ಕೊರಿಯಾ : ವಿಶ್ವದ ಯಾವುದೇ ದೇಶ ಭಯೋತ್ಪಾದನೆಯಿಂದ ಸುರಕ್ಷಿತವಾಗಿಲ್ಲ. ವಿಶ್ವಸಂಸ್ಥೆ ಮತ್ತು ಇತರ ವೇದಿಕೆಗಳ ಮೂಲಕ ಭಾರತವು ದ್ವಿಪಕ್ಷೀಯವಾಗಿ, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಭಯೋತ್ಪಾದನೆ ನಿಗ್ರಹದ ಸಹಕಾರವನ್ನು ಸಕ್ರಿಯವಾಗಿ ಅನುಸರಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಯೋತ್ಪಾದನೆಯ ಕಾರಣೀಕರ್ತರನ್ನು ಸದೆಬಡಿಯಲು ಸಮಗ್ರ ಅಂತಾರಾಷ್ಟ್ರೀಯ ಕ್ರಮ ಕೈಗೊಳ್ಳಬೇಕೆಂದು ಕರೆ ನೀಡಿದ ಸಿಂಗ್, ಭಯೋತ್ಪಾದನೆಯನ್ನು ಬೆಂಬಲಿಸುವವರ ಮತ್ತು ಹಣಕಾಸು ಒದಗಿಸುವವರ ಮತ್ತು ಆಶ್ರಯ ಒದಗಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ಪ್ರತಿಪಾದಿಸಿದರು.
ರಾಜನಾಥ್ ಸಿಂಗ್ ಅವರು ಜಪಾನ್ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳಿಗೆ ಮೂರು ದಿನಗಳ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.
ಕೊರಿಯಾ ಭೇಟಿಯ ಸಂದರ್ಭದಲ್ಲಿ ‘ಸಿಯೋಲ್ ಡಿಫೆನ್ಸ್ ಡೈಲಾಗ್ 2019’ ನಲ್ಲಿ ‘ಶಾಂತಿಯನ್ನು ಒಟ್ಟಾಗಿ ನಿರ್ಮಿಸುವುದು: ಸವಾಲುಗಳು ಮತ್ತು ದೃಷ್ಟಿ’ ಎಂಬ ವಿಷಯದ ಬಗ್ಗೆ ಮುಖ್ಯ ಭಾಷಣ ಮಾಡಿದ ಅವರು “ಜಗತ್ತು ಎದುರಿಸುತ್ತಿರುವ ಹಲವಾರು ಭದ್ರತಾ ಸವಾಲುಗಳ ಪೈಕಿ ಭಯೋತ್ಪಾದನೆಯು ಅತೀ ಗಂಭೀರವಾದುದಾಗಿದೆ. ವಿಶ್ವ ರಾಜಕಾರಣವು ದುಃಸ್ಥಿತಿಯಲ್ಲಿದ್ದು, ಇದರಿಂದ ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯ ಜಾಗತಿಕ ಮತ್ತು ಪ್ರಾದೇಶಿಕ ಸವಾಲುಗಳು ಉಲ್ಬಣಗೊಂಡಿವೆ” ಎಂದು ಪ್ರತಿಪಾದಿಸಿದ್ದಾರೆ.
ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಪ್ರಾದೇಶಿಕ ಮತ್ತು ಜಾಗತಿಕ ಭದ್ರತಾ ಪರಿಸರದ ಮೇಲೆ ಪ್ರಭಾವ ಬೀರಿವೆ ಎಂದು ಹೇಳಿದ್ದಾರೆ.
“ನಮ್ಮ ಪ್ರದೇಶವು ಭಯೋತ್ಪಾದನೆ, ಘರ್ಷಣೆಗಳು, ಅಂತಾರಾಷ್ಟ್ರೀಯ ಅಪರಾಧಗಳು, ಕಡಲ ಬೆದರಿಕೆಗಳು, ಪ್ರಸರಣ ಮತ್ತು ಸುಸ್ಥಿರ ಅಭಿವೃದ್ಧಿಯ ಸವಾಲುಗಳಂತಹ ಹಲವಾರು ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಭದ್ರತಾ ಬೆದರಿಕೆಗಳನ್ನು ಎದುರಿಸುತ್ತಿದೆ, ಇದರಲ್ಲಿ ಶಕ್ತಿಯ ಕೊರತೆ, ಕಡಿಮೆ ಅಂತರ್-ಪ್ರಾದೇಶಿಕ ವ್ಯಾಪಾರ ಮತ್ತು ಸಂಪರ್ಕ ಕೊರತೆಯೂ ಇದೆ” ಎಂದು ಅವರು ಹೇಳಿದ್ದಾರೆ.
ನೆರೆಹೊರೆ ಮೊದಲು ಎಂಬ ನೀತಿಯ ಭಾಗವಾಗಿ ಭಾರತವು ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದುತ್ತಿದೆ. ತಕ್ಷಣದ ಮತ್ತು ವಿಸ್ತೃತವಾದ ಉತ್ತಮ ಬಾಂಧವ್ಯಗಳು ಭಾರತದ ವಿದೇಶಾಂಗ ನೀತಿಯ ಆದ್ಯತೆಯಾಗಿದೆ ಎಂದು ರಕ್ಷಣಾ ಸಚಿವರು ಒತ್ತಿಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.