ಬೆಂಗಳೂರು: ಕರ್ನಾಟಕ ರಾಜಕೀಯ ಬಹಳ ಮಹತ್ವದ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅಧಿಕಾರಕ್ಕೇರಿರುವ ಬಿಜೆಪಿಗೆ ಬೆಂಬಲ ನೀಡುವಂತೆ ಜೆಡಿಎಸ್ ಶಾಸಕರು ತಮ್ಮ ನಾಯಕರುಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಕುಮಾರಸ್ವಾಮಿ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ, ಜೆಡಿಎಸ್ ಮುಖಂಡರಾಗಿರುವ ಜಿಟಿ ದೇವೇಗೌಡ ಅವರು ತಮ್ಮ ಮೈತ್ರಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿದ ಅವರು, ಮೈತ್ರಿ ಕಾಂಗ್ರೆಸ್ ಬಗ್ಗೆ ಜೆಡಿಎಸ್ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂದಿದ್ದಾರೆ.
“ಶಾಸಕಾಂಗ ಸಭೆಯಲ್ಲಿ ಜೆಡಿಎಸ್ ಶಾಸಕರು ಕಾಂಗ್ರೆಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೆ ಕಾಂಗ್ರೆಸ್ ನಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಕರೆಯುತ್ತಿತ್ತು, ಮಾತ್ರವಲ್ಲ ಜೆಡಿಎಸ್ ಅಭ್ಯರ್ಥಿಗಳು ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿಯೂ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದಾಗಿ ನಾವು ಸೋತೆವು. ನಾವು ಬಿಜೆಪಿಗೆ ಬೆಂಬಲ ನೀಡಿದರೆ ಒಳ್ಳೆಯದು. ಬಿಜೆಪಿ ಸರ್ಕಾರದ ಭಾಗವಾಗಬೇಕೇ ಅಥವಾ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕೇ ಎಂಬ ನಿರ್ಧಾರ ಕುಮಾರಸ್ವಾಮಿಯವರಿಗೆ ಬಿಟ್ಟದ್ದು” ಎಂದಿದ್ದಾರೆ.
ಶಾಸಕಾಂಗ ಸಭೆಯ ನೇತೃತ್ವವನ್ನು ಕುಮಾರಸ್ವಾಮಿ ವಹಿಸಿಕೊಂಡಿದ್ದರು, ಜೆಡಿಎಸ್ ಪಕ್ಷದ ಎಲ್ಲಾ 34 ನಾಯಕರುಗಳು ಇಲ್ಲಿ ಒಗ್ಗಟ್ಟಾಗಿ ನಿಲ್ಲಬೇಕು ಎಂಬ ಕರೆಯನ್ನು ನೀಡಲಾಗಿದೆ ಎಂದು ಜಿಟಿ ದೇವೇಗೌಡ ಹೇಳಿದ್ದಾರೆ.
ಬಿಜೆಪಿಗೆ ಇವರು ಬೆಂಬಲ ನೀಡುತ್ತಾರೆ ಎಂದು ಯೋಚಿಸಿಯೇ ಜನರು ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬೆಂಬಲಿಸಿದ್ದು ಎಂಬುದಾಗಿಯೂ ಅವರು ಹೇಳಿಕೊಂಡಿದ್ದಾರೆ.
“ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ ಎಂದು ಭಾವಿಸಿ ಚುನಾವಣೆಯಲ್ಲಿ ಜನರು ನಮ್ಮನ್ನು ಬೆಂಬಲಿಸಿದರು. ಆದರೆ ನಾವು ಅವರನ್ನು ನಿರಾಸೆಗೊಳಿಸಿದ್ದೇವೆ. ಕನಿಷ್ಠ ಈಗಲಾದರೂ ನಾವು ಬಿಜೆಪಿಯನ್ನು ಬೆಂಬಲಿಸೋಣ ”ಎಂದು ಜೆಡಿಎಸ್ ಶಾಸಕರನ್ನು ಉಲ್ಲೇಖಿಸಿ ಜಿಟಿ ದೇವೇಗೌಡ ಹೇಳಿದ್ದಾರೆ.
“ಈ ಬಗೆಗಿನ ನಿರ್ಧಾರ ಈಗ ಎಚ್ಡಿಕೆಗೆ ಬಿಟ್ಟಿದ್ದು. ಬಿಜೆಪಿಯೊಂದಿಗೆ ಈ ಬಗ್ಗೆ ಏನೂ ಚರ್ಚಿಸಲಾಗಿಲ್ಲ. ಇದು ಶಾಸಕರ ಅಭಿಪ್ರಾಯಗಳು ಮಾತ್ರ ”ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನೂತನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ವಿಶ್ವಾಸಮತವನ್ನು ಸಾಬೀತುಪಡಿಸಲಿರುವ ಮುಂಚಿತವಾಗಿ ಈ ಬೆಳವಣಿಗೆ ನಡೆದಿರುವುದು ಭಾರೀ ಕುತೂಹಲವನ್ನು ಕೆರಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.