2019 ರ ಚುನಾವಣೆ ಕೊನೆಗೊಂಡಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಸುಮಾರು 2 ತಿಂಗಳುಗಳ ಕಾಲ ನಡೆದ ಈ ಚುನಾವಣೆ ಹಲವು ವಿಷಯಗಳ ಮುನ್ನೆಲೆ-ಹಿನ್ನೆಲೆಗಳಿಂದಾಗಿ ರಣರಂಗದ ಸ್ವರೂಪ ಪಡೆದುಕೊಂಡಿತು. ದೇಶದೆಲ್ಲೆಡೆ ವಾಗ್ವಾದ ನಡೆದರೆ ಪಶ್ಚಿಮ ಬಂಗಾಳ ಮಾತ್ರ ಭುಜಬಲ ಪ್ರದರ್ಶಿಸಿ ದೇಶದ ಗಮನ ತನ್ನೆಡೆಗೆ ಸೆಳೆದುಕೊಂಡಿತು. ರಾಜ್ಯಪಾಲರ ಆಡಳಿತವಿರುವುದರಿಂದ ಶಾಂತಿಯುತವಾಗಿರುವ ಕಾಶ್ಮೀರವನ್ನು ನೆನಪಿಸುವ ರೀತಿಯಲ್ಲಿ ಬಂಗಾಳ ನಡೆದುಕೊಂಡಿತು. ಇದೀಗ ಇಡೀ ದೇಶ ಮಾತ್ರವಲ್ಲ ಜಗತ್ತು ಭಾರತದ ಚುನಾವಣೆಯ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ. ಮೇ 23 ಈ ಎಲ್ಲ ಕೌತುಕಗಳಿಗೆ ತೆರೆ ಎಳೆಯಲಿದೆ.
ಅಜೆಂಡಾ ಸೆಟ್ ಮಾಡುವುದು, ಚುನಾವಣೆಯ ಗೆಲುವಿನಲ್ಲಿ ಮಹತ್ತ್ವದ ಪಾತ್ರ ವಹಿಸುತ್ತದೆ. ಇದಕ್ಕಾಗಿಯೇ ಪ್ರತೀ ಪಕ್ಷವೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದು. ಚುನಾವಣೆಯಲ್ಲಿ ಯಾರು ಅಜೆಂಡಾ ಸೆಟ್ ಮಾಡುತ್ತಿದ್ದಾರೆ ಎನ್ನುವುದು ಚುನಾವಣಾ ಕಣ ಯಾರ ಪರವಾಗಿ ಎಂಬುದನ್ನು ಸೂಚಿಸುತ್ತದೆ. ಈ ಅಜೆಂಡಾವನ್ನಿಟ್ಟು ನಡೆಸುವ ಪ್ರಚಾರ, ಚರ್ಚೆಗೆಳೆದು ತರುವ ವಿಷಯಗಳು, ವಾಗ್ವಾದಗಳು, ಆರೋಪ-ಪ್ರತ್ಯಾರೋಪಗಳ ಮೂಲಕ ಜನಮಾನಸದಲ್ಲಿ ತಮ್ಮ ಪರವಾದ ವಾತಾವರಣ ’ಟ್ರೆಂಡ್’ ಮೂಡಿಸುವುದು ಪಕ್ಷಗಳಿಗೆ ಜನಬೆಂಬಲ ಪಡೆಯಲಿರುವ ಪ್ರಮುಖ ಅಸ್ತ್ರ. ಅಷ್ಟೇಕೆ ಜನರ ಸಹಭಾಗಿತ್ವವನ್ನು ಹೆಚ್ಚಿಸುವ (ಅಂದರೆ ಮತದಾನ ಪ್ರಮಾಣ ಹೆಚ್ಚಿಸುವ) ಮೂಲಕ ಸಾಂವಿಧಾನಿಕ ವ್ಯವಸ್ಥೆಯನ್ನೂ ಇದು ಜಾಗೃತಗೊಳಿಸುವ ಸಾಮರ್ಥ್ಯವನ್ನೂ ಈ ಟ್ರೆಂಡ್ ಹೊಂದಿದೆ. ಈ ಟ್ರೆಂಡ್ ನೀರಸವಾದಂತೆ ಮತದಾನದ ಪ್ರಮಾಣವೂ ಕಡಮೆಯಾಗುವುದನ್ನು ನಾವು ಕಂಡಿದ್ದೇವೆ.
