ನವದೆಹಲಿ: ಅಪೌಷ್ಟಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿನ ಕೇಂದ್ರ ಸರ್ಕಾರ ಪ್ರಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸೆಪ್ಟೆಂಬರ್ ತಿಂಗಳನ್ನು ‘ಪೋಶಣ್ ಅಭಿಯಾನ್’ ಎಂದು ದೇಶವ್ಯಾಪಿಯಾಗಿ ಆಚರಿಸಲು ಕರೆ ನೀಡಿದ್ದಾರೆ.
ತಮ್ಮ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಭಾರತದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, “ಇಂದು ಅರಿವಿನ ಕೊರತೆಯಿಂದಾಗಿ, ಬಡ ಮತ್ತು ಶ್ರೀಮಂತ ಕುಟುಂಬಗಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಸೆಪ್ಟೆಂಬರ್ ತಿಂಗಳನ್ನು ಇಡೀ ದೇಶಾದ್ಯಂತ ‘ಪೋಶನ್ ಅಭಿಯಾನ್’ ಎಂದು ಆಚರಿಸಲಾಗುತ್ತದೆ” ಎಂದು ಹೇಳಿದ್ದಾರೆ.
‘ಪೋಶಣ್ ಅಭಿಯಾನ್’ ಅಡಿಯಲ್ಲಿ ರಾಷ್ಟ್ರವು ಅಪೌಷ್ಟಿಕತೆಯ ಪಿಡುಗಿನ ವಿರುದ್ಧದ ಹೋರಾಟವನ್ನು ಸಾಮೂಹಿಕ ಆಂದೋಲನವಾಗಿ ಪರಿವರ್ತಿಸಲಿದೆ ಎಂದು ಮೋದಿ ಹೇಳಿದ್ದಾರೆ.
ಮೋದಿ ಸರ್ಕಾರವು ತನ್ನ ಹಿಂದಿನ ಐದು ವರ್ಷಗಳ ಅವಧಿಯಲ್ಲಿಯೂ ಅಪೌಷ್ಟಿಕತೆಯ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡಿತ್ತು. ಈ ಬಾರಿಯೂ ಅಪೌಷ್ಠಿಕತೆಯನ್ನು ಹೊಡೆದೋಡಿಸಲು ಮೋದಿಯವರು ಹೊರಡಿಸಿರುವ ಘೋಷಣೆ ಹೆಚ್ಚಿನ ಮಹತ್ವದ್ದಾಗಿದೆ. ಅಪೌಷ್ಟಿಕತೆಯ ವಿರುದ್ಧ ಹೋರಾಡುವಲ್ಲಿನ ಸರ್ಕಾರದ ಬದ್ಧತೆಯನ್ನು ಇದು ದೃಢಪಡಿಸಿದೆ.
ಭಾರತದಲ್ಲಿ ಅಪೌಷ್ಠಿಕತೆ ಎಂಬುದು ದೊಡ್ಡ ಪಿಡುಗಾಗಿದ್ದು, ಮಕ್ಕಳು, ಗರ್ಭಿಣಿ ಮಹಿಳೆಯರು ಹೆಚ್ಚಾಗಿ ಇದಕ್ಕೆ ತುತ್ತಾಗುತ್ತಾರೆ. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಸರ್ಕಾರ ತಿಂಗಳು ಪೂರ್ತಿಯ ಅಭಿಯಾನಕ್ಕೆ ಕರೆ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಅಲ್ಲದೇ, ಕ್ರೀಡಾ ದಿನವಾದ ಆ.29ರಂದು ‘ಫಿಟ್ ಇಂಡಿಯಾ’ ಅಭಿಯಾನಕ್ಕೂ ಚಾಲನೆ ನೀಡುವುದಾಗಿ ಮೋದಿ ಈ ವೇಳೆ ಘೋಷಣೆ ಮಾಡಿದ್ದಾರೆ.
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅವರು ಪ್ರಸ್ತಾಪಿಸಿದ ಮತ್ತೊಂದು ವಿಶೇಷವೆಂದರೆ, ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮಾಡದಿರುವುದು. ಇಂತಹ ಪ್ಲಾಸ್ಟಿಕ್ ವಸ್ತುಗಳಿಗೆ ನಿಷೇಧ ಹೇರುವುದಕ್ಕೆ ಅವರು ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.