು ಸಿಂಗ್ ಹೆಮ್ಮೆಯಿಂದ ಹೇಳುತ್ತಾರೆ. ಕೃಷ್ಣ ಮೊಹಂತಿ ಎಂಬ ಹುಡುಗ ಇವರಿಂದ ತರಬೇತಿ ಪಡೆದು ಪರೀಕ್ಷೆಯನ್ನು ತೇರ್ಗಡೆಗೊಂಡವರಲ್ಲಿ ಒಬ್ಬ, ಇವನ ತಾಯಿ ಭುವನೇಶ್ವರದ ಇಸ್ಕಾನ್ ದೇಗುಲದಲ್ಲಿ ಸ್ಥಳಿಯ ‘ಪಿಥಾ’ ಎಂಬ ಕೇಕ್ ಅನ್ನು ಮಾರಾಟ ಮಾಡುತ್ತಾರೆ.
“ನಾನು ಆರನೇ ತರಗತಿಯಲ್ಲಿದ್ದಾಗ ನನ್ನ ತಂದೆ ತೀರಿಕೊಂಡರು. ನನ್ನ ತಾಯಿ ಭುವನೇಶ್ವರದಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ‘ಪಿಥಾ’ ಸಿದ್ಧಪಡಿಸುತ್ತಾಳೆ. ನಾನು ಬಹದ್ದೂರ್ ಸಿಂಗ್ ಅವರನ್ನು ಸಂಪರ್ಕಿಸಿ ನಂತರ ಜಿಂದಗಿ ಬ್ಯಾಚ್ಗೆ ಸೇರಿಕೊಂಡೆ. ನಾನು NEET ಪರೀಕ್ಷೆಯಲ್ಲಿ 2019 ರಲ್ಲಿ 573 ಅಂಕಗಳನ್ನು ಗಳಿಸಿದ್ದೇನೆ ”ಎಂದು ಆತ ಹೇಳುತ್ತಾನೆ.
NEET ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 15,295 ರ್ಯಾಂಕ್ ಅನ್ನು ಪಡೆದ ನಂತರ ಮೊಹಂತಿಯವರು ಸರ್ಕಾರಿ ವೈದ್ಯಕೀಯ ಕಾಲೇಜೊಂದಕ್ಕೆ ಸೇರ್ಪಡೆಗೊಂಡಿದ್ದಾರೆ.
ಸಿಂಗ್ ಅವರ ಬಳಿ ತರಬೇತಿ ಪಡೆದು NEET ಪರೀಕ್ಷೆ ತೇರ್ಗಡೆಯಾದ ವಿದ್ಯಾರ್ಥಿಗಳೆಂದರೆ, ಅಬಾನಿಕಾಂತ್ ಸ್ವೈನ್ (8582 ರ್ಯಾಂಕ್), ಸೈಲೆಂದ್ ರಾವತ್ (9196), ಸಾಯಿ ಗೌರವ್ ಮೊಹಪಾತ್ರ (10558), ಸುಧಾಂಶು ಪ್ರಿಯದರ್ಶಿನಿ (14831), ಕೃಷ್ಣ ಮೊಹಂತಿ (15295), ಓಂ ಸಿಂಗ್ (16501), ಅಮಿಯಾ ರಂಜನ್ ದಾಸ್ (2536) ), ರುತುಪರ್ಣ ಮಲ್ಲಾ (35265), ಜಯ ಪ್ರಕಾಶ್ ಪಾಂಡ (36900), ಮಾನಸ್ ರಂಜನ್ ಮಿಶ್ರಾ (47571), ರಾಕೇಶ್ ಕುಮಾರ್ ರಾವತ್ (63502), ಹಪ್ಪಿನ್ ಪಟ್ನಾಯಕ್ (65010) ಮತ್ತು ನಮ್ರತಾ ಪಾಂಡ (72778).
“ಇಡೀ ಜೀವನದುದ್ದಕ್ಕೂ ನನ್ನ ವಿದ್ಯಾರ್ಥಿಗಳಿಂದ ನಾನು ಗುರುದಕ್ಷಿಣೆಯನ್ನು ಪಡೆದುಕೊಳ್ಳುತ್ತೇನೆ. ಉಚಿತವಾಗಿ ನನ್ನ ವಿದ್ಯಾರ್ಥಿಗಳು ಬಡ ಮಕ್ಕಳಿಗೆ ತರಬೇತಿ ನೀಡುವುದೇ ನನ್ನ ಗುರು ದಕ್ಷಿಣೆಯಾಗಿದೆ” ಎಂದು ಸಿಂಗ್ ಹೇಳುತ್ತಾರೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಜೂನ್ 5 ರಂದು ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಎಕ್ಸಾಂ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ವರ್ಷ 14 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದು, ಇದರ ಪೈಕಿ ಭಾರತದಲ್ಲಿ ವಾಸಿಸುತ್ತಿರುವ 7,95,031 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. 315 ವಿದೇಶಿ ಪ್ರಜೆಗಳು, 1,209 ಎನ್ಆರ್ಐಗಳು ಅರ್ಹತೆ ಪಡೆದುಕೊಂಡಿದ್ದಾರೆ.
ಒರಿಸ್ಸಾದಲ್ಲಿ, 30,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಆದರೆ ಈ 14 ವಿದ್ಯಾರ್ಥಿಗಳ ಕಥೆ ವೈದ್ಯರಾಗುವ ಕನಸು ಕಾಣುವ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.