ಪುತ್ತೂರು : ಹಲವು ವರ್ಷಗಳಿಂದ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬಂದಿಗಳಿರ್ವರನ್ನು ಸಮಿತಿಯ ಗಮನಕ್ಕೆ ತಾರದೇ ಏಕಾಏಕಿಯಾಗಿ ವಜಾ ಮಾಡಿರುವುದನ್ನು ಆರೋಪಿಸಿ ಸದಸ್ಯರು ಕಾರ್ಯದರ್ಶಿಯವರನ್ನು ತರಾಟೆಗೆತ್ತಿಕೊಂಡಿರುವುದಲ್ಲದೆ ಅವರೀರ್ವರನ್ನು ಮರು ಸೇರ್ಪಡೆಗೊಳಿಸುವಂತೆ ಸಮಿತಿ ಸದಸ್ಯರೆಲ್ಲರ ಒಕ್ಕೊರಳಿಂದ ಆಗ್ರಹಿಸಿರುವ ಘಟನೆ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಸಭೆಯು ಅಧ್ಯಕ್ಷ ಕೃಷ್ಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಾ.31ರಂದು ನಡೆಯಿತು. ಸದಸ್ಯ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ಎಪಿಎಂಸಿಯಲ್ಲಿ ಕಳೆದ ಹಲವು ವರ್ಷಗಳಿಂದ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ವಾಸು ನಾಯ್ಕ ಹಾಗೂ ಆನಂದರವರನ್ನು ಹುದ್ದೆಯಿಂದ ವಜಾ ಮಾಡಿರುವುದು ಗಮನಕ್ಕೆ ಬಂದಿದೆ. ಆದರೆ ಈ ಬಗ್ಗೆ ಸಮಿತಿಗೆ ಯಾವುದೇ ಮಾಹಿತಿ ನೀಡಿಲ್ಲ. ಸಮಿತಿಯ ಗಮನಕ್ಕೆ ತಾರದೆ ಕಾನೂನು ಬಾಹಿರವಾಗಿ ವಜಾ ಮಾಡಿರುವ ಅಧಿಕಾರಿಗಳ ವರ್ತನೆ ಸರಿಯಲ್ಲ.
ಸಿಬಂದಿಗಳನ್ನು ನೇಮಕ ಮಾಡುವಾಗ ಸಮಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಅವರನ್ನು ಕೆಲಸದಿಂದ ವಜಾಗೊಳಿಸುವಾಗ ಸಮಿತಿಯ ಗಮನಕ್ಕ ಯಾಕೆ ತಂದಿಲ್ಲ. ಏಕಾಏಕಿಯಾಗಿ ಅವರನ್ನು ವಜಾ ಮಾಡಿರುವ ಕಾರಣಗಳೇನು? ಅವರ ವಿರುದ್ದವಿರುವ ಆರೋಪಗಳೇನು ಎಂದು ಪ್ರಶ್ನಿಸಿದರು. ಇದಕ್ಕೆ ದ್ವನಿ ಗೂಡಿಸಿದ ಸದಸ್ಯರಾದ ಪ್ರಮೋದ್ ಕೆ.