‘ಮೈ ವಿಲೇಜ್ ಶೋ(ಎಂವಿಎಸ್) ಯುಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಆಗಿರುವ ಅಸಾಮಾನ್ಯ ಹಾಸ್ಯ ಮತ್ತು ತೆಲಂಗಾಣದ ಗ್ರಾಮವೊಂದರ ದೈನಂದಿನ ಬದುಕಿನ ಜಂಜಾಟಗಳ ಬಗೆಗಿನ ವೀಡಿಯೋಗಳ ಮೂಲಕ ಆಕೆ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾಳೆ.
ಭರಪೂರ ತಮಾಷೆಯನ್ನು ಹೊಂದಿರುವ ಈ ವೀಡಿಯೋಗಳು ಅತ್ಯುತ್ತಮ ಸಂದೇಶ ರವಾನಿಸುವುದರ ಜೊತೆಗೆ ಗ್ರಾಮೀಣ ಪ್ರತಿಭೆಯನ್ನು ಅನಾವರಣಗೊಳಿಸುತ್ತವೆ. ಗ್ರಾಮೀಣ ತಂಡವೊಂದು ಈ ಯೂಟ್ಯೂಬ್ ಚಾನೆಲ್ ರಚಿಸಿ, ತಾವೇ ಚಿತ್ರೀಕರಿಸಿದ ವೀಡಿಯೋಗಳನ್ನು ಅದರಲ್ಲಿ ಹರಿಬಿಡುತ್ತಿದೆ. ಆದರೆ ಈ ವೀಡಿಯೋದಲ್ಲಿರುವ 58 ವರ್ಷದ ಮಿಲ್ಕುರಿ ಗಂಗವ್ವ ಬಹುತೇಕ ವೀಕ್ಷಕರ ಫೇವರೇಟ್ ಆಗಿದ್ದಾರೆ.
ಲಂಬಾಡಿಪಲ್ಲಿಯ ರೈತ ಮಹಿಳೆಯಾಗಿರುವ ಗಂಗವ್ವ ತನ್ನ ಜೀವನದ ಬಹುಭಾಗವನ್ನು ಹೊಲಗಳಲ್ಲಿ ಕೆಲಸ ಮಾಡುವ ಮೂಲಕ ಕಳೆದಿದ್ದಾರೆ. ಆದರೆ ಇಂದು ಅವರು ಯೂಟ್ಯೂಬ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಎಂವಿಎಸ್ ಚಾನೆಲ್ ಸ್ಥಾಪನೆ ಮಾಡಿರುವ ಶ್ರೀಕಾಂತ್ ಶ್ರೀರಾಮ್ ಎಂಬುವವರು, ಗಂಗವ್ವ ಅವರನ್ನು ತಮ್ಮ ತಂಡ ಸೇರಲು ವಿನಂತಿಸಿದಾಗ ಆಕೆಗೆ ಯುಟ್ಯೂಬ್ ಬಗ್ಗೆಯಾಗಲಿ, ನಟನೆಯ ಬಗ್ಗೆಯಾಗಲಿ ಏನೇನೂ ತಿಳಿದಿರಲ್ಲ. ಆದರೂ ಒಂದು ಪ್ರಯತ್ನ ಮಾಡೇ ಬಿಡುವ ಎಂದು ಆಕೆ ಅವರ ವಿನಂತಿಗೆ ಒಪ್ಪಿಕೊಂಡಳು.
ಶ್ರೀಕಾಂತ್ ಅವರು 2012 ರಲ್ಲಿ ಚಾನೆಲ್ ಅನ್ನು ಪ್ರಾರಂಭಿಸಿದ್ದು, ಗಣಿತ ಪ್ರಾಧ್ಯಾಪಕರಾದ ಅನಿಲ್ ಗೀಲಾ ಅವರು ನಂತರ ಈ ಚಾನೆಲ್ ಸೇರಿಕೊಂಡಿದ್ದಾರೆ. ಇವರಿಬ್ಬರು ಈಗಾಗಲೇ ಹಲವು ವೀಡಿಯೋ ಮೂಲಕ ಹೆಸರು ಮಾಡಿದ್ದಾರೆ. ಅದರಲ್ಲೂ ಕಿಕಿ ಚಾಲೆಂಜ್ ಅನ್ನು ಭತ್ತದ ಗದ್ದೆಯಲ್ಲಿ ಕೋಣಗಳನ್ನು ಓಡಿಸುವ ಮೂಲಕ ಮಾಡಿ ಇವರಿಬ್ಬರು ಸೆನ್ಸೇಷನ್ ಸೃಷ್ಟಿಸಿದ್ದರು.
