ನವದೆಹಲಿ: ಮುಂಬಯಿ ದಾಳಿಯ ರುವಾರಿ ಹಫೀಝ್ ಸಯೀದ್ನನ್ನು ಕೊನೆಗೂ ಪಾಕಿಸ್ಥಾನ ಬಂಧಿಸಿ ಜೈಲಿಗಟ್ಟಿದೆ. ಇತ್ತೀಚಿಗಷ್ಟೇ ವಿಶ್ವಸಂಸ್ಥೆ ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿತ್ತು. ಜಾಗತಿಕ ಮಟ್ಟದಲ್ಲಿ ಒತ್ತಡಗಳು ಬೀಳುತ್ತಿದ್ದಂತೆ ಅನಿವಾರ್ಯವಾಗಿ ಪಾಕಿಸ್ಥಾನ ಆತನ ವಿರುದ್ಧ ಕ್ರಮ ಜರುಗಿಸುತ್ತಿದೆ.
ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕಾಗೆ ದ್ವಿಪಕ್ಷೀಯ ಭೇಟಿ ಕೊಡುವುದಕ್ಕೂ ಒಂದು ದಿನ ಮುಂಚಿತವಾಗಿ ಹಫೀಜ್ ಸಯೀದ್ ಬಂಧನವಾಗಿದೆ.
ಈತ ಲಾಹೋರ್ನಿಂದ ಗುಜ್ರಾನ್ವಾಲಾಕ್ಕೆ ತೆರಳುತ್ತಿದ್ದಾಗ ಅಧಿಕಾರಿಗಳು ಈತನನ್ನು ತಡೆದು ಬಂಧಿಸಿದ್ದಾರೆ. ಈತ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಸಂಘಟನೆಯ ಸಹ ಸಂಸ್ಥಾಪಕ ಮತ್ತು ನಿಷೇಧಿತ ಜಮಾಅತ್-ಉದ್-ದವಾದ ಮುಖ್ಯಸ್ಥ ಮತ್ತು ಫಲಾ-ಎ-ಇನ್ಸಾನಿಯತ್ ಫೌಂಡೇಶನ್ (ಎಫ್ಐಎಫ್) ಮುಖ್ಯಸ್ಥನಾಗಿದ್ದಾನೆ. ಈತನನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ ಎಂದು ಪಾಕ್ ಮೂಲಗಳು ತಿಳಿಸಿವೆ.
ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಹಫೀಝ್ ಸಯೀದ್, ಪಾಕಿಸ್ಥಾನದಲ್ಲಿ 23 ಭಯೋತ್ಪಾದನಾ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಮುಂಬಯಿ ದಾಳಿಯಲ್ಲಿ ಈತನ ಪಾತ್ರವಿದೆ ಎಂದು ಸಾಕ್ಷಿ ಸಮೇತ ಭಾರತ ತೋರಿಸಿದರೂ, ಪಾಕಿಸ್ಥಾನ ಮಾತ್ರ ಈತನನ್ನು ತನ್ನ ನೆಲದಲ್ಲಿ ಸ್ವತಂತ್ರವಾಗಿ ಓಡಾಡಲು ಬಿಟ್ಟಿತ್ತು. ಭಾರತ ವಿರೋಧಿ ಸಮಾವೇಶಗಳನ್ನು ಆಯೋಜನೆಗೊಳಿಸುವುದಕ್ಕೂ ಈತನಿಗೆ ಅವಕಾಶ ನೀಡುತ್ತಿತ್ತು.
2017 ರಲ್ಲಿ ಹಫೀಜ್ ಸಯೀದ್ ಮತ್ತು ಆತನ ನಾಲ್ವರು ಸಹಾಯಕರನ್ನು ಪಾಕಿಸ್ಥಾನ ಸರ್ಕಾರ ಭಯೋತ್ಪಾದಕ ಕಾನೂನಿನಡಿಯಲ್ಲಿ ಬಂಧಿಸಿತ್ತು. ಆದರೆ ಪಂಜಾಬ್ನ ನ್ಯಾಯಾಂಗ ಪರಿಶೀಲನಾ ಮಂಡಳಿಯು ಆತನ ಬಂಧನವನ್ನು ವಿಸ್ತರಿಸಲು ನಿರಾಕರಿಸಿ, ಸುಮಾರು 11 ತಿಂಗಳ ನಂತರ ಬಿಡುಗಡೆ ಮಾಡಿತ್ತು.
ಇದೀಗ ಮತ್ತೊಮ್ಮೆ ಆತನನ್ನು ಬಂಧಿಸಲಾಗಿದೆ. ಆದರೆ ಎಷ್ಟರ ಮಟ್ಟಿಗೆ ಆತನಿಗೆ ಶಿಕ್ಷೆಯನ್ನು ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.