ಭುವನೇಶ್ವರ: ಒರಿಸ್ಸಾದ ಭುವನೇಶ್ವರ ಮೂಲದ ಆವಿಷ್ಕಾರಿಗಳಾದ ಪ್ರೇಮ್ ಪಾಂಡೆ ಮತ್ತು ಎಂ.ಡಿ ಅಹ್ಮದ್ ರಾಝಾ ಎಂಬುವವರು ಪ್ಲಾಸ್ಟಿಕ್ ಪೆನ್ನುಗಳಿಗೆ ಪರ್ಯಾಯವಾಗಿ, ನ್ಯೂಸ್ ಪೇಪರ್, ತರಕಾರಿ-ಹಣ್ಣು ಮತ್ತು ಹೂವಿನ ಬೀಜಗಳನ್ನು ಬಳಸಿ ಬಿಸಾಕಬಲ್ಲಂತಹ ಪರಿಸರ ಸ್ನೇಹಿಯಾದ ಪೆನ್ನುಗಳನ್ನು ತಯಾರಿಸಿದ್ದಾರೆ.
ಪ್ಲಾಸ್ಟಿಕ್ ಬಳಕೆಯಿಂದಾಗಿ ಹೆಚ್ಚುತ್ತಿರುವ ಸಮಸ್ಯೆಗಳು ಮತ್ತು ಪರಿಸರದ ಮೇಲೆ ಅದು ಬೀರುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಪಾಂಡೆ ಮತ್ತು ರಾಝಾ ಈ “ಪರಿಸರ ಸ್ನೇಹಿ ಪೆನ್”ಗಳನ್ನು ಕಂಡು ಹಿಡಿದಿದ್ದಾರೆ. ಈ ಪೆನ್ಗಳ ಮೂಲಕ ಪ್ಲಾಸ್ಟಿಕ್ ಪೆನ್ನುಗಳ ಪ್ರಾಬಲ್ಯವನ್ನು ಕುಗ್ಗಿಸಲು ಪ್ರಯತ್ನಿಸಿದ್ದಾರೆ. ಇವರಿಬ್ಬರು ಸ್ಥಾಪನೆ ಮಾಡಿರುವ ಸ್ಟಾರ್ಟ್ ಅಪ್ ‘ಲಿಖ್ನಾ’ ಈ ಪೆನ್ನುಗಳನ್ನು ತಯಾರಿಸುತ್ತದೆ.
ಈ ಪೆನ್ನುಗಳಲ್ಲಿ ಎರಡು ಮಾದರಿಗಳಿವೆ. ಒಂದು ತರಕಾರಿ, ಹಣ್ಣು ಮತ್ತು ಹೂವಿನ ಬೀಜಗಳನ್ನು ಒಳಗೊಂಡಿರುತ್ತದೆ. ಈ ಪೆನ್ನನ್ನು ಎಸೆದ ನಂತರ ಅದು ಸಸ್ಯಗಳಾಗಿ ರೂಪುಗೊಳ್ಳಬಹುದು, ಯಾಕೆಂದರೆ ಅದರೊಳಗೆ ಬೀಜಗಳಿರುತ್ತವೆ. ಇನ್ನೊಂದನ್ನು ಬೀಜಗಳಿಲ್ಲದೆ ತಯಾರಿಸಲಾಗುತ್ತದೆ. ಮೊದಲ ಮಾದರಿಯ ಪೆನ್ನಿನ ಬೆಲೆ ರೂ. 5 ಮತ್ತು ಇನ್ನೊಂದು ಪೆನ್ನಿನ ಬೆಲೆ 7 ರೂಪಾಯಿ.
“ಪ್ಲಾಸ್ಟಿಕ್ ನಮ್ಮ ಪರಿಸರಕ್ಕೆ ಸಾಕಷ್ಟು ಹಾನಿಯುಂಟು ಮಾಡುತ್ತಿರುವುದರಿಂದ ನಾವು ಪ್ಲಾಸ್ಟಿಕ್ ಪೆನ್ನುಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿ, ಬಳಸಿ ಎಸೆಯುವಂತಹ ಪೆನ್ನುಗಳನ್ನು ತಯಾರಿಸಲು ಪ್ರಯತ್ನಿಸಿದೆವು. ಈ ಪೆನ್ನುಗಳಲ್ಲಿ ಪ್ಲಾಸ್ಟಿಕ್ ಮರುಪೂರಣ ಇರುವುದರಿಂದ ಇವುಗಳು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿಲ್ಲ, ಆದರೆ ಪೆನ್ನಿನ ದೇಹವನ್ನು ನ್ಯೂಸ್ ಪೇಪರ್ಗಳಿಂದ ರಚನೆ ಮಾಡಲಾಗಿದೆ. ಆದ್ದರಿಂದ ಶೇ.100ರಷ್ಟು ಪ್ಲಾಸ್ಟಿಕ್ ಹೊಂದಿರುವ ಸಾಮಾನ್ಯ ಪೆನ್ನುಗಳಿಗೆ ಹೋಲಿಸಿದರೆ, ನಮ್ಮ ಪೆನ್ನುಗಳಲ್ಲಿ ಕೇವಲ ಶೇ. 10 ರಷ್ಟು ಪ್ಲಾಸ್ಟಿಕ್ ಇದೆ. ನಮ್ಮ ಮುಂದಿನ ಗುರಿ ಪ್ಲಾಸ್ಟಿಕ್ ಮರುಪೂರಣವನ್ನು ತೆಗೆದು ಹಾಕುವುದು ಮತ್ತು ಆ ಮೂಲಕ ಪೆನ್ನನ್ನು ಒಳಗೆ ಮತ್ತು ಹೊರಗೆ ಸಂಪೂರ್ಣವಾಗಿ ಪರಿಸರ ಸ್ನೇಹಿ ಪೆನ್ನನ್ನಾಗಿ ಮಾಡುವುದು” ಎಂದು ಪ್ರೇಮ್ ಪಾಂಡೆ ಹೇಳಿದ್ದಾರೆ.
“ಸಾಮಾನ್ಯವಾಗಿ ಬಳಸಿ ಎಸೆಯುವ ಪೆನ್ನುಗಳಿಗಿಂತ ಈ ಪೆನ್ನು ಸಾಕಷ್ಟು ಭಿನ್ನವಾಗಿದೆ, ಜನರು ಈ ಪೆನ್ನುಗಳನ್ನು ಮಡಕೆ ಅಥವಾ ಮಣ್ಣಿನಲ್ಲಿ ಹೂತು ಹಾಕಬಹುದು ಮತ್ತು ವಾರಗಳಲ್ಲಿ ಅದು ಸಸ್ಯವಾಗಿ ಮೊಳಕೆಯೊಡೆಯುತ್ತದೆ. ಈ ಪೆನ್ನುಗಳಿಗೆ ಭಾರತದಲ್ಲಿ ಮಾತ್ರವಲ್ಲದೆ ಜರ್ಮನಿ ಮತ್ತು ಆಸ್ಟ್ರೇಲಿಯಾದಿಂದಲೂ ಉತ್ತಮ ಪ್ರಶಂಸೆಗಳು ಬರುತ್ತಿವೆ. ಈ ಪೆನ್ನುಗಳು ಅಲ್ಲಿನ ಮಾರುಕಟ್ಟೆಗಳಲ್ಲೂ ಈಗ ಲಭ್ಯವಿದೆ” ಎಂದು ರಾಝಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.