ಜಗತ್ತಿನಲ್ಲಿ ವಿಸ್ಮಯಗಳಿಗೆ ಕೊರತೆಯಿಲ್ಲ. ಕೆಲವು ಪ್ರಕೃತಿ ನಿರ್ಮಿತ ವಿಸ್ಮಯಗಳಾದರೆ ಇನ್ನು ಕೆಲವು ಮನುಷ್ಯ ನಿರ್ಮಿತ ವಿಸ್ಮಯಗಳು. ಮನುಷ್ಯ ನಿರ್ಮಿತ ವಿಸ್ಮಯಗಳನ್ನು ನೋಡಿದರೆ ಅಚ್ಚರಿ ಎನಿಸಬಹುದಾದರೂ ಮನುಷ್ಯನೇ ಅದರ ಹಿಂದಿನ ಸೃಷ್ಟಿಕರ್ತನಾದ್ದರಿಂದ ಮನುಷ್ಯ ಪ್ರಯತ್ನದಿಂದ ಏನೂ ಬೇಕಾದರೂ ಸಾಧ್ಯ ಎಂಬ ಭಾವ ಮನದಲ್ಲಿ ತುಂಬಿಕೊಳ್ಳುತ್ತದೆ. ಆದರೆ ಪ್ರಕೃತಿಯ ವಿಸ್ಮಯಗಳನ್ನು ಕಂಡಾಗ ಅಚ್ಚರಿಯ ಜತೆಗೇ ‘ಇದು ಹೇಗೆ ಸಾಧ್ಯ?’ ಎಂಬ ಪ್ರಶ್ನೆ ತಲೆಯೊಳಗೆ ಹೊಕ್ಕು ಅದಕ್ಕೆ ಉತ್ತರ ಹುಡುಕಲು ತಡಕಾಡುತ್ತೇವೆ. ಉತ್ತರ ಮಾತ್ರ ಸಿಗುವುದಿಲ್ಲ. ಕೊನೆಗೆ ‘ಎಲ್ಲ ದೇವರ ಲೀಲೆ’ ಎಂದು ದೇವರಿಗೆ ಶರಣಾಗಿಬಿಡುತ್ತೇವೆ. ಪ್ರಕೃತಿಯ ವಿಸ್ಮಯಗಳನ್ನು ಬೇಸಹೊರಟ ಕೆಲವು ಸಾಹಸಿ ವಿಜ್ಞಾನಿಗಳಿಗೂ ಉತ್ತರ ದೊರಕದೆ ಸುಮ್ಮನಾಗುವುದೂ ಉಂಟು. ಅಂತಹುದೊಂದು ಪ್ರಕೃತಿಯ ವಿಸ್ಮಯವನ್ನು ಕಣ್ಣಾರೆ ಕಾಣುವ ಅವಕಾಶವು ನನಗೆ ಕಳೆದ ವಾರ ನನ್ನ ಗುಜರಾತ್ ಪ್ರವಾಸದ ಸಂದರ್ಭದಲ್ಲಿ ದೊರಕಿತ್ತು.
ಹಿಂದುಗಳು ದೇಗುಲಗಳನ್ನು ಸ್ಥಾಪಿಸದ ಸ್ಥಳ ಬಹುಶಃ ಯಾವುದೂ ಇರಲಿಕ್ಕಿಲ್ಲ. ಬೆಟ್ಟದ ಮೇಲೆ, ಗುಹೆಗಳ ಒಳಗೆ ಹಿಮಾಲಯದ ತುತ್ತ ತುದಿಯಲ್ಲಿ, ನದಿಯ ದಡದಲ್ಲಿ, ಝರಿಯ ಒಳಗೆ, ದಟ್ಟಕಾಡಿನ ನಡುವೆ…. ಹೀಗೆ ಎಲ್ಲೆಡೆ ನಮ್ಮ ದೇಶದಲ್ಲಿ ದೇವಾಲಯಗಳನ್ನು ಕಾಣಬಹುದು. ಆದರೆ ಉಕ್ಕಿ ಹರಿಯುವ ಸಮುದ್ರದ ಮೇಲೆ ಮಂದಿರ ನಿರ್ಮಿಸಲು ಸಾಧ್ಯವೇ? ನಿಮ್ಮ ಉತ್ತರ ಅಸಾಧ್ಯ ಎಂದಾಗಿದ್ದರೆ ಅದು ತಪ್ಪು.
