ಮುಂಬಯಿ: ಮುಂಬಯಿ ಮೂಲದ 23 ವರ್ಷದ ಪೈಲೆಟ್ ಕ್ಯಾಪ್ಟನ್ ಆರೋಹಿ ಪಂಡಿತ್ ಅವರು, ಅಟ್ಲಾಂಟಿಕ್ ಮಹಾಸಾಗರವನ್ನು ಲಘು ಕ್ರೀಡಾ ವಿಮಾನ (Light Sports Aircraft) ದ ಮೂಲಕ ಏಕಾಂಗಿಯಾಗಿ ದಾಟಿದ ವಿಶ್ವದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೇ 13-14ರ ಮಧ್ಯರಾತ್ರಿ ಅವರು ಈ ಸಾಧನೆಯನ್ನು ಮಾಡಿದ್ದು, 3 ಸಾವಿರ ಕಿಲೋಮೀಟರ್ ಅನ್ನು ಕ್ರಮಿಸಿದ ಬಳಿಕ ಅವರು ತಮ್ಮ ಪುಟ್ಟ ವಿಮಾನವನ್ನು ಕೆನಡಾದ ಐಕ್ವಲೆಟ್ ವಿಮಾನನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿದರು. ಪ್ರತಿಕೂಲ ಹವಮಾನದ ನಡುವೆಯೂ ಸ್ಕಾಟ್ಲ್ಯಾಂಡಿನಿಂದ ಟೇಕ್ ಆಫ್ ಆಗಿ, ಗ್ರೀನ್ಲ್ಯಾಂಡ್ ಮತ್ತು ಐಸ್ಲ್ಯಾಂಡ್ಗಳಲ್ಲಿ ನಿಲುಗಡೆ ಮಾಡಿ ಬಳಿಕ ಐಕ್ವಲೆಟ್ವರೆಗೆ ವಿಮಾನ ಸಂಚಾರವನ್ನು ಅವರು ಮಾಡಿದ್ದಾರೆ.
ಆರೋಹಿ ಅವರು ಮಹಿಳಾ ಸಬಲೀಕರಣ ಉದ್ದೇಶದೊಂದಿಗೆ ತಮ್ಮ ಗೆಳತಿ ಕೀತೆರ್ ಮಿಸ್ಕ್ಯುಟ್ಟ ಅವರ ಜೊತೆ ಸೇರಿ ಒಂದು ವರ್ಷಗಳ ಜಾಗತಿಕ ಹಾರಾಟವನ್ನು ಜುಲೈ 30ರಂದು ಆರಂಭಿಸಿದ್ದಾರೆ. ಈ ಹಾರಾಟದ ಭಾಗವಾಗಿ ಅವರು ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿದ್ದಾರೆ. ಯುಕೆಯಿಂದ ಕೆನಡಾದವರೆಗೆ ಆಕೆ ಏಕಾಂಗಿಯಾಗಿ ಹಾರಾಟ ನಡೆಸಿದ್ದಾರೆ, ಜುಲೈ 30ರ ವೇಳೆಗೆ ಭಾರತಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.
ಮಾರ್ಗ ಮಧ್ಯೆ ಆಕೆ ಮತ್ತೊಂದು ದಾಖಲೆಯನ್ನು ಮಾಡಿದ್ದಾರೆ. ಲಘು ಕ್ರೀಡಾ ವಿಮಾನದಲ್ಲಿ ಅತ್ಯಂತ ಅಪಾಯಕಾರಿ ಗ್ರೀನ್ಲ್ಯಾಂಡ್ ಐಸ್-ಕ್ಯಾಪ್ ಮೇಲೆ ಏಕಾಂಗಿಯಾಗಿ ಹಾರಾಟ ನಡೆಸಿದ ಮೊದಲ ಮಹಿಳಾ ಪೈಲಟ್ ಎಂಬ ವಿಶ್ವ ದಾಖಲೆಯನ್ನೂ ಅವರು ಮಾಡಿದ್ದಾರೆ. ಭಾರತಕ್ಕೆ ತಲುಪುವ ಸಮಯದಲ್ಲಿ ಅವರು ಸುಮಾರು ಅರ್ಧ ಡಜನ್ಗಿಂತಲೂ ಹೆಚ್ಚಿನ ವಿಶ್ವ ದಾಖಲೆಯನ್ನು ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.