ಶ್ರೀಕೃಷ್ಣ ಹುಟ್ಟಿದ ದಿನ ಎಂದರೆ,
ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಮನೆ ಮನೆಯಲ್ಲಿ ಹಬ್ಬ. ಬಾಲಕೃಷ್ಣ, ಮುದ್ದುಕೃಷ್ಣ, ಗೋಪಾಲಕೃಷ್ಣ, ಮುರಳೀಧರ ಕೃಷ್ಣ, ರಾಧಾಕೃಷ್ಣ, ಗೀತಾಚಾರ್ಯ ಕೃಷ್ಣ ಎಂದು ಜನ ಕೃಷ್ಣನನ್ನು ಹಲವು ರೀತಿಗಳಲ್ಲಿ ಸ್ಮರಿಸುತ್ತಾರೆ.
ಸೆರೆಮನೆಯಿಂದ ನಂದಗೋಕುಲಕ್ಕೆ
ಈಗಿನ ಉತ್ತರಪ್ರದೇಶ ಪ್ರಾಂತದಲ್ಲಿ ಮಥುರಾ ಎಂಬ ನಗರ ಇತ್ತು. ಅಲ್ಲಿನ ರಾಜ ಉಗ್ರಸೇನ. ಒಳ್ಳೆಯವನು. ಅವನ ಮಗ ಕಂಸ ಮಾತ್ರ ದುಷ್ಟ, ಕ್ರೂರಿ. ತಾನು ಶಕ್ತಿವಂತ ಎಂದು ಅವನ ಜಂಬ. ತಂದೆಯನ್ನೇ ಸೆರೆಮನೆಗೆ ಹಾಕಿ ತಾನೇ ಅಧಿಕಾರ ನಡೆಸಿದ್ದ ಅಧರ್ಮಿ. ಅವನ ತಂಗಿ ದೇವಕಿಗೆ ಮದುವೆ ಆಯಿತು. ಅವಳ ಪತಿ ವಸುದೇವ.
ಹೊಸ ದಂಪತಿಗಳ ಮೆರವಣಿಗೆ. ತಂಗಿಯನ್ನೂ ವಸುದೇವನನ್ನೂ ಸಂಭ್ರಮದಿಂದ ರಥದಲ್ಲಿ ಕೂಡಿಸಿಕೊಂಡು ಕಂಸನೇ ಸಾರಥಿಯಾಗಿ ಹೊರಟ. ಇದ್ದಕ್ಕಿದ್ದಂತೆ-
ಕಂಸನಿಗೆ ಒಂದು ಅಶರೀರವಾಣಿ ಕೇಳಿಸಿತಂತೆ. ಈ ನಿನ್ನ ತಂಗಿಯ ಎಂಟನೇ ಮಗನೇ ನಿನ್ನ ನಾಶ ಮಾಡುತ್ತಾನೆ ಎಂದಿತಂತೆ! ಕಂಸ ಕೇಳಿದ, ಕೆರಳಿದ. ‘ಇವಳಿದ್ದರಲ್ಲವೆ ಇವಳ ಮಗ ನನಗೆ ಮೃತ್ಯು. ಇವಳನ್ನೇ ಕೊಲ್ಲುತ್ತೇನೆ’ ಎಂದು ಕತ್ತಿ ಎಳೆದ. ವಸುದೇವ ತಡೆದಾಗ ಅವರಿಬ್ಬರನ್ನೂ ಸೆರೆಮನೆಗೆ ಹಾಕಿದ. ಅವರಿಗೆ ಹುಟ್ಟಿದ ಮಕ್ಕಳನ್ನು ಕೊಲ್ಲುತ್ತ ಹೋದ. ದೇವಕಿ ಅತ್ತು ಅತ್ತು ಬಳಲಿದಳು.
ಎಂಟನೇ ಮಗುವೇ ಕೃಷ್ಣ. ಶ್ರಾವಣ ಬಹುಳ ಅಷ್ಟಮಿ ದಿನ ಹುಟ್ಟಿದ. ದಿವ್ಯ ತೇಜಸ್ಸಿನಿಂದ ಬೆಳಗುತ್ತಿದ್ದ. ಮೋಡಗಳ ನೀಲಿ ಬಣ್ಣದ ಈ ಮಗುವನ್ನಾದರೂ ಉಳಿಸಬೇಕು ಎಂದು ವಸುದೇವ ಅಂದುಕೊಂಡ. ಅಂದು ರಾತ್ರಿಯೇ ಕಾವಲುಗಾರರು ನಿದ್ರಿಸಿದಾಗ ಆ ಮಗುವನ್ನೆತ್ತಿಕೊಂಡು ಹೊರಟ. ಭಾರೀ ಮಳೆ. ದಾರಿಯಲ್ಲಿ ಯಮುನಾ ನದಿ. ಆದರೂ ಮುಂದೆ ನಡೆದ ವಸುದೇವ. ದೂರದ ಗೋಕುಲದಲ್ಲಿ ಇದ್ದ ನಂದ ಎಂಬ ಗೋಪಾಲಕನ ಮನೆಯಲ್ಲಿ ಕೃಷ್ಣನನ್ನು ಬಿಟ್ಟ. ಅಂದೇ ಹುಟ್ಟಿದ್ದ ಅವನ ಹೆಣ್ಣು ಮಗುವನ್ನು ತಂದ.
ಆಮೇಲೆ ಕಾವಲಿನವರು ಎದ್ದರು. ಒಳಗೆ ಮಗು ಅಳುತ್ತಿತ್ತು. ಓಡಿಹೋಗಿ ಕಂಸನಿಗೆ ತಿಳಿಸಿದರು.
“ಮಗುವನ್ನು ತೀರಿಸಿಬಿಡುತ್ತೇನೆ” ಎಂದು ಸೆರೆಮನೆಗೆ ಧಾವಿಸಿದ ಕಂಸ. ಆದರೆ ಮಗು ಕಂಸನ ಕೈಗೆ ಸಿಕ್ಕಲಿಲ್ಲ. “ನಿನ್ನ ಶತ್ರು ಗೋಕುಲದಲ್ಲಿ ಬೆಳೆಯುತ್ತಿದ್ದಾನೆ. ಬಂದು ನಿನ್ನ ನಾಶ ಮಾಡುತ್ತಾನೆ” ಎಂದು ಹೇಳಿ ಮಾಯವಾಯಿತು. ಕಂಸನಿಗೆ ದಿಗ್ಭ್ರಮೆ. ನಂದಗೋಕುಲದಲ್ಲಿರುವ ಮಗುವನ್ನು ಇನ್ನು ಕೊಲ್ಲಬೇಕಲ್ಲ, ಇದೇ ಯೋಚನೆ. ಉಪಾಯ ಹುಡುಕಲಾರಂಭಿಸಿದ.
ಗೋಕುಲದ ಜೀವಚೈತನ್ಯ
ನಂದನ ಪತ್ನಿ ಯಶೋದೆಗೋ ತನ್ನ ಹೊಸ ಮುದ್ದು ಮಗುವನ್ನು ಕಂಡು ತುಂಬ ಆನಂದ. ಅವನ ನಗುವನ್ನು ಕಂಡೇ ಮೈ ಮರೆಯುತ್ತಿದ್ದಳು. ಗೋಕುಲದ ಎಲ್ಲ ಹೆಂಗಸು, ಗಂಡಸರು, ಮಕ್ಕಳಿಗೆ ಕೃಷ್ಣನ ಚೇಷ್ಟೆಗಳದೇ ಸುದ್ದಿ.
ಕೃಷ್ಣನ ಬಾಲ್ಯದ ಕಥೆಗಳು ತುಂಬ ಸ್ವಾರಸ್ಯವಾಗಿವೆ. ಗೋಕುಲಕ್ಕೆ ಒಬ್ಬ ಸುಂದರಿಯಾದ ಹೆಂಗಸು ಬಂದಳು. ತಾನು ಮಥುರೆಯವಳು, ನಂದನಿಗೆ ದೂರದ ನೆಂಟಳು ಎಂದು ನಗುನಗುತ ಮಾತನಾಡಿದಳು. ಶ್ರೀಕೃಷ್ಣನನ್ನು ಎತ್ತಿಕೊಂಡಳು. ಯಶೋದೆ ಕೆಲಸದಲ್ಲಿದ್ದಾಗ ಹಾಲೂಡಿಸತೊಡಗಿದಳು. ಅವಳು ಪೂತನಿ ಎಂಬ ರಾಕ್ಷಸಿ. ಕೃಷ್ಣನನ್ನು ಕೊಲ್ಲಲು ಕಂಸ ಅವಳನ್ನು ಕಳಿಸಿದ್ದ. ಅವಳ ಎದೆಯ ಹಾಲು ವಿಷ. ಕೃಷ್ಣ ನಗುತ್ತಾ ಹಾಲು ಕುಡಿದೇ ಕುಡಿದ! ಎದೆಯ ಹಾಲೆಲ್ಲ ಮುಗಿದು ಅವಳ ಜೀವವನ್ನೇ ಕೃಷ್ಣ ಹೀರಿದ!
ಕಂಸ ತೃಣಾವರ್ತ, ಶಕಟಾಸುರ ಎಂಬ ರಾಕ್ಷಸರನ್ನು ಕಳಿಸಿದ. ಅವರೂ ಕೃಷ್ಣನ ಕೈಯಲ್ಲಿ ಸತ್ತರು.
ಎಳೆಯ ಕೃಷ್ಣ ಮುಂದೆ ಎಂತಹ ಮಹಾಪುರುಷನಾಗುತ್ತಾನೆ ಎಂದು ತೋರಿಸುವ ಇಂತಹ ಎಷ್ಟೋ ಘಟನೆಗಳಾದವಂತೆ.
ಕಂಸ ತುಂಬ ಬಲಶಾಲಿ, ದುಷ್ಟ. ಅವನ ಕಾಟ ಮಿತಿಮೀರಿ ನಂದನಿಗೆ ಭಯವಾಯಿತು. “ಗೋಕುಲವನ್ನೆ ಬಿಟ್ಟುಬಿಡೋಣ’ ಎಂದು ಗೋಪರು ತೀರ್ಮಾನಿಸಿದರು. ವೃಂದಾವನಕ್ಕೆ ಹೊರಟರು. ಅಲ್ಲೊಂದು ನಗರವೆ ಆಯಿತು. ಕೃಷ್ಣನಿಗೂ ಗೋಪ ಬಾಲಕರಿಗೂ ಖುಷಿಯೋ ಖುಷಿ! ಅಲ್ಲಿನ ಕಾಡು, ಯಮುನಾ ತೀರ, ಹಳ್ಳಗಳು, ಕೊಳಗಳು, ಬಯಲು ಎಲ್ಲೆಲ್ಲೂ ಇವರದೇ ಆಟ. ವಸುದೇವನಿಗೆ ಇನ್ನೊಬ್ಬಳು ಪತ್ನಿ ಇದ್ದಳು. ಹೆಸರು ರೋಹಿಣಿ. ಗೋಕುಲದಲ್ಲೇ ಇದ್ದಳು. ಅವಳ ಮಗ ಬಲರಾಮ. ಕೃಷ್ಣನ ಅಣ್ಣ. ಇವರಿಬ್ಬರ ತುಂಟತನದಿಂದಾಗಿ ಬೃಂದಾವನದಲ್ಲೆಲ್ಲ ನಗುವೇ ನಗು.
ಆದರೆ ಕಂಸ ಅಷ್ಟಕ್ಕೆ ಬಿಡುವವನೆ? ಅವನು ಕಳಿಸಿದ ರಾಕ್ಷಸರು ಅಲ್ಲಿಗೂ ಬಂದರು. ಬಂದವರು ತಾವೇ ಕೃಷ್ಣನ ಕೈಯಲ್ಲಿ ಸತ್ತರು.
ಒಮ್ಮೆ ಗೋವುಗಳನ್ನು ಕಾಯಲು ಹೋದ ಹುಡುಗರಲ್ಲಿ ಕೆಲವರು ಒಂದು ಕಡೆ ನೀರು ಕುಡಿದರು. ಕುಡಿದವರೇ ಸತ್ತು ಬಿದ್ದುಬಿಟ್ಟರು. ಆ ಮಡುವಿನಲ್ಲಿದ್ದ ಒಂದು ವಿಷಸರ್ಪ ಇದಕ್ಕೆ ಕಾರಣ. ಅದರ ಹೆಸರು ಕಾಳಿಂಗ. ಇನ್ನು ಇದನ್ನು ಬಿಡಬಾರದು ಎಂದು ಕೃಷ್ಣ ಮಡುವಿಗೆ ಧುಮುಕಿದ. ತನ್ನನ್ನು ಸುತ್ತಲು ಬಂದ ಹಾವಿನ ಬಾಲ ಹಿಡಿದ, ಹೆಡೆಯನ್ನು ತುಳಿದ. ಹಾವು ಒದ್ದಾಡಿತು. ಕೃಷ್ಣನನ್ನು ಕಚ್ಚಲು ನೋಡಿತು. ಕೃಷ್ಣನ ತುಳಿತ ಬಲವಾಯಿತು. ಹಾವು ಸೋತಿತು. ಆಮೇಲೆ ಕೃಷ್ಣ ಅದನ್ನು ಬಿಟ್ಟ. ಅದು ಆ ಮಡುವನ್ನು ಬಿಟ್ಟು ಓಡಿಹೋಯಿತು. ಆ ಸರ್ಪ ಅಲ್ಲಿಂದ ಹೋದದ್ದು ಎಲ್ಲರಿಗೂ ಆನಂದ.
