ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಆಯೋಜನೆ ಮಾಡಲಾಗುತ್ತಿರುವ 5ನೇ ವರ್ಷದ ಸ್ವಚ್ಛ ಮಂಗಳೂರು ಅಭಿಯಾನದ 32ನೇ ಭಾನುವಾರದ ಶ್ರಮದಾನವನ್ನು ಮಿಷನ್ ಸ್ಟ್ರೀಟ್ ಹಾಗೂ ನೆಲ್ಲಿಕಾಯಿ ರಸ್ತೆಯಲ್ಲಿ ನಡೆಸಲಾಯಿತು. ದಿನಾಂಕ 14-7-2019 ಆದಿತ್ಯವಾರದಂದು ಬೆಳಿಗ್ಗೆ 7-30 ಕ್ಕೆ ಚಾಲನೆ ದೊರೆಯಿತು. ಶ್ರೀಮತಿ ರೇಶ್ಮಾ ಮಲ್ಯ, ಜನರಲ್ ಮೆನೇಜರ್ ಕ್ಯಾಂಪ್ಕೊ ಲಿ. ಹಾಗೂ ಯೋಗೀಶ್ ಪ್ರಭು, ಅಸಿಸ್ಟೆಂಟ್ ಮೆನೇಜರ್ ಕಾರ್ಪೊರೇಶನ್ ಬ್ಯಾಂಕ್ ಇವರುಗಳು ಶ್ರಮದಾನವನ್ನು ಶುಭಾರಂಭ ಮಾಡಿದರು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಎಂ.ಆರ್.ಪಿ.ಎಲ್, ಚೀಫ್ ಜನರಲ್ ಮೆನೇಜರ್ ಸುಭಾಷ ಪೈ, ಸುಬ್ರಾಯ ನಾಯಕ್, ಲತಾಮಣಿ ರೈ, ದಿನೇಶ್ ಕರ್ಕೇರಾ, ಸುನಂದಾ ಶಿವರಾಂ, ಸಂತೋಷ ಸುವರ್ಣ, ಮೋಹನ್ ಭಟ್, ಉಮಾನಾಥ್ ಕೋಟೆಕಾರ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಶ್ರೀಮತಿ ರೇಶ್ಮಾ ಮಲ್ಯ ಭಾರತೀಯ ಸಂಸ್ಕೃತಿಯಲ್ಲಿ ಸ್ವಚ್ಛತೆಗೆ ಅತ್ಯುಚ್ಛ ಸ್ಥಾನವನ್ನು ನೀಡಿದಾಗ್ಯೂ ಕಾರಣಾಂತರಗಳಿಂದ ನಮ್ಮ ನಗರಗಳನ್ನು ಸ್ವಚ್ಛವಾಗಿಡುವಲ್ಲಿ ಎಡವಿದ್ದೇವೆ. ಮನೆ ಹಾಗೂ ಮನೆಯ ಪರಿಸರವನ್ನು ಬಹಳ ಒಪ್ಪ-ಓರಣವಾಗಿಡುವ ನಾವು ಸಾರ್ವಜನಿಕ ಸ್ಥಳಗಳನ್ನು ಕೊಳಕು ಮಾಡುವ ಮನಸ್ಥಿತಿಯಿಂದ ಹೊರಬರಬೇಕಿದೆ. ಈಗೀಗ ಸ್ವಚ್ಛ ಭಾರತ ಅಭಿಯಾನದಿಂದಾಗಿ ಜನರಲ್ಲಿ ಈ ಕುರಿತು ಅರಿವು ನಿಧಾನವಾಗಿ ಮೂಡುತ್ತಿದೆ. ವಿಶೇಷವಾಗಿ ಮಕ್ಕಳು ಹೆಚ್ಚು ಜಾಗೃತರಾಗಿದ್ದಾರೆ. ದೊಡ್ಡವರು ಕಸ ಬಿಸಾಡಿದರೆ ಮಕ್ಕಳೇ ಅವರನ್ನು ತಡೆಯುತ್ತಿರುವ ಸಾಕಷ್ಟು ನಿದರ್ಶನಗಳನ್ನು ಕಾಣಬಹುದಾಗಿದೆ. ಈ ತೆರನಾದ ಕಾರ್ಯಕ್ರಮಗಳಿಂದಾಗಿ ಮುಂಬರುವ ಜನಾಂಗ ಸ್ವಚ್ಛತೆ, ಪರಿಸರ ಸಂರಕ್ಷಣೆ, ಸಾಮಾಜಿಕ ಜವಾಬ್ದಾರಿ ಮತ್ತಿತರ ಗುಣಗಳನ್ನು ಖಂಡಿತವಾಗಿ ಮೈಗೂಡಿಸಿಕೊಳುತ್ತಾರೆ ಎಂದು ಆಶಿಸಿ, ಶುಭಹಾರೈಸಿದರು.
