ಬೆಂಗಳೂರು: ಬಿಜೆಪಿ ವತಿಯಿಂದ ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗಾಗಿ 8884245123 ಸಹಾಯವಾಣಿಯು 21-7-2025 ರ ಸೋಮವಾರದಿಂದ ಪ್ರಾರಂಭವಾಗಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದಿಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಿಗೆ ಈಗಾಗಲೇ ನೋಟಿಸ್ ಗಳನ್ನು ರಾಜ್ಯ ಸರ್ಕಾರದ ಮೂಲಕ ನೀಡಲಾಗಿದೆ. ಈ ವಿಚಾರದಲ್ಲಿ ದೊಡ್ಡ ಗೊಂದಲ ಶುರುವಾಗಿದ್ದು, ಬಡ ವ್ಯಾಪಾರಿಗಳಲ್ಲಿ ಆತಂಕದ ಛಾಯೆ ಮೂಡಿದೆ. ಇದರ ಪರಿಹಾರೋಪಾಯಗಳನ್ನು ಕಾಂಗ್ರೆಸ್ ಸರ್ಕಾರ ಮಾಡಬೇಕಿತ್ತು ಎಂದು ಅವರು ತಿಳಿಸಿದರು. ರಾಜ್ಯ ಸರ್ಕಾರ ಎಲ್ಲಿಯೂ ನಿಜವಾದ ತೆರಿಗೆ ಮೊತ್ತ ಯಾವುದು ಮತ್ತು ವಿಧಿಸಲಾಗದ ತೆರಿಗೆ ಮೊತ್ತ ಯಾವುದು ಎಂದು ಕೂಲಂಕಶ ಚರ್ಚೆ ಮಾಡಿಲ್ಲ ಮತ್ತು ವ್ಯಾಪಾರಿಗಳಿಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು
ಕೇಂದ್ರ ಸರ್ಕಾರದ ಮೂಲಕ ರಾಜ್ಯ ಸರ್ಕಾರಕ್ಕೆ ಇರುವ ಮಾಹಿತಿಯ ಪ್ರಕಾರ ವಾರ್ಷಿಕ ವಹಿವಾಟು 40 ಲಕ್ಷ ಮೀರಿದರೆ ಅವರು ಜಿಎಸ್ಟಿಯಡಿ ನೋಂದಾಯಿಸಿಕೊಳ್ಳಬೇಕು ಮತ್ತು ಪಾವತಿಸಬೇಕು. ಜಿಎಸ್ಟಿ ವಾರ್ಷಿಕ ವಹಿವಾಟು 20 ಲಕ್ಷ ರೂ ಮೀರಿರುವ ಸೇವಾ ಪೂರೈಕೆದಾರರು ತೆರಿಗೆ ಕಟ್ಟಬೇಕು ಎಂದು ವ್ಯಾಪಾರಿಗಳಿಗೆ ನೋಟಿಸ್ ಕಳುಹಿಸಿದ್ದಾರೆ. ಆದರೆ ಇದು ಸಲ್ಲದು ಎಂದು ಆಕ್ಷೇಪಿಸಿದರು.
ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಕಳ್ಳರಲ್ಲ ಮತ್ತು ತೆರಿಗೆಯನ್ನು ವಂಚಿಸುವವರಲ್ಲ. ಆದರೆ ತೆರಿಗೆಯ ಪರಿಸ್ಥಿತಿ ಅವರಿಗೆ ಅರ್ಥವಾಗಿಲ್ಲ ಮತ್ತು ಸರ್ಕಾರದವರು ಅವರಿಗೆ ಅರ್ಥ ಮಾಡಿಸಿರುವುದಿಲ್ಲ ಎಂದು ದೂರಿದರು. ಬಡ ವ್ಯಾಪಾರಿಗಳು ಗೊಂದಲದಲ್ಲಿದ್ದಾರೆ ಹಾಗೂ ಆತಂಕಗೊಂಡಿದ್ದಾರೆ. ಆದ್ದರಿಂದ ಸರ್ಕಾರ ಇದನ್ನು ಗಮನಿಸಬೇಕು ಬಡಜನರ ರಕ್ಷಣೆಗೆ ಬರಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರ ಸರ್ಕಾರದ ನೀತಿಯ ಪ್ರಕಾರವೇ ವಾರ್ಷಿಕ ವಹಿವಾಟು 1 ಕೋಟಿ 50 ಲಕ್ಷ ಮೀರಿದರೆ ಅವರು ಶೇ 1 ವರೆಗೆ ಜಿಎಸ್ಟಿ ಪಾವತಿಸಬೇಕು. ಬೀದಿಬದಿ ವ್ಯಾಪಾರಿಗಳು ಎಂದರೆ ಅವರಿಗೆ ಶಾಶ್ವತ ಸ್ಥಳವಿರುವ ಅಂಗಡಿ ಮತ್ತು ವಿಳಾಸ ಇದ್ದರೆ ಅವರಿಗೆ ಜಿಎಸ್ಟಿ ತೆರಿಗೆ ಸಂಗ್ರಹಿಸಲು ನೋಟಿಸ್ ಕೊಡಬಹುದು. ವಾರ್ಷಿಕ ವಹಿವಾಟು 40 ಲಕ್ಷದವರೆಗೆ ವಿನಾಯಿತಿ ಇದೆ. ವಾರ್ಷಿಕ ವಹಿವಾಟು 20 ಲಕ್ಷ ಮೀರಿದ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟು ರಾಜ್ಯ ಸರ್ಕಾರ ಗೊಂದಲ ಸೃಷ್ಟಿಸಿದೆ ಎಂದು ಆರೋಪಿಸಿದರು.
