ಶ್ರೀನಗರ: ಭಾರತೀಯ ಯೋಧರ ಮಾನವೀಯತೆಯ ಮುಖ ಮತ್ತೊಮ್ಮೆ ಜಗತ್ತಿನ ಮುಂದೆ ತೆರೆದುಕೊಂಡಿದೆ. ಪಾಕಿಸ್ಥಾನದಿಂದ ಭಾರತದ ಕಡೆಗೆ ಹರಿದು ಬಂದ ಬಾಲಕನೊಬ್ಬನ ಶವವನ್ನು ನಮ್ಮ ಯೋಧರು ಪಾಕಿಸ್ಥಾನಕ್ಕೆ ಹಿಂದಿರುಗಿಸಿದ್ದಾರೆ. ಮಾತ್ರವಲ್ಲ, ಈ ಶವ ಕೊಳೆಯುವುದನ್ನು ತಡೆಗಟ್ಟುವ ಸಲುವಾಗಿ ಯೋಧರು ಬೆಟ್ಟದಿಂದ ಮಂಜನ್ನು ತಂದು ಶವದ ಸುತ್ತಲೂ ಇರಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಬಾಲಕನ ಶವ ಹಸ್ತಾಂತರದ ವಿಷಯವೂ ವಾಸ್ತವ ಗಡಿ ರೇಖೆಯ ಉಭಯ ಬದಿಗಳ ಗ್ರಾಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯನ್ನೇ ಮಾಡಿತ್ತು. ಗುರ್ಜ್ ಕಣಿವೆಯ ಅಖೂರ ಗ್ರಾಮದ 7 ವರ್ಷದ ಹಬೀಬ್ ಶೇಖ್ ಕಿಶನ್ ಗಂಗಾ ನದಿಯಲ್ಲಿ ಮುಳುಗಿದ್ದ. ಈತನ ಶವ ತೇಲಿಕೊಂಡು ಭಾರತದ ಗಡಿ ಪ್ರದೇಶಕ್ಕೆ ಬಂದಿತ್ತು.
ಬಾಲಕ ನಾಪತ್ತೆಯಾಗಿರುವುದು, ಆತನ ಕುಟುಂಬ ಕಣ್ಣೀರಿಡುತ್ತಿರುವ ದೃಶ್ಯಗಳು ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಶವ ಪತ್ತೆಯಾದ ಕೂಡಲೇ ಭಾರತೀಯ ಸೇನಾಧಿಕಾರಿಗಳು ಪಾಕ್ ಸೇನೆಗೆ ಮಾಹಿತಿಯನ್ನು ನೀಡಿದ್ದರು. ಆ ಪ್ರದೇಶದಲ್ಲಿ ಶವಾಗಾರ ಇಲ್ಲದ ಕಾರಣ, ಶವ ಕೊಳೆಯಬಹುದು ಎಂಬ ಆತಂಕದಿಂದ ಭಾರತೀಯ ಸೇನೆಯು ಗುರ್ಜ್ ಸಮೀಪವೇ ಶವವನ್ನು ಹಸ್ತಾಂತರ ಮಾಡುತ್ತೇವೆ ಎಂದಿತ್ತು. ಆದರೆ ನೆಲ ಬಾಂಬ್ ಇಟ್ಟಿರಬಹುದು ಎಂಬ ಆತಂಕದಿಂದ ಪಾಕ್ ಸೇನೆ ಇದಕ್ಕೆ ಒಪ್ಪಿಕೊಂಡಿರಲಿಲ್ಲ. ಕಪ್ವಾರ ಸಮೀಪ ಅಧಿಕೃತ ವಿನಿಮಯ ಕೇಂದ್ರದಲ್ಲೇ ಶವ ಪಡೆಯುತ್ತೇವೆ ಎಂದಿತ್ತು.
ಕೊನೆಗೆ ಭಾರತೀಯ ಯೋಧರು ಬೆಟ್ಟದಿಂದ ಮಂಜನ್ನು ತಂದು ಬಾಲಕನ ಶವದ ಸುತ್ತ ಇರಿಸಿ ಅದು ಕೆಡದಂತೆ ಕಾಪಾಡಿದ್ದಾರೆ. ಕೊನೆಗೆ ಮನಸ್ಸು ಬದಲಾಯಿಸಿಕೊಂಡ ಪಾಕ್ ಸೇನೆ ಗುರ್ಜ್ ಸಮೀಪ ಶವ ಪಡೆಯಲು ಒಪ್ಪಿಕೊಂಡಿತ್ತು. ನಿನ್ನೆ ಮಧ್ಯಾಹ್ನದ ವೇಳೆಗೆ ಶವವನ್ನು ಹಸ್ತಾಂತರ ಮಾಡಲಾಗಿದೆ. ಈ ವೇಳೆ ಎರಡೂ ಬದಿಯ ಸೈನಿಕರು ಭಾವುಕರಾಗಿ ಬಾಲಕನಿಗಾಗಿ ಕಣ್ಣೀರು ಮಿಡಿದಿದ್ದಾರೆ.
ಬಾಲಕನ ಶವ ಪತ್ತೆಯಾದ ಜಾಗದಲ್ಲೇ ಅದನ್ನು ಹಿಂದಿರುಗಿಸಲಾಗಿದೆ. ಮಾನವೀಯ ನೆಲೆಯಲ್ಲಿ ನಾವು ಈ ಕಾರ್ಯವನ್ನು ಮಾಡಿದ್ದೇವೆ. ಇಲ್ಲವಾದರೆ ಪ್ರತಿ ವಿನಿಮಯಗಳು ಅಧಿಕೃತ ವಿನಿಮಯ ಕೇಂದ್ರದಲ್ಲೇ ನಡೆಯುತ್ತದೆ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.