ಗೋಪಾಲಕರ ಬಾಲಕರದ್ದು ಒಂದು ದೊಡ್ಡ ಗುಂಪು. ಇದಕ್ಕೆಲ್ಲ ಕೃಷ್ಣನೇ ನಾಯಕ. ಅವನು ಹೇಳಿದಂತೆಯೇ ಎಲ್ಲರ ಆಟ, ಹಾಡು, ಈಜು, ಕುಣಿತ. ಹತ್ತಿರದ ಎಲ್ಲ ಕಾಡುಗಳಲ್ಲೂ ಅವರ ಆಟವೆ. ಎಲ್ಲ ಕೊಳಗಳಲ್ಲೂ ಅವರ ಈಜೇ.
ಯಶೋದೆಯ ಕಂದ
ಹೀಗೆ ಕೃಷ್ಣ ಎಲ್ಲರಿಗೂ ಬೇಕಾದವನಾಗಿ, ಮುಂದಾಳಾಗಿ ಬೆಳೆದ. ಆದರೆ ತಾಯಿ ಯಶೋದೆಗೆ ಮತ್ರ ಅವನು ಇನ್ನೂ ಮುದ್ದಿನ ಮಗು! ಅವನ ತುಂಟಾಟ ಮಿತಿಮೀರಿದಾಗ ಗೋಪಿಯರು ಬಂದು ದೂರಿದರೆ ಕೃಷ್ಣನಿಗೂ ಒಮ್ಮೊಮ್ಮೆ ಶಿಕ್ಷೆಯೂ ಆಗುತ್ತಿತ್ತು. ಕೃಷ್ಣನೂ ಅಮ್ಮನ ಮುಂದೆ ಹಸುಗೂಸಿನಂತೆ ಇರುತ್ತಿದ್ದ.
ಕೃಷ್ಣನ ಬಾಲ್ಯದ ವಿಷಯ ಇನ್ನೊಂದು ಬಹು ಕೌತುಕದ ಕಥೆ ಇದೆ. ಒಮ್ಮೆ ಬಲರಾಮ ಬೇಗನೆ ಮನೆಗೆ ಬಂದ. ಯಶೋದೆಯ ಹತ್ತಿರ ಹೋಗಿ “ಅಮ್ಮಾ! ಕೃಷ್ಣ ಮಣ್ಣು ಮುಕ್ಕುತ್ತಾ ಇದ್ದಾನೆ. ಮೈಯೆಲ್ಲ, ಬಾಯೆಲ್ಲ ಮಣ್ಣಾಗಿದೆ” ಎಂದು ದೂರಿದ. ಅಷ್ಟು ಹೊತ್ತಿಗೆ ಮುದ್ದುಕೃಷ್ಣನ ಸವಾರಿ ಬಂತು. ಮೈ ಮುಖಗಳಿಗೆಲ್ಲ ಮಣ್ಣು ಮೆತ್ತಿದೆ. ಉಟ್ಟಿದ್ದ ಬಟ್ಟೆಯೆಲ್ಲ ಮಣ್ಣು! ಯಶೋದೆಗೆ ಚಿಂತೆ, ಗಾಬರಿ. ಈ ಹುಡುಗ ಮಣ್ಣು ತಿಂದು ಕಾಯಿಲೆ ಬಂದುಬಿಟ್ಟರೆ! ಯಶೋದೆ ಕೃಷ್ಣನ ಕಿವಿಯನ್ನು ಎಡಗೈಲಿ ಹಿಡಿದು ಬಲಗೈಲಿ ಕೋಲು ಹಿಡಿದು “ತುಂಟಾ! ಮನೇಲಿ ಕೊಟ್ಟ ಬೆಣ್ಣೆ ಸಾಲದೆ ಬೀದಿಯ ಮಣ್ಣೂ ತಿನ್ನುತ್ತೀಯಾ?” ಎಂದು ಗದರಿಸಿದಳು. ಪುಟ್ಟ ಕೃಷ್ಣ ಪೆಚ್ಚುಮೋರೆ ಹಾಕಿಕೊಂಡು, “ಇಲ್ಲಮ್ಮಾ! ಅಣ್ಣ ಸುಳ್ಳು ಸುಳ್ಳೇ ಚಾಡಿ ಹೇಳ್ತಾನೆ. ನಾನು ಮಣ್ಣು ಮುಟ್ಟೇ ಇಲ್ಲ” ಎಂದು ಮುದ್ದು ಮುದ್ದಾಗಿ ಹೇಳಿದ. ಯಶೋದೆಗೆ ಬಹು ಕೋಪ ಬಂದಿತ್ತು. ಅವನ ಮಾತನ್ನು ಕೇಳುತ್ತಾಳೆಯೆ? ಮೈ ಮಣ್ಣಗಿದೆ, ಮುಖವೂ ಮಣ್ಣು, ಬಾಯಿಯೂ ಮಣ್ಣಾಗಿರಲೇಬೇಕು “ತೆಗೆಯೋ ಬಾಯಿ, ನಿನ್ನ ಮಾತು ಸಾಕು” ಎಂದು ಗದರಿಸಿದಳು. ಕೃಷ್ಣ ಪೆಚ್ಚಾಗಿ ಬಾಯಿಯನ್ನು “ಆ…..” ಎಂದು ತೆಗೆದ.
ಯಶೋದೆ ನೋಡಿದಳು. ಬೆಚ್ಚಿದಳು, ಅವಳೂ “ಆ” ಎಂದಳು.
ಕೃಷ್ಣನ ಬಾಯಲ್ಲಿ ಮಣ್ಣು ಕಾಣಲಿಲ್ಲ. ಆದರೆ ಕಂಡದ್ದು ಎಲ್ಲ ಲೋಕಗಳು! ನೋಡುತ್ತ ನೋಡುತ್ತ ಯಶೋದೆಗೆ ದಿಗ್ಭ್ರಮೆ ಆಯ್ತು. ಭಯದಿಂದ ಕಣ್ಮುಚ್ಚಿ ಕೈಮುಗಿದಳು.
ಮತ್ತೆ ಕಣ್ಣು ಬಿಟ್ಟು ನೋಡಿದಳು. ಕೃಷ್ಣ ಬಾಯಿ ಮುಚ್ಚಿ ನಗುತ್ತಾ ಇದ್ದಾನೆ. ಅವಳಿಗೆ ಕ್ಷಣದ ಹಿಂದೆ ತಾನು ನೋಡಿದ್ದೆಲ್ಲ ಮರೆತೇಹೋಯಿತು. ನಗುತ್ತಿರುವ ಕೃಷ್ಣನನ್ನು ಕಂಡು ತಾನೂ ನಗುತ್ತಾ ಬಾಚಿ ತಬ್ಬಿಕೊಂಡು “ಮಗೂ” ಎಂದಳು. ಕೃಷ್ಣನೂ ಏನೂ ಗೊತ್ತಿಲ್ಲದ ಮಗುವಿನಂತೆಯೇ ಕಿಲಕಿಲ ನಗುತ್ತಿದ್ದ.
ಗೋವರ್ಧನ ಗಿರಿ
ಕೃಷ್ಣ ದೊಡ್ಡವನಾದಂತೆ ಊರಿನಲ್ಲಿ ಅವನಿಗೆ ಗೌರವ ಹೆಚ್ಚಾಯಿತು. ಏನು ಮಾಡಬೇಕಾದರೂ ಕೃಷ್ಣನನ್ನು ಕೇಳೋಣ ಎನ್ನುತ್ತಿದ್ದರು, ದೊಡ್ಡವರು ಕೂಡಾ!
ಒಮ್ಮೆ ಮಳೆಗಾಲ ಬಂತು. ಇಂದ್ರ ಮಳೆಗಳ ರಾಜ, ಆದ್ದರಿಂದ ಅವನಿಗೆ ಪೂಜೆ ಮಾಡಬೇಕು ಎಂದು ಗೋಪುರ ಸಿದ್ಧತೆ. ಕೃಷ್ಣನಿಗೆ ಇದು ಹಿಡಿಸಲಿಲ್ಲ. ಅಲ್ಲಿರುವ ಗೋವರ್ಧನ ಗಿರಿಯೇ ಮಳೆ ಬರಲು ಕಾರಣ, ಅದಕ್ಕೇ ಪೂಜೆ ಮಾಡೋಣ ಎಂದ. ಎಲ್ಲರೂ ಒಪ್ಪಿದರು. ತನಗೆ ಪೂಜೆ ಆಗದ್ದನ್ನು ಕಂಡ ಇಂದ್ರ ಸಿಟ್ಟಾದ. ಘೋರವಾದ ಮಳೆಯನ್ನು ಹರಿಸಿದ. ವೃಂದಾವನ ಪ್ರವಾಹದಲ್ಲಿ ಮುಳುಗತೊಡಗಿತು. ಜನ ಕಂಗಾಲಾದರು. ಹೆದರಬೇಡಿ ಎಂದ ಕೃಷ್ಣ. ಗೋವರ್ಧನ ಗಿರಿಯನ್ನೇ ಎತ್ತಿ ಹಿಡಿದ. ಅದರಡಿಯಲ್ಲಿ ಜನ, ಗೋವುಗಳು ನಿಂತರು, ಇಂದ್ರ ನಾಚಿಕೆಯಿಂದ ಮಳೆ ನಿಲ್ಲಿಸಿದ.
ಕೃಷ್ಣ ಶಕ್ತಿಯನ್ನು ಕಂಡು ಎಲ್ಲರಿಗೂ ಆಶ್ಚರ್ಯ, ಅಭಿಮಾನ!
ಶ್ರೀಕೃಷ್ಣನ ಹಿರಿಮೆಯನ್ನು ತೋರಿಸುವ ಇಂತಹ ಎಷ್ಟೋ ಕಥೆಗಳಿವೆ. ಅವನು ಗೋಕುಲದ ಬೆಳಕಾದ, ಆನಂದವಾದ. ಅವನು ಕೊಳಲು ನುಡಿಸಿದನೆಂದರೆ ದೊಡ್ಡವರು, ಮಕ್ಕಳು, ಗೋವುಗಳು ಎಲ್ಲರಿಗೂ ಸಂತೋಷದಿಂದ ಜಗತ್ತೆ ಮರೆಯುವುದು.
ಕಂಸ ವಧೆ
ಇತ್ತ ಮಥುರೆಯಲ್ಲಿ ಕಂಸನಿಗೆ ಚಿಂತೆ ಹೆಚ್ಚಾಯಿತು. ಅವನು ಕಳಿಸಿದ ಕೇಶಿ ಎಂಬ ಮತ್ತೊಬ್ಬ ರಾಕ್ಷಸನೂ ಸತ್ತುಹೋದ. ಕಂಸನು ವಸುದೇವ ದೇವಕಿಯರನ್ನು ಸೆರೆಗೆ ನೂಕಿದ. ಕೃಷ್ಣನನ್ನೇ ಮಥುರೆಗೆ ಕರೆಸಬೇಕು, ಅಲ್ಲಿ ಕೊಲ್ಲಿಸಬೇಕು ಎಂದು ಯೋಚಿಸಿದ. ಅದಕ್ಕಾಗಿ ಅಕ್ರೂರ ಎಂಬುವನನ್ನು ಕಳಿಸಿದ. ಅಕ್ರೂರನಿಗೆ ಕೃಷ್ಣನನ್ನು ಕಂಡರೆ ಪ್ರೀತಿ. ಅವನು ಕಂಸನ ಕೆಟ್ಟ ಉದ್ದೇಶವನ್ನು ಕೃಷ್ಣನಿಗೆ ತಿಳಿಸಿದ. ಕೃಷ್ಣನಿಗೆ ಸಂತೋಷವೇ ಆಯಿತು. ಎಲ್ಲ ಮಥುರೆಗೆ ಹೋಗೋಣ ಎಂದ. ಕೃಷ್ಣನನ್ನು ಬಿಟ್ಟಿರಲು ಗೋಕುಲದ ತಾಯಂದಿರಿಗೆ, ಗೋಪಿಯರಿಗೆ ದುಃಖ. ಅವರಿಗೆಲ್ಲ ಸಮಾಧಾನ ಹೇಳಿ ಕೃಷ್ಣ ಹೊರಟ. ಜೊತೆಯಲ್ಲಿ ಅಕ್ರೂರ, ಬಲರಾಮ, ಅಲ್ಲದೆ ನಂದ ಮತ್ತಿತರ ಗೋಪಾಲಕರು.
