ತಾಯಂದಿರ ದಿನ, ತಂದೆಯಂದಿರ ದಿನ, ಗೆಳೆಯರ ದಿನ ಅಷ್ಟೇ ಏಕೆ ಪ್ರಾಣಿಗಳಿಗೂ ಒಂದು ದಿನ. ಆದರೆ ದಿನ ದಿನವೂ ಆಚರಿಸಬೇಕಾದದ್ದು ಪರಿಸರ ದಿನ. ಪರಿಸರದಂತಹ ತಂದೆ, ತಾಯಿ, ಬಂಧು ಅಥವಾ ಗೆಳೆಯ ಯಾವುದೂ ಇಲ್ಲ. ಭೂಮಿಗೆ ಬಿದ್ದ ಕ್ಷಣದಿಂದ, ಭೂಮಿಗೆ ಮರಳುವ ತನಕ ಸಲಹುವುದು ಪ್ರಕೃತಿ. ಈ ಪರಿಸರವನ್ನು ತಾಯಾಗಿ ಪೂಜಿಸಿ, ಮಗುವಂತೆ ಪಾಲಿಸಬೇಕಾದದ್ದು ಎಲ್ಲರ ಕರ್ತವ್ಯ. ಬಹುಪಾಲು ಪ್ರಕೃತಿ ನಾಶವಾದ ಮೇಲೆ ಅಳಿದುಳಿದ ಜಗತ್ತಿನ ರಕ್ಷಣೆಗೆ ಮುಂದಾದ ವಿಶ್ವಸಂಸ್ಥೆ 1974ರಲ್ಲಿ ಜೂನ್ ತಿಂಗಳ ಐದನೆಯ ತಾರೀಖಿನಂದು ಅಂತರಾಷ್ಟ್ರೀಯ ಪರಿಸರ ದಿನಾಚರಣೆ ಆರಂಭಿಸಿತು. ಸಮುದ್ರ ಮಾಲಿನ್ಯ, ಹೆಚ್ಚುತ್ತಿರುವ ಜನಸಂಖ್ಯೆ, ಪರಿಸರ ಮಾಲಿನ್ಯ, ಸದ್ಬಳಕೆ ಮತ್ತು ವನ್ಯಜೀವಿ ಅಪರಾಧಗಳ ಕುರಿತು ಆ ದಿನ ಗಮನ ಸೆಳೆಯುವ ಕೆಲಸ ಮಾಡಲಾಯಿತು. ಮಾಲಿನ್ಯಕ್ಕೆ ಕಾರಣವಾದ ಅಂಶಗಳ ವಿಂಗಡಿಸಿ, ಅವುಗಳ ವಾರ್ಷಿಕ ಧ್ಯೇಯ ವಾಕ್ಯ ಮಾಡಿಕೊಳ್ಳಲಾಗುತ್ತದೆ. ಅಂತೆಯೇ ಪ್ರತಿ ವರ್ಷವೂ ಆ ಧ್ಯೇಯದ ಸಾಧನೆಗಾಗಿ 143ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತವೆ. ಅಲ್ಲಿನ ಸರ್ಕಾರಗಳು, ಪ್ರಮುಖ ಸಂಸ್ಥೆಗಳು, NGOಗಳು ಮತ್ತು ಪ್ರಸಿದ್ಧ ವ್ಯಕ್ತಿಗಳು ಪಾಲ್ಗೊಳ್ಳುತ್ತಾರೆ.
