RSS ಬಾಗಲಕೋಟೆ ವತಿಯಿಂದ ಜಿಲ್ಲೆಯಾದ್ಯಂತ ಹಾಗೂ ಪ್ರವಾಹ ಪೀಡಿತ ಎಲ್ಲ ಪ್ರದೇಶಗಳಲ್ಲಿ ಸಂಘದ ಕಡೆಯಿಂದ ಸಾಕಷ್ಟು ಸೇವಾ ಕಾರ್ಯ ನಡೆಯುತ್ತಿದೆ. ಸಾಕಷ್ಟು ಮನೆಗಳನ್ನು ಸ್ಥಳಾಂತರಿಸಿ, ತಕ್ಷಣಕ್ಕೆ ಜನರಿಗೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಸಂಘ ಮಾಡುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಜನರಷ್ಟೇ ಅಲ್ಲ, ವನ್ಯ ಜೀವಿಗಳು, ಪ್ರಾಣಿ ಪಕ್ಷಿಗಳ ರಕ್ಷಣೆ ಮಾಡಬೇಕಾದುದು ಮಾನವೀಯತೆಯ ಪ್ರತೀಕವೆ. ಈ ಮಾನವೀಯತೆಯ ಗುಣವನ್ನು ಪ್ರತಿಯೊಬ್ಬರಲ್ಲಿ ಜಾಗೃತ ಮಾಡ್ತಿರೋದು ಸಂಘವೆ ಅನ್ನೋದು ಪ್ರತಿಯೊಬ್ಬ ಸ್ವಯಂಸೇವಕನ ಹೆಮ್ಮೆ. ಅಂತಹ ಮಾನವೀತೆಯ ಧನ್ಯತಾ ಭಾವ ಮೂಡಿದ್ದು ಇವತ್ತಿನ ಸತ್ಯ ನಿದರ್ಶನ.
ಕಳೆದ ಐದಾರೂ ದಿನಗಳಿಂದ ಐಹೋಳೆ ಸೇತುವೆ ಪೂರ್ಣ ಭರ್ತಿಯಾಗಿ ಜನಸಂಚಾರ ಸ್ಥಗಿತವಾಗಿತ್ತು. ನಿನ್ನೆ ಐಹೊಳೆ ಮಾರ್ಗವಾಗಿ ಬೇರೆ ಊರಿಗೆ ಸೇವಾಕಾರ್ಯಕ್ಕೆ ತೆರಳುವಾಗ ನಾವು ಸಂಘದ ಸಮವಸ್ತ್ರ ಹಾಕಿದವರನ್ನು ನೋಡಿ ಅಲ್ಲಿನ ಜನ ತುಂಬಾ ಬೇಡಿಕೊಂಡರು. ಏನೆಂದರೆ ಆ ಐಹೊಳೆ ಸೇತುವೆಗೆ ಬರುವ ನೀರಿನ ಪ್ರವಾಹದ ಮದ್ಯದಲ್ಲಿ ಮುಳ್ಳಿನ ಗಿಡ ಹಾಗೂ ಬೇವಿನ ಮರದಲ್ಲಿ ಸುಮಾರು ಹತ್ತರಿಂದ ಹನ್ನೆರಡು ಮಂಗ (ಕೋತಿ)ಗಳು ಸಿಲುಕಿಕೊಂಡಿವೆ. ಐದಾರು ದಿನಗಳಿಂದ ಅವುಗಳಿಗೆ ಊಟಕ್ಕೆ, ಕುಡಿಯೋದಕ್ಕೆ ಏನು ಇಲ್ಲ ಹೀಗೆ ಮುಂದುವರೆದರೆ ಖಂಡಿತವಾಗಿ ಅವು ಸಾಯುತ್ತವೆ. ದಯಮಾಡಿ ಅವುಗಳಿಗೆ ತಿನ್ನೋಕೆ ಏನಾದ್ರೂ ವ್ಯವಸ್ಥೆ ಮಾಡಿಸಿ ಅಂತ ಐಹೊಳೆಯ ಹಿರಿಯರು ಬೇಡಿಕೊಂಡರು. ನೀವು ಸಂಘದವರು ನೀವು ಆ ಪ್ರಾಣಿಗಳಿಗೆ ಊಟ ತಲುಪಿಸುತ್ತಿರಾ ಎನ್ನುವ ಭರವಸೆ ನಮಗೆ ಇದೆ ಎಂದು ಹೇಳಿದಾಗ, ಏನೇ ಆಗಲಿ ಎಷ್ಟೇ ಕಷ್ಟ ಆಗಲಿ ಅಂತ ರಾತ್ರಿನೇ ಅವುಗಳಿಗೆ ಊಟಕ್ಕಾದ್ರೂ ವ್ಯವಸ್ಥೆ ಮಾಡಿಯೇ ಬಿಡೋಣ ಎನ್ನುವ ಚಲ ನಿಶ್ಚಯವಾಯಿತು.
