ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ 10,000 ಹೆಚ್ಚುವರಿ ಅರೆಸೈನಿಕ ಸಿಬ್ಬಂದಿಗಳನ್ನು ನಿಯೋಜಿಸುವಂತೆ ನಿರ್ದೇಶಿಸಿ ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ತಡರಾತ್ರಿ ಹೊರಡಿಸಿರುವ ಆದೇಶ ಎಲ್ಲರಲ್ಲೂ ಕುತೂಹಲ ಮೂಡುವಂತೆ ಮಾಡಿದೆ. ಶೀಘ್ರದಲ್ಲೇ ಆ ರಾಜ್ಯದಲ್ಲಿ ಮಹತ್ತರ ಬೆಳವಣಿಗೆಯಾಗಲಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮಾಜಿ ಐಎಎಸ್ ಅಧಿಕಾರಿ ಮತ್ತು ಜಮ್ಮು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ಅಧ್ಯಕ್ಷ ಶಾ ಫಾಸಲ್ ಅವರು ಈ ಬಗ್ಗೆ ಟ್ವಿಟ್ ಮಾಡಿದ್ದು, “ಹೆಚ್ಚುವರಿಯಾಗಿ 100 ಸಿಎಪಿಎಫ್ ಕಂಪನಿಗಳನ್ನು ನಿಯೋಜಿಸುವ ಬಗ್ಗೆ ಗೃಹಸಚಿವಾಲಯ ತೆಗೆದುಕೊಂಡ ನಿರ್ಧಾರವು ಕಾಶ್ಮೀರದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈ ಹಠಾತ್ ಸಜ್ಜುಗೊಳಿಸುವಿಕೆ ಯಾಕೆ ನಡೆಯುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ಕೆಟ್ಟದಾಗಿ ಏನಾದರೂ ಸಂಭವಿಸಬಹುದೇ ಎಂಬ ಆಂತಕವಿದೆ. ಆರ್ಟಿಕಲ್ 35ಎ ತೆಗೆದುಹಾಕಬಹುದೇ? ” ಎಂದಿದ್ದಾರೆ.
100 ಹೆಚ್ಚುವರಿ ಕಂಪನಿಗಳಲ್ಲಿ 50 ಕಂಪನಿಗಳನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ (ಸಿಆರ್ಪಿಎಫ್) ನಿಯೋಜಿಸಲಾಗುತ್ತಿದೆ, ಅದರಲ್ಲಿ ಒಂಬತ್ತು ಕಂಪನಿಗಳನ್ನು ನವದೆಹಲಿಯಿಂದ ಕಣಿವೆಗೆ ಸ್ಥಳಾಂತರಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಉಳಿದ 50 ಕಂಪನಿಗಳನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್), ಸಶಸ್ತ್ರ ಸೀಮಾ ಬಲ್ (ಎಸ್ಎಸ್ಬಿ) ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯಿಂದ ನಿಯೋಜಿಸಲಾಗುತ್ತಿದೆ. ಒಂದೊಂದು ಕಂಪನಿಯಲ್ಲಿ ತಲಾ ನೂರು ಯೋಧರಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಈಗಾಗಲೇ 40,000 ಅರೆಸೈನಿಕ ಸಿಬ್ಬಂದಿ ಇದ್ದಾರೆ ಮತ್ತು ಗೃಹ ಸಚಿವಾಲಯದಿಂದ ಹೊಸದಾಗಿ ಹೊರಡಿಸಲಾದ ನಿರ್ದೇಶನದ ಅನುಷ್ಠಾನದ ಬಳಿಕ 10,000 ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ 15 ರಂದು ಕಾಶ್ಮೀರ ಕಣಿವೆಯು ಕೆಲವು ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಬಹುದೆಂದು ನಾಗರಿಕರು ನಿರೀಕ್ಷಿಸುತ್ತಿದ್ದಾರೆ. ಪ್ರಸ್ತುತ ಈ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಇಂತಹ ಪರಿಸ್ಥಿತಿಯಲ್ಲಿ ಸೈನ್ಯದ ನಿಯೋಜನೆಯು ಜಮ್ಮು ಮತ್ತು ಕಾಶ್ಮೀರ ರಾಜ್ಯವು ದೊಡ್ಡ ಬದಲಾವಣೆಗಾಗಿ ಕಾಯುತ್ತಿದೆ ಎಂಬುದನ್ನು ಸೂಚಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.