ಎಸ್ ಹಾಗೂ ಮಹೇಶ್ ರೈಯವರು ಅಧಿಕಾರಿಯವರು ಬೇಜಾವ್ದಾರಿಯುತವಾಗಿ ವರ್ತಿಸುತ್ತಾರೆ. ಯಾವೋಬ್ಬ ಸಾರ್ವಜನಿಕರು ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಿದ ಕಾರಣಕ್ಕೆ ಅವರನ್ನು ಕೆಲಸದಿಂದ ವಜಾ ಮಾಡಿರುವುದು ಅಪರಾಧ. ಅವರ ವಿರುದ್ದ ಆರೋಪಗಳಿದ್ದರೆ ವಿಚಾರಣೆ ನಡೆಸಿ ಮಚ್ಚಳಿಕೆ ಬರೆದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಸಮಿತಿಯ ಗಮನಕ್ಕೆ ತಾರದೆ ಸ್ವಹಿತದಿಂದ ವಜಾಗೊಳಿಸಿರುವುದು ಸರಿಯಲ್ಲ. ಅವರನ್ನು ಮರು ಸೇರ್ಪಡೆಗೊಳಿಸಬೇಕು ಎಂದು ಅವರು ಒತ್ತಾಯಿಸಿದ ಅವರು ಸಿಬಂದಿಗಳನ್ನು ವಜಾಗೊಳಿಸಲು ಕಾರಣಕರ್ತರಾದ ಅಧಿಕಾರಿಗಳ ವಿರುದ್ದ ಲೋಕಾಯುಕ್ತರಿಗೆ ದೂರು ನೀಡಬೇಕು. ಅವರು ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ದವು ತನಿಖೆಯಾಗಲಿ. ಅವರು ನಡೆಸಿರುವ ಹಲವು ಅಕ್ರಮಗಳನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾರ ಕಾರ್ಯದರ್ಶಿ ರಾಮಚಂದ್ರ ರೆಡ್ಡಿಯವರು ಚಾಲಕರ ಕಾರ್ಯಕ್ಷಮತೆಯ ಬಗ್ಗೆ ಈ ಹಿಂದಿನ ಪ್ರಭಾರ ಕಾರ್ಯದರ್ಶಿಯವರು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ ವರದಿ ಮಾಡಿದ್ದರು. ಅದರಂತೆ ಸಿಬಂದಿಗಳನ್ನು ಕೆಲಸದಿಂದ ವಜಾ ಮಾಡುವಂತೆ ನಿರ್ದೇಶಕರು ಆದೇಶ ನೀಡಿರುತ್ತಾರೆ. ಅದರಂತೆ ನಾನು ಕ್ರಮ ಕೈಗೊಂಡಿದ್ದೇನೆ ಎಂದು ತಿಳಿಸಿದರು. ಇದಕ್ಕೆ ಆಕ್ರೋಷಗೊಂಡ ಸಾಜ ರಾಧಾಕೃಷ್ಣ ಆಳ್ವ, ಪ್ರಮೋದ್ ಕೆ.ಎಸ್ ಹಾಗೂ ಮಹೇಶ್ ರೈಯವರು ನಿರ್ದೇಶಕರು ಹೇಳಿದಂತೆ ಕ್ರಮಕೈಗೊಳ್ಳುವುದಾರೆ ಸಮಿತಿ ಇರುವ ಉದ್ದೇಶವೇನು? ಸಮಿತಿಯ ಬೈಲಾಗಳಿಗೆ ಬೆಲೆಯಿಲ್ಲವೇ? ಅವರ ಆದೇಶವನ್ನು ಸಮಿತಿಯ ಗಮನಕ್ಕೆ ಯಾಕೆ ತಂದಿಲ್ಲ? ಆ ರೀತಿ ಕ್ರಮ ಕೈಗೊಳ್ಳುವುದಾದರೆ ಸದಸ್ಯರು ಇರುವುದು ಯಾಕೆ? ತಿಂಗಳಿಗೊಮ್ಮೆ ಸಭೆ ನಡೆಸುವ ಉದ್ದೇಶ ಏನು? ಜನಪ್ರತಿನಿಧಿಗಳಾಗಿ ನಮ್ಮ ಗಮನಕ್ಕೆ ಯಾಕೆ ತಾರದೆ ನೀವು ಏಕಾಏಕಿಯಾಗಿ ಕ್ರಮಕೈಗೊಂಡಿರುವುದು ಸರಿಯಲ್ಲ ಎಂದು ಆರೋಪಿಸಿ ಕಾರ್ಯದರ್ಶಿ ರಾಮಚಂದ್ರ ರೆಡ್ಡಿಯವರನ್ನು