ಕೃಷ್ಣ ಕೆಳಗೆ ಬಿದ್ದ ಕಂಸನನ್ನು ಕೊಂದುಹಾಕಿದ.
ಕೃಷ್ಣ ಬರುವ ಸುದ್ದಿ ಮೊದಲೇ ಮಥುರೆಯಲ್ಲಿ ಹರಡಿತ್ತು. ಹಾಗಾಗಿ ಮನೆಮನೆಯಲ್ಲೂ ಕುತೂಹಲ, ಸಡಗರ, ಸಂಭ್ರಮ!
ಅಣ್ಣ ತಮ್ಮಂದಿರು ಅರಮನೆಯ ಬಳಿ ಬರುತ್ತಿದ್ದಂತೆ ಪರ್ವತದಂತೆ ಇದ್ದ ಒಂದು ಮದಿಸಿದ ಆನೆ ಅವರ ಕಡೆ ನುಗ್ಗಿತು. ಕೃಷ್ಣನನ್ನು ಕೊಲ್ಲಲೆಂದೇ ಕಂಸ ಅದನ್ನು ಅಲ್ಲಿ ನಿಲ್ಲಿಸಿದ್ದ. ಅದರ ಹೆಸರು ಕುವಲಯಾಪೀಡ. ಕೃಷ್ಣ ಆನೆಯ ಸೊಂಡಿಲನ್ನು ಕತ್ತರಿಸಿದ. ಕುವಲಯಾಪೀಡ ಧೊಪ್ಪನೆ ಬಿದ್ದು ಪ್ರಾಣಬಿಟ್ಟಿತು.
ಕಂಸ ಇದ್ದ ರಾಜಸಭೆಗೆ ಬಂದೊಡನೆ ಮುಷ್ಟಿಕ, ಚಾಣೂರ ಎಂಬ ಇಬ್ಬರು ಜಟ್ಟಿಗಳು ಮುಂದೆ ಬಂದರು. ದೇಶದಲ್ಲೇ ಹೆಸರಾದ ಮಲ್ಲರು ಅವರು. ಮಹಾ ಬಲಶಾಲಿಗಳು, ನೋಡುತ್ತಿದ್ದ ಜನರು, “ಅಯ್ಯೋ ಪಾಪ, ಈ ಬಂಡಗಳಂತಹ ಜಟ್ಟಿಗಳ ಮುಂದೆ ಈ ಹುಡುಗರೆಲ್ಲಿ!” ಎಂದು ಮರುಕಪಟ್ಟರು. ಆದರೆ ಅವರೂ ಕೃಷ್ಣ ಬಲರಾಮರ ಕೈಯಲ್ಲಿ ಸತ್ತರು. ತನ್ನ ಭಾರೀ ಜಟ್ಟಿಗಳಿಬ್ಬರು ಕಣ್ಣೆದುರೇ ಸತ್ತದ್ದು ಕಂಡು ಕಂಸನಿಗೆ ದಿಗ್ಭ್ರಮೆ. ಅವನು ಭಯದಿಂದ ನೋಡುತ್ತಿದ್ದಂತೆ ಕೃಷ್ಣ ಅವನತ್ತ ಛಂಗನೆ ಹಾರಿದ, ತಲೆಗೂದಲು ಹಿಡಿದು ನೆಲಕ್ಕೆ ಛಂಗನೆ ಹಾರಿದ, ತಲೆಗೂದಲು ಹಿಡಿದು ನೆಲಕ್ಕೆ ತಳ್ಳಿದ . ಕಂಸ ಜೀವದಾಸೆಯಿಂದ ಎದ್ದ. ಕೃಷ್ಣನೊಡನೆ ಹೋರಾಡಲು ಯತ್ನಿಸಿದ. ಆದರೆ ಕೃಷ್ಣ ಕೆಳಕ್ಕೆ ಬಿದ್ದ ಕಂಸನನ್ನು ಕೊಂದುಹಾಕಿದ. ಮಥುರೆಯ ಜನ ಸಮಾಧಾನದ ಉಸಿರು ಬಿಟ್ಟರು. ಕ್ರೂರಿ ಕಂಸನ ಆಳ್ವಿಕೆ ಇನ್ನಿಲ್ಲ, ಕೃಷ್ಣನಿಗೆ ಜಯವಾಗಲಿ ಎಂದು ಉತ್ಸವ ಆಚರಿಸಿದರು. ಆದರೆ ಕೃಷ್ಣ ಸಿಂಹಾಸನದ ಮೇಲೆ ಕೂಡಲಿಲ್ಲ. ಹಿರಿಯನಾದ ತಾತ ಉಗ್ರಸೇನನನ್ನೆ ಕೂಡಿಸಿದ. ಅವನಿಗೇ ರಾಜ್ಯ ಒಪ್ಪಿಸಿದ.
ಗುರುವಿನಡಿಯಲ್ಲಿ
ಸಾಂದೀಪನ ಎಂಬ ಒಬ್ಬರು ಮುನಿ. ಅವರ ಬಳಿ ಕೃಷ್ಣ ವಿದ್ಯಾಭ್ಯಾಸಕ್ಕೆ ನಿಂತ. ಆಗಿನ ಕಾಲದ ಎಲ್ಲ ವಿದ್ಯಾರ್ಥಿಗಳಂತೆ ತಾನೂ ಗುರುಗಳ ಮನೆಯಲ್ಲಿ ಕೆಲಸ ಮಾಡಿದ, ನಮ್ರತೆಯಿಂದ ವಿದ್ಯೆ ಕಲಿತ. ಅಭ್ಯಾಸದಲ್ಲಿ ಅವನಿಗಿದ್ದ ಶ್ರದ್ಧೆ, ವಿನಯ, ಬೇಗ ಕಲಿತುಕೊಳ್ಳುವ ಚುರುಕು ಬುದ್ಧಿ ಕಂಡು ಗುರುಗಳಿಗೆ ತುಂಬಾ ಮೆಚ್ಚಿಕೆ. ಸ್ವಲ್ಪ ಕಾಲದಲ್ಲೆ ಕೃಷ್ಣ ನ್ಯಾಯಶಾಸ್ತ್ರ, ರಾಜನೀತಿ, ಯುದ್ಧವಿದ್ಯೆಯನ್ನೆಲ್ಲ ಕಲಿತುಬಿಟ್ಟ. ಕೊನೆಯಲ್ಲಿ, ಗುರುದಕ್ಷಿಣೆಯಾಗಿ ಏನು ಕೊಡಲಿ ಎಂದು ಕೃಷ್ಣ ಕೇಳಿದಾಗ ಗುರುಪತ್ನಿ ಹೇಳಿದರು. “ಪ್ರಭಾಸ ತೀರ್ಥದಲ್ಲಿ ನನ್ನ ಮಗ ಕಳೆದುಹೋದ. ಅವನನ್ನು ತಂದುಕೊಡು.” ಅಸಾಧ್ಯವೆನಿಸಿದ ಕಾರ್ಯಕ್ಕೂ ಕೃಷ್ಣ ಅಳುಕಲಿಲ್ಲ. ಪ್ರಭಾಸದಲ್ಲಿ ಪಂಚಜನ ಎಂಬ ರಾಕ್ಷಸ ಇದ್ದ. ಅವನೇ ಸಾಂದೀಪನನ ಮಗನನ್ನು ಅಪಹರಿಸಿದ್ದವನು. ಕೃಷ್ಣ ಅವನನ್ನು ಸೋಲಿಸಿದ. ಗುರುಪುತ್ರನನ್ನು ಬದುಕಿಸಿ ತಂದ. ಜೊತೆಗೆ ‘ಪಾಂಚಜನ್ಯ’ ಎಂಬ ಶಂಖವನ್ನು ತಂದ. ವಿದ್ಯಾಭ್ಯಾಸ ಮುಗಿಸಿ ಕೃಷ್ಣ ಮಥುರೆಗೆ ಹಿಂದಿರುಗಿದ.
ಬಲರಾಮ ಮತ್ತು ಕೃಷ್ಣ ಸಹಪಾಠಿ ಕುಚೇಲ ಎಂಬವನು. ಗುರುಗಳ ಮನೆಯಲ್ಲಿ ಮೂವರೂ ತುಂಬ ಸ್ನೇಹದಿಂದ ಇದ್ದರು. ಹಿಂದಕ್ಕೆ ಹೋದನಂತರ ಕುಚೇಲ ತುಂಬಾ ಬಡತನವನ್ನು ಅನುಭವಿಸಬೇಕಾಯಿತು. ಹೆಂಡತಿ, ಮಕ್ಕಳಿಗೆ ಹೊಟ್ಟೆಗೆ ಇಲ್ಲ ಎನ್ನುವ ಸ್ಥಿತಿಯಾಯಿತು. ಆ ಹೊತ್ತಿಗೆ ಕೃಷ್ಣ ವೀರನೆಂದು, ಜ್ಞಾನಿಯೆಂದು ಕೀರ್ತಿವಂತನಾಗಿದ್ದ. ಅರಮನೆಯಲ್ಲಿ ವೈಭವದಿಂದಿದ್ದ.
ಕುಚೇಲನ ಹೆಂಡತಿ ಗಂಡನಿಗೆಂದಳು: “ಶ್ರೀಕೃಷ್ಣ ನಿಮ್ಮ ಸಹಪಾಠಿಯಲ್ಲವೆ? ಅವರನ್ನು ನೋಡಿ, ಸಹಾಯ ಮಾಡಬೇಕೆಂದು ಕೇಳಿ.”
ಕುಚೇಲ ಒಪ್ಪಿದ. ಆದರೆ ಸ್ನೇಹಿತನನ್ನು ನೋಡಲು ಬರಿಗೈಯಲ್ಲಿ ಹೋಗುವುದೆ? ಮನೆಯಲ್ಲಿ ಬೇರೇನೂ ಇರಲಿಲ್ಲ. ಒಂದು ಹಿಡಿ ಅವಲಕ್ಕಿ ಇದ್ದಿತು. ಅದನ್ನೆ ಕಟ್ಟಿಕೊಂಡು ಹೊರಟ. ಕುಚೇಲನಿಗೆ ಅಳುಕು. ಕೃಷ್ಣ ಈಗ ಬಹು ಹಿರಿಯ ವ್ಯಕ್ತಿಯಾಗಿದ್ದಾನೆ. ರಾಜಾಧಿರಾಜರು ಅವನನ್ನು ಓಲೈಸುತ್ತಾರೆ. ತನ್ನನ್ನು ಮಾತನಾಡಿಸಬಹುದೆ?
ಕುಚೇಲನನ್ನು ಕಾಣುತ್ತಲೆ ಕೃಷ್ಣ ಓಡಿ ಬಂದ. ಆಲಿಂಗಿಸಿ ಮಾತನಾಡಿಸಿದ, ಒಳಕ್ಕೆ ಕರೆದುಕೊಂಡು ಹೋದ, ಉಪಚಾರ ಮಾಡಿದ.
ತಾನು ತಂದ ಹಿಡಿ ಅವಲಕ್ಕಿಯನ್ನು ಕೊಡಲು ಕುಚೇಲನಿಗೆ ಸಂಕೋಚ. ಕೃಷ್ಣನೇ ಅದನ್ನು ಕಿತ್ತುಕೊಂಡ, ಸಂತೋಷದಿಂದ ತಿಂದ, ಇತರರಿಗೂ ಕೊಟ್ಟು ಹೊಗಳಿದ.
ಕುಚೇಲ ಅರಮನೆಯಲ್ಲಿ ನಾಲ್ಕು ದಿನ ಸಂತೋಷವಾಗಿದ್ದ. ‘ನನ್ನ ಬಡತನವನ್ನು ಹೋಗಿಸು’ ಎಂದು ಕೇಳಬೇಕೆಂದೇ ಅವನಿಗೆ ಮರೆತುಹೋಗಿತ್ತು.
ಅವನು ಹಿಂದಿರುಗುವ ಹೊತ್ತಿಗೆ ಕೃಷ್ಣನೇ ಬೇಕಾದಷ್ಟು ಧನಕನಕಗಳನ್ನೂ ಒಳ್ಳೆಯ ವಸ್ತ್ರಗಳನ್ನೂ ಅವನ ಮನೆಗೆ ಕಳುಹಿಸಿದ್ದ. ಕುಚೇಲನಿಗಾಗಿ ಭವ್ಯವಾದ ಹೊಸ ಮನೆಯೇ ಸಿದ್ಧವಾಯಿತು.
