ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಮಿಗಿಲಾದವಳು, ಜಗತ್ತಿನ ಯಾವ ಪದಪುಂಜಗಳಿಗೂ ವರ್ಣನೆಗೆ ಸಿಗದವಳು, ಅಕ್ಕರೆಯ ಅಪ್ಪುಗೆಯಲ್ಲಿ ಬಂಧಿಸಿಡುವವಳು, ಪ್ರೀತಿಯ ಅಮೃತಧಾರೆ ಎರೆಯುವವಳು…..ಅವಳೇ ಅಮ್ಮ.
ಹೌದು, ಅಮ್ಮ ಎಂಬ ಎರಡಕ್ಷರದಲ್ಲಿ ಅದೇನೋ ಪುಳಕವಿದೆ, ಪ್ರೀತಿಯ ಸವಿಯಿದೆ. ವರ್ಣಿಸಲು ಅಸಾಧ್ಯವಾದ ಸೆಳೆತವಿದೆ. ಬಣ್ಣನೆಗೆ ಸಿಗದ ಹರುಷವಿದೆ. ನೋವಿನಲ್ಲೂ ಸಾಂತ್ವನ ಕೊಡುವ ಶಕ್ತಿಯಿದೆ.
ಎಲ್ಲಾ ಬಾಂಧವ್ಯ, ಸಂಬಂಧಗಳನ್ನು ಮೀರಿದವಳು ತಾಯಿ. ತಾನು ಎಲ್ಲಾ ಕಡೆ ಇರಲಾರೆ ಎಂಬ ಕಾರಣಕ್ಕಾಗಿಯೇ ದೇವರು ತಾಯಿಯನ್ನು ಸೃಷ್ಟಿಸಿದ ಎಂಬ ಮಾತನ್ನು ಅಕ್ಷರಶಃ ರುಜುವಾತು ಮಾಡಿಕೊಟ್ಟುವಳು. ಹೆಜ್ಜೆಯಿಡಲು ಕಲಿಸಿದವಳು, ಕೈ ತುತ್ತು ನೀಡಿದವಳು, ಕರುಳಕುಡಿಯ ಜೀವನಕ್ಕಾಗಿ ತನ್ನ ಜೀವವನ್ನು ಸವೆಸಿದವಳು, ಕಂದನ ಪ್ರತಿ ಯಶಸ್ಸಿನಲ್ಲೂ ಆಕೆಯ ಪಾಲಿದೆ. ಪ್ರತಿ ಕಷ್ಟದಲ್ಲೂ ಆಕೆಯ ಸಾಂತ್ವನವಿದೆ.
ಕಾಲ ಬದಲಾಗಬಹುದು, ಮಕ್ಕಳೂ ಬದಲಾಗಬಹುದು ಆದರೆ ತಾಯಿ ಮತ್ತು ಆಕೆಯ ಪ್ರೀತಿ ಎಂದಿಗೂ ಬದಲಾಗಲಾರದು. ಅವಳ ಪ್ರೀತಿ ಎಂಬುದು ಎಂದೂ ಬತ್ತದ ಕಡಲಿದ್ದಂತೆ. ತನ್ನ ಮಗು ಅಂಗವಿಕಲನೇ ಆಗಿರಲಿ, ಬುದ್ಧಿಮಾಂದ್ಯನೇ ಆಗಿರಲಿ, ಇಡೀ ಸಮಾಜವೇ ಆತನನ್ನು ತಿರಸ್ಕಾರ ದೃಷ್ಟಿಯಿಂದ ನೋಡಲಿ ಆದರೆ ತಾಯಿಯ ಮಮತೆ ಕಿಂಚಿತ್ತೂ ಕಡಿಮೆಯಾಗದು. ಅದಕ್ಕಾಗಿಯೇ ಅವಳು ದೇವರಿಗೆ ಸಮಾನವಾಗಿ ನಿಂತಿದ್ದಾಳೆ.
