ಕರ್ನಾಟಕ ಬಿಜೆಪಿಯ ನಂ.1 ನಾಯಕನಾಗಿರುವ ಬಿಎಸ್ ಯಡಿಯೂರಪ್ಪನವರು ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ. ಈಗಾಗಲೇ ತಮ್ಮ ಹೆಸರಿನ ಸ್ಪೆಲ್ಲಿಂಗ್ ಅನ್ನು ಎರಡು ಬಾರಿ ಬದಲಾಯಿಸಿಕೊಂಡಿರುವ ಅವರು, ನಾಲ್ಕನೇ ಬಾರಿಗೆ ಸಿಎಂ ಆಗುತ್ತಿದ್ದಾರೆ. ಯಡಿಯೂರಪ್ಪನವರ ಬಗೆಗಿನ 10 ರೋಚಕ ಸಂಗತಿಗಳು ಇಲ್ಲಿವೆ.
ಜನ್ಮಭೂಮಿ ಮತ್ತು ಕರ್ಮಭೂಮಿ
ಯಡಿಯೂರಪ್ಪನವರ ಜನ್ಮ ಭೂಮಿ ಮಂಡ್ಯ ಜಿಲ್ಲೆಯ ಸಣ್ಣ ಕೃಷಿ ಗ್ರಾಮವಾದ ಬೂಕನಕೆರೆ. ಆದರೆ ಅವರ ಕರ್ಮಭೂಮಿ ಶಿವಮೊಗ್ಗ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಸೇವೆ ಸಲ್ಲಿಸುವ ಸಲುವಾಗಿ ಅವರು 1965ರಲ್ಲಿ ಇಲ್ಲಿಗೆ ಬಂದರು. ವಿಚಿತ್ರವೆಂದರೆ, ರಾಜ್ಯದಲ್ಲಿ ಬಿಜೆಪಿಗೆ ಹಲವು ಯಶಸ್ಸುಗಳು ದೊರಕಿದರೂ ಕೂಡ, ಯಡಿಯೂರಪ್ಪನವರ ಹುಟ್ಟೂರಾದ ಬೂಕನೆಕರೆಯ ಕೆ ಆರ್ ಪೇಟೆ ಕ್ಷೇತ್ರದಲ್ಲಿ ಒಂದು ಬಾರಿಯೂ ಬಿಜೆಪಿ ಗೆದ್ದಿಲ್ಲ. ಆದರೆ ಅವರ ಕರ್ಮಭೂಮಿ ಶಿಕಾರಿಪುರ ಕ್ಷೇತ್ರ 1983ರಿಂದ ಅವರನ್ನು 7 ಬಾರಿ ಗೆಲ್ಲಿಸಿದೆ.
ಅಕ್ಕಿ ಗಿರಣಿ ಗುಮಾಸ್ತನಿಂದ ಹಿಡಿದು ಸಿಎಂ ಆಗುವವರೆಗೆ
ಪದವಿ ಪಡೆದ ನಂತರ, ಬಿಎಸ್ವೈ ಅವರು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ವಿಭಾಗದಲ್ಲಿ ಮೊದಲ ದರ್ಜೆಯ ಗುಮಾಸ್ತರಾಗಿ ಕೆಲಸ ಮಾಡಿದರು. 1965 ರಲ್ಲಿ ಅದನ್ನು ತ್ಯಜಿಸಿ, ಶಂಕರ್ ರೈಸ್ ಮಿಲ್ನಲ್ಲಿ ಗುಮಾಸ್ತರಾಗಿ ಸೇರಿಕೊಂಡರು. ಎರಡು ವರ್ಷಗಳ ನಂತರ, ಅವರು ಗಿರಣಿ ಮಾಲೀಕ ವೀರಭದ್ರ ಶಾಸ್ತ್ರಿ ಅವರ ಪುತ್ರಿ ಮೈತ್ರಾ ದೇವಿಯನ್ನು ವಿವಾಹವಾದರು. ನಂತರ, ಅವರು ಶಿಕಾರಿಪುರದಲ್ಲಿ ಹಾರ್ಡ್ವೇರ್ ಅಂಗಡಿಯೊಂದನ್ನು ಪ್ರಾರಂಭಿಸಿದರು. ಆದರೆ ಅಂತಿಮವಾಗಿ ರಾಜಕೀಯಕ್ಕೆ ಬಂದರು. ಅವರ ಐದು ಮಕ್ಕಳಲ್ಲಿ ಒಬ್ಬರಾದ ಬಿ.ಎಸ್.ರಾಘವೇಂದ್ರ ಅವರು ಶಿವಮೊಗ್ಗದ ಸಂಸದರು, ಮತ್ತೋರ್ವ ಪುತ್ರ ಬಿ. ಎಸ್. ವಿಜಯೇಂದ್ರ ಬಿಜೆಪಿ ರಾಜ್ಯ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಬಿಎಸ್ವೈ ಅವರ ಪತ್ನಿ 2004 ರಲ್ಲಿ ನಿಧನರಾಗಿದ್ದಾರೆ.
