ಬೆಂಗಳೂರು: ವಿಶ್ವಾಸಮತ ಗಳಿಸುವಲ್ಲಿ ಮೈತ್ರಿ ಸರ್ಕಾರ ವಿಫಲವಾದ ಹಿನ್ನಲೆಯಲ್ಲಿ ಬಿಜೆಪಿಯು ಸರ್ಕಾರ ರಚನೆಗೆ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ರಾಜ್ಯಪಾಲ ವಜುಭಾಯ್ ವಾಲ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡುವುದಾಗಿ ಬಿಜೆಪಿ ಮುಖಂಡ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
“ಪ್ರಧಾನಿ ಮತ್ತು ಅಮಿತ್ ಶಾ ಅವರೊಂದಿಗೆ ಚರ್ಚಿಸುತ್ತೇನೆ, ನಂತರ ರಾಜ್ಯಪಾಲರನ್ನು ಭೇಟಿಯಾಗುತ್ತೇನೆ” ಎಂದು ಯಡಿಯೂರಪ್ಪ ಹೇಳಿದ್ದಾರೆ. ಮಂಗಳವಾರ ರಾತ್ರಿಯೇ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಲಾಗಿದೆ.
ಕಾಂಗ್ರೆಸ್-ಜೆಡಿಎಸ್ ಸರ್ಕಾರ ವಿಶ್ವಾಸಮತಗಳಿಸಲು ವಿಫಲವಾದ ತಕ್ಷಣವೇ ಯಡಿಯೂರಪ್ಪನವರು ಅಮಿತ್ ಶಾ ಅವರಿಗೆ ಪತ್ರವನ್ನು ಬರೆದಿದ್ದಾರೆ, “ನಿಮ್ಮ ಮತ್ತು ಪಕ್ಷದ ನಾಯಕರು ನೀಡಿದ ಬೆಂಬಲಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಅರ್ಪಿಸುತ್ತೇನೆ” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ವಿಶ್ವಾಸಮತ ಸಾಬೀತುಪಡಿಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಫಲವಾದ ಹಿನ್ನಲೆಯಲ್ಲಿ 14 ತಿಂಗಳ ಸರ್ಕಾರ ಬಿದ್ದು ಹೋಗಿದೆ. ವಿಶ್ವಾಸಮತ ನಿರ್ಣಯದ ಪರವಾಗಿ 99 ಮತಗಳು, ವಿರುದ್ಧವಾಗಿ 105 ಮತಗಳು ದೊರೆಯಿತು. ಸದನದಲ್ಲಿ ಸ್ಪೀಕರ್ ಹೊರತುಪಡಿಸಿ ಒಟ್ಟು 204 ಮಂದಿ ಸದಸ್ಯರು ಹಾಜರಿದ್ದರು.
ಎಚ್.ಡಿ. ಕುಮಾರಸ್ವಾಮಿಯವರು ರಾಜ್ಯಪಾಲರ ಬಳಿ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ರಾಜ್ಯಪಾಲರು ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ, ಆದರೆ ಮುಂದಿನ ಮುಖ್ಯಮಂತ್ರಿ ನೇಮಕವಾಗುವವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಮನವಿ ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.