ವಾರಣಾಸಿ: ಗಂಗಾ ನದಿಯಲ್ಲಿ ಇನ್ನು ಮುಂದೆ ತ್ಯಾಜ್ಯವನ್ನು ಎಸೆದರೆ ಭಾರೀ ಪ್ರಮಾಣದಲ್ಲಿ ದಂಡವನ್ನು ತೆರಬೇಕಾಗುತ್ತದೆ. ಒಬ್ಬ ವ್ಯಕ್ತಿ ಮೂರು ಬಾರಿ ಗಂಗಾ ನದಿಗೆ ತ್ಯಾಜ್ಯವನ್ನು ಎಸೆಯುವುದು ಕಂಡು ಬಂದರೆ ಆತನ ವಿರುದ್ಧ ಬರೋಬ್ಬರಿ ರೂ.50 ಸಾವಿರ ದಂಡವನ್ನು ವಿಧಿಸಲು ವಾರಣಾಸಿ ಜಿಲ್ಲಾಡಳಿತ ನಿರ್ಧರಿಸಿದೆ.
ಸೋಮವಾರ ನಡೆದ ಜಿಲ್ಲಾ ಪರಿಸರ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸುರೇಂದ್ರ ಸಿಂಗ್ ಅವರು ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲು ಸೂಚನೆಯನ್ನು ನೀಡಿದ್ದಾರೆ. ಗ್ರಾಮಗಳಲ್ಲಿ ಮೊದಲ ಬಾರಿಗೆ ಯಾರಾದರೂ ಗಂಗಾ ನದಿ ಮತ್ತು ಕೊಳಗಳಿಗೆ ತ್ಯಾಜ್ಯವನ್ನು ಎಸೆಯುತ್ತಿರುವುದು ಕಂಡುಬಂದರೆ 2000 ರೂಪಾಯಿಗಳ ದಂಡವನ್ನು ವಿಧಿಸುವಂತೆ ಸೂಚಿಸಿದ್ದಾರೆ.
ವ್ಯಕ್ತಿಯು ತನ್ನ ವರ್ತನೆಯನ್ನು ಸರಿಪಡಿಸದೆ ಎರಡನೇ ಬಾರಿಗೆ ತ್ಯಾಜ್ಯವನ್ನು ನದಿಗೆ ಎಸೆದರೆ 10,000 ರೂ.ಗಳ ದಂಡವನ್ನು ವಿಧಿಸುವಂತೆ, ವ್ಯಕ್ತಿಯು ಮೂರನೇ ಬಾರಿಗೆ ತಪ್ಪನ್ನು ಪುನರಾವರ್ತಿಸಿದರೆ, ಆತನ ಮೇಲೆ 50,000 ರೂ.ಗಳ ದಂಡವನ್ನು ವಿಧಿಸುವಂತೆ ಜಿಲ್ಲಾಧಿಕಾರಿ ಸೂಚನೆಯನ್ನು ನೀಡಿದ್ದಾರೆ.
ಅಂತೆಯೇ, ಕಾಲುವೆಗಳಿಗೆ ತ್ಯಾಜ್ಯವನ್ನು ಎಸೆಯುವುದು ಕಂಡು ಬಂದರೆ ಅಂತಹ ವ್ಯಕ್ತಿಗಳಿಗೆ ಮೊದಲನೇಯ ಬಾರಿಗೆ ರೂ.1,000, ಎರಡನೇಯ ಬಾರಿಗೆ ರೂ.20,000 ಮತ್ತು ಮೂರನೇಯ ಬಾರಿಗೆ ರೂ.50,000 ದಂಡ ವಿಧಿಸುವಂತೆ ಸೂಚನೆಯನ್ನು ನೀಡಿದ್ದಾರೆ.
ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗಂಗಾ ನದಿಯುದ್ದಕ್ಕೂ ಕಣ್ಗಾವಲು ಇಡಲು ವ್ಯವಸ್ಥೆ ಮಾಡಿ ಕ್ರಮ ಕೈಗೊಳ್ಳಬೇಕು, ಗಂಗೆಯ ಸುರಕ್ಷತೆಯ ವ್ಯವಸ್ಥೆಯಲ್ಲಿ ಯಾವುದೇ ತಪ್ಪುಗಳಾಗಬಾರದು ಎಂದು ಅವರು ಆದೇಶಿಸಿದ್ದಾರೆ.
ತ್ಯಾಜ್ಯ ವಿಲೇವಾರಿಗಾಗಿ ಕಸದ ತೊಟ್ಟಿಗಳನ್ನು ಇಟ್ಟುಕೊಳ್ಳದ ಅಂಗಡಿಯವರಿಗೆ ಮೊದಲ ಸಂದರ್ಭದಲ್ಲಿ 2,000 ರೂ, ಎರಡನೇ ಬಾರಿಗೆ 5,000 ರೂ ಮತ್ತು ಮೂರನೇ ಬಾರಿಗೆ 25,000 ರೂ. ದಂಡವನ್ನು ವಿಧಿಸಲು ಅವರು ಸೂಚಿಸಿದ್ದಾರೆ. ಅಂಗಡಿಗಳಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಇದೆಯೇ ಎಂದು ಪರಿಶೀಲಿಸಲು ವಾರಣಾಸಿ ಮಹಾನಗರ ಪಾಲಿಕೆಯ ಅಧಿಕಾರಿಗಳು ನಗರದ ಅಂಗಡಿಗಳಿಗೆ ಭೇಟಿ ಕೊಟ್ಟು ತಪಾಸಣೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.