ಶತಮಾನ ಕಂಡ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ : ಬ್ರಿಟಿಷ್ ಕ್ರೌರ್ಯದ ಮುಂದೆ ಕುಗ್ಗದ ಭಾರತೀಯರ ಚೈತನ್ಯದ ಪ್ರತೀಕ
ಇಂದಿಗೆ ಸರಿಯಾಗಿ ಒಂದು ನೂರು ವರ್ಷಗಳ ಹಿಂದಕ್ಕೆ ತಿರುಗಿ ನೋಡಿದರೆ, ಮನುಕುಲ ಕಂಡ ಕರಾಳ ಹಿಂಸಾಕಾಂಡದಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಅಮಾಯಕರ ಮರಣಾಕ್ರಂಧನದ ಕೂಗು ಕೇಳುತ್ತಿತ್ತು. ಅಲ್ಲಿ ಸೇರಿದ್ದವರು ನಿಶಸ್ತ್ರರಾಗಿದ್ದ ಸತ್ಯಾಗ್ರಹಿಗಳು. ಬೈಸಾಕಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಅದೇ ಹಬ್ಬದ ಆನಂದದಲ್ಲಿ ತೇಲುತ್ತಿದ್ದವರು. ಅಂತಹ ನಾಗರಿಕರ ಮೇಲೆ ವಸಾಹತುಶಾಹಿ ಬ್ರಿಟಿಷ್ ಪ್ರಭುತ್ವ ಸುಮಾರು 1650 ಸುತ್ತುಗಳ ಗುಂಡಿನ ಮಳೆ ಸುರಿಸಿತ್ತು. ಅಲ್ಲಿ ಹರಿದದ್ದು ದೇಶಭಕ್ತರ ರಕ್ತದ ಓಕುಳಿ. ಭಾರತ ಮಾತೆಯ ಬಂಧ ಮುಕ್ತಿಯ ಸಂಗ್ರಾಮದಲ್ಲಿ ಮಾತೆಯ ಮಡಿಲಿಗೆ ಅರ್ಪಿತವಾದ ಅಮೂಲ್ಯ ಕುಸುಮಗಳು ಅವರು. ಆ ಕುಸುಮಗಳು ಚೆಲ್ಲಿದ ದೇಶಭಕ್ತಿಯ ಘಮ ಇನ್ನೂ ಸಾವಿರ ವರ್ಷಗಳ ಕಾಲಕ್ಕೂ ಅವಿಸ್ಮರಣೀಯವಾದುದು. ಈ ಘಟನೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸಲ್ಲಿ ಒಂದು ರಕ್ತರಂಜಿತ ಕ್ರೌರ್ಯ ಮಾತ್ರವಾಗಿ ಉಳಿಯದೆ ಭಗತ್ಸಿಂಗ್, ಉಧಮ್ ಸಿಂಗ್ ಮೊದಲಾದ ಕ್ರಾಂತಿಕಾರಿ ತರುಣರು ಭರತ ಭೂಮಿಯನ್ನು ರಕ್ತಪಿಪಾಸು ಬ್ರಿಟಿಷ್ ಕೈಗಳಿಂದ ಬಿಡುಗಡೆಗೊಳಿಸುವ ಸಂಕಲ್ಪಗೈಯಲು ಕಾರಣವಾದುದು ಚರಿತ್ರೆಯ ಪುಟಗಳಲ್ಲಿ ದಾಖಲಾದ ಸತ್ಯ.