ಅದರಂತೆ ಬೆಳಿಗ್ಗೆ ಸಾಂಘಿಕ್ ಮುಗಿದ ತಕ್ಷಣ ಆ ಮಂಗಗಳಿಗೆ ಆಹಾರ ತಲುಪಿಸಲು ಬೇಕಾಗುವ ಅವಶ್ಯಕ ಸಾಮಗ್ರಿಗಳಾದ ತೆಪ್ಪ(ದೋಣಿ), ಸೇಪ್ಟಿ ಜಾಕೇಟ್ಗಳಿಗಾಗಿ ಸರ್ಕಾರಿ ಕಛೇರಿಗಳಿಗೆ ಸಂಪರ್ಕಿಸಿದರೂ ದೊರೆಯಲಿಲ್ಲ. ಮೀನಾಗಾರರ ಹತ್ತಿರ ಕೇಳಿದರಾಯ್ತು ಅಂತ ಹೋದಾಗ ಅಲ್ಲಿನ ಪರಿಸ್ಥಿತಿ ತಿಳಿಸಿದಾಗ ಅವರೇ ತೆಪ್ಪಗಳನ್ನು ಕೊಡ್ತಿವಿ ಅಂದ್ರೂ ಆದ್ರೆ ಸ್ವಲ್ಪ ಹೊತ್ತಿನ ನಂತರ ತೆಪ್ಪಗಳನ್ನು ತರಲು ಹೋದಾಗ ಕೊಡೋಲ್ಲ ಅಂತ ಖಡಾ ಖಂಡಿತವಾಗಿ ನಮ್ಮ ಮನವಿಯನ್ನು ತಿರಸ್ಕರಿಸಿದರು. ತುಂಬಾ ಜನ ಮೀನುಗಾರರನ್ನು ಸಂಪರ್ಕಿಸಿದಾಗ ಇಬ್ಬರೂ ಎರಡು ತೆಪ್ಪಗಳನ್ನು ಕೊಟ್ಟರು, ಸೇಪ್ಟಿ ಜಾಕೇಟ್ ಸಲುವಾಗಿ ತುಂಬಾ ಜನರಿಗೆ ಸಂಪರ್ಕಿಸಿದ ಪರಿಣಾಮವಾಗಿ ನಮಗೆ ಅವು ದೊರೆತವು. ಜೊತೆಗೆ ಆ ಮಂಗಗಳಿಗೆ ಎರಡ್ಮೂರು ದಿನಕ್ಕಾಗುವಷ್ಟು ಬಾಳೆಹಣ್ಣು, ಬ್ರೇಡ್, ಬೆಲ್ಲ ಎಲ್ಲವನ್ನು ತೆಗೆದುಕೊಂಡು ಅಶೋಕ ಲೇಲ್ಯಾಂಡ್ ವಾಹನ ತೆಗೆದುಕೊಂಡು ಹೊರಟೆವು. ನಿನ್ನೆಗಿಂತ ಇವತ್ತು ಉತ್ಸಾಹ ಹೆಚ್ಚಾಗಿತ್ತು. ಇವತ್ತು ಕೆಲವರು ಹೊಸದಾಗಿ ನಮ್ಮ ಜೊತೆಗೆ ಸೇರಿಕೊಂಡಿದ್ದರು.