ಧ್ಯೇಯಗಳ ಕುರಿತು ನೋಡುವುದಾದರೆ, 2018ರಲ್ಲಿ “Beat Plastic Pollution” ಧ್ಯೇಯ ವಾಕ್ಯವಾಗಿದ್ದು, ಪ್ಲಾಸ್ಟಿಕ್ ಅನ್ನು ಪ್ರಮುಖ ಶತ್ರು ಎಂದು ಪರಿಗಣಿಸಿ ಅದರ ನಿರ್ಮೂಲನೆಗೆ ಸಾಧ್ಯವಾಗುವ ಎಲ್ಲ ಕ್ರಮಗಳನ್ನು ಅನುಸರಿಸುವುದು ಇದರ ಉದ್ದೇಶ. ಭಾರತವು 2018ರ ಧ್ಯೇಯದ ಪ್ರತಿನಿಧಿಯಾಗಿತ್ತು. ಕರಗುವಂತಹ ಅಥವಾ ಒಮ್ಮೆ ಬಳಸಬಹುದಾದ ಪ್ಲಾಸ್ಟಿಕ್ ಬಳಸುವುದು, ಹಂತ ಹಂತವಾಗಿ ಪ್ಲಾಸ್ಟಿಕ್ನಿಂದ ದೂರ ಸರಿದು ಜಗತ್ತನ್ನು ಪ್ಲಾಸ್ಟಿಕ್ ಮುಕ್ತ ಮಾಡುವುದು ಇದರ ಉದ್ದೇಶ. ಅಂತೆಯೇ ಭಾರತ ಸರ್ಕಾರವು 2022ರ ಒಳಗೆ ಪ್ಲಾಸ್ಟಿಕ್ ನಿರ್ನಾಮ ಮಾಡುವ ಪಣ ತೊಟ್ಟಿದೆ. 2019ರಲ್ಲಿ “Beat Air Pollution” ಎಂಬ ಧ್ಯೇಯವಾಗಿದ್ದು, ಚೀನಾಕ್ಕೆ ಪ್ರಾತಿನಿಧ್ಯ ದೊರೆತಿದೆ. ಮೊದಲೇ ಹೇಳಿದಂತೆ ಪ್ರತಿ ಸದಸ್ಯ ರಾಷ್ಟ್ರಗಳು ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿವೆ.
ವಿಶ್ವಸಂಸ್ಥೆ ಹೇಳುವಂತೆ, ಮನುಷ್ಯರು ತಮ್ಮ ಪರಿಸರವನ್ನು ಸೃಷ್ಟಿಸಿವವರು ಮತ್ತು ಅದನ್ನು ಪಾಲಿಸಬೇಕಾದದ್ದು ಅವರ ಕರ್ತವ್ಯ. ಪರಿಸರ ಅವರಿಗೆ ಭೌತಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ನೈತಿಕ ಬೆಳವಣಿಗೆಯನ್ನು ನೀಡುತ್ತದೆ. ಈ ಬೆಳವಣಿಗೆಯ ಓಟದಲ್ಲಿ ಮನುಷ್ಯರು ಹಾದಿ ತಪ್ಪಿದ್ದು, ಕೇವಲ ದುರಾಸೆಯಿಂದ ಪ್ರಕೃತಿಯನ್ನು ಮರೆತಿದ್ದಾರೆ. ಪರಿಹಾರ ಎಂದರೆ, ಯಾರು ನಾಶ ಮಾಡುತ್ತಿದ್ದಾರೋ ಅವರು ಜಾಗೃತರಾಗುವುದು. ಇದು ಅಕ್ಷಯ ಪಾತ್ರೆಯಲ್ಲ. ನಾಳೆಗಳಿಗೆ ಒಂದಿಷ್ಟನ್ನು ಉಳಿಸದೆ ಹೇಗೆ ಬದುಕಲು ಸಾಧ್ಯ? ಈ ದಿನವನ್ನು ಅದರ ಬಗ್ಗೆ ಯೋಚಿಸಲು ಸ್ವಲ್ಪವಾದರೂ ಮುಡಿಪಿಟ್ಟರೆ ಈ ದಿನದ ಗೌರವ ಹೆಚ್ಚಲಿದೆ.
ವಾಯು ಮಾಲಿನ್ಯ ನಿಯಂತ್ರಣ – ಈ ವರ್ಷದ ಧ್ಯೇಯ. ದಿನನಿತ್ಯದ ಬದುಕನ್ನು ವಾಯು ಮಾಲಿನ್ಯದ ವಿರುದ್ಧ ದಿಕ್ಕಿನಲ್ಲಿ ಕರೆದೊಯ್ಯುವ ಅವಶ್ಯಕತೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಜಗತ್ತಿನ ಹತ್ತರಲ್ಲಿ ಒಂಬತ್ತು ಜನ ಶುದ್ಧ ಗಾಳಿಯನ್ನು ಸೇವಿಸುತ್ತಿಲ್ಲ. ಎಂತಹ ದುರಂತ. ಹಾಗಾದರೆ ವಿಶ್ವ ಸಂಸ್ಥೆ ಪಟ್ಟಿ ಮಾಡಿದ ವಾಯು ಮಾಲಿನ್ಯಕ್ಕೆ ಕಾರಣವಾದ ಅಂಶಗಳತ್ತ ನೋಡೊಣ..
