72 ವರ್ಷದ ದೀಪಕ್ ಬುಚ್ ಮತ್ತು ಅವರ 65 ವರ್ಷದ ಪತ್ನಿ ಮಂಜರಿ ಬುಚ್ ಗುಜರಾತಿನ ಅಹ್ಮದಾಬಾದ್ ನಿವಾಸಿಗಳಾಗಿದ್ದು, ಪ್ರತಿನಿತ್ಯ ಆರು ಗಂಟೆಗಳನ್ನು 3 ರಿಂದ 10 ನೆಯ ತರಗತಿಯ ಮಕ್ಕಳೊಂದಿಗೆ ಕಳೆಯುತ್ತಾರೆ.
ಅವರು ವೃತ್ತಿಪರ ಶಿಕ್ಷಕರಂತೂ ಖಂಡಿತಾ ಅಲ್ಲ. ಬುಚ್ ಅವರು ಗುಜರಾತ್ ಫಿನಾನ್ಸ್ ಕಾರ್ಪೋರೇಶನಿನ ಮಾಜಿ ಉದ್ಯೋಗಿ. 2004ರಲ್ಲಿ ನಿವೃತ್ತಿಯನ್ನು ಹೊಂದಿದ್ದಾರೆ.
ತಮ್ಮ ನಿವೃತ್ತ ಜೀವನವನ್ನು ಅತ್ಯಂತ ಅರ್ಥಪೂರ್ಣವಾಗಿ ಕಳೆಯಬೇಕೆಂದು ನಿರ್ಧರಿಸಿರುವ ಈ ದಂಪತಿ, ಶಾಲೆಗೆ ಹೋಗಲು ಹಣದ ಸಮಸ್ಯೆಯನ್ನು ಎದುರಿಸುತ್ತಿರುವ ಆದರೆ ಅತ್ಯಂತ ಜಾಣರಾದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
2005ರಲ್ಲಿ, ದಾದ-ದಾದಿ ನಿ ವಿದ್ಯಾ ಪರಬ್ ಎಂಬ ಸಂಸ್ಥೆಯನ್ನು ಆರಂಭಿಸಿದ ಈ ದಂಪತಿ, ಅದರ ಮೂಲಕ ಬಡ ಕುಟುಂಬದ ಮಕ್ಕಳಿಗೆ ಉಚಿತವಾಗಿ ಕೋಚಿಂಗ್ ನೀಡುವ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ. ಈ ಸಂಸ್ಥೆ ಮಕ್ಕಳ ಬದುಕಿನಲ್ಲಿ ಪರಿವರ್ತನೆಯನ್ನು ತಂದಿದೆ.
ಈ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಬುಚ್, “ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗದ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂಬುದನ್ನು ನಿವೃತ್ತಿಗೂ ಮುನ್ನವೇ ನಾನು ಹಾಗೂ ಪತ್ನಿ ನಿರ್ಧಾರ ಮಾಡಿದ್ದೆವು” ಎನ್ನುತ್ತಾರೆ.
2005ರಲ್ಲಿ ಬೋಧನೆಯಲ್ಲಿ ಯಾವುದೇ ಅನುಭವ ಇಲ್ಲದೇ ಹೋದರೂ, ಬುಚ್ ಮತ್ತು ಅವರ ಪತ್ನಿ ಅಸಂಘಟಿತ ವಲಯದ ಕಾರ್ಮಿಕರ ಮಕ್ಕಳಿಗೆ ಮತ್ತು ಮನೆಗೆಲಸದವರ ಮಕ್ಕಳಿಗೆ ಟ್ಯೂಷನ್ ಕ್ಲಾಸ್ ಅನ್ನು ಆರಂಭಿಸಿದರು. ಆಗ ಕೇವಲ 5 ಮಂದಿ ಮಕ್ಕಳು ಮಾತ್ರ ಇವರ ಬಳಿ ಟ್ಯೂಶನ್ ಪಡೆಯುತ್ತಿದ್ದರು.
“ಮಕ್ಕಳಿಗೆ ತಮ್ಮ ವೃತ್ತಿಜೀವನವನ್ನು ಕಟ್ಟಿಕೊಳ್ಳುವಲ್ಲಿ ನೆರವು ನೀಡುವುದು ನಮ್ಮ ಧ್ಯೇಯ, ಇವರೆಲ್ಲ ಶಾಲೆಗೆ ಹೋಗುತ್ತಿರುವ ಮೊದಲ ತಲೆಮಾರಿನ ಮಕ್ಕಳು. ಅವರನ್ನು ಓದಿಸಲು ಅವರ ಪೋಷಕರು ತುದಿಗಾಲಲ್ಲಿ ನಿಂತಿದ್ದಾರೆ ಮತ್ತು ಮಕ್ಕಳಿಗೂ ಕಲಿಯಲು ಅಷ್ಟೇ ಆಸಕ್ತಿ ಇದೆ” ಎಂದು ಬುಚ್ ಹೇಳುತ್ತಾರೆ.