1919, ಎಪ್ರಿಲ್ 13. ಪಂಜಾಬ್ ಪ್ರಾಂತದ ಅಮೃತ್ಸರ್ನ ಪಕ್ಕದ ಜಲಿಯನ್ ವಾಲಾಬಾಗ್ ಎಂಬ ಮೈದಾನದಲ್ಲಿ ಬ್ರಿಟಿಷ್ ಸರ್ಕಾರದ ಅಮಾನವೀಯ ಕಾನೂನಿನ ವಿರುದ್ಧ ಪ್ರತಿಭಟಿಸಲು ಸುಮಾರು 20,000 ಕ್ಕಿಂತಲೂ ಹೆಚ್ಚು ಜನ ನಿಶಸ್ತ್ರರಾಗಿ ಸೇರಿದ್ದರು. ಸುತ್ತಲೂ ಎತ್ತರದ ಗೋಡೆಗಳಿಂದ ಆವೃತ್ತವಾಗಿದ್ದ ಕಡಿದಾದ ಪ್ರವೇಶದ್ವಾರವನ್ನು ಹೊಂದಿದ್ದ ಈ ಮೈದಾನಕ್ಕೆ ಬೈಸಾಕಿ ಹಬ್ಬದ ಸಂತೋಷದಲ್ಲಿದ್ದ ಅಮೃತಸರ್ನ ಸುತ್ತಲಿನ ಊರುಗಳ ಜನ ಸೇರಿದ್ದರು. ಪಂಜಾಬ್ನ ಲೆಫ್ಟಿನೆಂಟ್ ಗವರ್ನರ್ ಮೈಕೆಲ್ ಒಡ್ವೈಯರ್ನ ಸುಪರ್ದಿಯಲ್ಲಿ, ಸೇನೆಯ ಕರ್ನಲ್ ಡಾಯರ್ ಸಭೆಗೆ ಬಂದಿದ್ದ ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳಲು ಮೊದಲೇ ಸಂಚು ರೂಪಿಸಿದಂತ್ತಿತ್ತು. ಗುಂಪು ಸೇರುವುದನ್ನು ತಡೆಯದ ಡಯಾರ್ನ ಸೈನ್ಯ ಜನ ಮೈದಾನದಲ್ಲಿ ಸೇರುವವರೆಗೂ ಸುಮ್ಮನಿದ್ದು, ಮೊದಲೇ ಇಕ್ಕಾಟ್ಟಾದ ಏಕೈಕ ದಾರಿಗೆ ಅಡ್ಡವಾಗಿ ಗನ್ನುಗಳೇ ತುಂಬಿದ್ದ ತನ್ನ ಜೀಪನ್ನು ಅಡ್ಡವಿರಿಸಿದ್ದ. ಡಾಯರ್ ನೇತೃತ್ವದ ಸುಮಾರು 50 ಜನ ಶಸ್ತ್ರಸಹಿತ ಸೈನಿಕರು ಜನರಿಗೆ ಕನಿಷ್ಟ ಪಕ್ಷ ಚದುರಲು ಎಚ್ಚರಿಕೆಯನ್ನೂ ನೀಡದೆ ನೇರವಾಗಿ ಗುಂಡಿನ ಸುರಿಮಳೆಗರೆಯಿತು. ಗುಂಪಿನಲ್ಲಿದ್ದ ಜನರು ಮೈದಾನದಿಂದ ಹೊರ ಹೋಗುವಂತೆಯೂ ಇಲ್ಲ. ನೋಡುನೋಡುತ್ತಿದ್ದಂತೆಯೆ ನೂರಾರು ಜನ ನೆಲಕ್ಕುರುಳಿದ್ದಾರೆ. ಗಾಯಗೊಂಡವರ ಆಕ್ರಂಧನ ಮುಗಿಲು ಮುಟ್ಟಿದೆ. ಗುಂಡಿನ ದಾಳಿಯಿಂದ ಪಾರಾಗಲು ಓಡುವಾಗ ಕಾಲ್ತುಳಿತಕ್ಕೆ ಸಿಕ್ಕಿ ಮರಣ ಹೊಂದಿದವರು ಮತ್ತೆ ನೂರಾರು ಜನ. ಕೆಲವರು ಎತ್ತರದ ಗೋಡೆಯನ್ನು ಹಾರಲು ಹೋದರೆ ಡಾಯರ್ನ ಸೈನಿಕರು ಅವರನ್ನೇ ಗುರಿಯಾಗಿರಿಸಿ ಗುಂಡು ಹೊಡೆದಾಗ ನೆಲಕ್ಕುರುಳಿ ಬಿದಿದ್ದಾರೆ. ಮೈದಾನದ ಪಕ್ಕದಲ್ಲಿದ್ದ ಬಾವಿಯೊಳಗೆ ಹಾರಿ ಪ್ರಾಣ ಉಳಿಸಿಕೊಳ್ಳಬಹುದೆಂದು ಹಾರಿದವರೂ ಬದುಕುಳಿಯಲಿಲ್ಲ. 1650 ಸುತ್ತುಗಳ ಗುಂಡುಹಾರಿಸಿದ ಬ್ರಿಟಿಷ್ ಸೈನಿಕರು ಅಕ್ಷರಶಃ ರಾಕ್ಷಸರಾಗಿ ವರ್ತಿಸಿದ್ದರು. ಆ ಬಳಿಕ ಡಾಯರ್ನ ಸೈನ್ಯ ಅಮೃತಸರ ನಗರದಲ್ಲಿ ಕರ್ಫ್ಯೂ ವಿಧಿಸಿ ಬೀದಿಗಳಲ್ಲಿ ಜನ ತಿರುಗಾಡಿದರೆ ಗುಂಡು ಹಾರಿಸುವ ಆದೇಶವನ್ನು ಮಾಡಿ ಗಾಯಗೊಂಡು ಮೈದಾನದಲ್ಲಿ ಬಿದ್ದಿದ್ದವರನ್ನೂ ಆಸ್ಪತ್ರೆಗೆ ಸೇರಿಸಲೂ ತಡೆದು ಮತ್ತೆ ನೂರಾರು ಜನ ರಾತ್ರಿಯೆಲ್ಲಾ ರಕ್ತಹರಿದು ಪ್ರಾಣ ಕಳೆದುಕೊಳ್ಳಲು ಕಾರಣವಾಯಿತು.
