ಹುಬ್ಬಳ್ಳಿ: ನಾರದರು ಸುದ್ಧಿಯನ್ನು ಸಪ್ತ ಲೋಕಕ್ಕೆ ತಲುಪಿಸುವ ಮೂಲಕ ಲೋಕಹಿತ ಹಾಗೂ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡುವ ಮೂಲಕ ಪ್ರಪಂಚದ ಮೊದಲ ಪತ್ರಕರ್ತರಾಗಿದ್ದಾರೆ ಎಂದು ಹಿರಿಯ ಪತ್ರಕರ್ತರಾದ ಹೊಸ ದಿಗಂತ ಪತ್ರಿಕೆಯ ಮಾಜಿ ಸಂಪಾದಕರಾದ ದು.ಗು.ಲಕ್ಷ್ಮಣ ಹೇಳಿದರು.
ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಲೋಕಹಿತ ಟ್ರಸ್ಟ್ (ರಿ) ಹುಬ್ಬಳ್ಳಿ ವತಿಯಿಂದ ಆಯೋಜಿಸಲಾಗಿದ್ದ ಆದ್ಯ ಪತ್ರಕರ್ತ ನಾರದರ ಜಯಂತಿ ಮತ್ತು ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜುಲೈ 1ರಂದು 1843 ರಲ್ಲಿ ಮಂಗಳೂರು ಸಮಾಚಾರ ಪತ್ರಿಕೆಯನ್ನು ಆರಂಭಿಸಿದ ಹರ್ಮನ್ ಮೊಗ್ಲಿಂಗ್ ಅಂದು ಪತ್ರಿಕಾ ದಿನಾಚರಣೆಯ ಬದಲಾಗಿ ಆದ್ಯ ಪತ್ರಕರ್ತ ನಾರದರ ಜಯಂತಿಯನ್ನಾಗಿ ಆಚರಿಸಬೇಕು, ಕನ್ನಡದ ಪತ್ರಿಕೆಯಲ್ಲಿ ಹೆಸರಾಂತ ಪತ್ರಕರ್ತರು ತಮ್ಮ ಜೀವನವನ್ನು ಮುಡಿಪಾಗಿಟ್ಟು ಸೇವೆ ಸಲ್ಲಿಸಿದ್ದಾರೆ. ಡಿ.ವಿ.ಜಿ. ಕೆ.ಶಾಮರಾಯ, ಮೊರೆ ಹನಮಂತರಾಯ್ರಂಥ ಮಹಾನ್ ಪತ್ರಿಕಾ ಮೇಧಾವಿಗಳನ್ನು ನೆನೆಯುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಲು ಮುಂದಾಗಬೇಕು ಎಂದರು. ದೇಶವನ್ನು ಸನ್ಮಾರ್ಗದತ್ತ ನಡೆಸುವ ಕಾರ್ಯ ಪತ್ರಿಕೆಗಳ ಕಾರ್ಯವಾಗಿದ್ದು ಕೇವಲ ಟೀಕೆ ಟಿಪ್ಪಣಿಗಳನ್ನು ಮಾಡದೆ ಸದಾ ಕಾಲ ಲೋಕಹಿತಕ್ಕಾಗಿ ಪತ್ರಕರ್ತರು ಕಾರ್ಯನಿರ್ವಹಿಸಬೇಕಾಗಿದೆ, ಪತ್ರಿಕೆ ಇರುವುದು ಸತ್ಯದ ಪ್ರತಿಪಾದನೆಗಾಗಿ ಹೊರತು ಸುಳ್ಳು ಸುದ್ಧಿಗಳನ್ನು ಹಬ್ಬಿಸುವುದಕ್ಕಲ್ಲ ಎಂದರು.
ಲೋಕಹಿತ ಟ್ರಸ್ಟ್ನ ಕಾರ್ಯದರ್ಶಿಗಳಾದ ಶ್ರೀಧರ್ ನಾಡಗೀರ್ ಮಾತನಾಡಿ 2004 ರಲ್ಲಿ ಆರಂಭವಾದ ಟ್ರಸ್ಟ್ ಹತ್ತು ಹಲವು ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಅವರನ್ನು ಸತ್ಕರಿಸುತ್ತ ಬಂದಿದೆ. ಸೇವೆಗೆ ಅರ್ಹರಾದ ವ್ಯಕ್ತಿಗಳು ಅಧಿಕವಾಗಿದ್ದು ಮಾನವ ಸೇವೆಯೇ ಮಾಧವ ಸೇವೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುವರ್ಣ ನ್ಯೂಸ್ ನಿರೂಪಕರಾದ ಅಜಿತ್ ಹನುಮಕ್ಕನವರ್ ಮಾತನಾಡಿ ಇಂದಿನ ಆಧುನಿಕ ದಿನಗಳಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ವಿಸ್ತಾರವಾಗಿದ್ದು, ಯುವಕ ಯುವತಿಯರು ಪತ್ರಿಕೋದ್ಯಮ ಶಿಕ್ಷಣ ಪೂರೈಸಿ ಅದಕ್ಕೆ ಪೂರಕವಾದ ವಿಚಾರ ವಿಷಯಗಳನ್ನು ಅಭ್ಯಸಿಸಿದ್ದಾದರೆ ಯಶಸ್ಸು ಕಾಣಬಹುದು. ಹಾಗೆ ಇಂದಿನ ದಿನಗಳಲ್ಲಿ ವೃತ್ತಿ ಹಾಗೂ ಪ್ರವೃತ್ತಿ ಒಂದೇ ಆದರೆ ಬದುಕು ಕೂಡ ಸುಲಭ ಹಾಗೂ ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯ ಎಂದರು. ಹಾಗೆ ಹುಬ್ಬಳ್ಳಿಯಲ್ಲಿನ ತಮ್ಮ ಬಾಲ್ಯದ ದಿನಗಳನ್ನು ಕೂಡ ಮೆಲುಕು ಹಾಕಿದರು.
ಈ ಒಂದು ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ನಾರಾಯಣ ಘಳಿಗಿ ಅವರನ್ನು ಕೂಡ ಸನ್ಮಾನಿಸಲಾಯಿತು. ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತರಾದ ಗೋವಿಂದಪ್ಪ ಗೌಡಪ್ಪಗೋಳ ಅಧ್ಯಕ್ಷೀಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ನಗರದ ಪತ್ರಿಕೋದ್ಯಮ ಕಾಲೇಜು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.