ತಪ್ಪು ಮಾಡಿದಾಗ ತಿದ್ದಿ, ಒಳಿತು ಮಾಡಿದಾಗ ಬೆನ್ನು ತಟ್ಟಿ ಸಮಾಜದಲ್ಲಿ ತನ್ನ ಮಕ್ಕಳಿಗೊಂಡು ಸ್ಥಾನ ಸಿಗುವಂತೆ ಮಾಡುವವಳು ತಾಯಿ. ಆಕೆಗಿಂತ ಮಿಗಿಲಾದ ಬಂಧುವಿಲ್ಲ, ಆಕೆಗೆ ಸಮನಾದ ಗುರು ಇಲ್ಲ, ಮಾರ್ಗದರ್ಶಕರಿಲ್ಲ. ಮಕ್ಕಳು ತನ್ನನ್ನು ಕಡೆಗಣಿಸಿದರೂ ಆಕೆ ಎಂದಿಗೂ ಅವರನ್ನು ಕಡೆಗಣಿಸಲಾರಳು. ಅದಕ್ಕಾಗಿಯೇ ಜಗತ್ತು ಆಕೆಯನ್ನು ಭೂಮಿಗೆ ಹೋಲಿಕೆ ಮಾಡುತ್ತದೆ. ದೇವರಿಗೆ ಹೋಲಿಕೆ ಮಾಡುತ್ತದೆ. ಪ್ರಕೃತಿಗೆ ಹೋಲಿಕೆ ಮಾಡುತ್ತದೆ.
ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರ ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಒತ್ತಡದ ಜಂಜಾಟದಲ್ಲಿ ಸಿಲುಕಿರುವ ಆಧುನಿಕ ಮಾನವ ಒಂದು ದಿನವಾದರೂ ತನ್ನ ತಾಯಿಯನ್ನು ಸ್ಮರಿಸಲಿ ಎಂಬ ಕಾರಣಕ್ಕೆ ಹುಟ್ಟಿದ ದಿನ ಇದಿರಬಹುದು. ತನ್ನೀಡಿ ಜೀವನವನ್ನು ಮಕ್ಕಳ ಸುಖಕ್ಕಾಗಿ, ಸಂತೋಷಕ್ಕಾಗಿ ಮುಡಿಪಾಗಿಡುವ ತಾಯಿಯ ಶ್ರೇಷ್ಠತೆಯನ್ನು ಸಾರಲು ಒಂದು ದಿನ ಸಾಲದು. ನೂರು ಜನುಮವನ್ನು ಎತ್ತಿ ಬಂದರೂ ಆಕೆ ಋಣ ತೀರಿಸಲು ಯಾವ ಮಕ್ಕಳಿಗೂ ಸಾಧ್ಯವಾಗಲಾರದು.
ಆದರೆ ಮಾತೃದೇವೋ ಭವ ಎನ್ನುವ ನಮ್ಮ ಸಂಸ್ಕೃತಿಯಲ್ಲಿ ತಾಯಿಗೆ ವಿಶೇಷವಾದ ಗೌರವವಿದೆ. ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲಾದುದು ಎಂದು ನಂಬಿದವರು ನಾವು. ತಾಯಿ ಮತ್ತು ತಾಯಿತನವನ್ನು ಸಂಭ್ರಮಿಸಲು ನಮಗೆ ಯಾವುದೇ ವಿಶೇಷ ದಿನದ ಅಗತ್ಯವಿಲ್ಲ. ಪ್ರತಿ ದಿನವೂ ನಮಗೆ ತಾಯಿಯ ದಿನ. ಆಕೆಯ ನೆನಪು, ಸಾನಿಧ್ಯ, ಮಾರ್ಗದರ್ಶನವಿಲ್ಲದೆ ನಮಗೆ ಒಂದು ದಿನ ಕಳೆಯುವುದೂ ಅಸಾಧ್ಯ. ಆಕೆಯ ಜೀವನವೇ ನಮಗೆ ಸ್ಫೂರ್ತಿಯ ಸೆಲೆ, ಆಕೆ ಹಾಕಿಕೊಟ್ಟ ಸಂಸ್ಕಾರದಲ್ಲಿ ನಡೆದರೆ ಪ್ರತಿ ದಿನವೂ ತಾಯಿಯ ದಿನವೇ.
ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.