
ನವದೆಹಲಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುರ್ತಾಗಿ “ಪಾಯಿಂಟ್ ಆಫ್ ಕಾಲ್ (PoC)” ಸ್ಥಾನ-ಮಾನ ನೀಡುವ ಅಗತ್ಯತೆಯನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ.
ಲೋಕಸಭೆಯಲ್ಲಿ ನಿಯಮ 377ರಡಿಯಲ್ಲಿ ಈ ವಿಷಯದ ಬಗ್ಗೆ ಧ್ವನಿಯೆತ್ತಿರುವ ಸಂಸದ ಕ್ಯಾ. ಚೌಟ ಅವರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರಾವಳಿ ಕರ್ನಾಟಕ ಮತ್ತು ನೆರೆಯ ಕೇರಳಕ್ಕೆ ಪ್ರಮುಖ ವಾಯುಯಾನ ಹೆಬ್ಬಾಗಿಲಾಗಿದೆ. ಈ ಏರ್ಪೋರ್ಟ್ 2024-25ರ ಅವಧಿಯಲ್ಲಿ 7.15 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿದಂತೆ ಒಟ್ಟು ಸುಮಾರು 23.4 ಲಕ್ಷ ಪ್ರಯಾಣಿಕರ ಪ್ರಯಾಣವನ್ನು ನಿರ್ವಹಿಸಿದ್ದು, ಆ ಮೂಲಕ ಸುಮಾರು 16,800ಕ್ಕೂ ಹೆಚ್ಚು ವಿಮಾನಗಳ ಹಾರಾಟ ನಡೆಸಿವೆ. ಇದು ವಾರ್ಷಿಕವಾಗಿ ಶೇ.15ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ. ಈ ಅಂಕಿ-ಅಂಶಗಳು ವಿಮಾನ ನಿಲ್ದಾಣದ ಬೆಳವಣಿಗೆ ಮತ್ತು ವಾಣಿಜ್ಯ ಉತ್ತೇಜನದ ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತವೆ ಎಂದು ಹೇಳಿದ್ದಾರೆ.
ತುಳುನಾಡು ಪ್ರದೇಶಗಳ ಗಣನೀಯ ಸಂಖ್ಯೆಯ ಜನರು ಗಲ್ಫ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಔದ್ಯೋಗಿಕ ಸಮುದಾಯವು ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಮಂಗಳೂರು ವಿಮಾನ ನಿಲ್ದಾಣವನ್ನೇ ಹೆಚ್ಚು ಅವಲಂಬಿಸಿಕೊಂಡಿದೆ. ಆದರೆ, PoC (ಪಾಯಿಂಟ್ ಆಫ್ ಕಾಲ್) ಸ್ಥಾನಮಾನದ ಕೊರತೆಯಿಂದಾಗಿ ವಿದೇಶಿ ವಿಮಾನಯಾನ ಸಂಸ್ಥೆಗಳು ಇಲ್ಲಿಂದ ನೇರ ಅಂತಾರಾಷ್ಟ್ರೀಯ ಸೇವೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ, ಪ್ರಯಾಣಿಕರು ಬೆಂಗಳೂರು ಅಥವಾ ಕೊಚ್ಚಿನ್ ವಿಮಾನ ನಿಲ್ದಾಣದ ಮೂಲಕ ಸಂಚರಿಸಬೇಕಾದ ಪರಿಸ್ಥಿತಿಯಿದೆ. ಇದರಿಂದ, ಅನಿವಾಸಿ ಭಾರತೀಯ ಸಮುದಾಯಕ್ಕೆ ದುಬಾರಿ ವೆಚ್ಚ, ದೀರ್ಘ ಪ್ರಯಾಣದ ಸಮಯದ ಜತೆಗೆ ನಾನಾ ರೀತಿಯ ಅನಾನುಕೂಲತೆ ಎದುರಾಗುತ್ತಿದೆ ಎಂದು ಅವರು ಸದನದ ಗಮನಕ್ಕೆ ತಂದಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ PoC ಸ್ಥಾನಮಾನ ನೀಡುವುದರಿಂದ ಈ ಭಾಗದ ಜನರಿಗೆ ನೇರ ಅಂತಾರಾಷ್ಟ್ರೀಯ ಸಂಪರ್ಕ ಸಾಧ್ಯವಾಗುತ್ತದೆ. ಜತೆಗೆ ವಿಮಾನಯಾನ ಕಾರ್ಯಾಚರಣೆಗಳನ್ನು ಮತ್ತಷ್ಟು ವಿಸ್ತರಿಸುವುದಕ್ಕೆ ಅನುಕೂಲವಾಗುತ್ತದೆ. ಅಲ್ಲದೆ ವಿದೇಶದಲ್ಲಿ ದುಡಿಯುವ ವರ್ಗಕ್ಕೆ ಹಾಗೂ ಅವರ ಕುಟುಂಬಗಳ ಸುಗಮ ಪ್ರಯಾಣ ಸಾಧ್ಯವಾಗುತ್ತದೆ. ಈ ರೀತಿಯ ವಿಮಾನಯಾನ ಸಂಪರ್ಕವು ಸಹಜವಾಗಿಯೇ ಇಲ್ಲಿನ ವ್ಯಾಪಾರ ಮತ್ತು ಹೂಡಿಕೆ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ. ಇದು ಸಾಗರೋತ್ತರ ಉತ್ಪನ್ನಗಳ ರಫ್ತು, ಅಡಿಕೆ, ಗೋಡಂಬಿ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ನಂತಹ ಪ್ರಾದೇಶಿಕ ಉದ್ಯಮಗಳಿಗೂ ಬೆಂಬಲ-ಉತ್ತೇಜನ ನೀಡುತ್ತದೆ. ಜೊತೆಗೆ ಮಂಗಳೂರು ವಿಶೇಷ ಆರ್ಥಿಕ ವಲಯದ (SEZ) ಬೆಳವಣಿಗೆಗೂ ಪೂರಕವಾಗಲಿದೆ ಎಂದು ಕ್ಯಾ. ಚೌಟ ಸದನಕ್ಕೆ ಮನವರಿಕೆ ಮಾಡಿದರು.
ಅಂತಾರಾಷ್ಟ್ರೀಯವಾಗಿ ನೇರ ಸಂಪರ್ಕ ವ್ಯವಸ್ಥೆ ಕಲ್ಪಿಸುವುದರಿಂದ ಕರಾವಳಿ ಭಾಗದ ಪ್ರವಾಸೋದ್ಯಮದ ಬೆಳವಣಿಗೆ ಜತೆಗೆ ಶಿಕ್ಷಣ ಕ್ಷೇತ್ರದ ಪ್ರಗತಿಯನ್ನು ಕೂಡ ಹೆಚ್ಚಿಸಬಹುದು. ಇದು ಎನ್.ಐ.ಟಿ.ಕೆ (NITK) ಸುರತ್ಕಲ್ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಂತಹ ಪ್ರತಿಷ್ಠಿತ ಸಂಸ್ಥೆಗಳ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಂದರ್ಶಕರಿಗೆ ಅಂತಾರಾಷ್ಟ್ರೀಯ ವೇದಿಕೆಗಳಿಗೆ ಸುಲಭವಾಗಿ ಪ್ರಯಾಣಿಸುವುದಕ್ಕೂ ಅನುಕೂಲ ಕಲ್ಪಿಸುತ್ತದೆ ಎಂದೂ ಅವರು ವಿವರಿಸಿದರು.
ಈ ಹಿನ್ನಲೆಯಲ್ಲಿ ಮಾನ್ಯ ನಾಗರಿಕ ವಿಮಾನಯಾನ ಸಚಿವರು ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶ ಮಾಡಿ, ಮಂಗಳೂರು ವಿಮಾನ ನಿಲ್ದಾಣದ ಬಲವಾದ ಪ್ರಯಾಣಿಕರ ಬೇಡಿಕೆ, ಆರ್ಥಿಕ ಸಾಮರ್ಥ್ಯ ಮತ್ತು ಪ್ರಾದೇಶಿಕ ಮಹತ್ವವನ್ನು ಪರಿಗಣಿಸಿ ಆದಷ್ಟು ಬೇಗ ಈ ಏರ್ಪೋರ್ಟ್ಗೆ ಪಾಯಿಂಟ್ ಆಫ್ ಕಾಲ್ ಮಾನ್ಯತೆಯನ್ನು ನೀಡಬೇಕು. ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಮತ್ತು ಜಾಗತಿಕ ಸಂಪರ್ಕ ವ್ಯವಸ್ಥೆ ಸುಧಾರಣೆ ಹಿತದೃಷ್ಟಿಯಿಂದಲೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ “ಪಾಯಿಂಟ್ ಆಫ್ ಕಾಲ್” (PoC) ಸ್ಥಾನಮಾನವನ್ನು ನೀಡಬೇಕೆಂದು ಅವರು ಮನವಿ ಮಾಡಿದರು.
Today in Parliament, I raised the need to grant Point of Call (PoC) status to our Mangaluru International Airport.
Our coastal region has a large overseas workforce and growing industries that depend on efficient global connectivity.
Direct international operations to Mangaluru…
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) December 10, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