ಈ ವಿಷಯದಲ್ಲಿ 2014 ರ ಲೋಕಸಭಾ ಮತ್ತು ತದನಂತರದ ಚುನಾವಣೆಗಳಿಂದ ಬಿಜೆಪಿಯೇತರ ವಿರೋಧಪಕ್ಷಗಳು ಎಚ್ಚೆತ್ತುಕೊಂಡವೇ ಎಂಬ ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸುವುದು ಕಷ್ಟ. 2014 ರ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳು ಮಹತ್ತ್ವದ ಪಾತ್ರ ವಹಿಸಿದ್ದವು ಎಂಬುದನ್ನು ಅರಿತ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರಾಬಲ್ಯ ಸಾಧಿಸಲು ಯತ್ನಿಸಿದವು. ಪ್ರಾರಂಭದಲ್ಲಿ ಒಂದಿಷ್ಟು ಅಬ್ಬರಿಸಿದರೂ ಇದೊಂದು ವಿಫಲ ಯತ್ನ ಎಂದಲ್ಲಿ ಸುಳ್ಳಾಗಲಾರದು. ಇದರಲ್ಲಿ ಪ್ರಮುಖವಾಗಿ ಎರಡು ವಿಷಯಗಳನ್ನು ಗಮನಿಸಬಹುದು. ಒಂದು, ಬಿಜೆಪಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಇದರಲ್ಲಿ ದೊಡ್ಡ ವರ್ಗ ಪಕ್ಷದೊಂದಿಗೆ ಯಾವುದೇ ನಂಟು ಹೊಂದಿಲ್ಲ. ಅವರು ಪ್ರಸ್ತುತ ಬಿಜೆಪಿಯ ಅಥವಾ ಮೋದಿ ಸರ್ಕಾರದ ನೀತಿಗಳನ್ನು ಸಮರ್ಥಿಸಲು ಅವರು ತಮ್ಮ ಸ್ವಹಿತಾಸಕ್ತಿಯನ್ನು ಭವಿಷ್ಯವನ್ನು ಉದ್ಯೋಗವನ್ನು ಲೆಕ್ಕಿಸದೇ ಕಾರ್ಯ ನಿರ್ವಹಿಸುವವರು. ದೇಶದ ಹಿತಕ್ಕಾಗಿ ಇದು ನಮ್ಮ ಕರ್ತವ್ಯ ಎಂದು ಭಾವಿಸಿ ಈ ವಿಷಯಗಳಿಗೆ ತಮ್ಮ ಜೀವನಕ್ಕಿಂತಲೂ ಪ್ರಾಮುಖ್ಯತೆ ನೀಡಿ ಮುನ್ನುಗ್ಗುವ ದೊಡ್ಡ ಪಡೆ ಬಿಜೆಪಿಯ ಜೊತೆಗಿದೆ. ಇದಕ್ಕೆ ಪ್ರತಿಪಕ್ಷಗಳ ಬಳಿ ಪರಿಹಾರವೇ ಇಲ್ಲ ಎನಿಸಿದೆ. ಇದೇ ಕಾರಣದಿಂದಾಗಿ ಕರ್ನಾಟಕದ ಕುಮಾರಸ್ವಾಮಿ ಸರ್ಕಾರ ಸೇರಿದಂತೆ ಬಿಜೆಪಿಯೇತರ ಸರ್ಕಾರಗಳಿರುವ ಕಡೆಗಳಲ್ಲಿ ಚಿಕ್ಕಪುಟ್ಟ ವಿಷಯಗಳನ್ನು ನೆವವಾಗಿಟ್ಟು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವವರನ್ನು ಬಂಧಿಸುವ, ಬೆದರಿಸುವ ಪ್ರಯತ್ನ ನಡೆಯುತ್ತಿರುವುದು. ಆದರೆ ಇದು ಈ ದೇಶಪ್ರೇಮಿ ಸಾಮಾಜಿಕ ಜಾಲತಾಣಿಗರನ್ನು ಇನ್ನಷ್ಟು ಹುರಿದುಂಬಿಸಿದೆ ಎಂಬ ವಾಸ್ತವವನ್ನು ಪ್ರತಿಪಕ್ಷಗಳು ಇನ್ನೂ ಅರಿತಂತಿಲ್ಲ. ಇನ್ನು ಎರಡನೆಯದು, ವಿಷಯದಾರಿದ್ರ್ಯ. ನರೇಂದ್ರ ಮೋದಿ ಅವರು ವ್ಯವಸ್ಥಿತವಾಗಿ ಪ್ರತಿಪಕ್ಷಗಳನ್ನು ವಿಷಯ ದಾರಿದ್ರ್ಯಕ್ಕೆ ತಳ್ಳಿದ್ದಾರೆ ಎಂದೇ ಹೇಳಬಹುದು. ಈ ಚುನಾವಣೆಯಲ್ಲಿ ಇದು ಬೆಳದಿಂಗಳಂತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳ ಪ್ರಣಾಳಿಕೆಯೇ ಸಾಕ್ಷಿ.
ಎಂದಿನಂತೆ ವಿರೋಧಪಕ್ಷಗಳಿಗೆ ಆಡಳಿತ ಪಕ್ಷದ ವಿರುದ್ಧ ಪ್ರಯೋಗಿಸಲು ಅಸ್ತ್ರಗಳೇ ಸಿಗದಂತಾಗಿದ್ದು, ಆಡಳಿತದ ನೇತೃತ್ವ ಹಿಡಿದ ಮೋದಿ ಅವರ ಚಾಣಾಕ್ಷತನ ಎನ್ನಬೇಕೋ ಅಥವಾ ವಿರೋಧಪಕ್ಷಗಳ ಅಸಾಮರ್ಥ್ಯ ಎನ್ನಬೇಕೋ ತಿಳಿಯದು. ಚುನಾವಣಾ ಪ್ರಚಾರವನ್ನು ಗಮನಿಸಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಯಾವ ಯಾವ ವಿಷಯಗಳು ಚರ್ಚೆಯಾಗಬೇಕು ಎಂಬ ಅಜೆಂಡಾ ಸೆಟ್ ಮಾಡುವ ಕೆಲಸವನ್ನು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ವಹಿಸಿಕೊಂಡಂತಿದೆ. ಮೋದಿ ಪ್ರಯೋಗಿಸಿದ ಅಸ್ತ್ರದ ತೀವ್ರತೆಯನ್ನು ಕಡಮೆ ಮಾಡುವ ಪ್ರಕ್ರಿಯೆಗಷ್ಟೇ ವಿರೋಧಪಕ್ಷಗಳೆಲ್ಲ ಸೀಮಿತವಾಗಿಬಿಟ್ಟವು. ಇಲ್ಲಿಯೂ ಎಡವಿ ಮೋದಿ ತೋಡಿದ ಹಳ್ಳಕ್ಕೆ ಬಿದ್ದ ಉದಾಹರಣೆಗಳೂ ಹಲವಿವೆ.