ಐಹೊಳೆ ತಲುಪಿದಾಗ ಅರಣ್ಯ ಇಲಾಖೆಯವರು, ಪೋಲೀಸರು, ಊರಿನ ಹಿರಿಯರು ನಮ್ಮನ್ನು ಕಂಡು ಎಲ್ಲರ ಅಪೇಕ್ಷೆಯಾದ ಮಂಗಗಳಿಗೆ ಆಹಾರ ದೊರಕಿಸೋದು ಪಕ್ಕ ಅಂತ ಮನದಟ್ಟಾಯಿತು.
ಎರಡು ತೆಪ್ಪಗಳನ್ನು ನೀರಲ್ಲಿ ಬಿಟ್ಟು ಬಾಳೆಹಣ್ಣು, ಬನ್ಗಳನ್ನು ಅವುಗಳಿಗೆ ನೀಡಲು ಹೋದಾಗ ಎಲ್ಲ ಜನರಲ್ಲಿ ಮಂದಹಾಸ ನೋಡಿ ಧನ್ಯತಾಭಾವ ಕಾಣ್ತಿತ್ತು. ಜೊತೆಗೆ ಆ ನೀರಿನ ಆಳದ ಬಗ್ಗೆ ಮಾಹಿತಿನೇ ಇರಲಿಲ್ಲ ಸ್ವಲ್ಪ ಭಯವು ಇತ್ತು ಆದರೂ ಧೈರ್ಯ ಮಾಡಿ ಈ ಕಾರ್ಯ ಪೂರ್ಣ ಮಾಡಲೇಬೆಕಾಗಿತ್ತು.
ನೀರಲ್ಲಿ ತೆಪ್ಪವನ್ನು ಹತ್ತಿದವರ್ಯಾರು ಸ್ವಿಮ್ಮಿಂಗ್ ಸ್ಪೆಷಲಿಸ್ಟ್ ಅಲ್ಲ, ಮೀನಗಾರರು ಅಲ್ಲ ಸುಮ್ಮನೆ ಹವ್ಯಾಸಕ್ಕೋಸ್ಕರ ಈಜಾಡೋದನ್ನ ಕಲಿತವರು. ಕೆಲವರಂತು ಈಜಲು ಬರದಿದ್ದರೂ ತೆಪ್ಪ ಹತ್ತಿದ್ದವರ ಧೈರ್ಯ ಮೆಚ್ಚಲೇಬೇಕು.
ನೀರಲ್ಲಿ ನಾವು ಅನ್ಕೊಂಡಷ್ಟು ದಾರಿ ಸುಲಭವಾಗಿರಲಿಲ್ಲ, ಹತ್ತು ಹೆಜ್ಜೆ ದಾಟಬೇಕೆಂದರೆ ಮುಳ್ಳಿನ ಬರೆಯನ್ನು ಮೈಮೇಲೆ ಎಳೆದುಕೊಂಡೆ ನಮ್ಮ ಸೇವಾ ಕಾರ್ಯ ಮುಂದುವರೆಸಿದೆವು. ಒಂದು ಸಲ ಒಯ್ದಿದ್ದ ಆಹಾರಗಳನ್ನು ಒಂದು ಬೇವಿನ ಮರದ ಮೇಲಿಟ್ಟು ಹತ್ತೇ ನಿಮಿಷದಲ್ಲಿ ಖಾಲಿ ಮಾಡಿದವು ಅಂದರೆ ಆ ಮಂಗಗಳು ಅಷ್ಟು ಹಸಿವಿನಿಂದ ಬಳಲುತ್ತಿದ್ದವು. ಎಷ್ಟೇ ಕಷ್ಟ ಆದರೂ ಅವುಗಳಿಗೆ ಎಲ್ಲ ಆಹಾರ ಕೊಟ್ಟೆ ಹೋಗಬೇಕಂತ ಮತ್ತೆರಡು ಸಾರಿ ಆ ಗಾಳಿಯ ವಿರುದ್ದವಾಗಿ ಹುಟ್ಟು ಹಾಕಿ ದೋಣಿ(ತೆಪ್ಪ) ನಡೆಸಿದೆವು. ಕೊನೆಗೆ ಅವುಗಳಿಗೆ ಎರಡ್ಮೂರು ದಿನಕ್ಕಾಗುವಷ್ಟು ಆಹಾರವನ್ನು ಅಲ್ಲೆ ಇಟ್ಟು ವ್ಯವಸ್ಥೆ ಮಾಡಲು ಬೇವಿನ ಮರದ ಮೇಲೆ ಒಂದು ಟ್ರೇಯನ್ನು ಭದ್ರವಾಗಿ ಬಿಗಿದು ಅದರ ತುಂಬ ಬಾಳೆಹಣ್ಣು, ಬನ್, ಬೆಲ್ಲವನ್ನು ಇಟ್ಟು ವಾಪಸ್ ಆಗುವುದರೊಳಗೆ ನಮ್ಮ ಹೊಟ್ಟೆ ಚುರ್ ಅನ್ನುತ್ತಿತ್ತು.