ಗುಜರಾತಿನ ಭಾವನಗರ ಜಿಲ್ಲೆಯ ಕೊಲಿಯಾಕ್ ಎಂಬಲ್ಲಿ ಭೋರ್ಗರೆದು ಹರಿವ ಸಮುದ್ರದ ಮೇಲೆ ಒಂದು ಶಿವನ ಮಂದಿರವಿದೆ. ಇದನ್ನು ನಿಷ್ಕಳಂಕ ಮಹಾದೇವ ಮಂದಿರ ಎಂದು ಕರೆಯುತ್ತಾರೆ. ಸಮುದ್ರ ತೀರದಿಂದ ಸುಮಾರು 2.5 ಕಿ.ಮೀ. ದೂರ ಸಮುದ್ರದೊಳಗೆ ನಡೆದುಕೊಂಡು ಹೋದರೆ ನಿಮಗೆ ನಿಷ್ಕಳಂಕ ಮಹಾದೇವನ ದರ್ಶನ ಲಭ್ಯ.
ಆದರೆ, ಅದೆ ಸಮುದ್ರದೊಳಗೆ 2.5 ಕಿ.ಮೀ. ದೂರ ನಡೆಯಲು ಸಾಧ್ಯವೇ. ಅಲೆಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವುದಿಲ್ಲವೇ? ಸಮುದ್ರದೊಳಗೆ ಒಂದು ಫರ್ಲಾಂಗ್ ದೂರ ಕ್ರಮಿಸುವುದೇ ಕಷ್ಟ. ಇನ್ನು 2.5 ಕಿ.ಮೀ ದೂರ ತೆರಳಿದರೆ ಗತಿ ಏನಾದೀತು? ಎಂಬ ಗಾಬರಿ ನಿಮ್ಮನ್ನು ಕಾಡುವುದು ಸಹಜವೇ. ಆದರೆ ಸಮುದ್ರದೊಳಗೆ ನಡೆದುಕೊಂಡೇ 2.5 ಕಿ.ಮೀ. ದೂರ ಕ್ರಮಿಸಬಹುದು. ಅದು ಸಾಧ್ಯ. ಇಷ್ಟೇ ಹೇಳಿದರೆ ನಿಮಗೆ ಖಂಡಿತ ನಂಬಿಕೆ ಬರಲಿಕ್ಕಿಲ್ಲ.
ಕೊಲಿಯಾಕ್ನಲ್ಲಿರುವ ಸಮುದ್ರ ಪ್ರತಿದಿನ ನಿರ್ದಿಷ್ಟ ಸಮಯಕ್ಕೆ ಮಹಾದೇವ ಮಂದಿರಕ್ಕೆ ತೆರಳಲು ಜನರಿಗೆ ದಾರಿ ಮಾಡಿಕೊಡುತ್ತದೆ. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಮಂದಿರದ ನೇರಕ್ಕೆ ಸಮುದ್ರದ ನೀರೆಲ್ಲ ಇಳಿದುಹೋಗಿ ನಡೆದುಹೋಗಬಲ್ಲ ಸಮತಟ್ಟಿನ ದಾರಿ ತೆರೆದುಕೊಳ್ಳುತ್ತದೆ. ಆ ದಾರಿ ಕೆಸರುಗದ್ದೆಯ ದಾರಿಯಂತೆ ಇರುತ್ತದೆ. ನಾವೆಲ್ಲ 3.24 ರ ಶನಿವಾರ ಮಧ್ಯಾಹ್ನ 2.30 ರಿಂದ ಸಂಜೆ 6 ಗಂಟೆವರೆಗೆ ಸಮುದ್ರದಲ್ಲಿ ದಾರಿ ತೆರೆದುಕೊಂಡಿತ್ತು.