ಕೇವಲ 5 ಮಂದಿ ಮಕ್ಕಳಿಂದ ಆರಂಭಿಸಿದ ಕೋಚಿಂಗ್ ಕ್ಲಾಸಿನಲ್ಲಿ ಈಗ ಒಂದು ಬ್ಯಾಚಿನ ಮಕ್ಕಳ ಸಂಖ್ಯೆ 150 ರಿಂದ 200ಕ್ಕೆ ಏರಿಕೆಯಾಗಿದೆ. ಮಕ್ಕಳ ಬಗೆಗೆ ದಂಪತಿ ವಹಿಸುವ ಕಾಳಜಿಯೇ ಮಕ್ಕಳ ಏರಿಕೆಗೆ ಪ್ರಮುಖ ಕಾರಣ.
ಮಕ್ಕಳಿಗೆ ನಿರಂತರವಾದ ತರಬೇತಿಯನ್ನು ನೀಡಬೇಕು ಎಂಬ ಕಾರಣಕ್ಕಾಗಿಯೇ ಈ ದಂಪತಿ ಎಷ್ಟೋ ಕೌಟುಂಬಿಕ ಸಮಾರಂಭಗಳನ್ನು, ಸಾಮಾಜಿಕ ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡಿದ್ದಾರೆ.
ಅವರ ಸೋಶಿಯಲ್ ಮೀಡಿಯಾಗಳನ್ನು ನೋಡಿದರೆ ಸಾಕು ಅವರ ತರಗತಿಗಳಲ್ಲಿ ಮಕ್ಕಳು ಎಷ್ಟು ಆನಂದದಿಂದ ಕಲಿಯುತ್ತಾರೆ ಎಂಬುದು ತಿಳಿದು ಬರುತ್ತದೆ, “ಅವರಿಗೆ ನಾವು ಕಲಿಸುತ್ತೇವೆ, ನೈತಿಕ ಕಥೆಗಳನ್ನು ಹೇಳುವ ಮೂಲಕ ಪ್ರತಿ ಮಗುವಿನೊಂದಿಗೂ ಸಾಕಷ್ಟು ಸಮಯವನ್ನು ನಾವು ಕಳೆಯುತ್ತೇವೆ. ಇದರಿಂದ ಮಕ್ಕಳು ಶ್ರದ್ಧೆಯಿಂದ ತರಗತಿಯಲ್ಲಿ ಕಲಿಯುತ್ತಾರೆ” ಎಂದು ಬುಚ್ ಹೇಳುತ್ತಾರೆ.
3 ರಿಂದ 7ನೆ ತರಗತಿ ಮಕ್ಕಳು ಬೆಳಗ್ಗೆ 7.30 ಕ್ಕೆ ಆಗಮಿಸಿ 10.30 ರ ವರೆಗೆ ಕಲಿಯುತ್ತಾರೆ, 8-10ನೇ ತರಗತಿ ಮಕ್ಕಳು 2.30ಕ್ಕೆ ಆಗಮಿಸಿ 5.30ರವರೆಗೆ ಕಲಿಯುತ್ತಾರೆ. ಶನಿವಾರ ಮತ್ತು ಭಾನುವಾರ ರಜಾ ದಿನವಾಗಿರುತ್ತದೆ.
ಹಣದ ವ್ಯವಹಾರದಿಂದ ದೂರವೇ ಇರಬೇಕು ಎಂಬ ಉದ್ದೇಶದಿಂದ ಈ ದಂಪತಿ ಯಾವುದೇ ಎನ್ಜಿಓ ಅನ್ನು ಸ್ಥಾಪನೆ ಮಾಡಿಲ್ಲ. ತಮ್ಮ ಸ್ವಂತ ಶ್ರಮದಲ್ಲೇ ಕಳೆದ 14 ವರ್ಷಗಳಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಕೆಲವೊಮ್ಮೆ ಪ್ರತಿಭಾವಂತ ಮಕ್ಕಳಿಗೆ ದಾನಿಗಳ ನೆರವನ್ನು ಒದಗಿಸಿಕೊಡುತ್ತಾರೆ. ಅವರ ಶಿಕ್ಷಣದ ವೆಚ್ಚ ದಾನಿಗಳು ಭರಿಸುವಂತೆ ಮಾಡುತ್ತಾರೆ, ಕೆಲವರು ಮಕ್ಕಳು ಸ್ಟೇಶನರಿ ವಸ್ತುಗಳನ್ನು ಮತ್ತು ಇತರ ವಸ್ತುಗಳನ್ನು ದಾನದ ರೂಪದಲ್ಲಿ ನೀಡುತ್ತಾರೆ.
