ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಜೂನ್ 3ರಂದು ಪತನಗೊಂಡ ವಾಯುಸೇನೆಯ AN-32 ವಿಮಾನದಲ್ಲಿದ್ದ 13 ವಾಯುಸೇನಾ ಸಿಬ್ಬಂದಿಗಳ ಪಾರ್ಥಿವ ಶರೀರವನ್ನು ಇಂದು ಅಸ್ಸಾಂನ ಜೊಹಾರ್ತ ವಾಯುನೆಲೆಗೆ ಕರೆ ತರಲಾಗುತ್ತಿದೆ. ಈಗಾಗಲೇ ಪತನಗೊಂಡ ಸ್ಥಳದಿಂದ ಎಲ್ಲರ ಪಾರ್ಥಿವ ಶರೀರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಅರುಣಾಚಲದ ದಟ್ಟಾರಣ್ಯದಲ್ಲಿ 12000 ಅಡಿ ಆಳದಲ್ಲಿ ವಿಮಾನದ ಅವಶೇಷ ಪತ್ತೆಯಾಗಿದ್ದು, ಅಲ್ಲಿರುವ ಮೃತದೇಹಗಳನ್ನು ಹೊರಕ್ಕೆ ತರುವುದೇ ದೊಡ್ಡ ಸಾಹಸಮಯ ಕಾರ್ಯವಾಗಿತ್ತು, ಆದರೆ ಮೃತದೇಹಗಳನ್ನು ತರುವ ಯಾವ ಪ್ರಯತ್ನವನ್ನೂ ಕೈಚೆಲ್ಲದೆ ರಕ್ಷಣಾ ತಂಡ ಎಲ್ಲಾ ದೇಹಗಳನ್ನು ವಶಕ್ಕೆ ಪಡೆದುಕೊಂಡಿದೆ. ಜೊಹಾರ್ತದಲ್ಲಿನ ವಾಯುನೆಲೆಗೆ ಎಲ್ಲರ ಪಾರ್ಥಿವ ಶರೀರವನ್ನು ತರಲಾಗುವುದು ಎಂದು ವಾಯುಸೇನೆ ಹೇಳಿದೆ.
ವಿಮಾನದ ಬ್ಲ್ಯಾಕ್ ಬಾಕ್ಸ್ ಮತ್ತು ಕಾಕ್ ಪೀಟ್ ವಾಯ್ಸ್ ರೆಕಾರ್ಡರ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ವಾಯುಸೇನೆ ಹೇಳಿದೆ. ಬ್ಲ್ಯಾಕ್ ಬಾಕ್ಸ್ ವಿಮಾನ ಪತನಗೊಳ್ಳಲು ಕಾರಣವೇನು ಎಂಬ ಬಗೆಗಿನ ಸುಳಿವುಗಳನ್ನು ತನಿಖಾಧಿಕಾರಿಗಳಿಗೆ ನೀಡಲಿದೆ. ಮಾತ್ರವಲ್ಲದೇ, ವಾಯುಸೇನೆಯು ವಿಮಾನ ಪತನದ ಬಗ್ಗೆ ತನಿಖೆಗೂ ಆದೇಶ ನೀಡಿದೆ.
ಗುರುವಾರವಷ್ಟೇ ಪತನಗೊಂಡ ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ ಎಂದು ವಾಯುಸೇನೆ ಸ್ಪಷ್ಟಪಡಿಸಿತ್ತು. 15 ಸದಸ್ಯರ ರಕ್ಷಣಾ ತಂಡವನ್ನು ದಟ್ಟಾರಣ್ಯಕ್ಕೆ ಇಳಿಸಿ ಶೋಧ ಕಾರ್ಯ ನಡೆಸಲಾಗಿತ್ತು. ಬಳಿಕ ಹೆಲಿಕಾಫ್ಟರ್ ಬಳಸಿ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ.
ವಿಂಗ್ ಕಮಾಂಡರ್ ಜಿಎಂ ಚಾರ್ಲ್ಸ್, ಸ್ಕ್ವಾಡ್ರನ್ ಲೀಡರ್ ಎಚ್ ವಿನೋದ್, ಫ್ಲೈಟ್ ಲೆಫ್ಟಿನೆಂಟ್ ಆರ್ ಥಾಪಾ, ಫ್ಲೈಟ್ ಲೆಫ್ಟಿನೆಂಟ್ ಎ ತನ್ವಾರ್, ಫ್ಲೈಟ್ ಲೆಫ್ಟಿನೆಂಟ್ ಎಸ್ ಮೊಹಂತಿ, ಫ್ಲೈಟ್ ಲೆಫ್ಟಿನೆಂಟ್ ಎಂಕೆ ಗಾರ್ಗ್, ವಾರಂಟ್ ಅಧಿಕಾರಿ ಕೆ.ಕೆ. ಮಿಶ್ರಾ, ಸಾರ್ಜೆಂಟ್ ಅನೂಪ್ ಕುಮಾರ್ ಎಸ್, ಕಾರ್ಪೋರಲ್ ಶಾರಿನ್ ಎನ್ ಕೆ, ಲೀಡಿಂಗ್ ಏರ್ ಕ್ರಾಫ್ಟ್ ಮನ್ ಎಸ್.ಕೆ ಸಿಂಗ್, ಲೀಡಿಂಗ್ ಏರ್ ಕ್ರಾಫ್ಟ್ ಮನ್ ಪಂಕಜ್, ನಾನ್ ಕಂಬಾಟೆಂಟ್ ಎಂಪ್ಲಾಯಿಗಳಾದ ಪುತಾಲಿ ಮತ್ತು ರಾಜೇಶ್ ಕುಮಾರ್ ಮೃತ ವಾಯುಸೇನೆಯ ಸಿಬ್ಬಂದಿಗಳಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.