ತೆರೆದುಕೊಂಡ ಈ ದಾರಿಯಲ್ಲಿ ಸುಮಾರು 2.5 ಕಿ.ಮೀ. ದೂರ ಬರಿಗಾಲಲ್ಲಿ ತೆರಳಿದರೆ ಚೌಕಾಕಾರದ ಕಲ್ಲಿನ ಒಂದು ವೇದಿಕೆ ಕಾಣಸಿಗುತ್ತದೆ. ಅದರ ಮೇಲೊಂದು ಎತ್ತರದ ಸ್ತಂಭ. ಪಕ್ಕದಲ್ಲಿ ಅಷ್ಟೇ ಎತ್ತರದ ಇನ್ನೊಂದು ಧ್ವಜಸ್ತಂಭ. ವೇದಿಕೆಯ ಮಧ್ಯದಲ್ಲೊಂದು ದೊಡ್ಡ ಶಿವಲಿಂಗ. ಸುತ್ತಲೂ ಇನ್ನೂ ನಾಲ್ಕು ಚಿಕ್ಕಚಿಕ್ಕ ಒಂದೇ ಆಕಾರದ ಶಿವಲಿಂಗಗಳು. ಚೌಕಾಕಾರದ ಆ ಕಲ್ಲಿನ ವೇದಿಕೆಯಿಂದ ಸಾಕಷ್ಟು ದೂರದಲ್ಲಿ ಸಮುದ್ರ ಶಾಂತವಾಗಿ ಆ ಸಮಯದಲ್ಲಿ ಹರಿಯುತ್ತಿರುತ್ತದೆ. ಅಲ್ಲಿಗೆ ತಲಪಿದ ಯಾತ್ರಿಕರು ಬಿಲ್ವಪತ್ರೆ, ಹೂವುಗಳಿಂದ ಶಿವಲಿಂಗಗಳಿಗೆ ಪೂಜೆ ಸಲ್ಲಿಸಿ, ಸಮುದ್ರದ ನೀರನ್ನು ಅರ್ಘ್ಯ ಕೊಟ್ಟು ಭಕ್ತಿಯಿಂದ ನಮಿಸಿ ಕೃತಾರ್ಥರಾಗುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಆ ದಾರಿಯನ್ನು ಸಮುದ್ರ ಮತ್ತೆ ಆವರಿಸಿಕೊಳ್ಳುವುದರೊಳಗೆ ಲಗುಬಗೆಯಿಂದ ವಾಪಸ್ ದಡಕ್ಕೆ ಬರುತ್ತಾರೆ. ಕೆಲವು ಹೆಂಗಸರಂತೂ ತಮ್ಮ ಕಂದಮ್ಮಗಳನ್ನು ಕುತ್ತಿಗೆಯ ಮೇಲೆ ಹೊತ್ತು ಮಹಾದೇವನ ದರ್ಶನಕ್ಕೆ ಸಮುದ್ರದ ತೆರೆದ ದಾರಿಯಲ್ಲಿ, ಜಾರುವ ಕೆಸರು ಮೆಟ್ಟಿಕೊಂಡು ಬರುವುದನ್ನು ನೋಡಿದರೆ ಅವರ ಭಕ್ತಿಯ ಪರಾಕಾಷ್ಠತೆಗೆ ತಲೆಬಾಗಲೇಬೇಕೆನಿಸುತ್ತದೆ.