ಇಷ್ಟು ಮಾತ್ರವಲ್ಲದೇ, ಸ್ವಯಂಸೇವಕರಾಗಿ ಕೆಲವರು ಬಂದು ಈ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ಓರ್ವ ಮಹಿಳೆ ತರಗತಿಗೆ ಬಂದು ಮಕ್ಕಳಿಗೆ ಡ್ರಾಯಿಂಗ್ ಮತ್ತು ಕ್ರಾಫ್ಟಿಂಗ್ ಹೇಳಿಕೊಡುತ್ತಾರೆ. ಇನ್ನೊಬ್ಬರು ಮಕ್ಕಳಿಗೆ ಮೂಲಕ ಜೀವನ ಕೌಶಲ್ಯಗಳನ್ನು ಕಲಿಸುತ್ತಾರೆ. ಇಸ್ರೋದ ಮಾಜಿ ವಿಜ್ಞಾನಿಯೊಬ್ಬರು ಈ ಮಕ್ಕಳಿಗೆ ಕಂಪ್ಯೂಟರ್ ಸೈನ್ಸ್ ಹೇಳಿಕೊಡುತ್ತಾರೆ.
ತಮ್ಮ ಕಾರ್ಯ ಯಶಸ್ವಿಯಾಗಲು ಇಂತಹವರ ಕೊಡುಗೆಗಳೇ ಕಾರಣ ಎಂಬ ಧನ್ಯತೆಯನ್ನು ಪ್ರದರ್ಶಿಸುತ್ತಾರೆ ಬುಚ್.
“ಇಷ್ಟು ವರ್ಷಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ನಾನು ಯಾವುದೇ ಅಡೆತಡೆಗಳನ್ನು ಎದುರಿಸಿಲ್ಲ. ನಮಗೆ ಏನಾದರು ಬೇಕಾದ ಸಂದರ್ಭದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನವರು ನಮ್ಮ ಸಹಾಯಕ್ಕೆ ಧಾವಿಸಿದ್ದಾರೆ. ಇದು ನಿಜಕ್ಕೂ ಸುಲಲಿತ ಪಯಣವಾಗಿತ್ತು” ಎಂದು ಬುಚ್ ನಗುಮುಖದಿಂದ ಹೇಳಿಕೊಳ್ಳುತ್ತಾರೆ.
ದೊಡ್ಡ ತರಗತಿಯ ಮಕ್ಕಳನ್ನು ಅಹ್ಮದಾಬಾದ್ ಮ್ಯಾನೇಜ್ಮೆಂಟ್ ಅಸೋಸಿಯೇಶನಿನ ವ್ಯಕ್ತಿತ್ವ ಬೆಳವಣಿಗೆ ಸೆಷನ್ ಮತ್ತು ಸಮ್ಮರ್ ಇಂಟರ್ನ್ಶಿಪ್ಗಳಿಗೂ ಕಳುಹಿಸಿಕೊಡಲಾಗುತ್ತದೆ.
ಹೂವಿನ ವ್ಯಾಪಾರಿಯ ಮಗಳಾಗಿದ್ದ ಮೋನಿಕಾ ಬಹಸೂರ್ ನಮ್ಮ ತರಗತಿಯಲ್ಲಿ ಕಲಿತು ಇಂದು ದೊಡ್ಡ ಎಂಜಿನಿಯರ್ ಆಗಿದ್ದಾಳೆ ಮತ್ತು ಉತ್ತಮ ಸಂಪಾದನೆ ಮಾಡುತ್ತಿದ್ದಾಳೆ. ಅವಳಂತೆ ಅನೇಕ ಮಕ್ಕಳು ಉತ್ತಮ ಜೀವನ ಸಾಗಿಸುತ್ತಿದ್ದಾರೆ, ಈ ಮಕ್ಕಳು ಇನ್ನಷ್ಟು ಕಾರ್ಯ ಮಾಡಲು ನಮಗೆ ಪ್ರೇರಣೆ ನೀಡುತ್ತಾರೆ ಎಂದು ಬುಚ್ ಹೇಳುತ್ತಾರೆ.
ಇತರರಿಗಾಗಿ ಬದುಕುವವರ ಬದುಕು ಸಾರ್ಥಕತೆಯಿಂದ ಕೂಡಿರುತ್ತದೆ ಎಂಬ ಮಾತು ಬುಚ್ ದಂಪತಿಯನ್ನು ನೋಡಿದಾಗ ಅಕ್ಷರಶಃ ನಿಜವೆನಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.