ಆ ಮಂಗಗಳಿಗೆ ಆಹಾರದ ವ್ಯವಸ್ಥೆ ಮಾಡಿದ್ದಕ್ಕಾಗಿ ಎಷ್ಟು ಪ್ರಶಂಸೆ ವ್ಯಕ್ತವಾಗುತ್ತಿತ್ತೆಂದರೆ ಅದನ್ನು ಅಕ್ಷರ ರೂಪದಲ್ಲಿ ಹೇಳತೀರದು. ಇವತ್ತಿನ ಸೇವಾಕಾರ್ಯ ಎಷ್ಟು ಮೈ ಕೈ ನೋವು ಮಾಡಿದೆಯೋ ಅದಕ್ಕಿಂತ ನೂರು ಪಟ್ಟು ಹೆಚ್ಚು ಖುಷಿಯನ್ನು ಕೊಟ್ಟಿದೆ. ಸಾಮಾನ್ಯರಾಗಿದ್ದ ನಮಗೆ ಇಷ್ಟು ಅಸಾಮಾನ್ಯ ಸಾಹಸವನ್ನು ಕಲಿಸಿಕೊಟ್ಟಿದ್ದು ನಮ್ಮ ಸಂಘ ಎನ್ನೋದು ನಮ್ಮೆಲ್ಲರ ಹೆಮ್ಮೆ. ಸ್ವತಃ ಅರಣ್ಯ ಇಲಾಖೆಯವರೇ ಕೈ ಚೆಲ್ಲಿ ಕುಳಿತಾಗ ನಾವು ಮಾಡಿದ ಸಾಹಸಮಯ ಕಾರ್ಯಕ್ಕೆ ಊರಿನ ಜನ, ಆ ಮಾರ್ಗದಲ್ಲಿ ಸಂಚರಿಸಿ ಸೇವಾ ಕಾರ್ಯಕ್ಕೆ ತೆರಳಿದವರಿಂದ ತುಂಬಾ ಪ್ರಶಂಸೆ ವ್ಯಕ್ತವಾಗಿತ್ತು.
ಸಂಘ ಸಾಹಸವನ್ನು ಕಲಿಸಿದೆ, ಸಂಘ ಸಾಹಸದ ಆಟಗಳನ್ನು ಅಷ್ಟೇ ಕಲಿಸಿಲ್ಲ ಸಾಹಸದ ಸೇವಾಕಾರ್ಯವನ್ನು ಕಲಿಸಿದೆ, ಸ್ವಯಂಸೇವಕರ ಸಾಹಸ ಎಲ್ಲರಿಗೂ ಮಾದರಿ, ಭಯದ ಜೊತೆ ಆಟವಾಡೋದನ್ನು ಸಂಘ ಕಲಿಸಿದೆ ಈ ಎಲ್ಲ ಶ್ರೇಯಸ್ಸು ನಮಗೆ ದಕ್ಕಿದರು ಅದೆಲ್ಲ ನಮಗೆ ಬಂದಿರೋದು ಮಾತ್ರ ಸಂಘದಿಂದ.
✍ ಆರ್ಎಸ್ಎಸ್ ಸ್ವಯಂಸೇವಕ, ಬಾಗಲಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.