ಒರೋಬ್ಬರಿ ಎರಡು ತಿಂಗಳ ಕಾಲ ನಡೆದ ಚುನಾವಣೆಯಲ್ಲಿ ದಿನದಿಂದ ದಿನಕ್ಕೆ ಕಾವು ಕಡಮೆಯಾಗಬಾರದು, ಅದರ ತೀವ್ರತೆ ಕಳೆದುಕೊಳ್ಳಬಾರದು ಎಂದು ಮೋದಿ ಹಲವು ಹೊಸ ಹೊಸ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಪ್ರಮುಖವಾದುದು ರಾಜೀವಗಾಂಧಿ ದೇಶದ ನಂಬರ್ 1 ಭ್ರಷ್ಟಾಚಾರಿ ಎಂದಿರುವುದು. ಇದರಿಂದ ಇಡೀ ಕಾಂಗ್ರೆಸ್ ಹಾಗೂ ಅದರ ಗಂಜಿಗಿರಾಕಿಗಳೆಲ್ಲ ಒಮ್ಮೆಗೆ ಮೋದಿಯ ವಿರುದ್ಧ ಮುತ್ತಿಗೆ ಹಾಕಿದರು. ಮೊದಲ ದಿನದಾಂತ್ಯಕ್ಕೆ ಕಾಂಗ್ರಸ್ಗೆ ಇದು ತನ್ನ ಪರವಾಗಿದೆ ಅನಿಸಿದರೂ ಭೂಪೋರ್ಸ್ ಹಗರಣ, ಸಿಖ್ಖ್ ಹತ್ಯಾಕಾಂಡ, ಬೇಸಿಗೆ ರಜೆ ಕಳೆಯಲು ಸೇನೆಯನ್ನು ಆಳಿನಂತೆ ಬಳಸಿಕೊಂಡಿದ್ದು, ಭೋಪಾಲ್ ಅನಿಲ ದುರಂತ – ಹೀಗೆ ರಾಜೀವ್ ಗಾಂದಿ ಆಡಳಿತದಲ್ಲಿ ನಡೆದ ಘಟನಾವಳಿಗಳು ಕಾಂಗ್ರೆಸ್ಗೆ ತಿರುಗುಬಾಣವಾಗುವುದರ ಜೊತೆಜೊತೆಗೆ ರಾಜೀವ್ ಗಾಂಧಿ ವ್ಯಕ್ತಿತ್ವವನ್ನು ಮಸಕಾಗಿಸಿತು. ಮೋದಿ ಒಂದೇ ಏಟಿಗೆ ಎರಡು ಹಕ್ಕಿ ಉದುರಿಸಿದ್ದರು. ನೆಹರು-ಗಾಂಧಿ ಪರಿವಾರದ ಒಂದೊಂದೇ ಸ್ವಘೋಷಿತ ಮಹಾನ್ ನಾಯಕರ ಬಣ್ಣ ಬೀದಿಗೆ ಬಂತು. ಜೊತೆಗೆ ಸಿಖ್ಖ್ ಹತ್ಯಾಕಾಂಡ ನೆನಪಿಸಿ ಪಂಜಾಬ್, ಹರ್ಯಾಣ, ದಿಲ್ಲಿ ಹಾಗೂ ಮಧ್ಯಪ್ರದೇಶದ ಚುನಾವಣೆಗೆ ಹೊಸ ರಂಗು ಮೂಡಿಸಿತು. ಹತಾಶ ಕಾಂಗ್ರೆಸ್ ನಾಯಕರು ಈ ಹೊಡೆತದಿಂದ ಇನ್ನೂ ಚೇತರಿಸಿಕೊಂಡಂತೆ ಕಾಣುತ್ತಿಲ್ಲ. ಸ್ಯಾಮ್ ಪಿತ್ರೋಡಾ ಸಿಖ್ ಹತ್ಯಾಕಾಂಡವನ್ನು ’ಹುವಾ ತೋ ಹುವಾ’ ಎಂದು ಬೆಂಕಿಗೆ ತುಪ್ಪ ಸುರಿದರೆ, ಜನಮಾನಸದಿಂದ ನೈಪಥ್ಯಕ್ಕೆ ಸರಿಯುತ್ತಿದ್ದೇನೋ ಎಂಬ ಭಯದಲ್ಲಿ ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ಪಿತ್ರೋಡಾಗೆ ಪೈಪೋಟಿ ಕೊಡಲು ಹೊರಟಂತೆ ವರ್ತಿಸುತ್ತಿದ್ದಾರೆ.