ದ್ವಾರಕೆಗೆ
ಕಂಸನ ಮಾವ ಜರಾಸಂಧ. ಮಗಧದ ರಾಜ ಅವನು. ಅವನ ಶಕ್ತಿ, ಸೈನ್ಯ ಬಲವಾಗಿತ್ತು. ಕಂಸನನ್ನು ಕೊಂದದ್ದಕ್ಕೆ ಅವನಿಗೆ ಕೃಷ್ಣನ ಮೇಲೆ ಸಿಟ್ಟು. ಕೃಷ್ಣನನ್ನು ನಾಶಮಾಡಬೇಕು ಎಂದು ದೊಡ್ಡ ಸೈನ್ಯ ಕಟ್ಟಿಕೊಂಡು ಮಥುರೆಯ ಮೇಲೆ ದಂಡೆತ್ತಿ ಬಂದ. ಕೃಷ್ಣ ಯಾದವ ಕುಲದವನು. ಯಾದವ ವೀರರನ್ನೆಲ್ಲಾ ಒಟ್ಟುಗೂಡಿಸಿದ. ಕೋಟೆಯ ಹೊರಗಿದ್ದ ಜರಾಸಂಧನ ಸೈನ್ಯದ ಮೇಲೆ ಕೃಷ್ಣ ಮಿಂಚಿನಂತೆ ದಾಳಿ ನಡೆಸಿದ. ಸ್ವಲ್ಪ ಹೊತ್ತಿನಲ್ಲೆ ಮಗಧದ ಸೈನ್ಯ ಪಲಾಯನ ಮಾಡಿತು. ಜರಾಸಂದ ಸೋಲಿನ ಅವಮಾನ ಸಹಿಸಲಿಲ್ಲ. ಮತ್ತೆ ಯುದ್ಧಕ್ಕೆ ಬಂದಾಗ ಅವನ ಸೈನ್ಯ ಮತ್ತೂ ದೊಡ್ಡದಿತ್ತು. ಅನೇಕ ರಾಜರ ಬೆಂಬಲವಿತ್ತು. ಈ ಬಾರಿ ಸೈನ್ಯ ಮಥುರೆಯವರೆಗೆ ಬರುವ ಮೊದಲೇ ಕೃಷ್ಣನ ಸೈನ್ಯ ದಾಳಿ ನಡೆಸಿತು. ಮಗಧ ಸೈನ್ಯ ದಾಳಿಗೆ ಸಿದ್ಧವಿರಲಿಲ್ಲ. ಕೋಲಾಹಲದಲ್ಲಿ ಅವರ ಆನೆಗಳೇ ಅವರನ್ನು ತುಳಿದವು. ಜರಾಸಂಧನಿಗೆ ಮತ್ತೆ ಮತ್ತೆ ಸೋಲಾದರೂ ಬಿಡದೆ ಹದಿನೇಳು ಬಾರಿ ಅವನು ಮಥುರೆಯ ಮೇಲೆ ದಂಡೆತ್ತಿ ಬಂದ.
ಎಷ್ಟು ಬಾರಿ ಹೀಗೆ ಯುದ್ಧ ಮಾಡುವುದು? ಅಲ್ಲದೆ ಯಾದವರ ಶಕ್ತಿ ಕುಂದುತ್ತಿರುವುದನ್ನು ಕೃಷ್ಣ ಗಮನಿಸಿದ. ಬರಿಯ ವೀರಾವೇಶದಿಂದ ಹೋರಾಡುವುದಷ್ಟೇ ಅಲ್ಲ, ತನ್ನ ಶಕ್ತಿ ಕಡಿಮೆಯಾದಾಗ ಯುದ್ಧದಿಂದ ಹಿಂದೆಗೆದು ಸೂಕ್ತ ಸಮಯದಲ್ಲಿ, ಕುಶಲತೆಯಿಂದ ಶತ್ರುವನ್ನು ನಾಶಮಾಡಬೇಕು. ಸೋಲು ಹತ್ತಿರವಿದೆ ಎನಿಸಿದೊಡನೆ ಕೃಷ್ಣ ಯುದ್ಧದಿಂದ ಹಿಂದೆಗೆಯುತ್ತಿದ್ದ.
ಮಗಧದ ಹದಿನೇಳನೇ ಮುತ್ತಿಗೆಯ ಕಾಲದಲ್ಲಿ ಕೃಷ್ಣ ಗುಪ್ತಮಾರ್ಗದಿಂದ ಎಲ್ಲರನ್ನೂ ದ್ವಾರಕೆಗೆ ಕರೆತಂದ. ಈ ತಂತ್ರದಿಂದ ಮಗಧದ ಸೈನ್ಯದ ಜೊತೆಗೆ ಬಂದಿದ್ದ ಕಾಲಯವನ ಎಂಬ ರಾಕ್ಷಸ ಮುಚುಕುಂದ ಎಂಬ ಋಷಿಯ ಕೋಪಕ್ಕೆ ಒಳಗಾಗಿ ಸತ್ತ.
ದ್ವಾರಕೆಗೆ ಏಕೆ ಹೋದ? ಜರಾಸಂಧನ ದಾಳಿಯಿಂದ ಯಾದವರನ್ನುಳಿಸಲು ಕೃಷ್ಣನೇ ಕಟ್ಟಿಸಿದ್ದ ನಗರ ಅದು. ಸುತ್ತ ಸಮುದ್ರ. ಮಧ್ಯೆ ದುರ್ಗಮವಾದ ಕೋಟೆ ಅಲ್ಲಿತ್ತು. ಈಗಲೂ ಅದು ಗುಜರಾತಿನ ತೀರದಲ್ಲಿ ಇದೆ. ಒಳ್ಳೆಯ ಬಂದರು. ಅಲ್ಲಿ ನೆಲೆಸಿದ ಮೇಲೆ ಯಾದವರ ಶಕ್ತಿ ಹೆಚ್ಚಿತು. ಕೃಷ್ಣನ ಕೀರ್ತಿಯೂ ಬೆಳೆಯಿತು.
ಸಾಹಸಿ ಕೃಷ್ಣ
ವಿದರ್ಭದ ರಾಜ ಭೀಷ್ಮಕ. ಅವನ ಮಗಳು ರುಕ್ಮಿಣಿ ಸುಂದರಿ, ಅಷ್ಟೇ ಒಳ್ಳೆಯವಳು. ಅವಳಿಗೆ ಕೃಷ್ಣನನ್ನು ಮದುವೆ ಮಾಡಿಕೊಳ್ಳುವ ಆಸೆ. ತಂದೆಗೂ ಒಪ್ಪಿಗೆ. ಆದರೆ ಅವಳ ಅಣ್ಣ ರುಕ್ಮಿ ಕೇಳಲಿಲ್ಲ. ಕೃಷ್ಣ ಗೋಪಾಲಕನ ಮಗ, ಹೀನ ಕುಲದವನು ಎಂದು ವಾದಿಸಿ ಶಿಶುಪಾಲ ಎಂಬ ರಾಜನೊಡೆನ ಅವಳ ಮದುವೆ ನಿಶ್ಚಯಸಿಬಿಟ್ಟ. ರುಕ್ಮಿಣಿ ಅತ್ತಳು. ಕೃಷ್ಣನಿಗೆ ಹೇಳಿ ಕಳಿಸಿದಳು.
ಕೃಷ್ಣ ವಿದರ್ಭಕ್ಕೆ ಬಂದ. ರುಕ್ಮಿಣಿಯನ್ನು ರಥದ ಮೇಲೆ ಕೂಡಿಸಿ ದ್ವಾರಕೆಗೆ ಓಡಿಸಿದ. ರುಕ್ಮಿ ಸೈನ್ಯ ಕಟ್ಟಿಕೊಂಡು ಬಂದ. ಕೃಷ್ಣನನ್ನು ಬೈದ. ಕೃಷ್ಣನ ಬಾಣಗಳ ಮುಂದೆ ಅವನ ಸೈನ್ಯ ನಿಲ್ಲಲು ಆಗಲಿಲ್ಲ. ರುಕ್ಮಿಯನ್ನು ನೆಲಕ್ಕೆ ಕೆಡವಿ ಕೃಷ್ಣ ದ್ವಾರಕೆ ತಲುಪಿದ. ಅಲ್ಲಿ ಶ್ರೀಕೃಷ್ಣ ರುಕ್ಮಿಣಿಯರ ವಿವಾಹ ನಡೆಯಿತು.
ದೀಪಾವಳಿ ಹಬ್ಬ ಎಂದರೆ ನಮಗೆಲ್ಲ ಸಂತೋಷ, ಸಡಗರ ಅಲ್ಲವೆ? ದೀಪಾವಳಿ ಪ್ರಾರಂಭವಾಗುತ್ತಿದೆ ಎಂದು ಸೂಚಿಸುತ್ತದೆ ನರಕಚತುರ್ದಶಿ ಹಬ್ಬ.
ಹಿಮಾಲಯದ ತಪ್ಪಲಲ್ಲಿ ಪ್ರಾಗ್ಜೋತಿಷ ಎಂಬ ಪಟ್ಟಣ. ಅಲ್ಲಿದ್ದ ನರಕಾಸುರ ಎಂಬ ರಾಜ ಸಜ್ಜನರನ್ನು ಹಿಂಸಿಸುತ್ತಿದ್ದ. ದೇವತೆಗಳಿಗೂ ಅವನ ಕಾಟ ತಡೆಯಲು ಆಗುತ್ತಿರಲಿಲ್ಲ. ಕೃಷ್ಣ ಅವನಲ್ಲಿಗೆ ಹೋದ. ಪ್ರಗ್ಜೋತಿಷದ ಭಯಂಕರವಾದ ಕೋಟೆಯನ್ನು ಒಡೆದು ಒಳಗೆ ನುಗ್ಗಿದ. ಭಾರೀ ಸೈನ್ಯದೊಡನೆ ಯುದ್ಧ ನಡೆಯಿತು. ಮುರನೆಂಬ ರಾಕ್ಷಸ ಕೃಷ್ಣ ಕೈಲಿ ಸತ್ತ. ನರಕಾಸುರರನ್ನೂ ಕೃಷ್ಣ ತನ್ನ ಚಕ್ರಾಯುಧದಿಂದ ಕತ್ತರಿಸಿಬಿಟ್ಟ. ಅಂದು ನರಕಚತುರ್ದಶಿ. ಇಡೀ ದೇಶಕ್ಕೆ ಹರ್ಷದ ದಿನ. ನರಕಾಸುರ ಬಂಧಿಸಿದ್ದ ರಾಜಕುಮಾರಿಯರ ಬಿಡುಗಡೆಯ ದಿನ.
‘ನಿಜವಾದ ಜ್ಞಾನಿ ಎಲ್ಲರನ್ನು ಸಮಾನರೆಂದೇ ಕಾಣುತ್ತಾನೆ…..ಮನುಷ್ಯ ತನ್ನ ಕರ್ತವ್ಯವನ್ನು ಮಾಡಬೇಕು’
ಪಾಂಡವರ ಭಾಗ್ಯ
ದ್ರುಪದ ರಾಜನ ಮಗಳು ದ್ರೌಪದಿ. ಅವಳ ವಿವಾಹಕ್ಕಾಗಿ ಸಿದ್ಧತೆ ನಡೆದಿತ್ತು. ‘ಸ್ವಯಂವರ’ ಪದ್ಧತಿ ಅದು. ಅಲ್ಲೊಂದು ಸ್ಪರ್ಧೆ ಇತ್ತು. ಎತ್ತರದಲ್ಲಿ ಕಟ್ಟಿದ್ದ ಮೀನಿನ ಆಕೃತಿಯ ಕಣ್ಣಿಗೆ ಬಾಣ ಹೊಡೆಯಬೇಕು. ಅದರಲ್ಲಿ ಗೆದ್ದವನು ಒಬ್ಬನೇ – ಅರ್ಜುನ, ಪಾಂಡವರಲ್ಲಿ ಮೂರನೆಯವನು. ಅಲ್ಲೇ ಕೃಷ್ಣನಿಗೆ ಅವನ ಸ್ನೇಹ ಆದದ್ದು ಹಾಗೂ ಪಾಂಡವರೊಡನೆ ಗೆಳೆತನ ಬೆಳೆದದ್ದು. ಅರ್ಜುನ ಅಸಮಾನದ ವೀರ. ಅವನ ಮೂಲಕ ದೇಶದ ಎಲ್ಲ ಅಧರ್ಮಿಗಳನ್ನೂ ನಾಶಮಾಡಬೇಕು ಎಂದು ಕೃಷ್ಣ ಯೋಚಿಸಿದ.
ಕೆಲವು ಕಾಲದ ಮೇಲೆ ಕೃಷ್ಣನ ತಂಗಿ ಸುಭದ್ರೆ ಅರ್ಜುನನ್ನು ಮದುವೆಯಾದಳು. ಹೀಗೆ ಅರ್ಜುನ ಕೃಷ್ಣನಿಗೆ ಮತ್ತಷ್ಟು ಹತ್ತಿರದವನಾದ.
