ಪ್ರಪಂಚದ ಅತೀ ದೊಡ್ಡ ಸಫಲ ಜನತಂತ್ರ ಸಂವಿಧಾನವೆಂಬ ಅಭಿಧಾನ ಹೊಂದಿದ ರಾಷ್ಟ್ರ ಭಾರತ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆತ್ಮವೇ ಪ್ರಜೆಗಳು. ಅವರ ಅಭಿಪ್ರಾಯ ಬಲದಿಂದ ರೂಪುಗೊಂಡ ಪಕ್ಷಗಳೇ ದೇಶದ ಭವಿಷ್ಯ ರೂಪಿಸುವುದು. ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನಗಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟು ಸಾಗುತ್ತಿರುವ ಭಾರತ ಇಂದು ಮತ್ತೊಂದು ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿದೆ. ಹಲವು ರಾಷ್ಟ್ರಗಳ ಪ್ರಜ್ಞಾವಂತ ಭಾರತೀಯ ಮತದಾರರ ನಡೆಯನ್ನು ಕಾತುರದಿಂದ ನಮ್ಮಷ್ಟೇ ಕುತೂಹಲದಿಂದ ಕಾಯುತ್ತಿರುವ ಕಾರಣ ಹಿಂದಿನ ಚುನಾವಣೆಯಲ್ಲಿ ಮತದಾರ ತನ್ನ ಕೈ ಬೆರಳ ತುದಿಯಿಂದ ಇತಿಹಾಸ ಬದಲಿಸಿ ಪ್ರಜೆಗಳೇ ಪ್ರಭುಗಳು ಅನ್ನೋದನ್ನ ಸಾಬೀತು ಪಡಿಸಿದ್ದೆ ಸಾಕ್ಷಿ.
ದೇಶದ ಹಿತದೃಷ್ಟಿಯಿಂದ ಚುನಾವಣಾ ಆಯೋಗವು ಕೂಡ ಹಲವು ವಿನೂತನ ಕಾರ್ಯಗಳನ್ನು ಯೋಜಿಸಿಕೊಂಡು ಮತದಾರರನ್ನು ಮತಗಟ್ಟೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಮುಖ್ಯ ಚುನಾವಣಾಧಿಕಾರಿ ಯಾಗಿದ್ದ ಟಿ.ಎನ್. ಶೇಷನ್ರವರು ಮಾಡಿ ಹೋದ ಬದಲಾವಣೆಯು ಇಂದಿಗೂ ಕೂಡ ಜನಹಿತಕ್ಕಾಗಿ ರೂಪಿಸಿದ್ದು ನೆನೆಯಲೇಬೇಕಿದೆ. ಮತದಾನ ನಮ್ಮ ಪ್ರಥಮ ಕರ್ತವ್ಯವಾಗಿದ್ದು ಬದ್ಧತೆಯಿಂದ ಆ ಕಾರ್ಯದಲ್ಲಿ ಭಾಗಿಯಾಗೋದು ನಮ್ಮ ಪ್ರಥಮ ಆದ್ಯತೆಯಾಗಬೇಕು. ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ಸುಶಿಕ್ಷಿತರೇ ಅಧಿಕವಾಗಿರುವ ನಗರವಾಸಿಗಳು ಮತದಾನದ ದಿನ ಉದಾಸೀನತೆಯಿಂದಲೋ, ತಾತ್ಸಾರದಿಂದಲೋ ಆ ದಿನವನ್ನು ರಜೆಯನ್ನಾಗಿ ಕಳೆದು ಬಿಡುವುದು ಆಗಿದೆ. ಅಂಕಿ ಅಂಶಗಳ ಪ್ರಕಾರ ಕೇವಲ ಬೆಂಗಳೂರಿನಲ್ಲಿ 52.4 ರಷ್ಟು ಮಾತ್ರ 2014 ರಲ್ಲಿ ದಾಖಲಾದ ಮತದಾನ ಪ್ರಮಾಣ. ಆಮೇಲೆ ಇದೆ ಜನ ಭವಿಷ್ಯದಲ್ಲಿನ ರಾಷ್ಟ್ರದ ಪರಿಸ್ಥಿತಿ ದೂಷಿಸುತ್ತಾ ಕೂಡುವುದು ಎಷ್ಟು ಸರಿ. ಎಲ್ಲಕ್ಕಿಂತ ಮೊದಲು ಮತದಾರ ತನಗೆ ಸಂವಿಧಾನ ಬದ್ಧವಾಗಿ ಪ್ರಾಪ್ತವಾದ ಈ ಶಕ್ತಿಯನ್ನು ಸರಿಯಾಗಿ ಅರಿತುಕೊಳ್ಳಬೇಕಿದೆ. ಕೇವಲ ನಿರ್ಲಕ್ಷ್ಯವೇ ಎಲ್ಲದಕ್ಕೂ ಮದ್ದಲ್ಲಾ. ರಾಜಕೀಯದ ದೊಡ್ಡ ದುರಂತವೆಂದರೆ ಸರ್ಕಾರಿ ಸೇವೆಯಲ್ಲಿರುವಂತೆ ಇದರಲ್ಲಿ ವಯಸ್ಸಿನ, ವಿದ್ಯಾರ್ಹತೆಯ ಮಾನದಂಡಗಳೇ ಇಲ್ಲಾ. ಅರ್ಹತೆ ಇಲ್ಲದವರು ಅಂದರೆ ಕಳಂಕಿತರು, ಭ್ರಷ್ಟರು, ಅಪರಾಧಿ ಹಿನ್ನೆಲೆ ಹೊಂದಿರುವವರು, ಬೇಜವಾಬ್ದಾರಿ, ರಾಷ್ಟ್ರವಿರೋಧಿ ಹೇಳಿಕೆ ಕೊಡುವಂತಹವರು ವ್ಯರ್ಥ, ಕುಟುಂಬಗಳಿಗೆ ಸೀಮಿತಗೊಳ್ಳುತ್ತಿರುವ ರಾಜಶಾಹಿ ನಡಾವಳಿಗಳು ಜನಾದೇಶವನ್ನೇ ತಿರುಚಿ ತಮ್ಮ ರಾಜಕೀಯ ದಾಳ ಉರುಳಿಸು ತ್ತಿರುವುದು ಪ್ರಜೆಗಳು ಮತದಾನದಿಂದ ಮುಖ ತಿರುಗಿಸುವುದಕ್ಕೆ ಕಾರಣವಾಗಿರಬಹುದು.
ಆದರೆ ಇಲ್ಲಿ ದೇಶದ ಅಭಿವೃದ್ಧಿಯ ಪ್ರಶ್ನೆಯಾಗಿರುವುದರಿಂದ ನಾವು ಆಶಾವಾದಿತನ ತೊರೆಯದೆ ಪರಿಸ್ಥಿತಿಯ ಸೂಕ್ತ ಅವಲೋಕನ ಮಾಡಿ ಇರುವ ಸಮಸ್ಯೆಗಳೇನು? ಅದಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿರುವವರಾರು? ವಿರೋಧ ಪಕ್ಷ, ಆಡಳಿತ ಪಕ್ಷಗಳ ಕಾರ್ಯ ವೈಖರಿ ಹೇಗಿದೆ? ಅವರುಗಳು ಹಾಕಿಕೊಂಡ ಪ್ರನಾಳಿಕೆಯಲ್ಲಿನ ಘೋಷಣೆಗಳು ಕಾರ್ಯರೂಪಕ್ಕೆ ಬಂದವುಗಳೆಷ್ಟು? ಸಫಲತೆಗಳೇನು? ಜನರಿಗೆ ಕೇವಲ ಕ್ಷಣಿಕ ಆಮಿಷಗಳ ಕಣ್ಣಿಗೆ ಕಾಣುವ ಕೆಲವನ್ನಷ್ಟೆ ಅನುಷ್ಠಾನಕ್ಕೆ ತಂದಿರುವರೋ ಅಥವಾ ಗಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಅನುಕೂಲವಾಗೋ ಸುದೀರ್ಘ ಯೋಜನೆಯನ್ನು ಹಾಕಿಕೊಂಡಿದೆಯೋ ಎಲ್ಲ ವಿಷಯಗಳತ್ತ ಸೂಕ್ಷ್ಮವಾಗಿ ಮತದಾರ ಅವಲೋಕಿಸಲೇಬೇಕಿದೆ.
ಮತದಾರರ ಹತ್ತಿರ ಅಭ್ಯರ್ಥಿ ಪಕ್ಷದವರನ್ನು ಪ್ರಶ್ನಿಸಿ ಅವರ ಯೋಜನೆ, ನಮ್ಮ ಸಮಸ್ಯೆ ಕೇಳಿ ಸ್ಪಷ್ಟತೆ ಇರುವ ದೇಶದ ಅಭಿವೃದ್ದಿಗೆ ಸ್ಪಂದಿಸೋ ಮನಸ್ಥಿತಿ ಇರುವ ಪಕ್ಷ ಜನ-ಮನ ಗೆಲ್ಲಬಹುದು. ಕೇವಲ ವೋಟಿಗಾಗಿ 5 ವರುಷಕ್ಕೊಮ್ಮೆ ಬರುವ ವ್ಯಕ್ತಿಗಳಿಗೆ ಕ್ಷಣಿಕ ಆಮಿಷದ ಮೂಲಕ ಅಮಾಯಕರನ್ನಷ್ಟೆ ಮೋಸಗೊಳಿಸಬಹುದೇ ಹೊರತು ಪ್ರಜ್ಞಾವಂತರನ್ನಲ್ಲ. ಅಂತಹವರಿಗೆ ಚುನಾವಣೆಯಲ್ಲಿ ಸರಿಯಾಗಿ ಉತ್ತರವನ್ನು ಜನರು ಮತದಾನದ ಮೂಲಕ ನೀಡುವರು. ಮತದ ದಾನ ಅಪಾತ್ರರಿಗೆ ಲಭ್ಯವಾಗುವ ಇನ್ನೊಂದು ಸುಲಭದಾರಿ ನೋಟಾ. ಸರಿಯಾಗಿರುವ ಭ್ರಷ್ಟರಹಿತ ಪ್ರತಿನಿಧಿ ಅಥವಾ ಪಕ್ಷವನ್ನು ಆರಿಸೋ ಗುರುತರ ಜವಾಬ್ದಾರಿ ಮತದಾರರ ಮೇಲಿದೆ.