ನಿಷ್ಕಳಂಕ ಮಹಾದೇವ ಮಂದಿರಕ್ಕೊಂದು ಪೌರಾಣಿಕ ಕತೆ ಪ್ರಚಲಿತದಲ್ಲಿದೆ. ಹಿಂದೆ ಮಹಾಭಾರತ ಕಾಲದಲ್ಲಿ ಪಾಂಡವರು ಕೌರವರ ವಿರುದ್ಧ ಯುದ್ಧದಲ್ಲಿ ಗೆದ್ದ ಬಳಿಕ ಪಾಪಪ್ರಜ್ಞೆಯಿಂದ ಪರಿತಪಿಸುತ್ತಿದ್ದರು. ತಮ್ಮ ದಾಯಾದಿ ಬಂಧುಗಳನ್ನು ಕೊಂದಿದ್ದರಿಂದ ತಮಗಂಟಿದ ಪಾಪ ತೊಳೆದುಕೊಳ್ಳುವುದು ಹೇಗೆ? ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಬಗೆ ಎಂತು? ಈ ಚಿಂತೆ ಅವರನ್ನು ಕಾಡಿದಾಗ ಪರಿಹಾರ ಕೇಳಲು ಶ್ರೀಕೃಷ್ಣನ ಬಳಿ ತೆರಳಿದರು. ತಮ್ಮ ಪಾಪ ಪರಿಹಾರಕ್ಕೆ ಉಪಾಯವೊಂದನ್ನು ಸೂಚಿಸುವಂತೆ ಪರಿಪರಿಯಾಗಿ ಮೊರೆಯಿಟ್ಟರು. ಆಗ ಶ್ರೀಕೃಷ್ಣ ಅವರಿಗೆ ಒಂದು ಕಪ್ಪು ಹಸು ಹಾಗೂ ಒಂದು ಕಪ್ಪು ಧ್ವಜ ನೀಡಿ, ಇವುಗಳೊಂದಿಗೆ ನೀವು ತೀರ್ಥಯಾತ್ರೆ ಮಾಡಿ. ಈ ಧ್ವಜ ಮತ್ತು ಹಸುವಿನ ಬಣ್ಣ ಎಲ್ಲಿ ಬಿಳಿಯಾಗುವುದೋ ಅಲ್ಲಿ ಶಿವನನ್ನು ಪ್ರಾರ್ಥಿಸಿ. ನಿಮ್ಮ ಪಾಪಗಳೆಲ್ಲ ತೊಳೆದು ಹೋಗುತ್ತದೆ ಎಂದು ಅಭಯವಚನ ನೀಡಿದನಂತೆ. ಅದರಂತೆ ಪಾಂಡವರು ಆ ಕಪ್ಪು ಧ್ವಜ ಮತ್ತು ಕಪ್ಪು ಬಣ್ಣದ ಹಸುವಿನ ಜತೆಗೆ ಹಲವೆಡೆ ತಿರುಗಾಡಿದರು. ಆದರೆ ಧ್ವಜ ಮತ್ತು ಹಸುವಿನ ಬಣ್ಣ ಬದಲಾಗಲೇ ಇಲ್ಲ. ನಿರಾಶರಾದ ಪಾಂಡವರು ಕೊನೆಗೆ ಕೊಲಿಯಾಕ್ ಎಂಬ ಈ ಪ್ರದೇಶಕ್ಕೆ ಬಂದಾಗ ಅಚ್ಚರಿ ಎಂಬಂತೆ ಧ್ವಜ ಹಾಗೂ ಹಸುವಿನ ಬಣ್ಣ ಬಿಳಿ ಆಯಿತಂತೆ. ಪಾಂಡವರು ಭಕ್ತಿಯಿಂದ ಅಲ್ಲಿ ಮಹಾದೇವನ ಧ್ಯಾನ , ಪೂಜೆ ಮಾಡಿದರು. ಅವರ ಭಕ್ತಿಗೆ ಮೆಚ್ಚಿದ ಮಹಾದೇವ ಐವರು ಪಾಂಡವರ ಎದುರು ಒಂದೊಂದು ಲಿಂಗವಾಗಿ ಕಾಣಿಸಿಕೊಂಡನಂತೆ. ಮಹಾದೇವನ ದರ್ಶನದಿಂದ ಪಾಪಪ್ರಜ್ಞೆಯಿಂದ ಬೇಯುತ್ತಿದ್ದ ಪಾಂಡವರು ನಿಷ್ಕಳಂಕಿತರಾಗಿ ಮೋಕ್ಷ ಪಡೆದರೆಂಬ ಪ್ರತೀತಿ. ಅಂದಿನಿಂದ ಇದನ್ನು ನಿಷ್ಕಳಂಕ ಮಹಾದೇವ ಮಂದಿರ ಎಂದು ಕರೆದು ಪೂಜಿಸುವ ಪರಂಪರೆ ಮುಂದುವರೆದಿದೆ.