ಪಾಂಡವರ ಶಕ್ತಿ ಹೆಚ್ಚಿತು. ರಾಜಸೂಯ ಎಂಬ ಯಾಗ ಮಾಡಲು ಸಿದ್ಧತೆ ಮಾಡಿದರು. ಅದಕ್ಕೆ ಮುಂಚೆ ನಾಲ್ಕು ದಿಕ್ಕಿನಲ್ಲೂ ಸೈನ್ಯ ಹೊರಟಿತು. ಅರ್ಜುನನ ನೇತೃತ್ವ, ಜೊತೆಗೆ ಕೃಷ್ಣನೂ ಇದ್ದ.
ಅಣ್ಣ ತಮ್ಮಂದಿರು ಭೀಮಾರ್ಜುನರು ಶ್ರೀಕೃಷ್ಣನೊಡನೆ ಹೊರಟರು. ಮೂವರು ಮಗಧಕ್ಕೆ ಬಂದರು. ಅಲ್ಲಿ ಭೀಮನಿಗೂ ಜರಾಸಂಧನಿಗೂ ಮಲ್ಲಯುದ್ಧ ನಡೆಯಿತು. ಪದೇ ಪದೇ ಸೋತರೂ ಜರಾಸಂಧ ಸಾಯುತ್ತಿರಲಿಲ್ಲ. ಭೀಮ ದಣಿಯತೊಡಗಿದ್ದ. ಕೃಷ್ಣ ಭೀಮನಿಗೆ ಸನ್ನೆ ಮಾಡಿದ. ಅದರಂತೆ ಭೀಮ ಜರಾಸಂಧನ ಕಾಲನ್ನು ಎಳೆದು ಸೀಳಿಬಿಟ್ಟ. ಎರಡು ಭಾಗ ಮಾಡಿ ದೂರ ದೂರ ಎಸೆದುಬಿಟ್ಟ. ಹೀಗೆ ಮೊದಲು ಭಯಂಕರನಾಗಿದ್ದ ಶತ್ರುವನ್ನು ಕೃಷ್ಣ ಸುಲಭವಾಗಿ ನಾಶಮಾಡಿದ.
ಶಿಶುಪಾಲನಿಗೂ ಕೃಷ್ಣನ ಮೇಲೆ ದ್ವೇಷ. ರಾಜಸೂಯಯಾಗದಲ್ಲಿ ಭೀಮನ ಮಾತಿನಂತೆ ಪಾಂಡವರಲ್ಲಿ ಮೊದಲನೆಯವನಾದ ಧರ್ಮರಾಜ ಶ್ರೀಕೃಷ್ಣನಿಗೇ ಅಗ್ರಪೂಜೆಯ ಗೌರವ ಕೊಟ್ಟ. ಶಿಶುಪಾಲ ಪ್ರತಿಭಟಿಸಿದ. ಕೃಷ್ಣನನ್ನು ಹೀನಾಮಾನ ಬೈದ. ಕೃಷ್ಣನ ಚಕ್ರ ಕೆಲಸ ಮಾಡಿತು. ಶಿಶುಪಾಲನ ತಲೆ ನೆಲಕ್ಕೆ ಬಿತ್ತು.
ಪಾಂಡವರ ಗೆಲುವು, ಕೀರ್ತಿ ಅವರ ದೊಡ್ಡಪ್ಪನ ಮಗ ದುರ್ಯೋಧನನಿಗೆ ಹೊಟ್ಟೆಕಿಚ್ಚು ತಂದವು. ಧರ್ಮರಾಜನನ್ನು ಜೂಜಿಗೆ ಕರೆದ. ರಾಜ್ಯ, ಕೋಶ ಕೊನೆಗೆ ತಮ್ಮಂದಿರು ಮತ್ತು ಪತ್ನಿಯನ್ನೂ ಪಣವಾಗಿಟ್ಟು ಧರ್ಮರಾಜ ಸೋತುಬಿಟ್ಟ. ಗೆಲುವಿನ ಅಹಂಕಾರದಲ್ಲಿ ದುರ್ಯೋಧನ ಹುಚ್ಚಾದ. ದ್ರೌಪದಿಯನ್ನು ರಾಜಸಭೆಗೆ ಎಳೆದು ತರಿಸಿದ. ತುಂಬಿದ ಸಭೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಸೆಳೆಯತೊಡಗಿದಾಗ ಎಲ್ಲರೂ ಮಂಕಾಗಿ ಕುಳಿತರು. ದ್ರೌಪದಿ, “ಕೃಷ್ಣಾ, ನೀನೇ ರಕ್ಷಿಸು” ಎಂದು ಪ್ರಾರ್ಥಿಸಿದಾಗ ಕೃಷ್ಣ ಅಭಯ ನೀಡಿದ. ಸೆಳೆದಷ್ಟೂ ಸೀರೆ ಅಕ್ಷಯವಾಯಿತು. ದ್ರೌಪದಿಯ ಮಾನ ಉಳಿಯಿತು. ಬಿಚ್ಚಿದ ಮುಡಿ ಹಾಗೇ ಉಳಿಯಿತು. ದುಶ್ಯಾಸನ ಹತನಾದ ನಂತರವೇ ಮುಡಿ ಕಟ್ಟುವೆ ಎಂದು ಪ್ರತಿಜ್ಞೆ ಮಾಡಿದಳು.
ಪಾಂಡವರು ವನವಾಸ ಮಾಡಬೇಕಾಯಿತು. ಒಂದಲ್ಲ, ಹನ್ನೆರಡು ವರ್ಷಗಳು. ಅದು ಜೂಜಿನ ಷರತ್ತು. ಆಗ ಪಾಂಡವರಿಗೆ ಅನೇಕ ಕಷ್ಟ ಬಂದವು. ಆಗೆಲ್ಲ ಕೃಷ್ಣ ಅವರ ಸಹಾಯಕ್ಕೆ ಬಂದ. ಒಮ್ಮೆ ದೂರ್ವಾಸ ಎಂಬ ಕೋಪಿಷ್ಠ ಋಷಿಗಳು ಪಾಂಡವರ ಆಶ್ರಮಕ್ಕೆ ಬಂದರು. ಜೊತೆಗೆ ನೂರಾರು ಶಿಷ್ಯರು, ಸ್ನಾನ ಮುಗಿಸಿ ಊಟಕ್ಕೆ ಬರುತ್ತೇವೆ ಎಂದು ಹೇಳಿ ಹೊರಟರು. ಪಾಂಡವರಿಗೆ ಚಿಂತೆ. ಕಾರಣ, ಮನೆಯಲ್ಲಿ ಏನೂ ಊಟಕ್ಕೆ ಇರಲಿಲ್ಲ. ದ್ರೌಪದಿ ಕೃಷ್ಣನ ಧ್ಯಾನ ಮಾಡಿದಳು. ಕೃಷ್ಣ ಎಲ್ಲಿಂದಲೋ ಬಂದ. “ದ್ರೌಪದೀ ಹಸಿವಾಗುತ್ತಿದೆ ಊಟ ಹಾಕು” ಎಂದ. ದ್ರೌಪದಿಗೆ ನಗು, ಅಳು ಒಟ್ಟಿಗೇ ಬಂದವು. ಕೃಷ್ಣ ಅನ್ನದ ಪಾತ್ರೆ ತರಿಸಿದ. ತಳದಲ್ಲಿ ಉಳಿದಿದ್ದಷ್ಟನೇ ತಿಂದ. ತಿಂದಷ್ಟೂ ಮತ್ತೂ ಅನ್ನ, ಭಕ್ಷ್ಯ ಅದರಲ್ಲಿ ಬಂದವು. ದೂರ್ವಾಸರಿಗೆ ತಾವೇ ಭೋಜನ ಮಾಡಿದಂತೆ ಆಯಿತು. ಅವರಿಗೆ ಅರ್ಥವಾಯಿತು, ಶ್ರೀಕೃಷ್ಣ ಪಾಂಡವರನ್ನು ಕಾಪಾಡಿದ ಎಂದು. ಕೃಷ್ಣ ಅಕ್ಷಯಪಾತ್ರೆಯನ್ನು ದ್ರೌಪದಿಗೆ ಕೊಟ್ಟು ಹೊರಟುಬಿಟ್ಟ.
ವನವಾಸ ಮುಗಿದ ಮೇಲೆ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡಬೇಕಾಗಿತ್ತು. ವಿರಾಟ ಎಂಬ ರಾಜನ ಆಸ್ಥಾನದಲ್ಲಿ ಅದನ್ನೂ ಕಳೆದರು.
ಹದಿಮೂರು ವರ್ಷ ಕಳೆದಂತಾಯಿತು – ಜೂಜಿನ ಷರತ್ತಿನಂತೆ. ಇನ್ನು ದುರ್ಯೋಧನ ತಮ್ಮ ರಾಜ್ಯ ಬಿಟ್ಟುಕೊಡಬೇಕು ಎಂದು ಪಾಂಡವರ ನ್ಯಾಯವಾದ ಕೇಳಿಕೆ. ದುರ್ಯೋಧನನಿಗೆ ರಾಜ್ಯದಾಸೆ. ಜೊತೆಗೆ ಮತ್ಸರ. ಬೇಕಿದ್ದರೆ ಯುದ್ಧಮಾಡಿ ಎಂದುಬಿಟ್ಟ.
ಪಾಂಡವರ ರಾಯಭಾರಿ
ಧರ್ಮರಾಜನಿಗೆ ರಾಜ್ಯಕ್ಕಾಗಿ ಯುದ್ಧ ಮಾಡುವುದು ಇಷ್ಟವಿರಲಿಲ್ಲ. ಹಾಗಾಗಿ ಕೃಷ್ಣನಿಗೆ ಹೇಳಿದ, “ಯುದ್ಧ ತಪ್ಪಿಸಬೇಕು. ನೀನು ನಮಗಾಗಿ ಸಂಧಾನ ಮಾಡು. ಅರ್ಧ ರಾಜ್ಯ ಕೊಡದಿದ್ದರೂ ಬೇಡ. ಐದು ಗ್ರಾಮಗಳನ್ನಾದರೂ ಕೊಡಲಿ.” ಕೃಷ್ಣ ಸಂಧಾನಕ್ಕೆಂದು ಹೊರಟಾಗ ದ್ರೌಪದಿಗೆ ದುಃಖ. ಸಂಧಾನದಿಂದ ಯುದ್ಧ ತಪ್ಪಿದರೆ ತನ್ನ ಸೇಡಿನ ಗತಿ? ಅವಮಾನ ಮಾಡಿದ ದುಶ್ಯಾಸನನ ಕರುಳು ಬಗಿಯಬೇಕು, ದುರ್ಯೋಧನನ ತೊಡೆ ಮುರಿಯಬೇಕು, ಕರ್ಣನ ತಲೆ ಬೀಳಬೇಕು. ‘ಕೃಷ್ಣ ಯುದ್ಧವನ್ನೇ ನಿಶ್ಚಯಿಸಿಕೊಂಡು ಬಾ’ ಎಂದಳು. ಕೃಷ್ಣ ಹೇಳಿದ: “ತಂಗಿ, ಅಳಬೇಡ, ಸಂಧಾನಕ್ಕೆ ಹೋದರೂ ನಾನು ನಿಶ್ಚಯಿಸಿ ಬರುವುದು ಯುದ್ಧವನ್ನೇ. ನಿನ್ನ ಬಿಚ್ಚಿದ ಮುಡಿ ಸದಾ ನೆನಪಿರುತ್ತದೆ. ಲೋಕದ ಎಲ್ಲ ಅಧರ್ಮಿಗಳೂ ದುಷ್ಟರೂ ಒಟ್ಟಿಗೇ ನಾಶವಾಗಬೇಕು. ಧರ್ಮದಂತೆ ನಡೆಯುವ ರಾಜ್ಯ ಸ್ಥಾಪನೆ ಆಗಬೇಕಲು. ಅದಕ್ಕಾಗಿ ಮಹಾಯುದ್ಧ ಅಗತ್ಯ, ಅನಿವಾರ್ಯ.”
ದುರ್ಯೋಧನನಲ್ಲಿಗೆ ಹೋಗುವ ಮೊದಲು ಕೃಷ್ಣ ವಿದುರನ ಮನೆಗೆ ಹೋದ.