ಸರ್ಕಾರಿ ಬೊಕ್ಕಸ ಖಾಲಿ ಮಾಡಿ ಆಮಿಷ ಭಾಗ್ಯಗಳನ್ನು ಮಾಡಿ ಭವಿಷ್ಯದ ಚಿಂತನೆಯನ್ನೇ ಮಾಡದ, ದೇಶಕ್ಕಾಗಿ ಜೀವನ ಮುಡಿಪಿಟ್ಟಂತವರನ್ನು ಗಮನಿಸಿ ನಿರ್ಧರಿಸಬೇಕಿದೆ. ದೀರ್ಘಕಾಲೀನ ಅಭಿವೃದ್ಧಿಯ ಪ್ರಗತಿ ಆ ಹೊತ್ತಿಗೆ ಫಲ ಕೊಡದಿದ್ದರೂ ನಿಧಾನವಾಗಿ ದೇಶದ ಪ್ರಗತಿಗೆ ತನ್ನದೇ ಆದ ಶಾಶ್ವತ ಪರಿಹಾರ ನೀಡುವ ಯೋಜನೆಗಳನ್ನು ಜಾರಿಗೆ ತಂದವರನ್ನು ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಂಡು ದೇಶದ ಹಿತದೃಷ್ಟಿಯನ್ನು ಮಾತ್ರ ಗಮನಿಸಿ ಮತ ನೀಡಬೇಕಿದೆ. ಕೇವಲ ಜಾತಿ ಪ್ರೇಮ, ವ್ಯಕ್ತಿ ಪ್ರೇಮ, ಕುಟುಂಬ ಪ್ರೇಮ ಇವೆಲ್ಲಾ ದೇಶದ ಉನ್ನತಿಗೆ ಕಾರಣವಾಗೋ ಅಂಶಗಳಲ್ಲ.
ಪ್ರಪಂಚಕ್ಕೆ ವಿಶ್ವಗುರು ನಮ್ಮ ದೇಶವಾಗಬೇಕೆಂಬ ಭಾವನೆ ಇರುವ ಪ್ರತಿಯೊಬ್ಬ ಭಾರತೀಯ ತನ್ನ ತಿಳುವಳಿಕೆಯ ಶಕ್ತಿ ಬಳಸಿ, ಕರ್ತವ್ಯ ನಿಭಾಯಿಸಿದಲ್ಲಿ ಬರುವ ದಿನಗಳಲ್ಲಿ ಇನ್ನಷ್ಟು ಪ್ರಗತಿಪರ ಕಾರ್ಯ ಮಾಡುವುದಕ್ಕೆ ಸಜ್ಜಾದ ಪಕ್ಷವನ್ನೇ ಕೇಂದ್ರದಲ್ಲಿ ನೆಲೆನಿಲ್ಲಿಸಬೇಕಾಗಿದೆ. ಪರಿಸರದಲ್ಲಿ ಅಮಾಯಕರಿಗೆ, ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಆಳುವವರು ಎಷ್ಟೇ ಬಲಿಷ್ಠರಾದರೂ ಮತದಾರರ ಇಚ್ಛೆಯಿಲ್ಲದೆ ಯಾರೂ ಅವರ ಸೇವಕರಾಗಲಾರರೆಂದು ಬಲವಾದ ಸಂದೇಶ ನೀಡಬೇಕಿದೆ. ಒಂದು ದಿನದ ಮತದಾನ ನಿಮ್ಮಿಚ್ಚೆಯ ನಿಶ್ಚಿಂತ ಭವಿಷ್ಯಕ್ಕೆ ನಾಂದಿಯಾಗುವುದರಿಂದ ಮರೆಯದೆ ಮತಚಲಾಯಿಸಿ, ಚಲಾಯಿಸದವರಿಗೆ ಅರಿವು ನೀಡಿ ಎಲ್ಲರೂ ಸೇರಿ ಸಶಕ್ತ ದೇಶ ಕಟ್ಟೋಣ ಬನ್ನಿ.
✍ ಶ್ರೀಮತಿ ಸುನಿತಾ ಗಂಗಾಧರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.