ಸ್ವಚ್ಛತೆ: ಶ್ರಮದಾನಕ್ಕೆ ಚಾಲನೆ ದೊರಕಿದ ಬಳಿಕ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ನಾಲ್ಕು ಗುಂಪುಗಳನ್ನು ರಚಿಸಿ ಕಾರ್ಯಗಳನ್ನು ಹಂಚಿಕೆ ಮಾಡಿದರು. ಪ್ರಥಮ ತಂಡ ಮಧುಚಂದ್ರ ಆಡ್ಯಂತಾಯ ನೇತೃತ್ವದಲ್ಲಿ ಮಿಷನ್ ಸ್ಟ್ರೀಟ್ ಹಾಗೂ ಅಲ್ಲಿದ್ದ ತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿದ್ದ ಸ್ಥಳವನ್ನು ಸ್ವಚ್ಛಗೊಳಿಸಿತು. ಎರಡನೇ ಗುಂಪು ಸಂದೀಪ ಕೋಡಿಕಲ್ ಹಾಗೂ ಯೋಗೀಶ್ ಕಾಯರ್ತಡ್ಕ ಜೊತೆಗೂಡಿ ನೆಲ್ಲಿಕಾಯಿ ರಸ್ತೆಯನ್ನು ಸ್ವಚ್ಛಗೊಳಿಸಿ, ಅಲ್ಲಿಯೇ ಮೂಲೆಯೊಂದರಲ್ಲಿದ್ದ ತ್ಯಾಜ್ಯದ ರಾಶಿಗಳನ್ನು ಜೆ.ಸಿ.ಬಿ ಬಳಸಿಕೊಂಡು ತೆರವುಗೊಳಿಸಿತು. ತದನಂತರ ಅಲ್ಲಿ ದುರ್ನಾತ ಹರಡದಂತೆ ತಡೆಯಲು ಜಲ್ಲಿಹುಡಿಯನ್ನು ಹಾಕಿ ನೆಲವನ್ನು ಸಮತಟ್ಟುಗೊಳಿಸಲಾಯಿತು. ಮೂರನೇ ತಂಡ ಅನಿರುದ್ಧ ನಾಯಕ್ ಹಾಗೂ ಅವಿನಾಶ್ ಅಂಚನ್ ಜೊತೆಸೇರಿ ಮಿಷನ್ ಸ್ಟ್ರೀಟ್ ಹಾಗೂ ನೆಲ್ಲಿಕಾಯಿ ರಸ್ತೆಯ ಜಂಕ್ಷಣ್ನಲ್ಲಿದ್ದ ಕಸದರಾಶಿ ಹಾಗೂ ಕಟ್ಟಡತ್ಯಾಜ್ಯಗಳನ್ನು ತೆರವುಗೊಳಿಸಿ ಆ ಪರಿಸರವನ್ನು ಸ್ವಚ್ಛಗೊಳಿಸಿತು. ನಾಲ್ಕನೇ ತಂಡದಲ್ಲಿದ್ದ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಸರಿತಾ ಶೆಟ್ಟಿ, ಶ್ರೀಜಾ ಶ್ರೀಕಾಂತ್ ಮತ್ತು ವಿಧಾತ್ರಿ ನೇತೃತ್ವದಲ್ಲಿ ಶ್ರಮದಾನ ಮಾಡಿದ ಬಳಿಕ ಆ ಪರಿಸರದ ಜನರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಮನೆ ಭೇಟಿ ಹಾಗೂ ಅಂಗಡಿಯ ವರ್ತಕರಿಗೆ ಕರಪತ್ರ ಹಂಚಿ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಿದರು. ಇನ್ನುಳಿದ ಕಾರ್ಯಕರ್ತರು ಮಾರ್ಗಗಳನ್ನು, ಅದರ ಬದಿಗಳನ್ನು ಹಾಗೂ ತೋಡುಗಳನ್ನು ಶುಚಿಗೊಳಿಸಿದರು. ಹಿರಿಯ ಸ್ವಯಂ ಸೇವಕರು ಅನಧಿಕೃತ ಬ್ಯಾನರ್- ಪೋಸ್ಟರ್ಗಳನ್ನು ತೆರವುಗೊಳಿಸಿದರು.