ವಿದುರ ಕೌರವರ ಆಸ್ಥಾನದಲ್ಲಿ ಇದ್ದ. ಅವನ ತಾಯಿ, ಹಿಂದಿನ ರಾಣಿಯ ದಾಸಿಯಾಗಿದ್ದಳು. ಆದರೆ ವಿದುರ ಪೂಜ್ಯನಾದವನು. ಧರ್ಮವನ್ನು ತಿಳಿದವನು, ಅದರಂತೆ ನಡೆಯುವವನು. ಹಾಗಾಗಿ ಕೃಷ್ಣನಿಗೆ ಅವನ ಮೇಲೆ ಪ್ರೀತಿ. ಕೃಷ್ಣ ಬಂದದ್ದು ವಿದುರನಿಗೆ ತುಂಬ ಆನಂದ. ಕೃಷ್ಣ ಅಲ್ಲೇ ಭೋಜನ ಸತ್ಕಾರ ಸ್ವೀಕರಿಸಿ ಕೌರವರ ರಾಜ ದುರ್ಯೋಧನ ಆಸ್ಥಾನಕ್ಕೆ ಬಂದ.
ಯುದ್ಧಕ್ಕೆ ನಾಂದಿ
ಆಸ್ಥಾನದಲ್ಲಿ ಭೀಷ್ಮ, ದ್ರೋಣರಂತಹ ಹಿರಿಯರಿದ್ದರು, ಜ್ಞಾನಿಗಳಿದ್ದರು, ವೀರರಿದ್ದರು . ಕೃಷ್ಣನಲ್ಲಿ ಎಲ್ಲರಿಗೂ ಗೌರವ. ಕೃಷ್ಣ ತಾನು ಹಸ್ತಿನಾವತಿಗೆ ಬಂದ ಕಾರಣವನ್ನು ಗಂಭೀರವಾಗಿ ವಿವರಿಸಿದ: “ಪಾಂಡವರು ಸತ್ಯವಂತರು, ಆಡಿದ ಮಾತಿಗೆ ತಪ್ಪದೆ ಹನ್ನೆರಡು ವರ್ಷಗಳನ್ನು ಕಾಡಿನಲ್ಲಿ ಕಳೆದಿದ್ದಾರೆ, ಒಂದು ವರ್ಷವನ್ನು ಯಾರಿಗೂ ತಿಳಿಯದಂತೆ ಅಜ್ಞಾತವಾಸಿಗಳಾಗಿ ಕಳೆದಿದ್ದಾರೆ. ಈಗ ದುರ್ಯೋಧನ ಅವರ ರಾಜ್ಯವನ್ನು ಅವರಿಗೆ ಕೊಟ್ಟು ಅವರೊಡನೆ ಸ್ನೇಹದಿಂದ ಇರಬೇಕು” ಎಂದ. ಪರಶುರಾಮ, ಕಣ್ವ, ನಾರದ ಮುಂತಾದ ಋಷಿಗಳು ದುರ್ಯೋಧನನಿಗೆ ಬುದ್ಧಿ ಹೇಳಿದರು. ದುರ್ಯೋಧನನ ತಂದೆ ಧೃತರಾಷ್ಟ್ರನೆ ಮಗನಿಗೆ ಹೇಳಿದ, “ಕೃಷ್ಣನ ಮಾತನ್ನು ಕೇಳು, ಯುದ್ಧ ಮಾಡುತ್ತೇನೆ ಎಂದು ಹಠ ಮಾಡಿ ಕೆಡಬೇಡ.” ದುರ್ಯೋಧನನ ತಾತ ಮಹಾಜ್ಞಾನಿ ಭೀಷ್ಮ, ಗುರು ದ್ರೋಣ ಎಲ್ಲರೂ ದುರ್ಯೋಧನನಿಗೆ “ಮಹಾತ್ಮನಾದ ಕೃಷ್ಣನ ಮಾತನ್ನು ಕೇಳು. ವೃಥಾ ಜನರನ್ನು ಯುದ್ಧದಲ್ಲಿ ಕೊಲ್ಲಿಸಬೇಡ” ಎಂದರು.
ದುರ್ಯೋಧನನಿಗೆ ಕೋಪ ಬಂದಿತು. “ನೀವೆಲ್ಲ ಏನೇ ಹೇಳಿ, ನಾನು ಪಾಂಡವರಿಗೆ ರಾಜ್ಯವನ್ನು ಕೊಡುವುದಿಲ್ಲ. ಯುದ್ಧ ಎಂದರೆ ನನಗೆ ಹೆದರಿಕೆಯೆ? ನಾನು ಜೀವದಿಂದಿರುವವರೆಗೆ ಪಾಂಡವರಿಗೆ ಒಂದು ಸೂಜಿ ಮೊನೆಯಷ್ಟು ನೆಲವನ್ನೂ ಬಿಟ್ಟುಕೊಡುವುದಿಲ್ಲ” ಎಂದ.
ದುರ್ಯೋಧನ, ದುಶ್ಯಾಸನ, ದುಶ್ಯಾಸನ ಮೊದಲಾದವರಿಗೆ ಒಂದು ಕೆಟ್ಟ ಯೋಚನೆ ಹೊಳೆಯಿತು: ‘ಪಾಂಡವರ ಶಕ್ತಿಗೆ ಕೃಷ್ಣೇ ಆಧಾರ. ಅವನಿಲ್ಲದೆ ಅವರು ಏನನ್ನೂ ಮಾಡಲಾರರು. ಅವನನ್ನೆ ಹಿಡಿದು ಸೆರೆಯಲ್ಲಿಟ್ಟರೆ ಪಾಂಡವರು ಹಲ್ಲು ಕಿತ್ತ ಹಾವಿನ ಹಾಗೆ ಆಗುತ್ತಾರೆ.’
ಕೃಷ್ಣನಿಗೆ ಈ ಸಂಗತಿ ತಿಳಿಯಿತು.
‘ದುರ್ಯೋಧನ ಪಾಂಡವರ ರಾಜ್ಯವನ್ನು ಹಿಂದಕ್ಕೆ ಕೊಡಬೇಕು.’
ಕೌರವರು ಕೃಷ್ಣನನ್ನು ಕಟ್ಟಿ ಹಾಕಬೇಕೆಂದು ನೋಡುತ್ತಾರೆ-ಇದ್ದಕ್ಕಿದ್ದಂತೆ ಕೃಷ್ಣನ ರೂಪವೇ ಬದಲಾಯಿತು. ಎಲ್ಲ ದೇವತೆಗಳೂ ಅವನಲ್ಲೆ ಕಂಡರು. ಸೂರ್ಯನನ್ನು ಮೀರಿಸಿದ ಪ್ರಭೆ. ಕೃಷ್ಣನ ಈ ವಿಶ್ವರೂಪ ಕಂಡು ಸಭೆ ಬೆರಾಗಾಯಿತು. ಕೃಷ್ಣ ಸಭೆಯನ್ನು ಬಿಟ್ಟು ಹೊರಟ.
ದುರ್ಯೋಧನನ ಬಹು ಆಪ್ತ ಸ್ನೇಹಿತ ಕರ್ಣ. ಆತ ಮಹಾವೀರ. ಬಿಲ್ಗಾರಿಕೆಯಲ್ಲಿ ಅವನು ಹೆಚ್ಚೇ, ಅರ್ಜುನ ಹೆಚ್ಚೇ ಹೇಳುವುದು ಕಷ್ಟ ಎಂಬಂತಹ ಬಿಲ್ಲಾಳು. ಅವನಿಗೆ ತನ್ನ ರಾಜನಲ್ಲಿ ಅಪ್ರತಿಮ ನಿಷ್ಠೆ. ಅವನಿಂದ ಪಾಂಡವರಿಗೆ ಯುದ್ಧದಲ್ಲಿ ಅಪಾಯ ಎಂದು ಕೃಷ್ಣನಿಗೆ ಗೊತ್ತು.
ಕರ್ಣ ನಿಜವಾಗಿ ಪಾಂಡವರ ತಾಯಿ ಕುಂತಿಯ ಮಗ. ಅವಳು ಪಾಂಡುರಾಜನನ್ನು ಮದುವೆಯಾಗುವ ಮೊದಲು ಹುಟ್ಟಿದ ಮಗ. ಕರ್ಣನನ್ನು ಬೆಸ್ತರಾಗಿದ್ದ ಗಂಡ ಹೆಂಡತಿ ಬೆಳೆಸಿದರು. ಅನಂತರ ದುರ್ಯೋಧನ ಅವನನ್ನು ಸ್ನೇಹಿತನೆಂದು ಕಂಡು ಗೌರವ, ವೈಭವಗಳನ್ನು ಕೊಟ್ಟಿದ್ದ.
ಕರ್ಣನನ್ನು ಪಾಂಡವರ ಕಡೆಗೆ ಸೆಳೆದರೆ ದುರ್ಯೋಧನನ ಬಲ ಕುಂದುತ್ತದೆ, ಅವನು ಯುದ್ಧ ಮಾಡುವ ಯೋಚನೆಯನ್ನೆ ಬಿಡಬಹುದು ಎಂದು ಯೋಚಿಸಿದ ಕೃಷ್ಣ.
ಕರ್ಣನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ವಿಶ್ವಾಸವಾಗಿ ಮಾತನಾಡಿದ. “ನೀನು ಕುಂತಿಯ ಮಗ. ನನ್ನೊಡನೆ ಬಂದುಬಿಡು. ಪಾಂಡವರು ನಿನ್ನನ್ನು ಹಿರಿಯಣ್ಣನೆಂದು ಪ್ರೀತಿಯಿಂದ, ಗೌರವದಿಂದ ಕಾಣುತ್ತಾರೆ. ನೀನೇ ರಾಜನಾಗುವೆ” ಎಂದ.
ಕರ್ಣ ಒಪ್ಪಲಿಲ್ಲ. “ದುರ್ಯೋಧನ ನನ್ನಲ್ಲೆ ನಂಬಿಕೆ ಇಟ್ಟಿದ್ದಾನೆ. ನನ್ನನ್ನು ಒಬ್ಬ ಮನುಷ್ಯನಂತೆ ಕಂಡವನು ಅವನೇ. ಎಷ್ಟು ಪ್ರೀತಿಯನ್ನು ನನ್ನ ಮೇಲೆ ಕರೆದಿದ್ದಾನೆ! ನಾನು ಅವನಿಗೆ ದ್ರೋಹ ಮಾಡಲಾರೆ” ಎಂದ.
“ಯುದ್ಧವಾದರೆ ಪಾಂಡವರನ್ನು ಕೊಲ್ಲಬೇಡ, ಎಷ್ಟೇ ಆಗಲಿ ನಿನ್ನ ತಮ್ಮಂದಿರು ಅವರು, ಮರೆಯಬೇಡ” ಎಂದ ಕೃಷ್ಣ.
“ಹೇಗೂ ಯುದ್ಧವಾಗುತ್ತದೆ. ದುರ್ಯೋಧನ, ದುಶ್ಯಾಸನ, ನಾನು ಎಲ್ಲರೂ ಸಾಯುತ್ತೇವೆ. ನನಗೆ ತಿಳಿದಿದೆ. ಹೋಗಿ ಬರುತ್ತೇನೆ, ಅಪ್ಪಣೆ ಕೊಡು” ಎಂದ ಕರ್ಣ.
ಆದರೆ ಕೃಷ್ಣನ ಕೆಲಸ ಆಯಿತು. ಪಾಂಡವರು ತನ್ನ ತಮ್ಮಂದಿರು ಎಂದು ಗೊತ್ತಾದೊಡನೆ ಯುದ್ಧದಲ್ಲಿ ಕರ್ಣನ ಅರ್ಧ ಶೌರ್ಯ ಕಡಿಮೆಯಾಗುತ್ತದೆ ಎಂದು ಅವನಿಗೆ ಗೊತ್ತು. ಕುಂತಿ ಕರ್ಣನನ್ನು ಕಂಡಳು. “ಅರ್ಜುನನನ್ನು ಹೊರತು ಮತ್ತಾರನ್ನೂ ಕೊಲ್ಲುವುದಿಲ್ಲ” ಎಂದು ವಚನ ತೆಗೆದುಕೊಂಡಳು. ಅದೂ ಕೃಷ್ಣನ ಹಂಚಿಕೆಯೇ. ಪಾಂಡವರಲ್ಲಿ ಅರ್ಜುನ ಮಾತ್ರ ಕರ್ಣನನ್ನು ಎದುರಿಸಬಲ್ಲ ಎಂದು ಅವನಿಗೆ ಗೊತ್ತು.