ಗೃಹ ಸಂಬಂಧೀ – ದಿನನಿತ್ಯದ ಬದುಕಿನಲ್ಲಿ ಅಡುಗೆ, ಬೆಳಕಿಗೆ ಬಳಸಲಾಗುವ ಸೀಮೆ ಎಣ್ಣೆ ತರಹದ ಇಂಧನಗಳು, ಸೌದೆ ಮತ್ತಿತರ ವಸ್ತುಗಳ ಬಳಕೆ ಎಲ್ಲಿಗೆ ಮುಟ್ಟಿದೆ ಎಂದರೆ ಜಗತ್ತಿನ 3.8 ಮಿಲಿಯನ್ ಅವಧಿಪೂರ್ವ ಶಿಶುಗಳ ಮರಣ ಇದರಿಂದ ಸಂಭವಿಸುತ್ತದೆ.
ಕೈಗಾರಿಕೆ – ಇದನ್ನು ವಿವರಿಸುವ ಅವಶ್ಯಕತೆಯೇ ಇಲ್ಲ. ಪ್ರಮುಖವಾಗಿ ಕಲ್ಲಿದ್ದಲು ಆಧಾರಿತ ಕಾರ್ಖಾನೆಗಳು.
ಸಾರಿಗೆ – ಇದು ತನ್ನದೇ ಆದ ದೊಡ್ಡ ಕೊಡುಗೆಯನ್ನು ಮಾಲಿನ್ಯಕ್ಕೆ ನೀಡುತ್ತದೆ. ವೈಯಕ್ತಿಕ ವಾಹನಗಳ ಹೊಂದುವ ಹೆಮ್ಮೆ, ಹಳೆಯ ವಾಹನಗಳ ಬಳಕೆಯಿಂದ 4,00,000 ಶಿಶುಗಳ ಮರಣ ಸಂಭವಿಸುತ್ತದೆ.
ಕೃಷಿ – ಅವೈಜ್ಞಾನಿಕ ವ್ಯವಸಾಯ, ರಸಗೊಬ್ಬರ ಮತ್ತು ರಾಸಾಯನಿಕ ಔಷಧಿಗಳ ಬಳಕೆಯಿಂದ ಶೇಕಡಾ 24%ರಷ್ಟು ಪರಿಸರ ಮಾಲಿನ್ಯ ಉಂಟಾಗುತ್ತದೆ.
ತ್ಯಾಜ್ಯ – ಇದೇ ಬಹುದೊಡ್ಡ ಪ್ರಮಾಣದಲ್ಲಿ ಸಮಸ್ಯೆಯಾಗಿ ಪರಿಣಮಿಸಿದೆ. ಕಸ ನಿರ್ವಹಣೆ ಈ ಪ್ರಮಾಣದ ಜನಸಂಖ್ಯೆಯಲ್ಲಿ ಕಷ್ಟಸಾಧ್ಯವಾಗಿದೆ. ಒಂದು ಅಂದಾಜಿನ ಪ್ರಕಾರ ಶೇಕಡಾ 40%ರಷ್ಟು ಕಸವನ್ನು ಬಯಲಿನಲ್ಲಿ ಸುಡಲಾಗುತ್ತದೆ. ಇದರಿಂದ ಅಪಾಯಕಾರಿ ಮೀಥೇನ್, ಇಂಗಾಲ ಬಿಡುಗಡೆ ಆಗುತ್ತವೆ.
ಇತರೆ – ಎಲ್ಲಾ ಮಾಲಿನ್ಯವೂ ಮಾನವ ನಿರ್ಮಿತ ಎಂದೆನಲ್ಲ. ಜ್ವಾಲಾಮುಖಿಗಳು, ಮರಳು ಮತ್ತು ಧೂಳು ತುಂಬಿದ ಬಿರುಗಾಳಿಗಳು ಕಾರಣವಾಗುತ್ತವೆ.
ವಿಶ್ವ ಪರಿಸರ ದಿನದ ಟ್ವೀಟ್ ಇಂತಿದೆ.
“1. ಕಲುಷಿತ ಗಾಳಿ, ಆರೋಗ್ಯದ ತುರ್ತು ಪರಿಸ್ಥಿತಿ ಉಂಟು ಮಾಡುತ್ತದೆ.
2. ಮಕ್ಕಳು ಹೆಚ್ಚಿನ ಅಪಾಯದಲ್ಲಿದ್ದಾರೆ.