ಗುಜರಾತ್ ಚುನಾವಣೆಯಿಂದ ಹಿಡಿದು 2014 ರ ಲೋಕಸಭೆ ಹಾಗೂ ತದನಂತರದ ಚುನಾವಣೆಯಿಂದ ವಿಪಕ್ಷಗಳು ಪಾಠ ಕಲಿತಿಲ್ಲ ಏಕೆ ಎನ್ನುವುದೇ ನನಗೆ ಯಕ್ಷಪ್ರಶ್ನೆ. ಗುಜರಾತ್ನಿಂದ ದಿಲ್ಲಿ, ದಿಲ್ಲಿಯಿಂದ ಕರ್ನಾಟಕದ ತನಕ ಮೋದಿ ಅವರನ್ನೇ ಟಾರ್ಗೆಟ್ ಮಾಡಿ ನಡೆಸಿದ ಎಲ್ಲ ಚುನಾವಣೆಗಳಲ್ಲೂ ನೆಲಕಚ್ಚಿದ್ದು, ತನ್ನ ಮೇಲಿನ ವೈಯಕ್ತಿಕ ದಾಳಿಯನ್ನು ಜನತಾ ನ್ಯಾಯಾಲಯದಲ್ಲಿ ಜನಾಶೀರ್ವಾದಕ್ಕೆ ಅಡಿಗಲ್ಲಾಗಿ ಬಳಸಿ ಜನಪ್ರಿಯರಾಗುತ್ತಿರುವ (2007 ರ ಗುಜರಾತ್ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ’ಮೌತ್ ಕೀ ಸೌದಾಗರ್’ನಿಂದ ಮಣಿಶಂಕರ್ ಅಯ್ಯರ್ ಅವರ ’ಚಾಯ್ವಾಲಾ’ದವರೆಗೆ ತಮ್ಮ ಮೇಲೆ ತೂರಿಬಂದ ಕಲ್ಲುಗಳನ್ನು ಸಂಗ್ರಹಿಸಿ ಅದರಿಂದಲೇ ಸೌಧ ನಿರ್ಮಿಸಿದ) ವಾಸ್ತವದ ಅರಿವಿದ್ದೂ ಪ್ರತಿಪಕ್ಷಗಳು 2019 ರಲ್ಲೂ ಕೂಡಾ ಅದೇ (ಅದೊಂದೇ!) ಅಸ್ತ್ರ ಪ್ರಯೋಗಿಸುವಂತಾಗಿದ್ದೇಕೆ? ಮೋದಿ ಹೆಸರನ್ನು ಬಿಟ್ಟು ಚುನಾವಣೆ ಎದುರಿಸಿದ್ದರಿಂದಲೇ ಮಧ್ಯಪ್ರದೇಶ, ರಾಜಸ್ಥಾನದಂತಹ ರಾಜ್ಯಗಳಲ್ಲಿ ಅಧಿಕಾರ ಸಿಕ್ಕಿತು ಎಂಬ ದೃಷ್ಟಾಂತ ಎದುರಿಗಿದ್ದರೂ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಅದನ್ನು ಬಳಸಿಕೊಳ್ಳಲಾಗದೇ ಇದ್ದುದೇಕೆ? ಇದು ಅವುಗಳ ರಾಜಕೀಯ ಬರಡುತನದ ಪ್ರತೀಕವೇ?