ಸಂಘದ ಪ್ರಭಾವ
ಯಡಿಯೂರಪ್ಪನವರ ಆಪ್ತರ ಪ್ರಕಾರ, 15 ವರ್ಷದವರಾಗಿದ್ದಾಗ ಅವರು ಸಂಘದ ಸಂಪರ್ಕಕ್ಕೆ ಬಂದರು. ಆದರೆ ಇನ್ನೂ ಕೆಲವರ ಪ್ರಕಾರ, ಅವರಿಗೆ ಆರ್ಎಸ್ಎಸ್ ನಂಟು ಬೆಳೆದಿದ್ದು ಶಿಕಾರಿಪುರದಲ್ಲಿ. 1972 ರಲ್ಲಿ, ಅವರು ಶಿಕಾರಿಪುರದಲ್ಲಿ ಸಂಘದ ಕಾರ್ಯವಾಹ ಆದರು ಮತ್ತು ನಂತರ ಆರ್ಎಸ್ಎಸ್ ಶಿವಮೊಗ್ಗ ಘಟಕದ ಮುಖ್ಯಸ್ಥರಾದರು. 1973 ರಲ್ಲಿ ಅವರು ಶಿಕಾರಿಪುರ ಪುರಸಭೆಗೆ ಆಯ್ಕೆಯಾದರು. ಆದರೆ 1975 ರ ತುರ್ತು ಪರಿಸ್ಥಿತಿ ಸಂಘದಲ್ಲಿ ಅವರನ್ನು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಿತು. ತುರ್ತು ಪರಿಸ್ಥಿತಿ ವೇಳೆ ಅವರನ್ನು 45 ದಿನಗಳ ಕಾಲ ಜೈಲಿನಲ್ಲಿರಿಸಲಾಯಿತು, ಮೊದಲು ಶಿವಮೊಗ್ಗ ಮತ್ತು ನಂತರ ಬಳ್ಳಾರಿ ಜೈಲಿನಲ್ಲಿ ಅವರಿದ್ದರು. ಜನ ಸಂಘವು ಜನತಾ ಪಕ್ಷದೊಂದಿಗೆ ವಿಲೀನಗೊಂಡಾಗ, ಅವರು 1977 ರಲ್ಲಿ ಜನತಾ ಪಕ್ಷದ ಶಿವಮೊಗ್ಗ ಘಟಕದ ಮುಖ್ಯಸ್ಥರಾದರು, ಅದೇ ವರ್ಷ ಆ ಪಕ್ಷ ಕಾಂಗ್ರೆಸ್ ಅನ್ನು ಕೇಂದ್ರ ಮಟ್ಟದಲ್ಲಿ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತ್ತು.
ಅವರನ್ನು ರೂಪಿಸಿದ ಹೋರಾಟಗಳು
ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಮೂರು ಪ್ರಮುಖ ಆಂದೋಲನಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮನ್ನು ತಾವು ಎತ್ತರಕ್ಕೆ ಕೊಂಡೊಯ್ದರು. 1977 ರಲ್ಲಿ ಜೀತ ಕಾರ್ಮಿಕರ ಪುನರ್ವಸತಿಗಾಗಿ ನಡೆದ ಹೋರಾಟ, 1980 ರ ದಶಕದ ಆರಂಭವಾದ ಬಗರ್ ಹುಕುಮ್ (ಭೂಹೀನ ಕಾರ್ಮಿಕರ) ಚಳುವಳಿ, ಮತ್ತು 1987 ರ ಮಹಾ ಬರಗಾಲದ ಸಮಯದಲ್ಲಿ ನಡೆದ ಸೈಕಲ್ ಯಾತ್ರೆ ಅವರನ್ನು ನಾಯಕನಾಗಿ ಹೊರಹೊಮ್ಮಿಸಿದವು.