ಆದರೆ ‘ಯೂಟ್ಯೂಬರ್’ಗಳಾಗಿ ಇವರು ತಮ್ಮ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸುತ್ತಿದ್ದಂತೆ, ಗ್ರಾಮೀಣ ಪ್ರತಿಭೆಗಳನ್ನು ತಮ್ಮ ವೀಡಿಯೋದ ಭಾಗವಾಗುವಂತೆ ಮಾಡಿದರು. ಪ್ರಸ್ತುತ ಇವರ ತಂಡದಲ್ಲಿ ಸ್ಕ್ರಿಪ್ಟ್ ಬರೆಯಲು, ಕ್ಯಾಮರಾ ಕೆಲಸ ಮಾಡಲು, ಎಡಿಟ್ ಮತ್ತು ಸಾಮಾಜಿಕ ಜಾಲ ತಾಣ ನಿರ್ವಹಣೆ ಮಾಡಲು ಒಟ್ಟು 8 ಸದಸ್ಯರಿದ್ದಾರೆ.
ತಾಯಿಯ ಸ್ನೇಹಿತೆಯಾಗಿ ಗಂಗವ್ವ ಶ್ರೀಕಾಂತ್ ಅವರಿಗೆ ಪರಿಚಯ. ವಯಸ್ಸಾದ ಮಹಿಳೆಗಾಗಿ ಹುಡಕುತ್ತಿದ್ದಾಗ ಗಂಗವ್ವ ಇವರ ಅದ್ಭುತ ಆಯ್ಕೆಯಾಗಿ ಹೊರಹೊಮ್ಮಿದರು. ಶ್ರೀಕಾಂತ್ ಪ್ರೇರಣೆಯಿಂದ ಆಕೆ ಕ್ಯಾಮೆರಾ ಎದುರಿಸಿ ಯಶಸ್ವಿಯಾದರು. ಕುಡಿದು ವಾಹನ ಓಡಿಸದಂತೆ ಜಾಗೃತಿ ಮೂಡಿಸುವ, ಕೊಲೆ, ದರೋಡೆಗಳ ಬಗ್ಗೆ ಅರಿವು ಮೂಡಿಸುವ ವೀಡಿಯೋಗಳಲ್ಲಿ ಅಭಿನಯಿಸಿ ಇವರು ಪ್ರಸಿದ್ಧರಾಗಿದ್ದಾರೆ. ಇವರು ಅಭಿನಯಿಸಿದ್ದ “ವಿಲೇಜ್ ಲೊ ಡ್ರಂಕ್ ಆ್ಯಂಡ್ ಡ್ರೈವ್’ ವಿಡಿಯೋ 6.5 ಮಿಲಿಯನ್ ಯೂಟ್ಯೂಬ್ ವ್ಯೂವ್ ಪಡೆದುಕೊಂಡಿದೆ.
ಅವರ ಅಭಿನಯಕ್ಕೆ ತೆಲುಗು ಜನತೆ ಫಿದಾ ಆಗಿದ್ದಾರೆ. ವಿಜಯ್ ದೇವರಕೊಂಡ, ಪ್ರಿಯದರ್ಶಿನಿ ಮುಂತಾದ ಖ್ಯಾತ ಸಿನಿಮಾ ನಟರನ್ನು ಭೇಟಿಯಾಗುವ ಅವಕಾಶ ಗಂಗವ್ವ ಅವರಿಗೆ ಸಿಕ್ಕಿದೆ. ಮಾತ್ರವಲ್ಲ, ಪದ್ಮಶ್ರೀ ಪುರಸ್ಕೃತ ಚಿಂತಕಿಂಡಿ ಮಲ್ಲೇಶಂ ಅವರ ಜೀವನಾಧಾರಿತ ಚಿತ್ರದಲ್ಲಿ ಅಭಿನಯಿಸುವ ಸುವರ್ಣಾವಕಾಶವೂ ಇವರಿಗೆ ದೊರೆತಿದೆ.