ಯುಪಿಐ ರಿಜಿಸ್ಟ್ರೇಷನ್ ಮೂಲಕ ಬ್ಯಾಂಕ್ ವಹಿವಾಟನ್ನು ಮಾಡಿಕೊಂಡಿರುವ ಅಪ್ಲಿಕೇಶನ್ಗಳಾದ ಪೇಟಿಎಂ, ಫೋನ್ ಪೇ, ಗೂಗಲ್ ಪೇ, ಇಂತಹವುಗಳನ್ನು ಟ್ರಾಕ್ ಮಾಡುತ್ತಾರೆ. ವ್ಯಾಪಾರಿಗಳು ಪಡೆದ ವಹಿವಾಟಿನ ಹಣ ನೇರವಾಗಿ ಬ್ಯಾಂಕಿಗೆ ಹೋಗುತ್ತದೆ. ಬ್ಯಾಂಕ್ ವಹಿವಾಟು 40 ಲಕ್ಷ ಮೀರಿದರೆ ಅವರಿಗೆ ನೋಟಿಸ್ ನೀಡುತ್ತಾರೆ ಮತ್ತು ಸೇವಾ ಪೂರೈಕೆಯಲ್ಲಿ ವಹಿವಾಟು 20 ಲಕ್ಷ ಮೀರಿದರೆ ಅವರಿಗು ನೋಟಿಸ್ ನೀಡುತ್ತಿದ್ದಾರೆ. ಆದರೆ ವ್ಯಾಪಾರಿಗಳ ವಹಿವಾಟು ಎಂಥದ್ದು, ವ್ಯಾಪಾರಿಗಳಿಗೆ ಸಾಲದ ರೂಪದಲ್ಲಿ ಮತ್ತು ಬೇರೆ ಬೇರೆ ರೀತಿಯಲ್ಲಿ ವ್ಯವಹಾರ ಮಾಡಿದಾಗ ವಹಿವಾಟನ್ನು ಮೀರಿದೆಯೆ ಅಥವಾ ವ್ಯಾಪಾರ ಮಾಡಿ ವಹಿವಾಟು ಮೀರಿದೆಯೇ ಎಂದು ಪರಿಶೀಲನೆ ಮಾಡಿಲ್ಲ ಎಂದು ವಿವರಿಸಿದರು.
ಹೂವು, ಹಣ್ಣು, ತರಕಾರಿ ವ್ಯಾಪಾರಿಗಳು ಜಿಎಸ್ಟಿ ಕಾಯ್ದೆಗೆ ಒಳಪಡುವುದಿಲ್ಲ – ಜಿ.ಎಸ್.ಪ್ರಶಾಂತ್
ಕೆಲವು ವಸ್ತುಗಳ ಮೇಲೆ ಜಿಎಸ್ಟಿಯನ್ನು ವಿಧಿಸುವುದಿಲ್ಲ. ಹೂವು, ಹಣ್ಣು, ತರಕಾರಿ, ಹಾಲು, ಮಾಂಸ, ಪನ್ನೀರು, ಬಳೆ ಮತ್ತು ಸಾಕಷ್ಟು ಪದಾರ್ಥಗಳು ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ. ಈ ವಿನಾಯಿತಿ ಪದಾರ್ಥಗಳಲ್ಲಿ ನೀವು 10 ಕೋಟಿ ವ್ಯಾಪಾರ ಮಾಡಿದ್ದರೂ ಜಿಎಸ್ಟಿ ನೋಂದಣಿ ಮಾಡುವುದು ಕಡ್ಡಾಯವಲ್ಲ. ಆದರೆ ಹಣ್ಣು ಮತ್ತು ಹೂವು ಮಾರುವವರಿಗೂ ರಾಜ್ಯ ಜಿಎಸ್ಟಿ ಘಟಕದಿಂದ ನೋಟಿಸ್ ನೀಡಿದ್ದಾರೆ ಎಂದು ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ಜಿ.ಎಸ್. ಪ್ರಶಾಂತ್ ಅವರು ಆರೋಪಿಸಿದರು.