ಮಹಾಭಾರತ ಯುದ್ಧದ ಸಿದ್ಧತೆ ನಡೆಯಿತು. ಅರ್ಜುನ, ದುರ್ಯೋಧನ ಇಬ್ಬರೂ ಕೃಷ್ಣನಲ್ಲಿಗೆ ಬಂದರು. ನೀನು, ಯಾದವರು ನನ್ನ ಪಕ್ಷ ಸೇರಬೇಕು ಎಂದು ಇಬ್ಬರೂ ಕೇಳಿದರು. “ನಾನು ಸ್ವತಃ ಯುದ್ಧ ಮಾಡುವುದಿಲ್ಲ. ನಾನೊಬ್ಬ ಮಾತ್ರ ಒಂದು ಕಡೆ ಸೇರುತ್ತೇನೆ. ಇಡೀ ಯಾದವ ಸೈನ್ಯ ಒಂದು ಕಡೆ ಸೇರುತ್ತದೆ.” ಎಂದ ಕೃಷ್ಣ. ಅರ್ಜುನ ಕೃಷ್ಣ ಮಾತ್ರ ನನಗೆ ಸಾಕು ಎಂದ. ಹೀಗೆ ಯಾದವರೆಲ್ಲ ಕೌರವರ ಕಡೆ ಸೇರಿದರು.
‘ಅರ್ಜುನಾ , ಕರ್ತವ್ಯವನ್ನು ಮರೆಯಬೇಡ’
ಕುರುಕ್ಷೇತ್ರ ಎಂಬ ಸ್ಥಳದಲ್ಲಿ ಎರಡು ಕಡೆಯವರ ಸೈನ್ಯಗಳೂ ಸಿದ್ಧವಾದವು. ಲಕ್ಷಾಂತರ ಮಂದಿ ಸೈನಿಕರು . ಜೊತೆಗೆ ಆನೆಗಳು, ಕುದುರೆಗಳು, ಭೀಷ್ಮ, ದ್ರೋಣ, ಅಶ್ವತ್ಥಾಮ, ಕರ್ಣ ದುಶ್ಯಾಸನ ಇಂತಹ ವೀರರು ದುರ್ಯೋಧನನ ಕಡೆ. ಪಾಂಡವರು ಸಹಾಯಕ್ಕೆ ದ್ರುಪದ, ವಿರಾಟ, ಅಭಿಮನ್ಯು ಇಂತಹ ವೀರರು . ಭಾರತದ ರಣಪರಾಕ್ರಮವೆಲ್ಲ ಕುರುಕ್ಷೇತ್ರದಲ್ಲಿ ರೂಪ ತಾಳಿತ್ತು. ರಕ್ತದ ಹೊಳೆ ಹರಿಯಲು ಸಿದ್ಧತೆಯಾಗಿತ್ತು.
ಅರ್ಜುನನಿಗೆ ಕೃಷ್ಣನೇ ಸಾರಥಿ. ಪಾಂಡವರ ಭಾಗ್ಯದ ಸಾರಥಿಯಲ್ಲವೆ ಅವನು?
ಯುದ್ಧದ ಮೊದಲ ದಿನ ಎರಡೂ ಸೈನ್ಯಗಳ ಮಧ್ಯೆ ಅರ್ಜುನನ ರಥ ಬಂತು. ಅರ್ಜುನ ಶತ್ರುಪಕ್ಷವನ್ನು ನೋಡಿದ. ತನ್ನ ತಾತ, ಗುರು, ಒಡನಾಡಿಗಳು ಇವರನ್ನು ಕಂಡು, ರಾಜ್ಯಕ್ಕಾಗಿ ಇವರನ್ನು ಕೊಲ್ಲುವುದೇ? ಎನ್ನಿಸಿತು. ಕುಸಿದು ಕುಳಿತ. ಬೆವರಿದ. ಅವನ ಬಿಲ್ಲು ‘ಗಾಂಡೀವ’ ಕೈಯಿಂದ ಜಾರಿತು. “ಕೃಷ್ಣಾ ಈ ಯುದ್ಧ ಬೇಡ” ಎಂದ. “ಭೀಷ್ಮರು ನನ್ನ ಅಜ್ಜ. ದ್ರೋಣರು ಗುರುಗಳು. ಅಶ್ವತ್ಥಾಮ ಗೆಳೆಯ. ಇವರೆಲ್ಲರನ್ನೂ ಹೇಗೆ ಕೊಲ್ಲಲಿ? ಏತಕ್ಕಾಗಿ ಕೊಲ್ಲಲಿ?”
ಕೃಷ್ಣ ಹೇಳಿದ: “ಅರ್ಜುನಾ, ನಿನ್ನಂಥ ವೀರನಿಗೆ ಇದು ಸಲ್ಲದು. ಯುದ್ಧ ನಿನ್ನ ಕರ್ತವ್ಯ. ಯಾರು ಧರ್ಮದ ವಿರುದ್ಧಪಕ್ಷ ಸೇರಿದ್ದಾರೋ ಅವರ ನಾಶ ಆಗಲೇಬೇಕು. ಸಜ್ಜನರ ರಕ್ಷಣೆ ಆಗಬೇಕು. ಕರ್ತವ್ಯ ಮಾಡುವಾಗ ಇವರು ತನ್ನವರು ಎಂಬ ಮೋಹ ಸಲ್ಲದು.”
ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯನ್ನು ಕೃಷ್ಣ ಹೇಳಿದ್ದು ಆಗಲೇ.
ಮನುಷ್ಯ ತನ್ನ ಕರ್ತವ್ಯವನ್ನು ಮಾಡಬೇಕು. ಫಲ ಏನೇ ಆಗಲಿ, ಅದರ ಯೋಚನೆ ಬೇಡ. ನನ್ನವರು, ಇತರರು ಈ ಮೋಹವೂ ಬೇಡ. ನಿಜವಾದ ಜ್ಞಾನಿಯಾದವನು ಎಲ್ಲರನ್ನೂ ಸಮಾನರೆಂದೇ ಕಾಣುತ್ತಾನೆ. ಕೋಪ, ಆಸೆ ಇವುಗಳಿಂದ ಬುದ್ಧಿ ಮಂಕಾಗುತ್ತದೆ. ಸುಖ, ದುಃಖ ಎಲ್ಲವನ್ನೂ ಒಂದೇ ರೀತಿಯಾಗಿ ಸ್ವೀಕರಿಸಬೇಕು. ಧರ್ಮವನ್ನು ತಿಳಿದು, ಮನುಷ್ಯ ತನ್ನ ಕರ್ತವ್ಯವನ್ನು ಮಾಡಬೇಕು. ಹುಟ್ಟಿದವರು ಸಾಯಲೇಬೇಕು. ಮನುಷ್ಯನಿಗಿಂತ ಮುಖ್ಯ ಧರ್ಮ. ಹೃದಯ ದೌರ್ಬಲ್ಯವನ್ನು ಬಿಡು ಏಳು, ನಿನ್ನ ಕರ್ತವ್ಯವನ್ನು ಮಾಡು’ ಎಂದು ಉಪದೇಶಿಸಿದ ಗೀತಾಚಾರ್ಯ ಕೃಷ್ಣ.
ಇಂದಿಗೂ ಗೀತೆ ಲೋಕಕ್ಕೆ ತತ್ವದ ಬೆಳಕು ನೀಡುತ್ತಿದೆ. ಜಗತ್ತಿನ ಹಲವು ಭಾಷೆಗಳಿಗೆ ಅದು ಅನುವಾದವಾಗಿದೆ , ಹಲವು ದೇಶಗಳ ಜನ ಅದನ್ನು ಓದುತ್ತಾರೆ, ಅದರಿಂದ ಮನಶ್ಯಾಂತಿಯ ದಾರಿಯನ್ನು ಕಂಡುಕೊಳ್ಳಲು ಯತ್ನಿಸುತ್ತಾರೆ.
ಅರ್ಜುನನ ದೃಷ್ಟಿ ತಿಳಿಯಾಯಿತು. ಮೈಯಲ್ಲಿ ಉತ್ಸಾಹ ಬಂತು. ಗಾಂಡೀವವನ್ನು ಎತ್ತಿಕೊಂಡ.
ಕುರುಕ್ಷೇತ್ರದ ಸೂತ್ರಧಾರ
ಭಾರತ ಯುದ್ಧ ಪ್ರಾರಂಭ ಆಯಿತು. ಹದಿನೆಂಟು ದಿನಗಳು ಭೀಕರ ಯುದ್ಧವಾಯಿತು. ರಾಜರುಗಳ ತಲೆಗಳು ನೆಲಕ್ಕುರುಳಿದವು. ಕೆಲವೆಡೆ ಪಾಂಡವರಿಗೆ ಗೆಲುವಾದರೆ ಕೌರವರ ಸೈನ್ಯಾಧಿಪತಿ ಭೀಷ್ಮರ ಕೋಪದ ಎದುರು ಪಾಂಡವ ಸೈನ್ಯ ಕೆಲವು ಕಡೆ ನಾಶವಾಯಿತು. ಈ ಮಹಾವೀರನನ್ನು ಹೇಗೆ ಕೊಲ್ಲುವುದು? ಕೃಷ್ಣ ಎದುರು ಬಂದರೆ ತಾನು ಯುದ್ಧ ಮಾಡುವುದಿಲ್ಲ ಎಂದು ಭೀಷ್ಮರ ಶಪಥ. ಹತ್ತನೆಯ ದಿನ ಶಿಖಂಡಿಯನ್ನು ಮುಂದಿಟ್ಟುಕೊಂಡು ಅರ್ಜುನ ಕಾದಿದ್ದ. ಭೀಷ್ಮರು ಶಸ್ತ್ರ ಹಿಡಿಯಲಿಲ್ಲ. ಬಾಣಗಳ ಹಾಸಿಗೆಯಲ್ಲಿ ಮಲಗಿದರು.
ಅನಂತರ ಕೌರವರ ಕಡೆ ದ್ರೋಣರೇ ಸೇನಾಪತಿ. ಅವರನ್ನು ಮುಗಿಸಲು ಕೃಷ್ಣ ಉಪಾಯ ಮಾಡಿದ. ದ್ರೋಣರಿಗೆ ಮಗನ ಮೇಲೆ ತುಂಬಾ ಪ್ರೀತಿ. ಧರ್ಮರಾಜನ ಬಾಯಲ್ಲಿ ಅಶ್ವತ್ಥಾಮ ಸತ್ತ ಎಂದು ಹೇಳಿಸಿಬಿಟ್ಟರೆ ಅವರು ಯುದ್ಧ ಮಾಡುವುದಿಲ್ಲ, ಜೀವವನ್ನೇ ಬಿಡುತ್ತಾರೆ ಎಂದು ಕೃಷ್ಣನ ಹಂಚಿಕೆ. ಆದರೆ ಧರ್ಮರಾಜ ಹೇಳಬೇಕಲ್ಲ? ‘ಅಶ್ವತ್ಥಾಮೋ ಹತಃ ಕುಂಜರಃ’ ಎಂದು ಸತ್ಯವನ್ನೇ ಹೇಳಿದ ಅವನು. ಅದರ ಅರ್ಥ ‘ಅಶ್ವತ್ಥಾಮ ಎಂಬ ಆನೆ ಸತ್ತಿತು’ ಎಂದು. ಆದರೆ ಕೊನೆಯ ಪದ ಕುಂಜರ ದ್ರೋಣರಿಗೆ ಕೇಳದ ಹಾಗೆ ಕೃಷ್ಣ ಶಂಖ ಊದಿಬಿಟ್ಟ. ದ್ರೋಣರಿಗೆ ದಿಗ್ಭ್ರಮೆ ಆಯಿತು. ಶಸ್ತ್ರ ಕೆಳಗಿಟ್ಟು ಧ್ಯಾನಸ್ಥರಾದರು. ಪಾಂಡವರ ಕಡೆಯ ಧೃಷ್ಟದ್ಯುಮ್ನ ಅವರ ತಲೆ ಹಾರಿಸಿಬಿಟ್ಟ.