ವಿಜಯಗಳು, ಹಿನ್ನಡೆಗಳು
ಯಡಿಯೂರಪ್ಪ ಅವರು 1983ರಿಂದ ಶಿಕಾರಿಪುರದಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು 2014 ರಲ್ಲಿ ಶಿವಮೊಗ್ಗ ಸಂಸದರಾದರು. 1999ರಲ್ಲಿ ಶಿಕಾರಿಪುರದಲ್ಲಿ ಸೋತಿದ್ದು ಅವರು ಅನುಭವಿಸಿದ ಏಕೈಕ ಹಿನ್ನಡೆ. ಆದರೆ ಬಿಜೆಪಿ ಕೂಡಲೇ ಅವರನ್ನು ಎಂಎಲ್ಸಿಯಾಗಿ ಮೇಲ್ಮನೆಗೆ ಕಳುಹಿಸಿತು, ಅಲ್ಲಿ ಅವರು ಪ್ರತಿಪಕ್ಷದ ನಾಯಕರಾದರು.
ಪುನರಾಗಮನ
ಯಡಿಯೂರಪ್ಪ ಅವರ ವೃತ್ತಿಜೀವನದ ಕುಸಿತ ಎಂದರೆ, 2011 ರಲ್ಲಿ ಲೋಕಾಯುಕ್ತ ವರದಿಯೊಂದು ಅವರನ್ನು ಅಕ್ರಮ ಗಣಿಗಾರಿಕೆ ಪ್ರಕರಣ ಮತ್ತು ಬೆಂಗಳೂರಿನಲ್ಲಿ ಭೂ ಡಿನೋಟಿಫಿಕೇಶನ್ ಪ್ರಕರಣದಲ್ಲಿ ದೋಷಿಯೆಂದು ಹೇಳಿದ್ದು, ಇದರಿಂದಾಗಿ ಅವರು ಸಿಎಂ ಹುದ್ದೆಯಿಂದ ಹೊರಗುಳಿಯಬೇಕಾಯಿತು. ಬಂಧನಕ್ಕೊಳಗಾದ ಮೊದಲ ಕರ್ನಾಟಕ ಸಿಎಂ ಎಂಬ ಕುಖ್ಯಾತಿಗೂ ಪಾತ್ರರಾಗಿ ಅವರು 23 ದಿನಗಳನ್ನು ಜೈಲಿನಲ್ಲಿ ಕಳೆದರು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನಿರ್ದೋಷಿಯೆಂದು ಅವರು ಬಳಿಕ ಘೋಷಿಸಲ್ಪಟ್ಟರು. ಆದರೆ ಬಳಿಕ ಬಿಜೆಪಿಯನ್ನು ತೊರೆದು 2012 ರಲ್ಲಿ ಕರ್ನಾಟಕ ಜನತಾ ಪಕ್ಷವನ್ನು ರಚಿಸಿದರು. 2014 ರಲ್ಲಿ ಅವರು ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು. 2018 ರ ಚುನಾವಣೆಯಲ್ಲಿ ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲಿ 104 ಸ್ಥಾನಗಳನ್ನು ಗೆದ್ದಿಕೊಂಡಿದೆ.
ತೀಕ್ಷ್ಣವಾದ ರಾಜಕೀಯ ಮೇಲಾಟಗಳು
ಯಡಿಯೂರಪ್ಪನವರು ಬಿಜೆಪಿಗೆ ತಾನು ಅನಿವಾರ್ಯ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಎಷ್ಟರಮಟ್ಟಿಗೆಂದರೆ, 75 ವರ್ಷ ದಾಟಿದವರು ನಿವೃತ್ತಿ ಪಡೆಯಬೇಕು ಎಂಬ ಬಿಜೆಪಿಯ ವಯಸ್ಸಿನ ನಿಯಮವೂ ಇವರಿಗೆ ಅನ್ವಯವಾಗುತ್ತಿಲ್ಲ. 76 ನೇ ವಯಸ್ಸಿನಲ್ಲಿ ಕರ್ನಾಟಕ ಸಿಎಂ ಆಗಿ ಇವರು ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ. ಬಿಜೆಪಿಯ ಬೆಳವಣಿಗೆಯ ಮನ್ನಣೆಯನ್ನು ಅನಂತ್ ಕುಮಾರ್, ಜಗದೀಶ್ ಶೆಟ್ಟರ್ ಮತ್ತು ಸದಾನಂದ ಗೌಡರಂತವರಿಗೆ ಯಡಿಯೂರಪ್ಪ ನೀಡಿಲ್ಲ ಎಂದು ಅನೇಕ ಹಿರಿಯರು ಆಪಾದಿಸುತ್ತಲೂ ಇದ್ದಾರೆ.
