ಸೇನೆಯ ಸಮವಸ್ತ್ರವನ್ನು ತೊಟ್ಟು ದೇಶಸೇವೆ ಮಾಡಬೇಕೆಂಬ ಅದಮ್ಯ ಆಶಯವನ್ನು ಇಟ್ಟುಕೊಂಡಿದ್ದ ಸಹೋದರರಿಬ್ಬರು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಅಭಿಮನ್ಯು ಗನಚಾರಿ ಮತ್ತು ಅವರ ಸಹೋದರ ಅಭಿನವ್ ಗನಚಾರಿ ಡೆಹ್ರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿ(IMA) ಯಿಂದ ಇತ್ತೀಚಿಗಷ್ಟೇ ಪಾಸ್ ಔಟ್ ಆಗಿದ್ದಾರೆ. 5 ಜಮ್ಮು ಕಾಶ್ಮೀರ ರೈಫಲ್ಸ್ (JAK RIF)ನ ಮೇಜರ್ ಆಗಿದ್ದ ಜಿ. ಗನಚಾರಿಯವರ ಮಕ್ಕಳಾಗಿರುವ ಇವರಿಗೆ, ಬಾಲ್ಯದಿಂದಲೂ ಸೇನೆಗೆ ಸೇರಬೇಕೆಂಬ ಗುರಿಯಿತ್ತು.
ಅಭಿಮನ್ಯು ಮತ್ತು ಅಭಿನವ್ 10 ಮತ್ತು 7 ವರ್ಷದವರಿದ್ದಾಗಲೇ ತಂದೆ ಜಿ.ಗನಚಾರಿ ಅವರನ್ನು ಕಳೆದುಕೊಂಡಿದ್ದಾರೆ. ಆದರೆ ಆ ವಯಸ್ಸಿಗಾಗಲೇ ತಂದೆಯಿಂದ ಸ್ಪೂರ್ತಿ ಪಡೆದುಕೊಂಡ ಮಕ್ಕಳು, ಅವರಂತೆಯೇ ಒಂದು ದಿನ ಸಮವಸ್ತ್ರ ತೊಟ್ಟು ಸೇನೆ ಸೇರಬೇಕೆಂಬ ಕನಸನ್ನು ಚಿಗುರಿಸಿಕೊಂಡಿದ್ದರು. ತಾಯಿ ಸುನಂದಾ ಗನಚಾರಿ ಮಕ್ಕಳ ಕನಸಿಗೆ ನೀರೆರೆದು ಪೋಷಿಸಿದರು. ಅವರಿಗೆ ಉತ್ತಮವಾದುದ್ದನ್ನೇ ಸಿಗುವಂತೆ ಮಾಡಿದರು.
ಈ ಸಹೋದರರ ಕನಸು ಜೂನ್ 8, 2019ರಂದು ನನಸಾಗುತ್ತಿದ್ದಂತೆ, ಭಾರತೀಯ ಸೇನೆಯು ಇವರ ಪ್ರೇರಣಾದಾಯಕ ಕಥೆಯನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಡೆಹ್ರಾಡೂನ್ ಮಿಲಿಟರಿ ಅಕಾಡೆಮಿಯಿಂದ ಪಾಸ್ ಔಟ್ ಆದ 459 ಉದಯೋನ್ಮುಖ ಯುವ ಸೈನಿಕರ ಪೈಕಿ ಇವರಿಬ್ಬರು ಕೂಡ ಸೇರಿದ್ದಾರೆ.
ಬಾಲ್ಯದಲ್ಲಿ ಈ ಸಹೋದರರು ತಮ್ಮ ತಂದೆಯನ್ನು ಸೇನಾ ಸಮವಸ್ತ್ರದಲ್ಲಿ ನೋಡಿದ್ದರು, ಅವರಿಂದ ಸ್ಫೂರ್ತಿ ಪಡೆದರು, ಆದರೆ ಸೇನಾಧಿಕಾರಿಯಾಗಿದ್ದ ತಮ್ಮ ತಂದೆ 2003 ರಲ್ಲಿ ನಿಧನರಾದಾಗ ಇವರ ಜೀವನ ದುರಂತಕ್ಕೀಡಾಯಿತು. ಅವರ ಸಾವು ಪತ್ನಿ ಸುನಂದಾ ಮತ್ತು ಇಬ್ಬರು ಪುಟಾಣಿ ಮಕ್ಕಳನ್ನು ಸಂಕಷ್ಟಕ್ಕೆ ದೂಡಿತು. ಪತಿಯ ಮರಣದ ನಂತರ ಕುಟುಂಬ ನಿರ್ವಹಣೆ ಮಾಡುವುದು ಸುನಂದಾ ಅವರಿಗೆ ಸುಲಭದ ಮಾತಾಗಿರಲಿಲ್ಲ. ತನ್ನ ಪುತ್ರರಿಗೆ ಉತ್ತಮವಾದದನ್ನು ಒದಗಿಸುವುದರ ಜೊತೆಗೆ ಹಣಕಾಸಿನ ಸವಾಲುಗಳನ್ನು ಎದುರಿಸಬೇಕಾಗದ ಪರಿಸ್ಥಿತಿ ಅವರಿಗೆ ಒದಗಿತ್ತು.