ಕಣ್ಗಾವಲು ಪಡೆ: ನೆಲ್ಲಿಕಾಯಿ ರಸ್ತೆ ಹಾಗೂ ಮಿಷನ್ ಸ್ಟ್ರಿಟ್ನಲ್ಲಿನ ಮೂರು ಬೃಹತ್ ತ್ಯಾಜ್ಯರಾಶಿ ಬೀಳುವ ಸ್ಥಳಗಳನ್ನು ಇಂದು ಸ್ವಯಂಸೇವಕರು ಸ್ವಚ್ಛಗೊಳಿಸಿ, ಅಲ್ಲಿ ಅಲಂಕಾರಿಕ ಹೂಕುಂಡಗಳನ್ನಿಟ್ಟು ಆ ಜಾಗೆಯನ್ನು ಅಂದಗೊಳಿಸಿದ್ದಾರೆ. ಪ್ರತಿವಾರದಂತೆ ರಾಮಕೃಷ್ಣ ಮಿಷನ್ ಸ್ವಚ್ಛತಾ ಯೋಧರು ಜಗನ್ ಕೋಡಿಕಲ್ ಹಾಗೂ ಸುಧೀರ್ ವಾಮಂಜೂರು ಜೊತೆಸೇರಿ ಮುಂದಿನ ಒಂದು ವಾರಗಳ ಕಾಲ ಹಗಲಿರುಳು ಆ ಸ್ಥಳಗಳಲ್ಲಿ ಕಾವಲು ಕಾಯಲಿದ್ದಾರೆ. ಅಕಸ್ಮಾತ್ ಯಾರಾದರೂ ತ್ಯಾಜ್ಯ ಬಿಸಾಡಿದರೆ ಅವರನ್ನು ಗುರುತಿಸಿ, ಜಾಗೃತಿ ಮೂಡಿಸಿ ಮನಪರಿವರ್ತನೆ ಮಾಡಲು ಪ್ರಯತ್ನಿಸಲಿದ್ದಾರೆ.
ಕಸದ ಬುಟ್ಟಿಗಳ ವಿತರಣೆ: ರಾಮಕೃಷ್ಣ ಮಿಷನ್ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ‘ಕಸದ ಬುಟ್ಟಿ ಉಪಯೋಗಿಸಿ ಸ್ವಚ್ಛತೆಯಲ್ಲಿ ಕೈಜೋಡಿಸಿ’ ಅಭಿಯಾನದಡಿಯಲ್ಲಿ ನಗರದ ಚಿಕ್ಕಪುಟ್ಟ ಅಂಗಡಿಗಳಿಗೆ ಹಾಗೂ ಬೀದಿಬದಿಯ ವ್ಯಾಪಾರಿಗಳಿಗೆ ಕಸದಬುಟ್ಟಿಯನ್ನು ವಿತರಿಸುವ ಅಭಿಯಾನವನ್ನು ಕಳೆದ ತಿಂಗಳು ಆರಂಭಿಸಲಾಗಿತ್ತು. ಇಂದಿನವರೆಗೆ ಸುಮಾರು 300 ಕಸದ ಬುಟ್ಟಿಗಳನ್ನು ಸ್ಟೇಟ್ ಬ್ಯಾಂಕ್, ಬೈಕಂಪಾಡಿ, ಬಿಜೈ, ಹಂಪಣಕಟ್ಟೆ, ಬೊಕ್ಕಪಟ್ಣ, ಕುಲಶೇಖರ, ನಂದಿಗುಡ್ದ, ಬಂದರ್, ಉರ್ವಾಸ್ಟೋರ್, ಅಶೋಕ ನಗರ, ಕಾವೂರು ಇನ್ನಿತರ ಕಡೆಗಳಲ್ಲಿ ವಿತರಿಸಲಾಗಿದೆ. ಕಮಲಾಕ್ಷ ಪೈ ನೇತೃತ್ವದಲ್ಲಿ ಪುನೀತ್ ಪೂಜಾರಿ, ಸತೀಶ್ ಕೆಂಕನಾಜೆ, ಶಿವು ಪುತ್ತೂರು, ರವಿ ಕೆ ಆರ್, ಕೃಷ್ಣ ಜಿ, ಪ್ರಶಾಂತ ಉಪ್ಪಿನಂಗಡಿ ಹಾಗೂ ಇನ್ನಿತರ ಕಾರ್ಯಕರ್ತರು ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.