ಇದರ ಇನ್ನೊಂದು ಹಂತ ಭಾರತದ ಸಾಂವಿಧಾನಿಕ ಸಂಸ್ಥೆಗಳ ಬಗೆಗೆ ಅಪನಂಬಿಕೆಯ ಗೊಲ್ಲು ಹಬ್ಬಿಸುವುದು. ವಿರೋಧಪಕ್ಷಗಳಿಂದ ಅಪನಂಬಿಕೆಗೆ ಒಳಪಡದ ಒಂದೇ ಒಂದು ಸಾಂವಿಧಾನಿಕ ಸಂಸ್ಥೆಯೂ ಸಿಗಲಾರದೇನೋ. ಮತಯಂತ್ರ ಇವಿಎಂನಿಂದ ಪ್ರಾರಂಭಿಸಿ ಸೇನೆ-ಸುಪ್ರೀಂ ಕೋರ್ಟ್ ಬಗೆಗೂ ಅಪನಂಬಿಕೆ ವ್ಯಕ್ತಪಡಿಸಿದವು. ಇವುಗಳನ್ನು ಹೀಗೆಳೆಯುತ್ತಲೇ ಮೋದಿ-ಅಮಿತ್ ಷಾ ವಿರುದ್ಧ ದಿನಕ್ಕೊಂದರಂತೆ ನೀತಿಸಂಹಿತೆಯ ಕೇಸು ದಾಖಲಿಸುತ್ತ, ಚಿಕ್ಕಪುಟ್ಟ ವಿಷಯಗಳನ್ನಿಟ್ಟುಕೊಂಡು ಸುಪ್ರೀಂಕೋರ್ಟ್ ಕದ ತಟ್ಟುವುದು ವಿಪಕ್ಷಗಳ ದಿನನಿತ್ಯದ ಕಾಯಕವಾಗಿದೆ.
ಮೋದಿ ಪ್ರತಿಪಕ್ಷಗಳ ನಾಯಕರನ್ನು ವಿದೂಷಕರ ಗುಂಪು ಮಾತ್ರ ಎಂಬುದನ್ನು ಮತ್ತೆ ಮತ್ತೆ ಮನವರಿಕೆ ಮಾಡುತ್ತಿದ್ದರೆ ಇತ್ತ ವಿಪಕ್ಷಗಳು ಖಾಲಿ ಕೈಯಲ್ಲಿ ಕುಳಿತಂತಿವೆ. ಬಿಜೆಪಿಗೆ ಸ್ಪಷ್ಟವಾಗಿ ಎದುರೇಟು ಕೊಡಲು ಸಾಧ್ಯವಾಗದೇ ಇರುವ ವಿಚಾರ ನಿರುದ್ಯೋಗ ಸಮಸ್ಯೆ ಮಾತ್ರ. ಈ ವಿಚಾರವನ್ನೂ ಜನರಿಗೆ ಮನವರಿಕೆ ಮಾಡುವಲ್ಲಿ ವಿರೋಧಪಕ್ಷಗಳು ಸಂಪೂರ್ಣ ವಿಫಲವಾದವು. ಮತ್ತು ಈ ಸಮಸ್ಯೆಗೆ ಪರಿಹರಿಸುವ ಸಾಮರ್ಥ್ಯ ನರೇಂದ್ರ ಮೋದಿ ಅವರಿಗಿದೆಯೇ ಹೊರತು, ಕಾಂಗ್ರೆಸ್ ಮತ್ತಿತರ ವಿರೋಧಪಕ್ಷಗಳಿಗಿಲ್ಲ ಎಂಬ ಭಾವನೆ ಜನಮಾನಸದಲ್ಲಿದೆ.