ತರಾಟೆಗೆತ್ತಿಕೊಂಡರು. ನಿರ್ದೇಶಕರ ಆದೇಶವನ್ನು ಸಮಿತಿಯ ಗಮನಕ್ಕೆ ತಂದು ಅವರನ್ನು ವಿಚಾರಿಸಬೇಕಿತ್ತು. ಅವರ ಕರ್ತವ್ಯದಲ್ಲಿ ಲೋಪಗಳಿದ್ದರೆ ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳಬೇಕಿತು. ಅವರಿಬ್ಬರು ಸುಮಾರು ೨೦ವರ್ಷಗಳಿಂದ ಇಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗ ಅವರನ್ನು ಏಕಾಏಕಿಯಾಗಿ ವಜಾಗೊಳಿಸಿದರೆ ಅವರ ಕುಟುಂಬದ ಪರಿಸ್ಥಿತಿ ಏನು ಎಂದು ಅವರು ಪ್ರಶ್ನಿಸಿದರು. ಈ ಘಟನೆಯ ಬಗ್ಗೆ ಸಮರ್ಪಕ ತನಿಖೆಯಾಗಬೇಕು. ವಜಾಗೊಳಿಸಿದ ಅವರೀರ್ವರನ್ನು ಮರು ನೇಮಕಗೊಳಿಸುವಂತೆ ಸದಸ್ಯೆರೆಲ್ಲರ ಒಕ್ಕೋರಳಿನಿಂದ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಸಿದ ಅಧ್ಯಕ್ಷ ಕೃಷ್ಣ ಶೆಟ್ಟಿಯವರು ಸಿಬಂದಿಗಳನ್ನು ವಜಾಗೊಳಿಸಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ದ್ವಂದ್ವ ನಿಯಮಗಳ ಪರಿಹಾರಕ್ಕೆ ಮೇಲಾಧಿಕಾರಿಗಳಿಗೆ ಮನವಿಗೆ ನಿರ್ಣಯ : ಎಪಿಎಂಸಿಯಲ್ಲಿ ವರ್ತಕರಿಗೆ ವ್ಯಾಪಾರ ಪರವಾಣಿಗೆ ಪಡೆಯಲು ಎರಡು ತಾಂತ್ರಿಕ ತೊಂದರೆಗಳುಂಟಾಗಿದೆ. ವ್ಯಾಪಾರ ನಡೆಸಲು ವರ್ತಕರಿಗೆ ವ್ಯಾಪಾರ ಪರವಾನಿಗೆ ಪಡೆಯುವುದು ಕಡ್ಡಾಯವಾದರೆ ವ್ಯಾಪಾರ ಪರವಾನಿಗೆ ಪಡೆಯಬೇಕಾದರೆ ಅವರಲ್ಲಿ ಗೋದಾಮು ಪರವಾನಿಗೆ ಹೊಂದಿರಬೇಕು ಎಂಬ ದ್ವಂದ್ವ ನಿಯಮಗಳಿವೆ. ಇದರಿಂದ ಬಹುತೇಕ ವರ್ತಕರಿಗೆ ಸಮಸ್ಯೆಯುಂಟಾಗಿದೆ. ಈ ಗೊಂದಲದಿಂದಾಗಿ ಬಹುತೇಕ ಗೋದಾಮುಗಳು ಉಪಯೋಗವಿಲ್ಲದೆ ಪಾಳು ಬಿದ್ದಿದ್ದು ಮುರಿದು ಬೀಳುವ ಪರಿಸ್ಥಿಯಲ್ಲಿದೆ ಎಂದು ಅಧ್ಯಕ್ಷ ಕೃಷ್ಣ ಶೆಟ್ಟಿಯವರು ತಿಳಿಸಿದರು. ಈ ಬಗ್ಗೆ ಸದಸ್ಯರಲ್ಲಿ ಅಭಿಪ್ರಾಯ ಕೇಳಿದಾಗ ದ್ವಂದ್ವ ನಿಯಮಗಳ ಮೇಲಾಧಿಕಾರಿಗಳಿಗೆ ಮನವಿ ಮಾಡಿ ಕ್ರಮಕೈಗೊಳ್ಳುವಂತೆ ನಿರ್ಣಯ ಕೈಗೊಳ್ಳಲಾಗಿದೆ.