ಜಿಎಸ್ಟಿ ಕಾಯ್ದೆಯಲ್ಲಿ ಮೂರನೇ ವ್ಯಕ್ತಿಯ ಮಾಹಿತಿಯನ್ನು ಇಟ್ಟುಕೊಂಡು ತೆರಿಗೆ ಹೆಸರಿನಲ್ಲಿ ನೋಟಿಸ್ ನೀಡುವುದಿಲ್ಲ. ಇದು ಕಾನೂನಿಗೆ ವಿರುದ್ಧವಾಗಿದೆ. ಪೇಟಿಎಂ, ಫೋನ್ ಪೇ, ಗೂಗಲ್ ಪೇ ಅಪ್ಲಿಕೇಷನ್ನಂತಹ ಮೂರನೇ ವ್ಯಕ್ತಿಯಿಂದ ಪಡೆದ ಮಾಹಿತಿಯನ್ನು ರಾಜ್ಯ ಜಿಎಸ್ಟಿ ಘಟಕದ ಅಧಿಕಾರಿಗಳು ಮೊದಲು ಪರಿಶೀಲಿಸಬೇಕು. ವ್ಯಾಪಾರಿಗಳು ಯಾವ ವ್ಯಾಪಾರ ಮಾಡುತ್ತಿದ್ದಾರೆ, ಈ ವ್ಯಾಪಾರಕ್ಕೆ ಜಿಎಸ್ಟಿ ಅನ್ವಯವಾಗುತ್ತದೆಯೇ ಇಲ್ಲವೇ ಎಂದು ಪರಿಶೀಲನೆ ಮಾಡಿದ ನಂತರ ನೋಟಿಸ್ ಕೊಡಬೇಕಿತ್ತು. ಇದ್ಯಾವುದೇ ಕ್ರಮಗಳನ್ನು ರಾಜ್ಯ ಘಟಕದ ಜಿಎಸ್ಟಿ ಅಧಿಕಾರಿಗಳು ಮಾಡಿರುವುದಿಲ್ಲ ಎಂದು ದೂರಿದರು.
ಬೀದಿಬದಿ ವ್ಯಾಪಾರಿಗಳಿಗೆ ತೆರಿಗೆ ಬಗ್ಗೆ ಯಾವುದೇ ಅರಿವು ಮೂಡಿಸುವ ಕೆಲಸವನ್ನು ರಾಜ್ಯ ಜಿಎಸ್ಟಿ ಘಟಕ ಮಾಡಿರುವುದಿಲ್ಲ. ಶೇ 90 ರಷ್ಟು ವರ್ತಕರು ರಾಜ್ಯ ಜಿಎಸ್ಟಿ ಅಡಿಯಲ್ಲಿ ಬರುತ್ತಾರೆ. ಶೇ 10 ರಷ್ಟು ವರ್ತಕರು ಮಾತ್ರ ಕೇಂದ್ರದ ಜಿಎಸ್ಟಿ ಅಡಿಯಲ್ಲಿ ಬರುತ್ತಾರೆ ಎಂದು ತಿಳಿಸಿದರು.
ಈ 90 ರಷ್ಟು ವರ್ತಕರಿಗೆ ರಾಜ್ಯ ಜಿಎಸ್ಟಿ ಘಟಕದ ವತಿಯಿಂದ ಯಾವುದೇ ಜಾಹಿರಾತು ಮಾಹಿತಿ ನೀಡದೆ ಮತ್ತು ತೆರಿಗೆ ಮಾಹಿತಿಯನ್ನು ಕೊಡದೆ ಸಣ್ಣ ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು. ಆದ್ದರಿಂದ ರಾಜ್ಯ ಸರ್ಕಾರದ ಅಧಿಕಾರಿಗಳು ರಾಜ್ಯ ಸರ್ಕಾರ ವ್ಯಾಪಾರಿಗಳಿಗೆ ನೀಡಿರುವ 14000 ನೋಟಿಸ್ ಕಾನೂನಿಗೆ ವಿರುದ್ಧವಾಗಿದೆ ಮತ್ತು ಸಂವಿಧಾನ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು.
ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಎಸ್.ವಿ. ರಾಮಚಂದ್ರಗೌಡ(ಸೀಕಲ್), ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ಕೆ. ನಾರಾಯಣ, ಬಿಜೆಪಿ ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಜಿ.ಎಸ್. ಪ್ರಶಾಂತ್, ಬಿಜೆಪಿ ನಿಕಟಪೂರ್ವ ರಾಜ್ಯ ವಕ್ತಾರ ಜಿ.ವಿ.ಕೃಷ್ಣ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.