ಇದು ನ್ಯಾಯವೆ, ಭೀಷ್ಮ ದ್ರೋಣರನ್ನು ಹೀಗೆ ಕೊಲ್ಲಬಹುದೆ ಎನ್ನಿಸುತ್ತದೆ, ಅಲ್ಲವೆ? ನಿಜ. ದ್ರೋಣ ಭೀಷ್ಮರು ವೈಯಕ್ತಿಕವಾಗಿ ದುಷ್ಟರಲ್ಲ. ತಮಗಾಗಿ ಅವರು ಯಾವ ಅನ್ಯಾಯವನ್ನೂ ಮಾಡಲಿಲ್ಲ. ಆದರೆ ಅವರು ಅಧರ್ಮಿಯಾದ ದುರ್ಯೋಧನನ ಪಕ್ಷ ವಹಿಸಿದರು. ಹಾಗೆ ನೋಡಿದರೆ ಕರ್ಣನೂ ಒಳ್ಳೆಯವನೇ. ಧರ್ಮದ ಬಗ್ಗೆ, ಕೃಷ್ಣನ ಬಗ್ಗೆ ಅವನಿಗೆ ಗೌರವವೂ ಇತ್ತು. ಕರ್ಣನ ರಥ ಕೆಸರಲ್ಲಿ ಹುಗಿದು ಅವನು ಇಳಿದು ಚಕ್ರವನ್ನು ಎತ್ತುತ್ತಿದ್ದಾಗ ಬಾಣ ಬಿಡುವಂತೆ ಕೃಷ್ಣ ಅರ್ಜುನನಿಗೆ ಹೇಳಿದ. ಕರ್ಣ ‘ಧರ್ಮಯುದ್ಧ ಮಾಡು’ ಎಂದ . ಅರ್ಜುನನಿಗೂ ಪ್ರಶ್ನೆ ಬಂತು, ಕೃಷ್ಣ ಹೇಳಿದ್ದು ನ್ಯಾಯವೆ ಅಂತ. ಕೃಷ್ಣ ಹೇಳಿದ: “ಧರ್ಮ, ಅಧರ್ಮ ಎಂದು ನಿರ್ಧರಿಸುವವರು ಯಾರು? ಸ್ವತಃ ಅಧರ್ಮ ಆಚರಿಸುವವರಲ್ಲ, ಧರ್ಮದ ವಿರೋಧಿಗಳಲ್ಲ. ಧರ್ಮಕ್ಕಾಗಿ ಬದುಕುವವರು, ಹೋರಾಡುವವರು. ಆದ್ದರಿಂದ ಈ ಯುದ್ಧದಲ್ಲಿ ಶತ್ರುವನ್ನು ಕೊಲ್ಲುವುದೊಂದೇ ನ್ಯಾಯ. ಧರ್ಮದ ವಿರೋಧಿಗಳಲ್ಲೂ ಅವರ ಬೆಂಬಲಿಗರನ್ನೂ ಧ್ವಂಸ ಮಾಡಲು ಎಲ್ಲ ತಂತ್ರಗಳನ್ನೂ ಉಪಯೋಗಿಸಬೇಕು. ಇದೇ ಧರ್ಮ” ಇದೇ ಕೃಷ್ಣನ ನೀತಿ. ಅದರಂತೆ ಕರ್ಣನ ಸಂಹಾರ ಆಯಿತು.
ಕೃಷ್ಣನ ಯುದ್ಧನೀತಿಯನ್ನು ಇನ್ನೊಂದು ಘಟನೆ ತೋರಿಸುತ್ತದೆ. ಒಮ್ಮೆ ಅರ್ಜುನ ದೂರದ ರಣರಂಗದಲ್ಲಿದ್ದಾಗ ದ್ರೋಣ ಚಕ್ರವ್ಯೂಹ ರಚಿಸಿದ್ದ. ಅವನ ಮಗ, ಕೃಷ್ಣ ಪ್ರೀತಿಯ ತಂಗಿ ಸುಭದ್ರೆಯ ಮಗ ಅಭಿಮನ್ಯು. ಅವನು ಅದನ್ನು ಪ್ರವೇಶಿಸಿ ವೀರಾವೇಶದಿಂದ ಹೋರಾಡಿದರೂ ಕೊನೆಗೆ ಮರಣಹೊಂದಿದ. ಇದಕ್ಕೆ ಕಾರಣನಾದ ಸೈಂಧವನನ್ನು ಸೂರ್ಯ ಮುಳುಗುವುದರೊಳಗೆ ಕೊಲ್ಲುತ್ತೇನೆ ಎಂದು ಅರ್ಜುನ ಶಪಥ ಮಾಡಿದ. ಆದರೆ ದುರ್ಯೋಧನ ಸೈಂಧವನನ್ನು ಅಡಗಿಸಿಟ್ಟುಬಿಟ್ಟ. ಸಂಜೆ ಆಯಿತು. ಅರ್ಜುನ ತಾನೇ ಪ್ರಾಣ ಬಿಡಲು ನಿಶ್ಚಯಿಸಿದ. ಕೃಷ್ಣ ತನ್ನ ಚಕ್ರವನ್ನು ಸೂರ್ಯನಿಗೆ ಅಡ್ಡ ಹಿಡಿದು ಕತ್ತಲು ಮಾಡಿಬಿಟ್ಟ. ಅರ್ಜುನನ ಸಾವನ್ನು ನೋಡಲು ಸೈಂಧವನೂ ಬಂದಾಗ ಕೃಷ್ಣ ಚಕ್ರ ತೆಗೆದುಬಿಟ್ಟ. ಇನ್ನೂ ಸೂರ್ಯ ಮುಳುಗಿರಲಿಲ್ಲ. ಅರ್ಜುನ ಸೈಂದವನನ್ನು ಮುಗಿಸಿಬಿಟ್ಟ.
ಭಾರತ ಯುದ್ಧದಲ್ಲಿ ತಾನು ಯುದ್ಧ ಮಾಡುವುದಿಲ್ಲ ಎಂದು ಶ್ರೀಕೃಷ್ಣ ಹೇಳಿದ್ದ. ಆದರೆ ಭೀಷ್ಮರ ಯುದ್ಧಾವೇಶ ಹೆಚ್ಚಾದಾಗ ಒಮ್ಮೆ ತಾನೇ ಚಕ್ರ ಹಿಡಿದು ಹೊರಟಿದ್ದ. ತನ್ನ ಮಾತನ್ನು ಉಳಿಸಿಕೊಳ್ಳುವುದಕ್ಕಿಂತ ಧರ್ಮದ ರಕ್ಷಣೆಯೇ ಮಹತ್ವದ್ದು ಎಂಬುದನ್ನು ತಾನೇ ಮಾಡಿ ತೋರಿಸಿದ ಶ್ರೀಕೃಷ್ಣ.
ಭಾರತ ಯುದ್ಧ ಭಯಂಕರವಾಗಿ ಸಾಗಿತು. ಭೀಷ್ಮ, ದ್ರೋಣ, ದುಶ್ಯಾಸನ, ಕರ್ಣ, ಅಭಿಮನ್ಯು ಧೃಷ್ಟದ್ಯುಮ್ನ ಇಂತಹ ವೀರಾಧಿವೀರರೆಲ್ಲ ಸತ್ತರು. ಸಾಮಾನ್ಯ ಯೋಧರಲ್ಲಿ ಪ್ರಾಣ ಕಳೆದುಕೊಂಡವರೆಷ್ಟೋ ಕೈಕಾಲು, ಕಣ್ಣು ಕಳೆದುಕೊಂಡವರೆಷ್ಟೋ! ರಕ್ತದ ಹೊಳೆ ಹರಿಯಿತು.
ಭಾರತ ಯುದ್ಧ ಮುಗಿಯುತ್ತ ಬಂತು. ದುರ್ಯೋಧನ ಒಬ್ಬ ಉಳಿದಿದ್ದ. ಒಂದು ಸರೋವರದೊಳಗೆ ಅಡಿಗಿಬಿಟ್ಟ. ಕೃಷ್ಣ ಇದನ್ನು ಕಂಡು ಹಿಡಿದು ಪಾಂಡವರ ಜೊತೆ ಬಂದ. ಭೀಮ ದುರ್ಯೋಧನನಿಗೆ “ಹೇಡಿ, ಅಡಗಿ ಕುಳಿತಿದ್ದೀಯಾ?” ಎಂದು ಕೇಳಿದಾಗ ಅವನು ಹೊರಗೆ ಬಂದ. ಗದೆಗಳ ಯುದ್ಧ ನಡೆಯಿತು. ದುರ್ಯೋಧನ ಸೋಲಲಿಲ್ಲ. ಅವನ ದೌರ್ಬಲ್ಯ ಕೃಷ್ಣನಿಗೆ ಗೊತ್ತು. ಕೃಷ್ಣ ತೊಡೆ ತಟ್ಟಿ ಸನ್ನೆ ಮಾಡಿದಾಗ ಭೀಮನಿಗೆ ಗೊತ್ತಾಯಿತು. ಕೌರವನ ತೊಡೆಗೆ ಭೀಮನ ಪ್ರಹಾರ ಬಿತ್ತು. ಕೌರವ ಕೆಳಗೆ ಬಿದ್ದ.
ಯುದ್ಧ ಮುಗಿಯಿತು. ಧರ್ಮರಾಜ ಸಿಂಹಾಸನವೇರಿದ. ಅವನ ರಾಜ್ಯ ಪ್ರಾರಂಭ ಆಯಿತು. ದೇಶ ಅಧರ್ಮಿ, ದುಷ್ಟ ಜನರಿಂದ ಮುಕ್ತವಾಗಿತ್ತು.
ಕೃಷ್ಣವತಾರ ಮುಗಿಯಿತು
ಕೃಷ್ಣ ಯಾದವ ಕುಲಕ್ಕೆ ಸೇರಿದವನಲ್ಲವೆ? ಕುಲ ಬಂಧುಗಳಾದ ಯಾದವರಿಗೆ ಜಂಬ ಹೆಚ್ಚಾಯಿತು. ಋಷಿಗಳಿಗೆ ಅಪಮಾನ ಮಾಡಲು ಪ್ರಾರಂಭಿಸಿದರು. ತಾವು ಒಬ್ಬೊಬ್ಬರೇ ಲೋಕೈಕ ವೀರರು ಎಂಬ ಭಾವನೆ ಬೆಳೆಯಿತು.
ಒಮ್ಮೆ ಯಾದವರು ಪ್ರಭಾಸಕ್ಷೇತ್ರ ಎನ್ನುವಲ್ಲಿಗೆ ಹೋದರು. ಅಲ್ಲಿ ಮದ್ಯಪಾನ ಮಾಡಿ ವಿಹಾರದಲ್ಲಿದ್ದಾಗ ಅವರಲ್ಲಿಯೇ ಜಗಳ ಪ್ರಾರಂಭವಾಯಿತು. ಕತ್ತಿಗಳು ಹೊರಕ್ಕೆ ಬಂದವು. ಕೃಷ್ಣ ನೋಡಿದ. ಅವರ ವರ್ತನೆ ಮಿತಿಮೀರಿ ಅವರೇ ಲೋಕಕಂಟಕರಾಗುತ್ತಾರೆ, ಅವರ ನಾಶಕ್ಕೆ ಅವರೇ ಕಾರಣ ಆಗುತ್ತಾರೆ ಎಂದು ಕೃಷ್ಣನಿಗೆ ಅನ್ನಿಸಿತು. ಅವರೆಲ್ಲ ಅವನ ನಂಟರೇ, ಅವನ ಜೊತೆಗೆ ಬೆಳೆದವರೇ. ಆದರೆ ತನ್ನವರು ಎಂಬ ಮೋಹ ಕೃಷ್ಣನಿಗೆ ಇಲ್ಲ. ಲೋಕದಲ್ಲಿ ಶಾಂತಿ, ಧರ್ಮ ಉಳಿಯುವುದು ಮುಖ್ಯ. ಹಾಗಾಗಿ ಯಾದವರ ಕಲಹದಲ್ಲಿ ಅವರೆಲ್ಲ ಅಂತ್ಯವಾಗಬೇಕು ಎಂದು ಕೃಷ್ಣ ಯೋಚಿಸಿದ. ಅವರನ್ನು ಉಳಿಸಲು ಪ್ರಯತ್ನಿಸಲಿಲ್ಲ. ಅವರು ಹೊಡೆದಾಡಿ ಸತ್ತರು.
ಶ್ರೀಕೃಷ್ಣ ಜೀವನಕಾರ್ಯ ಮುಗಿದಿತ್ತು. ಲೋಕದಲ್ಲಿದ್ದ ದುಷ್ಟರ ನಾಶವಾಗಿತ್ತು. ಶಿಷ್ಟರ ರಕ್ಷೆಯೂ ಆಗಿತ್ತು.
ಕೃಷ್ಣ ಲೋಕವನ್ನು ಬಿಡಲು ನಿಶ್ಚಯಿಸಿದ. ಪಾಂಡವರನ್ನು ಕರೆತರಲು ದೂತರನ್ನು ಕಳುಹಿಸಿದ. ಒಬ್ಬನೇ ಒಂದು ಮರದ ಕೆಳಗೆ ಕುಳಿತು ಧ್ಯಾನದಲ್ಲಿ ಮೈ ಮರೆತ.
ಬೇಡನೊಬ್ಬ ಅತ್ತ ಬಂದ. ದೂರದಿಂದ ಮರದ ಕೆಳಗೆ ಕೃಷ್ಣ ಅಂಗಾಲನ್ನು ನೋಡಿದ. ಜಿಂಕೆ ಎಂದು ಕೊಂಡ, ಬಾಣ ಬಿಟ್ಟ.
ಬಾಣ ಕೃಷ್ಣನ ಕಾಲನ್ನು ನೆಟ್ಟಿತು. ಓಡಿ ಬಂದ ಬೇಡ ನೋಡಿದ. ಕಂಗಾಲಾದ ಅವನನ್ನು ಕೃಷ್ಣ ಸಮಾಧಾನ ಮಾಡಿದ. ತಾನು ಈ ಲೋಕವನ್ನು ತ್ಯಜಿಸಿದ.
ಕೃಪೆ : ಕಣಜ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.