ಮಂಗಳೂರು: ಸರ್ಕಾರಿ ಅನುದಾನಿತ ಮತ್ತು ವಿಶ್ವವಿದ್ಯಾನಿಲಯಗಳ ಘಟಕ ಕಾಲೇಜುಗಳಲ್ಲಿ ಕಲಾ ಮತ್ತು ವಾಣಿಜ್ಯ ಉಪನ್ಯಾಸಕರುಗಳು ವಾರಕ್ಕೆ 16 ಗಂಟೆಗಳ ಬದಲಾಗಿ 22 ಗಂಟೆ ಹಾಗೂ ವಿಜ್ಞಾನ ವಿಭಾಗದ ಉಪನ್ಯಾಸಕರುಗಳು 20 ಗಂಟೆಗಳ ಬದಲಾಗಿ 26 ಗಂಟೆಗಳ ಕಾರ್ಯಭಾರವನ್ನು ನಿರ್ವಹಿಸಬೇಕೆಂಬ ಸರ್ಕಾರದ ಆದೇಶ ಅವೈಜ್ಞಾನಿಕವಾಗಿದೆ. ಯು.ಜಿ.ಸಿ. ನಿಯಮಾವಳಿಗೆ ವಿರುದ್ಧವಾಗಿದೆ. ಅರೆ ವಾರ್ಷಿಕ ಪದ್ದತಿಯನ್ನು ಅಳವಡಿಸಿದಂದಿನಿಂದ ಉಪನ್ಯಾಸಕರ ಮೇಲೆ ಈಗಾಗಲೇ ಹೆಚ್ಚಿನ ಪರೀಕ್ಷೆಗಳು, ಮೌಲ್ಯಮಾಪನ, ಪ್ರಾಜೆಕ್ಟ್ ನಿರ್ವಹಣೆ, ಹೆಚ್ಚುತ್ತಿರುವ ಶೈಕ್ಷಣಿಕ ಚಟುವಟಿಕೆಗಳು, ಕಾಲೇಜುಗಳಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಇನ್ನಿತರ ಅನೇಕ ಕಾರಣಗಳಿಂದಾಗಿ ತೀವ್ರ ಒತ್ತಡವಿದೆ.
ದೇಶದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಇಲ್ಲದಿರುವ ಈ ಏಕಪಕ್ಷೀಯ ನಿರ್ಣಯದಿಂದಾಗಿ ರಾಜ್ಯದ ಪದವಿ ಶಿಕ್ಷಣ ವ್ಯವಸ್ಥೆಯ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರುವ ಅತ್ಯಂತ ಗಂಭೀರ ವಿಷಯವನ್ನು ನಿಯಮ 72ರ ಅನ್ವಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ರವರು ಸೇರಿದಂತೆ ವಿರೋಧ ಪಕ್ಷದ ಶಾಸಕರು ಮಾನ್ಯ ಉನ್ನತ ಶಿಕ್ಷಣ ಸಚಿವರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದೆ.
ಇದರ ಜೊತೆಗೆ ಆಡಳಿತಾತ್ಮಕ ಮತ್ತಿತರ ಕೆಲಸ ಕಾರ್ಯಗಳಿಗಾಗಿ ಮೇಲ್ಕಂಡ ಅವಧಿಯನ್ನು ಸೇರಿಸಿ ಒಟ್ಟಾರೆ ವಾರಕ್ಕೆ 40 ಗಂಟೆಗಳ ಅವಧಿಯಲ್ಲಿ ಕಾಲೇಜುಗಳಲ್ಲಿ ಹಾಜರಿದ್ದು, ಕೆಲಸ ಕಾರ್ಯ ನಿರ್ವಹಿಸತಕ್ಕದ್ದು ಎಂದು ಸ್ಪಷ್ಟಪಡಿಸಲಾಗಿದೆ.
ಸಚಿವರ ಲಿಖಿತ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿರೋಧ ಪಕ್ಷದ ಶಾಸಕರುಗಳು ಇದು ಅವೈಜ್ಞಾನಿಕ ನಿರ್ಧಾರವಾಗಿದ್ದು, ಇದರಿಂದ ಉನ್ನತ ಶಿಕ್ಷಣದ ಗುಣಮಟ್ಟ ಸಂಪೂರ್ಣ ಹದಗೆಡಲಿದ್ದು, ಯುಜಿಸಿ ನಿಯಮಕ್ಕೆ ವಿರುದ್ಧವಾಗಿದೆ. ಉಪನ್ಯಾಸಕರ ಮೇಲೆ ಈಗಾಗಲೇ ಹೆಚ್ಚಿನ ಕೆಲಸದ ಒತ್ತಡವಿದ್ದು, ಹೊಸ ಅದೇಶದ ಪಾಲನೆ ಅಸಾಧ್ಯವಾಗಿದೆ. ಸರ್ಕಾರ ಸುತ್ತೋಲೆಯನ್ನು ಕೂಡಲೆ ಹಿಂತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದೆ.
ಸರ್ಕಾರವು ಯು.ಜಿ.ಸಿ.ಯಿಂದ ಸ್ಪಷ್ಟನೆ ಕೋರಬೇಕು. ಯು.ಜಿ.ಸಿ. ಸ್ಪಷ್ಟೀಕರಣದಂತೆ ಆದೇಶ ಹೊರಡಿಸುವಂತೆ ಹಾಗೂ ಅಲ್ಲಿಯವರೆಗೂ ಸದರಿ ಅದೇಶವನ್ನು ಅಮಾನತು ಮಾಡುವಂತೆ ವಿರೋಧ ಪಕ್ಷದ ಶಾಸಕರುಗಳು ಸಚಿವರಿಗೆ ಸಲಹೆ ನೀಡಿದರು.
ಅದರಂತೆ ಮಾನ್ಯ ಉನ್ನತ ಶಿಕ್ಷಣ ಸಚಿವರು ಈ ವಿಷಯದ ಕುರಿತು ಯು.ಜಿ.ಸಿ.ಯಿಂದ ಸ್ಪಷ್ಟನೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದೆಂದು ಹಾಗೂ ಅಲ್ಲಿಯವರೆಗೂ ಈ ಆದೇಶವನ್ನು ತಡೆ ಹಿಡಿಯಲಾಗುವುದು ಎಂದು ಪ್ರಕಟಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.