ದಣಿವರಿಯದ ಪ್ರಚಾರಕ
ರಾಜ್ಯದ ಹಳ್ಳಿ-ಹಳ್ಳಿಯ ಮೂಲೆಗೂ ತೆರಳಿ ಬಿಜೆಪಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾತ್ರಿ – ಹಗಲು ಎನ್ನದೆ ಪ್ರತಿ ಗ್ರಾಮಗಳಿಗೂ ತೆರಳಿ ಜನರನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಏನೇ ಪರಿಸ್ಥಿತಿ ಬಂದರೂ ಎದೆಗುಂದದ ಕರ್ನಾಟಕದ ಮೂವರು ರಾಜಕಾರಣಿಗಳು ಎಂಬ ಕೀರ್ತಿಗೆ ಪಾತ್ರರಾಗಿರುವವರಲ್ಲಿ ಯಡಿಯೂರಪ್ಪ, ಮಾಜಿ ಸಿಎಂ ಸಾರೆಕೊಪ್ಪ ಬಂಗಾರಪ್ಪ, ಜನತಾದಳ (ಜಾತ್ಯತೀತ) ಮುಖ್ಯಸ್ಥ ದೇವೇಗೌಡರು.
ವೈಯಕ್ತಿಕ ನಂಬಿಕೆಗಳು
ಜ್ಯೋತಿಷ್ಯ ಮತ್ತು ವಾಸ್ತುಗಳಲ್ಲಿ ಅಪಾರ ನಂಬಿಕೆಯಿಟ್ಟಿರುವ ಯಡಿಯೂರಪ್ಪ, ಹಿಂದಿನ ಕುಮಾರಸ್ವಾಮಿ ಸರ್ಕಾರ ತನಗೆ ಅದೃಷ್ಟದ ಬಂಗಲೆಯನ್ನು ನೀಡಲಿಲ್ಲ ಎಂದು ಅಸಮಾಧಾನಗೊಂಡಿದ್ದರು. ಸಿಎಂ ಆಗಿದ್ದಾಗ ಅವರು ಅದೇ ಬಂಗಲೆಯಲ್ಲಿ ಇದ್ದರು. ಇಷ್ಟು ಮಾತ್ರವಲ್ಲದೇ ತಮ್ಮ ಹೆಸರಿನ ಸ್ಪೆಲ್ಲಿಂಗ್ ಅನ್ನು ಅವರು ಎರಡು ಬಾರಿ ಬದಲಾಯಿಸಿದ್ದಾರೆ. ಸಂಖ್ಯಾಶಾಸ್ತ್ರಜ್ಞರ ಸಲಹೆಯ ಮೇರೆಗೆ, ಯಡಿಯೂರಪ್ಪದಿಂದ ಯಡ್ಯೂರಪ್ಪ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದರು. ಇದೀಗ ಮತ್ತೆ ಯಡಿಯೂರಪ್ಪಗೆ ಹೆಸರನ್ನು ಬದಲಾಯಿಸಿದ್ದಾರೆ.
ಬಿಎಸ್ ಯಡಿಯೂರಪ್ಪ ಅಸಾಧ್ಯವಾದುದನ್ನು ಮಾಡಿ ತೋರಿಸಿದ್ದಾರೆ. ದಕ್ಷಿಣ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆಯನ್ನು ಏರುವಂತೆ ಮಾಡಿದರು. ಅನೇಕ ಸವಾಲು – ಹಿನ್ನೆಡೆಯ ನಡುವೆಯೂ ಯಶಸ್ಸನ್ನು ಪಡೆದು ಕರ್ನಾಟಕದ ಜನಪ್ರಿಯ ನಾಯಕ ಎನಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.