ಅಡಿಕೆ ಬೆಳಗಾರರ ಅತೀದೊಡ್ಡ ಸಮಸ್ಯೆಯೆಂದರೆ, ಅಡಿಕೆ ಮರ ಹತ್ತಲು ಜನ ಸಿಗದೇ ಇರುವುದು. ಬಲಿತಿರುವ ಕಾಯಿಗಳನ್ನು ಕೀಳಲು, ಔಷಧಿಗಳನ್ನು ಸಿಂಪಡಿಸಲು ಸಮಯಕ್ಕೆ ಸರಿಯಾಗಿ ಜನ ಸಿಗದೇ ಇರುವ ಕಾರಣದಿಂದಾಗಿ ಭಾರೀ ನಷ್ಟಗಳನ್ನು ಬೆಳೆಗಾರರು ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ತುಂಬಾ ಹತ್ತಿರದಿಂದ ನೋಡಿರುವ 48 ವರ್ಷದ ಗಣಪತಿಯವರು, ಬೈಕ್ ಮಾದರಿಯ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಮೇಲೆ ಕುಳಿತ ವ್ಯಕ್ತಿ ಅತ್ಯಂತ ಸುಲಭವಾಗಿ ಅಡಿಕೆ ಮರದ ತುದಿಯನ್ನು ತಲುಪಿ ಅಡಿಕೆ ಕೀಳಬಹುದು ಅಥವಾ ಔಷಧಿಯನ್ನು ಸಿಂಪಡಿಸಬಹುದು.
ಮಳೆಗಾದಲ್ಲಿ ಅಡಿಕೆ ಮರಕ್ಕೆ ಔಷಧಿ ಸಿಂಪಡನೆ ಮಾಡಲು ಮತ್ತು ವರ್ಷದ ಅಂತ್ಯದಲ್ಲಿ ಅಡಿಕೆ ಕೀಳಲು ಅಡಿಕೆ ಮರವನ್ನು ಹತ್ತುವುದು ಅನಿವಾರ್ಯ ಕೆಲಸ. ಸಾಂಪ್ರದಾಯಿಕವಾಗಿ ಭಾರತದಲ್ಲಿ, ರೈತರು ತಮ್ಮ ಕಾಲಿನ ಸುತ್ತ ಹಗ್ಗವನ್ನು ಕಟ್ಟಿ ಮತ್ತು ಕೈಯಲ್ಲಿ ಒಂದು ತುಂಡು ಬಟ್ಟೆ ಸುತ್ತಿದ ಹಗ್ಗವನ್ನು ಹಿಡಿದುಕೊಂಡು ತೆಂಗಿನ ಮರ ಅಥವಾ ಅಡಿಕೆ ಮರವನ್ನು ಹತ್ತುತ್ತಾರೆ. ಅವರಿಗೆ ಯಾವುದೇ ರಕ್ಷಾ ಕವಚ ಇರುವುದಿಲ್ಲ. ಅವರ ವಿಶ್ವಾಸವೇ ಅವರಿಗೆ ಶ್ರೀರಕ್ಷೆ. ಆದರೂ ಕೈತಪ್ಪಿದರೆ ಕೆಳಕ್ಕೆ ಬೀಳುವ ಅಪಾಯ ಅಪಾರ ಪ್ರಮಾಣದಲ್ಲಿದೆ. ಈ ರೀತಿ ಬಿದ್ದವರು ಮತ್ತೆ ಏಳಲಾಗದ ಸ್ಥಿತಿ ತಲುಪಿದ ಉದಾಹರಣೆಯೂ ಸಾಕಷ್ಟಿದೆ.