3. ಮಾಲಿನ್ಯ ಮತ್ತು ಬಡತನಕ್ಕೆ ನೇರ ಸಂಪರ್ಕವಿದೆ.
4. ಕಡಿಮೆ ವೆಚ್ಚದ ಇಂಧನಗಳು ಪರಿಸರಕ್ಕೆ ದುಬಾರಿಯಾಗಲಿವೆ.
5. ಸ್ವಚ್ಛ ಗಾಳಿ ಕೂಡ ಒಂದು ಮಾನವ ಹಕ್ಕಾಗಿದೆ.”
ವಾಯು ಮಾಲಿನ್ಯದ ಪರಿಹಾರಗಳು ಗೊತ್ತಿರುವಂತದ್ದೇ ಆಗಿವೆ. ಪ್ಲಾಸ್ಟಿಕ್ ಕಡಿಮೆ ಉಪಯೋಗಿಸುವುದು, ಸಾರ್ವಜನಿಕ ಸಾರಿಗೆ ಬಳಕೆ, ಸೌರ ಶಕ್ತಿಯನ್ನು ಬಳಸುವುದು, ಹಳೆಯ ವಾಹನಗಳ ರದ್ದತಿ ಹೀಗೆ ಪರಿಹಾರಗಳನ್ನು ಹೇಳಬಹುದು. ಆ್ಯಂಟೋನಿಯೊ ಗುಟೆರೆಸ್, ವಿಶ್ವ ಸಂಸ್ಥೆಯ ಕಾರ್ಯದರ್ಶಿ ಹೇಳುವಂತೆ, “ಇದು ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಸಮಯ. ಸರ್ಕಾರಗಳಿಗೆ ಹೇಳುವುದು ಏನೆಂದರೆ ಮಾಲಿನ್ಯ ತೆರಿಗೆ ವಿಧಿಸುವುದು, ಪಳೆಯುಳಿಕೆ ಇಂಧನಗಳ ಮೇಲಿನ ಸಬ್ಸಿಡಿ ರದ್ದತಿ, ಹೊಸ ಕಲ್ಲಿದ್ದಲು ಗಣಿಗಳ ತೆರೆಯದಿರುವುದು. ಅಲ್ಲದೆ ನಮಗೆ ಬೇಕಿರುವುದು ಹಸಿರು ಪ್ರಕೃತಿಯೇ ಹೊರತು ಯಾರಿಲ್ಲದ ಕಡುಗಪ್ಪು ಜಗತ್ತಲ್ಲ.” ಯಾರೋ ಬಂದು ನಮ್ಮನ್ನು ಉಳಿಸುತ್ತಾರೆ ಎಂಬ ಭಾವನೆ ತೊರೆದು, ಪರಿಸರವನ್ನು ರಕ್ಷಿಸುವುದು ಮನಗಳಿಂದ, ಮನೆಗಳಿಂದ ಆರಂಭವಾಗಬೇಕಿದೆ. ಶುದ್ಧ ನೀರನ್ನು ಸ್ವಲ್ಪ ದಿನಗಳ ಮಟ್ಟಿಗೆ ಖರೀದಿಸಬಲ್ಲಿರಿ. ಆದರೆ ಗಾಳಿ?! ನಿಮ್ಮ ಹಣ ಅದರಲ್ಲಿ ತೂರಿ ಬರುವ ಧೂಳಿಗೆ ಸಮ. ಕೇವಲ ಮನದಲ್ಲಿ ಮೂಡುವ ಜಾಗೃತಿಯಷ್ಟೇ ಪರಿಸರವನ್ನು ಕಾಯಲು ಸಾಧ್ಯ. ಯಾವುದೋ ಒಂದು ದಿನವನ್ನು ಪರಿಸರಕ್ಕಾಗಿ ಮೀಸಲಿಟ್ಟು, ಹಸಿರು ಅಂಗಿ ತೊಟ್ಟು, ಓಟಗಳಲ್ಲಿ, ಬೈಸಿಕಲ್ ಜಾಥಾಗಳಲ್ಲಿ ಭಾಗವಹಿಸಿ, ಫೋಟೋ ತೆಗೆದು ಹಾಕಿಕೊಳ್ಳುವ ಸಂಸ್ಕೃತಿಯ ಅಂತ್ಯವಾಗಲಿ.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.