ಲಕ್ನೋ: ತನ್ನ ರಾಜಧಾನಿಯಲ್ಲಿ ಪ್ಲಾಸ್ಟಿಕ್ ನಿಷೇಧ ನಿಯಮವನ್ನು ಜಾರಿಗೆ ತರಲು ವಿಫಲವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶ ಸರ್ಕಾರ ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತಗೊಂಡಿರುವ ಅಲ್ಲಿನ ಪೊಲೀಸರು ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಪ್ಲಾಸ್ಟಿಕ್ ನಿಷೇಧ ನಿಯಮ ಜಾರಿಯಲ್ಲಿ ಯಾವುದೇ ಉಲ್ಲಂಘನೆಗಳು ಕಂಡು ಬಂದ ಪಕ್ಷದಲ್ಲಿ ಜನರು ಈ ಸಹಾಯವಾಣಿಗೆ ಕರೆಯನ್ನು ಮಾಡಿ ಮಾಹಿತಿ ನೀಡುವಂತೆ ಕೋರಿದ್ದಾರೆ.
“ನಗರದಲ್ಲಿ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದರೆ ಅಥವಾ ಪೂರೈಕೆಯಾಗುತ್ತಿದ್ದರೆ ಜನರು ಮುಂದೆ ಬಂದು ಅಪರಾಧ ತಡೆ ಸಹಾಯವಾಣಿ 7839861314 ಗೆ ಕರೆ ಮಾಡಿ ದೂರನ್ನು ನೀಡಬೇಕು” ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಕಲಾನಿಧಿ ನೈಥಾನಿ ಹೇಳಿದ್ದಾರೆ. ಅಲ್ಲದೇ, ಯಾವುದೇ ಕಾರಣಕ್ಕೂ ದೂರನ್ನು ನೀಡಿದವರ ಗುರುತನ್ನು ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದಿನ ತಿಂಗಳಿನಿಂದ ಲಕ್ನೋದ ಯಾವುದೇ ಭಾಗದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟವಾಗುತ್ತಿರುವುದು ಕಂಡು ಬಂದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ಆಗಸ್ಟ್ 26 ರಂದು ಘೋಷಣೆಯನ್ನು ಮಾಡಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಹೆಚ್ಚು ಕಾರ್ಯಪ್ರವೃತ್ತಗೊಂಡಿದೆ.
ಸರ್ಕಾರದ ಆದೇಶದ ಪ್ರಕಾರ, 50 ಮೈಕ್ರಾನ್ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಅನ್ನು ಯಾರೂ ಮಾರಾಟ ಮಾಡಬಾರದು ಮತ್ತು ಉತ್ಪಾದನೆ ಮಾಡಬಾರದು. ಈ ನಿಯಮ ಉಲ್ಲಂಘಿಸಿದವರಿಗೆ 1 ಲಕ್ಷ ರೂಪಾಯಿ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಉತ್ತರಪ್ರದೇಶದ ಹೆಚ್ಚುವರಿ ಗೃಹ ಮುಖ್ಯ ಕಾರ್ಯದರ್ಶಿ ಅವನಿಶ್ ಅವಸ್ಥಿ ಅವರು ನಿಷೇಧದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನಗರದ ಕೆಲವು ಭಾಗಗಳಲ್ಲಿ ಪರಿಶೀಲನೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಆಗಸ್ಟ್ 31 ರ ನಂತರ, ಲಕ್ನೋದಲ್ಲಿ ನಿಷೇಧದ ಉಲ್ಲಂಘನೆಗಳು ಕಂಡು ಬಂದರೆ ಆಯಾ ಪೊಲೀಸ್ ಠಾಣೆ ಉಸ್ತುವಾರಿ, ನಾಗರಿಕ ಅಧಿಕಾರಿ, ವಾಣಿಜ್ಯ ತೆರಿಗೆ ಅಧಿಕಾರಿ, ಮ್ಯಾಜಿಸ್ಟ್ರೇಟ್ ಮತ್ತು ವಲಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವಸ್ಥಿ ಎಚ್ಚರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.