ಅಡಿಕೆ ಮರ ಸುಮಾರು 100 ಅಡಿಗಳ ಎತ್ತರದವರೆಗೂ ಬೆಳೆಯುತ್ತವೆ ಮತ್ತು ಅವುಗಳು ಭೂಮಿಗೆ ಲಂಬವಾಗಿರುತ್ತವೆ. ಸಪೂರ ಕಾಯದ ಮರ ಇದಾಗಿರುವುದರಿಂದ ಇದನ್ನು ಹತ್ತುವುದು ಒಂದು ದೊಡ್ಡ ಸಾಹಸವೇ ಸರಿ. ಹಿಂದೆ ಹೆಚ್ಚಿನ ಜನರು ಈ ಕಾಯಕವನ್ನು ಮಾಡುತ್ತಿದ್ದರು, ಆದರೆ ಇತ್ತೀಚಿನ ಯುವಕರು ಒಳ್ಳೆಯ ಸಂಪಾದನೆ ಇದ್ದರೂ ಅಡಿಕೆ ಮರ, ತೆಂಗಿನ ಮರ ಏರುವ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಲೇ ಇಲ್ಲ. ಹೀಗಾಗಿ ಬೆಳೆಗಾರರು ತೀವ್ರ ಸ್ವರೂಪದ ಸಂಕಷ್ಟಗಳನ್ನು ಎದುರಿಸುತ್ತಾರೆ.
ಈ ಸಂಕಷ್ಟಕ್ಕೆ ಅಂತ್ಯ ಹಾಡಬೇಕೆಂಬ ಕಾರಣಕ್ಕೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಗಣಪತಿಯವರು ಮೋಟಾರ್ ಮಾದರಿಯ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರದ ಮೂಲಕ ಅಡಿಕೆ ಮರ ಹತ್ತುವ ದೃಶ್ಯವುಳ್ಳ ವೀಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಈ ಯಂತ್ರ ಅತ್ಯಂತ ಸುರಕ್ಷಿತ ಮಾತ್ರವಲ್ಲ, ಫಲದಾಯಕತೆಯನ್ನೂ ಹೆಚ್ಚಿನ ಪ್ರಮಾಣದಲ್ಲಿ ಒದಗಿಸುತ್ತದೆ. ಮನುಷ್ಯನಿಗೆ ಅಡಿಕೆ ಮರ ಹತ್ತಲು 8 ನಿಮಿಷಗಳು ಬೇಕು, ಆದರೆ ಈ ಯಂತ್ರ 30 ಸೆಕೆಂಡುಗಳಿಂದ 1 ನಿಮಿಷದೊಳಗೆ ಮರ ಹತ್ತುತ್ತದೆ. ಹೀಗಾಗಿ ಒಬ್ಬ ವ್ಯಕ್ತಿ ಕಡಿಮೆ ಅವಧಿಯಲ್ಲಿ ಹೆಚ್ಚು ಮರಗಳನ್ನು ಹತ್ತಿ ಅಡಿಕೆ ಕೀಳಬಹುದು.
2 ಸ್ಟ್ರೋಕ್ ಗೇರ್ಬಾಕ್ಸ್, ಹೈಡ್ರಾಲಿಕ್ ಡ್ರಮ್ ಡಿಸ್ಕ್ ಬ್ರೇಕ್ ಮತ್ತು ಎರಡು ಸರಪಳಿಗಳನ್ನು ಹೊಂದಿರುವ 2.1 ಬಿಎಚ್ಪಿ ಮೋಟರ್ (28 ಕೆಜಿ ತೂಕ) ಬಳಸಿ ಮಾಡಿದ ಅತ್ಯಂತ ಸರಳ ಆವಿಷ್ಕಾರವಾಗಿದೆ. ಆದರೆ, ಇದನ್ನು ಬಳಸಿ ಅಡಿಕೆ ಮತ ಹತ್ತುವವರ ತೂಕ 80 ಕೆಜಿವರೆಗೆ ಮಾತ್ರ ಇರಬೇಕು. ಇದು 1 ಲೀಟರ್ ಪೆಟ್ರೋಲ್ನಲ್ಲಿ 100 ಮರಗಳನ್ನು ಹತ್ತಬಹುದು, ಇದರಿಂದ ದಿನಕ್ಕೆ 4,000 ರೂಪಾಯಿಗಳ ಉಳಿತಾಯವಾಗುತ್ತದೆ.
ಯಂತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿರುವ ರೈತ ರಾಜಾರಾಮ್ ಎಂಬುವವರು, “ಇದು ಸುದೀರ್ಘ ಕಾಲ ಬಾಳಿಕೆ ಬರುವಂತಹ ಆವಿಷ್ಕಾರ ಮತ್ತು ರೈತರಿಗೆ ವರದಾನವಾಗಿದೆ. ಕಳೆದ 5 ವರ್ಷಗಳಿಂದ, ನಿಯಮಿತ ಪ್ರಯೋಗಗಳ ಮೂಲಕ ಅನೇಕ ರೀತಿಯ ಉಪಕರಣಗಳು ಮಾರುಕಟ್ಟೆಗೆ ಬಂದು ಹೋಗಿರುವುದನ್ನು ನಾವು ನೋಡಿದ್ದೇವೆ. ಆದರೆ ಈ ಉಪಕರಣವು ಮಾರುಕಟ್ಟೆಗೆ ಬಂದ ಉಳಿದೆಲ್ಲಾ ಸಾಧನಗಳಿಗಿಂತ ಉತ್ತಮವಾಗಿದೆ. ಸಿಂಪಡಿಸುವ ಮತ್ತು ಕೀಳುವ ಉದ್ದೇಶಕ್ಕಾಗಿ ಮರದ ತುದಿಯವರೆಗೂ ಇದು ವ್ಯಕ್ತಿಯನ್ನು ಕೊಂಡೊಯ್ಯುತ್ತದೆ, ಹೀಗಾಗಿ ಹೆಚ್ಚು ಫಲದಾಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಡಿಕೆ ಮರ ಹತ್ತುವವರ ಕೊರತೆಯಿದೆ, ಈ ನಿಟ್ಟಿನಲ್ಲಿ ಇಂತಹ ಉಪಕರಣಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ “ಎಂದಿದ್ದಾರೆ.
“ಅಡಿಕೆ ಮರ ಬೆಳೆಸಲು ರೈತರು ಹಾಕುವ ಶ್ರಮವೆಲ್ಲಾ ಮಳೆಗಾಲದಲ್ಲಿ ಅತ್ಯಧಿಕ ಮಳೆಯ ಕಾರಣದಿಂದಾಗಿ ಹಾಳಾಗಿ ಹೋಗುತ್ತದೆ. ಈ ಸಾಧನವನ್ನು ಬಳಸಿ ನಾವು ಕಾಲಕ್ಕೆ ಸರಿಯಾಗಿ ಔಷಧಿ ಸಿಂಪಡಿಸಬಹುದು ಇದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಈಗಾಗಲೇ ಸಿಂಪಡನೆಗೆ ಡ್ರೋನ್ಗಳನ್ನು ವಿನ್ಯಾಸಪಡಿಸಲಾಗಿದೆ, ಆದರೆ ವಿನ್ಯಾಸಪಡಿಸಿದವನಿಗೇ ಇದನ್ನು ಬಳಸಲು ಸಾಧ್ಯವಾಗಿಲ್ಲ” ಎಂದಿದ್ದಾರೆ.
ಗಣಪತಿಯವರ ಮಗಳು ಸುಪ್ರಿಯಾ ಅವರು ಮಾತನಾಡಿ, “ನನ್ನ ತಂದೆ ವಿನ್ಯಾಸಪಡಿಸಿದ ಯಂತ್ರದಲ್ಲಿ ಮರ ಹತ್ತುವುದು ನಿಜಕ್ಕೂ ಒಂದು ವಿಶೇಷ ಅನುಭವ. ನನಗೆ ಮರ ಹತ್ತಲು ಗೊತ್ತಿಲ್ಲ ಆದರೆ ಈಗ ಈ ಯಂತ್ರದ ಸಹಾಯದೊಂದಿಗೆ ಅಡಿಕೆ ಮರವನ್ನು ಸುಲಭವಾಗಿ ನಾನು ಹತ್ತುತ್ತೇನೆ” ಎಂದಿದ್ದಾರೆ.
ಈ ಯಂತ್ರವನ್ನು ಬಳಸಿ ದಿನಕ್ಕೆ 80-90 ಅಡಿಕೆ ಮರಗಳನ್ನು ಹತ್ತಬಹುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.