1.5 ಕೋಟಿ ಕಾಮಗಾರಿಗೆ ಕ್ರೀಯಾಯೋಜನೆ : ಎಪಿಎಂಸಿಗೆ ಸುಮಾರು 1.90 ಕೋಟಿಯ ಅನುದಾನ ಬಂದಿದೆ. ಈ ಅನುದಾನವನ್ನು ಎಪಿಎಂಸಿ ವಾರ್ಡ್ನ ಒಳಗಿನ ಕಾಮಗಾರಿಗಳಿಗೆ ಮಾತ್ರವೇ ವಿನಿಯೋಗ ಮಾಡಬೇಕು ಎಂಬ ನಿಯಮಗಳಿವೆ ಎಂದು ಅಧ್ಯಕ್ಷ ಕೃಷ್ಣ ಶೆಟ್ಟಿಯವರು ತಿಳಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದು, ಯಾರ್ಡ್ನ ಗೋದಾಮು ಕಟ್ಟಡಗಳ ದುರಸ್ಥಿಗೆ ರೂ.50ಲಕ್ಷ, ಆಡಳಿತ ಕಛೇರಿಯ ಮುಂದುವರಿದ ಕಾಮಗಾರಿಗಳಿಗೆ ರೂ.15ಲಕ್ಷ, ಗ್ರಾಮೀಣ ರಸ್ತೆಗಳ ದುರಸ್ಥಿಗೆ ರೂ.30ಲಕ್ಷ, ಅತಿಥಿ ಗೃಹ, ಗೇಟ್ ಹಾಗೂ ಯಾರ್ಡ್ನ ಒಳಗಿನ ರಸ್ತೆ ದುರಸ್ಥಿಗೆ ರೂ.50ಲಕ್ಷ, ಗಾರ್ಡನ್ ನಿರ್ಮಾಣಕ್ಕೆ ರೂ.5ಲಕ್ಷ ಹಾಗೂ ಹಾಲಿ ಸಭಾಂಗಣ ಮೇಲ್ದರ್ಜೆಗೇರಿಸಲು ರೂ.48ಕ್ಷವನ್ನು ವಿನಿಯೋಗ ಮಾಡುವುದಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಗೇಟ್ ಕಾಮಗಾರಿ ಆಮೆಗತಿ-ಉಪಾಧ್ಯಕ್ಷರ ಆರೋಪ : ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ ಮಾತನಾಡಿ, ಎಪಿಎಂಸಿಯ ಮುಖ್ಯ ದ್ವಾರದ ಬಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡುವ ಗೇಟ್ ಕಾಮಗಾರಿ ಪ್ರಾರಂಬಿಸಿ ತಿಂಗಳುಗಳು ಕಳೆದುಹೋಗಿವೆ. ಆದರೆ ಕಾಮಗಾರಿ ಶೇ.25 ರಷ್ಟು ಪೂರ್ಣಗೊಂಡಿಲ್ಲ. ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿದ್ದು ರಸ್ತೆಯಲ್ಲಿ ದೂಳಿನಿಂದ ಸಂಚರಿಸುವುದು ಕಷ್ಟವಾಗಿದೆ. ಇದನ್ನು ಕೂಡಲೇ ಮುಗಿಸಿಕೊಡುವಂತೆ ಅವರು ಇಂಜಿನಿಯರ್ರವರಲ್ಲಿ ತಿಳಿಸಿದರು.
ಸದಸ್ಯರಾದ ಮಾಣಿಕ್ಯರಾಜ್ ಪಡಿವಾಳ್, ಸೀತಾರಾಮ ಗೌಡ ಪೊಸವಳಿಕೆ, ತ್ರೀವೇಣಿಕರುಣಾಕರ ಪೆರ್ವೋಡಿ, ಜ್ಯೋತಿ ಡಿ ಕೋಲ್ಪೆ, ಸೋಮನಾಥ, ಶೀನಪ್ಪ ಗೌಡ ಒಳಕಡಮ, ಗುರುನಾಥ್ ಉಪಸ್ಥಿತರಿದ್ದರು. ಸಹಾಯಕ ಕಾರ್ಯದರ್ಶಿ ಭಾರತಿ ಪಿ.ಎಸ್ ವರದಿ ವಾಚಿಸಿದರು. ಲೆಕ್ಕಿಗ ರಾಮಚಂದ್ರ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.