ಆಗ ಈ ಕುಟುಂಬದ ನೆರವಿಗೆ ಬಂದವರು 5 ಜಮ್ಮು ಕಾಶ್ಮೀರ ರೈಫಲ್ಸ್ (JAK RIF)ನ ಮೇಜರ್ ಆಗಿದ್ದ ಸೇವಾ ನಿರತ ಬ್ರಿಗೇಡಿಯರ್. ಸುನಂದ ಅವರಿಗೆ ಒಂದು ಉದ್ಯೋಗವನ್ನು ದೊರಕಿಸಿಕೊಡುವಲ್ಲಿ, ಪಿಂಚಣಿಯನ್ನು ಗಿಟ್ಟಿಸಿಕೊಡುವಲ್ಲಿ ಈ ಕುಟುಂಬಕ್ಕೆ ಅವರು ಸಾಕಷ್ಟು ನೆರವು ನೀಡಿದರು. ಸಹೋದರರು ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಅವರ ಬೆಂಬಲ ಸಾಕಷ್ಟಿದೆ.
ಈ ಸಹೋದರರ ಜೀವನದಲ್ಲಿ ಎರಡನೇಯ ದುರಂತ ಸಂಭವಿಸಿದ್ದು 2014ರಲ್ಲಿ, ತಾಯಿ ಸುನಂದ ಇಹಲೋಕವನ್ನು ತ್ಯಜಿಸಿದ್ದ ವೇಳೆ. ಆಗ ಅಭಿಮನ್ಯು IMA ನಲ್ಲಿ ಅಂತಿಮ ವ್ಯಾಸಂಗ ಮಾಡುತ್ತಿದ್ದರು ಮತ್ತು ಅಭಿನವ್ ಎಂಜಿನಿಯರ್ ಸೇರುವ ಹಂತದಲ್ಲಿದ್ದರೂ. ಆದರೂ ಇವರ ಗುರಿ ಇದ್ದದ್ದು ಸೇನೆ ಸೇರುವತ್ತ ಮಾತ್ರ.
ಆರು ತಿಂಗಳ ಬಳಿಕ ಅಂದರೆ 2014ರ ಡಿಸೆಂಬರಿನಲ್ಲಿ ಅಭಿಮನ್ಯು ಕಾರ್ಪ್ಸ್ ಆಫ್ ಎಂಜಿನಿಯರಿಂಗ್ ಸೇರ್ಪಡೆಗೊಂಡರು. ಅದೇ ವೇಳೆ, ಅಭಿನವ್ ಬ್ರಿಗೇಡಿಯರ್ ಸಹಾಯದೊಂದಿಗೆ ತನ್ನ ಕನಸನ್ನು ನನಸಾಗಿಸಿಕೊಳ್ಳುವತ್ತ ದಾಪುಗಾಲಿಟ್ಟರು. ತರಬೇತಿ ಪಡೆಯಲು, ಕೌನ್ಸೆಲಿಂಗ್ ಪಡೆಯಲು ಎಲ್ಲಾ ವ್ಯವಸ್ಥೆಯನ್ನೂ ಬ್ರಿಗೇಡಿಯರ್ ಇವರಿಗೆ ಮಾಡಿಕೊಟ್ಟರು.
2019 ರ ಜೂನ್ 8ರಂದು 18 BIHAR ಕಮಿಷನ್ ಸೇರಿಕೊಂಡಾಗ ಇವರ ಪರಿಶ್ರಮ ಫಲ ನೀಡಿತು ಮತ್ತು ತಾಯಿಯ ಕನಸೂ ಈಡೇರಿತು. ಜೀವದ ಸಹೋದರರಾಗಿದ್ದ ಇವರು ‘ಬ್ರದರ್ಸ್ ಇನ್ ಆರ್ಮ್ಸ್’ ಆಗಿಯೂ ಹೊರಹೊಮ್ಮಿದರು.
“ಎಂತಹ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಬೆಳವಣಿಗೆ ಹೊಂದುವ ಸೇನಾ ಕುಟುಂಬಗಳ ದೃಢ ಸಂಕಲ್ಪವನ್ನು ಗನಚಾರಿ ಸಹೋದರರ ಕಥೆ ಪ್ರತಿಬಿಂಬಿಸುತ್ತದೆ. ಇದಕ್ಕಾಗಿ ಉತ್ತಮ ಬೆಳವಣಿಗೆಯ ಪರಿಸರ ಮತ್ತು ಭಾರತೀಯ ಸೇನೆಗೆ ಬೆನ್ನೆಲುಬಾಗಿ ನಿಂತಿರುವ ಬಲಿಷ್ಠ ರೆಜಿಮೆಂಟಲ್ ಮೌಲ್ಯಗಳಿಗೆ ಧನ್ಯವಾದಗಳು” ಎಂದು ಸೇನೆ ತನ್ನ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.