ಪಾಂಡವರ ಪಾಪ ತೊಳೆದ ಈ ಪವಿತ್ರ ಸ್ಥಳಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಜಾತಿಭೇದ ರಹಿತರಾಗಿ ಬಂದು ಭಕ್ತಿಯಿಂದ ಪೂಜಿಸುತ್ತಾರೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮಹಾದೇವನ ಅರ್ಚನೆಗೆ ಧಾವಿಸುತ್ತಾರೆ. ಶ್ರಾವಣ ಮಾಸದ ಅಮಾವಾಸ್ಯೆಯಂದು ಇಲ್ಲಿ ಭಕ್ತರ ಪ್ರವಾಹವೇ ನೆರೆದಿರುತ್ತದೆ. ಹುಣ್ಣಿಮೆಯಂದು ಸಾಗರದ ಉಬ್ಬರ ಅತಿಯಾಗಿ ಇರುವುದರಿಂದ ಆ ದಿನ ಸಮುದ್ರ ದಾರಿ ತೆರೆದುಕೊಳ್ಳುವುದಿಲ್ಲ. ಉಳಿದ ದಿನಗಳಲ್ಲೂ ಯಾವಾಗೆಂದರೆ ಆವಾಗ ಈ ಮಂದಿರಕ್ಕೆ ಹೋಗಲು ಸಾಧ್ಯವಿಲ್ಲ. ನಿರ್ದಿಷ್ಟ ಸಮಯದಲ್ಲಿ ನೀರಿಳಿದು ದಾರಿ ಮುಕ್ತವಾದಾಗ ಕಾದು ಅಲ್ಲಿಗೆ ತೆರಳಿ ಮಹಾದೇವನ ದರ್ಶನ ಪಡೆಯಬೇಕು. ಸಮುದ್ರದಲ್ಲಿ ಉಬ್ಬರವಿದ್ದಾಗ ಧ್ವಜಸ್ತಂಭ ಬಿಟ್ಟರೆ ದಡದಲ್ಲಿದ್ದವರಿಗೆ ಶಿವಲಿಂಗವಾಗಲಿ, ಚೌಕಾಕಾರದ ವೇದಿಕೆಯಾಗಲಿ ಕಾಣಿಸುವುದಿಲ್ಲ. ಬೆಳ್ಳಂಬೆಳಗ್ಗೆ ಬಂದು ನೋಡಿದರೆ ಸಮುದ್ರದ ನಡುವೆ ಮಹಾದೇವ ಮಂದಿರ ಇರುವುದು ಬರೀ ಸುಳ್ಳು ಎನಿಸುತ್ತದೆ. ಆದರೆ ಮಧ್ಯಾಹ್ನ 2.30ರ ನಂತರ ಹೋದರೆ ಸಮುದ್ರದ ನಡುವೆ ಶಿವಲಿಂಗ ಇರುವುದು ಕಣ್ಣಿಗೆ ರಾಚುತ್ತಿರುತ್ತದೆ.
ಜಗತ್ತಿನಲ್ಲಿ ಎಂತೆಂಥ ಅದೆಷ್ಟೋ ವಿಸ್ಮಯಗಳು ಹರಡಿಕೊಂಡಿವೆ. ಅದನ್ನು ಕಣ್ಣಾರೆ ಕಂಡಾಗ ಮಾತ್ರ ಅದು ನಿಜವೆನಿಸುತ್ತದೆ. ನಿಷ್ಕಳಂಕ ಮಹಾದೇವ ಮಂದಿರದ ವಿಸ್ಮಯ ಈ ಸಾಲಿಗೆ ಸೇರುವಂತಹುದು.
