ಚಾಪ್ರಾ: ಹೆಲಿಕಾಫ್ಟರ್ ವಿನ್ಯಾಸಪಡಿಸುವ ಮತ್ತು ಹಾರಿಸುವ ಕನಸನ್ನು ಪೂರೈಸಿಕೊಳ್ಳಲಾಗದ ಬಿಹಾರದ 24 ವರ್ಷದ ಯುವಕನೊಬ್ಬ ತನ್ನ ಕಾರನ್ನೇ ಹೆಲಿಕಾಫ್ಟರ್ ಮಾದರಿಗೆ ರೂಪಾಂತರಗೊಳಿಸಿದ್ದಾನೆ. ಈತನ ಹೆಲಿಕಾಫ್ಟರ್ ಮಾದರಿಯ ಕಾರು ಈಗ ಚಾಪ್ರಾದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಬನಿಯಾಪುರದ ಸಿಮಾರಿ ಗ್ರಾಮದವರಾದ ಮಿಥಿಲೇಶ್ ಪ್ರಸಾದ್ ತನ್ನ ಕಾರನ್ನು ಹೆಲಿಕಾಫ್ಟರ್ ಮಾದರಿಯಲ್ಲಿ ವಿನ್ಯಾಸಪಡಿಸಿದವರಾಗಿದ್ದಾರೆ. ವೃತ್ತಿಯಲ್ಲಿ ಇವರು ಪೈಪ್ ಫಿಟ್ಟರ್ ಆಗಿದ್ದು, ಹೆಲಿಕಾಪ್ಟರ್ನ ಮೂಲ ವಿನ್ಯಾಸದ ವೈಶಿಷ್ಟ್ಯಗಳನ್ನು ತಮ್ಮ ಟಾಟಾ ನ್ಯಾನೋ ಕಾರಿಗೆ ಸೇರ್ಪಡೆಗೊಳಿಸುವ ಮೂಲಕ ಅದನ್ನು ಮಾರ್ಪಡಿಸಿದ್ದಾರೆ.
ಈ ಕಾರಿಗೆ ಹಾರಲು ಸಾಧ್ಯವಾಗದಿದ್ದರೂ, ಇದು ಸಾಂಪ್ರದಾಯಿಕ ಹೆಲಿಕಾಪ್ಟರ್ ತರಹದ ಮುಖ್ಯ ರೋಟರ್, ಟೈಲ್ ಬೂಮ್ ಮತ್ತು ಟೈಲ್ ರೋಟರ್ನ ವಿನ್ಯಾಸ ವೈಶಿಷ್ಟ್ಯಗಳನ್ನು ಹೊಂದಿದೆ. ರೋಟರ್ಗಳು ಮತ್ತು ಸೈಡ್ ಪ್ಯಾನೆಲ್ಗಳನ್ನು ವರ್ಣರಂಜಿತ ಎಲ್ಇಡಿ ದೀಪಗಳಿಂದ ಅಲಂಕೃತಗೊಳಿಸಲಾಗಿದೆ.
ಕಾರನ್ನು ಹೆಲಿಕಾಫ್ಟರ್ ಮಾದರಿಯಲ್ಲಿ ವಿನ್ಯಾಸಗೊಳಿಸಲು ಮಿಥಿಲೇಶ್ ಮತ್ತು ಅವರ ಸಹೋದರನಿಗೆ ಸುಮಾರು ಏಳು ತಿಂಗಳುಗಳೇ ಬೇಕಾದವು. ಮಾತ್ರವಲ್ಲ, ಹೆಚ್ಚುವರಿಯಾಗಿ ಕಾರಿನ ಮೇಲೆ ಏಳು ಲಕ್ಷ ರೂಪಾಯಿಗಳನ್ನು ವ್ಯಯ ಮಾಡಿದ್ದಾರೆ.
12 ನೇ ತರಗತಿ ಪಾಸ್ ಔಟ್ ಆಗಿರುವ ಮಿಥಿಲೇಶ್ ಅವರು ಸದಾ ಹೆಲಿಕಾಪ್ಟರ್ಗಳನ್ನು ವಿನ್ಯಾಸಪಡಿಸುವ, ಹಾರಿಸುವ ಕನಸನ್ನು ಕಂಡವರಾಗಿದ್ದಾರೆ. ಈಗ ಅವರು ತಮ್ಮ ಹೆಲಿಕಾಪ್ಟರ್ ಮಾದರಿಯ ಕಾರನ್ನು ರಸ್ತೆಯಲ್ಲಿ ಓಡಿಸುವಲ್ಲಿ ಖುಷಿಯನ್ನು ಕಾಣುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.