ಗಂಗವ್ವ ಅವರ ಮಗ ರೈತನಾಗಿದ್ದು, ಆತನಿಗೆ ಕೃಷಿ ಕಾರ್ಯದಲ್ಲಿ ಸಹಾಯ ಮಾಡುವ ಕಾರ್ಯವನ್ನು ಗಂಗವ್ವ ಮಾಡುತ್ತಿದ್ದಾರೆ. ಆದರೆ ವೀಡಿಯೋದಲ್ಲಿ ಅಭಿನಯಿಸುವ ಕಾರ್ಯವನ್ನೂ ಅವರು ಅತ್ಯಂತ ಸಂತೋಷದಿಂದ ಮಾಡುತ್ತಿದ್ದಾರೆ. ತಮಾಷೆಯ ಮೂಲಕ ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಕಾರ್ಯ ಅವರಿಗೆ ಸಂತೃಪ್ತಿಯನ್ನು ನೀಡಿದೆ. “ನಾವು ಗ್ರಾಮೀಣ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಸ್ಯದ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ, ಹಾಸ್ಯದ ಮೂಲಕ ತಮ್ಮ ಜೀವನದ ಬಗ್ಗೆ ಜನರಿಗೆ ತಿಳಿಸುವುದು ಒಂದು ಉತ್ತಮ ಮಾರ್ಗವೆಂದು ಭಾವಿಸಿದ್ದೇನೆ” ಎಂದು ಗಂಗವ್ವ ಹೇಳುತ್ತಾರೆ.
“ನಾವು ಮೊದಲು ಅವರಿಗೆ ಸ್ಕ್ರಿಪ್ಟ್ ಓದಿ ಹೇಳುತ್ತೇವೆ, ಅವರು ಒಮ್ಮೆ ಅದನ್ನು ಆಲಿಸುತ್ತಾರೆ. ಚಿತ್ರೀಕರಣದ ಸಮಯದಲ್ಲಿ ತನ್ನದೇ ಆದ ಧಾಟಿಯಲ್ಲಿ ಸುಧಾರಣೆ ಮಾಡಿಕೊಂಡು ಅವರು ಅಭಿನಯಿಸುತ್ತಾರೆ. ಗಂಗವ್ವ ಯಾವುದೇ ಡೈಲಾಗ್ಗಳನ್ನು ನೆನಪಿಟ್ಟುಕೊಳ್ಳಬೇಕಂತಿಲ್ಲ, ಕ್ಯಾಮೆರಾದ ಮುಂದೆ ಅವರು ಅದ್ಭುತವಾಗಿಯೇ ನಟಿಸುತ್ತಾರೆ ”ಎಂದು ಶ್ರೀಕಾಂತ್ ಹೇಳುತ್ತಾರೆ.
ಇಂಟರ್ನೆಟ್ನಲ್ಲಿ ಹಲವಾರು ಸ್ಪೂರ್ತಿದಾಯಕ ಪ್ರತಿಭೆಗಳು ನಮಗೆ ಕಾಣಸಿಗುತ್ತವೆ. ಅಂತಹವರಲ್ಲಿ ರೈತೆಯಾಗಿ ಯೂಟ್ಯೂಬ್ ಸ್ಟಾರ್ ಆಗಿರುವ ಗಂಗವ್ವ ಕೂಡ ಒಬ್ಬರು. ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ ಸಿಕ್ಕರೆ ಗಂಗವ್ವರಂತಹ ಪ್ರತಿಭೆಗಳು ಹೊರಬರಲು ಸಾಧ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.