ಮನುಷ್ಯ ನಿರ್ಮಿತ ವಿಸ್ಮಯಗಳಿಗಂತೂ ಜಗತ್ತಿನಲ್ಲಿ ಕೊರತೆಯೇ ಇಲ್ಲ. ಮನುಷ್ಯನಿಗೆ ಅಸಾಧ್ಯವೆನಿಸಿದ್ದು ಯಾವುದೂ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ವಿಸ್ಮಯಗಳು ಹೆಚ್ಚುತ್ತಲೇ ಇವೆ. ವೈಜ್ಞಾನಿಕ ಜಗತ್ತಿನ ವಿಸ್ಮಯಗಳಷ್ಟೇ ರಾಜಕೀಯ ರಂಗದ ವಿಸ್ಮಯಗಳೂ ನಮ್ಮನ್ನು ಅಚ್ಚರಿಯ ಕಡಲಿಗೆ ದೂಡುತ್ತವೆ. ಚುನಾವಣೆಯಲ್ಲಿ ಗೆದ್ದವರು ಮಾತ್ರ ಶಾಸಕರಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಗದ್ದುಗೆ ಏರಬಹುದು ಎಂಬುದು ಪ್ರಜಾತಂತ್ರ ವ್ಯವಸ್ಥೆಯ ರೀತಿನೀತಿಗಳಾಗಿದ್ದರೂ ಚುನಾವಣೆಯಲ್ಲಿ ಸೋತವರೂ ಉಪಮುಖ್ಯಮಂತ್ರಿಯಾಗುವ ವಿಸ್ಮಯ ನಡೆದಿದೆ. ನಾಲ್ಕೈದು ಆರು ಬಾರಿ ಗೆದ್ದು, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಪಕ್ಷದ, ಕ್ಷೇತ್ರದ ಕಾರ್ಯ ನಿರ್ವಹಿಸಿದ ಶಾಸಕರು ಮಂತ್ರಿಯಾಗುವ ಅದೃಷ್ಟದಿಂದ ವಂಚಿತರಾಗುವ ವಿಸ್ಮಯಗಳೂ ನಡೆದಿವೆ. ರಾಜಕೀಯರಂಗದಲ್ಲಿ ಏನು ಬೇಕಾದರೂ ಆಗಬಹುದು. ಏಕೆಂದರೆ ಅಲ್ಲಿರುವುದೇ ರಾಜಕೀಯ!
ಆದರೆ ಪ್ರಕೃತಿಯ ವಿಸ್ಮಯಗಳಿಗೆ ಕಾರಣ ಹುಡುಕಿದರೂ ಸಿಗುವುದಿಲ್ಲ. ‘ಎಲ್ಲಾ ಆ ದೇವನ ಲೀಲೆ’ ಎಂದು ಸುಮ್ಮನಾಗಬೇಕಷ್ಟೆ. ಭಾವನಗರ ಜಿಲ್ಲೆಯಲ್ಲಿರುವ ನಿಷ್ಕಳಂಕ ಮಹಾದೇವ ಮಂದಿರದ ವಿಸ್ಮಯದ ಕುರಿತು ನಾವು ಫೇಸ್ಬುಕ್ನಲ್ಲಿ ಫೋಟೋಸಹಿತ ಪ್ರಕಟಿಸಿದಾಗ ಒಬ್ಬರು ‘ಅದೆಲ್ಲ ಬರೀ ಸುಳ್ಳು. ಅಂತಹುದೇನೂ ಅಲ್ಲಿ ನಡೆಯೋದಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ನನಗೆ ಸುಳ್ಳು ಹೇಳಿ ಆಗಬೇಕಾದ್ದು ಏನೂ ಇಲ್ಲ. ಇಷ್ಟೆಲ್ಲ ಹೇಳಿದ ಮೇಲೂ ನನ್ನ ಮಾತನ್ನು ನಂಬದಿರುವವರು ಸ್ವತಃ ಅಲ್ಲಿಗೇ ಹೋಗಿ ಆ ವಿಸ್ಮಯವನ್ನು ಕಣ್ತುಂಬ ತುಂಬಿಕೊಳ್ಳಬಹುದು.
✍ ದು.ಗು. ಲಕ್ಷ್ಮಣ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.