ವಿಪಕ್ಷಗಳನ್ನು ಮೋದಿ ಎಂತಹ ಹತಾಶೆಗೆ ನೂಕಿ ಬಿಟ್ಟಿದ್ದರು ಎಂಬುದೇ ಆಶ್ಚರ್ಯ ಹುಟ್ಟಿಸುತ್ತದೆ. ಮೋದಿಯ ರಾಷ್ಟ್ರೀಯ ವಿಚಾರಗಳಿಗೆ ಸಮಾನಾಂತರದ ವಿಚಾರ ಪ್ರಸ್ತಾಪಿಸಬೇಕಾದ ವಿಪಕ್ಷಗಳು ದೇಶವಿರೋಧಿ/ಸಂವಿಧಾನ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲು ಸಿದ್ದವಾದವು. ಕಾಶ್ಮೀರದಲ್ಲಿ ಸೇನೆಯ ಹಿಂತೆಗೆತ, ಪಾಕಿಸ್ತಾನ ಪರ, ಭಯೋತ್ಪಾದಕರ ಬಗೆಗೆ ಸಾಪ್ಟ್ಕಾರ್ನರ್ ನೀಡುವ ಬಹಿರಂಗ ಆಶ್ವಾಸನೆ ನೀಡುವ ಘಟ್ಟಕ್ಕೆ ಬಂದು ನಿಂತವು. ಈ ಬಡಬಡಿಕೆ ನೋಡಿದರೆ ಅವರು ಮುಸ್ಲಿಮರನ್ನು ಓಲೈಸಲು ಹೊರಟಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಅವರು ಈಗಾಗಲೇ ಮೋದಿಯ ರಾಷ್ಟ್ರೀಯ ಚಿಂತನೆಗಳನ್ನು ಹಿಂದೂಪರ ಚಿಂತನೆಗಳೆಂದು ಪರಿಗಣಿಸಿ ಮೋದಿಗೆ ವಿರುದ್ಧ ಮತ ಚಲಾಯಿಸುತ್ತಾರೆ ಎಂಬ ವಾಸ್ತವದ ಅರಿವಿಲ್ಲ ಎನ್ನುವಂತಿಲ್ಲ. ಯಾಕೆಂದರೆ ಇದನ್ನು ಅರಿತೇ ತಾನೇ ಟೆಂಪಲ್ ರನ್, ಗೋಶಾಲೆ ಮುಂತಾದ ಸಾಪ್ಟ್ ಹಿಂದುತ್ವ (?) ಪ್ರದರ್ಶಿಸಿ ಕಾಂಗ್ರೆಸ್ ಸ್ವಲ್ಪಮಟ್ಟಿನ ಯಶಸ್ಸು ಕಂಡಿದ್ದು. ಇದನ್ನು ವಿಪಕ್ಷಗಳು ಮುಂದುವರಿಸಲಾಗದೇ ಹೋದದ್ದೇಕೆ?
ಕೊನೆಯದಾಗಿ ಒಂದು ಮಾತು ನೆನಪಿಗೆ ಬರುತ್ತಿದೆ. ಮಹಾಭಾರತದಲ್ಲಿ ಶ್ರೀಕೃಷ್ಣ ಭಗವದ್ಗೀತೆಯನ್ನು ಅರ್ಜುನನ ಬದಲಾಗಿ ಅಧರ್ಮದ ಹಾದಿಯಲ್ಲಿರುವ ದುರ್ಯೋಧನನಿಗೆ ಬೋಧಿಸಿ, ಆ ಮೂಲಕ ಭೀಕರವಾದ ಅಸಂಖ್ಯ ಸಾವುನೋವುಗಳನ್ನು ತಪ್ಪಿಸಬಹುದಿತ್ತಲ್ಲವೇ? ಎಂಬ ವಿಚಾರ ನಮ್ಮ ಕಾಡಬಹುದು. ಮಹಾಭಾರತದ ಇನ್ನೊಂದು ಸಂದರ್ಭದಲ್ಲಿ ಶ್ರೀಕೃಷ್ಣ ಬುದ್ಧಿವಾದ ಹೇಳಲು ಬಂದಾಗ ದುರ್ಯೋಧನ ಜಾನಾಮಿ ಧರ್ಮಂ ನಚ ಮೇ ಪ್ರವೃತ್ತಿಃ | ಜಾನಾಮ್ಯ ಧರ್ಮಂ ನಚ ಮೇ ನಿವೃತ್ತಿಃ || (ಧರ್ಮ ಯಾವುದೆಂದು ತಿಳಿದಿದ್ದರೂ ಆಚರಿಸಲಾಗುತ್ತಿಲ್ಲ; ಅಧರ್ಮ ಯಾವುದೆಂದು ತಿಳಿದಿದ್ದರೂ ಬಿಡಲಾಗುತ್ತಿಲ್ಲ) ಎಂದು ಉತ್ತರಿಸುತ್ತಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.