ಕ್ರೌರ್ಯ ಮೆರೆದ ಡಾಯರ್ ಆಗಲಿ, ಪಂಜಾಬ್ನ ಗವರ್ನರ್ ಆಗಲಿ ಈ ಘಟನೆಯಿಂದ ಸ್ವಲ್ಪವೂ ವಿಚಲಿತರಾಗಲಿಲ್ಲ. ಪಶ್ಚಾತ್ತಾಪದ ಸಣ್ಣ ಸೆಲೆಯೂ ಕಾಣಿಸಲಿಲ್ಲ. ಹತ್ಯಾಕಾಂಡದ ಸುದ್ದಿಯು ಪಂಜಾಬ್ನಿಂದ ಹೊರಹೋಗದಂತೆ ಎಲ್ಲಾ ಪ್ರಯತ್ನ ಪಟ್ಟ ಸರ್ಕಾರ ಒತ್ತಾಯಕ್ಕೆ ಮಣಿದು ಘಟನೆ ನಡೆದ ಮೂರು ತಿಂಗಳ ಬಳಿಕ ಒಂದು ತನಿಖಾತಂಡವನ್ನು ನೇಮಿಸಿತು. ಇದೊಂದು ಕಾಟಾಚಾರದ ಸಮಿತಿಯಾಗಿತ್ತು. ಹತ್ಯಾಕಾಂಡದಲ್ಲಿ ಮರಣ ಹೊಂದಿದವರ ಹಾಗೂ ಗಾಯಗೊಂಡವರ ಲೆಕ್ಕವನ್ನು ಪಡೆಯಬೇಕಾಗಿದ್ದ ಸಮಿತಿ ನೆಪಮಾತ್ರಕ್ಕೆ ನಗರದಲ್ಲಿ ಮರಣಹೊಂದಿದ ಅಥವಾ ಗಾಯಗೊಂಡ ವ್ಯಕ್ತಿಗಳ ಬಂಧುಗಳು ಸ್ವಯಂಪ್ರೇರಿತರಾಗಿ ದೂರು ನೀಡಿದರೆ ಪರಿಗಣಿಸಲಾಗುವುದು ಎಂದಿತ್ತು. ದೂರು ನೀಡಲು ಹೋದರೆ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟದಲ್ಲಿ ಭಾಗಿಯಾದ ಆರೋಪದಲ್ಲಿ ಉಳಿದ ಬಂಧುಗಳನ್ನು ಬಂಧಿಸಿ ದಂಡಿಸಬಹುದೆಂಬ ಕಾರಣದಿಂದ ದೂರು ನೀಡಿವರ ಸಂಖ್ಯೆ ಬಹಳ ಕಡಿಮೆ. ಬಾವಿಯಿಂದಲೇ ಹೊರತೆಗೆದ ಹೆಣಗಳ ಸಂಖ್ಯೆ 120 ದಾಟಿತ್ತಂತೆ ! ಅಂತಿಮವಾಗಿ ಸಮಿತಿ ಈ ಹತ್ಯಾಕಾಂಡದಲ್ಲಿ ಮರಣಹೊಂದಿದವರ ಸಂಖ್ಯೆ 379 ಎಂದು ನಿರ್ಧರಿಸಿತು. ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ನಡೆಸಿದ ಅಂದಾಜಿನ ಪ್ರಕಾರ 1500 ಕ್ಕೂ ಮೀರಿತ್ತು. ವಾಸ್ತವದಲ್ಲಿ ಈ ಸಂಖ್ಯೆ 2000 ಕ್ಕಿಂತಲೂ ಅಧಿಕ !!
ವಿಚಿತ್ರವೆಂದರೆ ರಕ್ತಪಾತಕಿ ಡಾಯರ್ ಬ್ರಿಟಿಷ್ ಸರ್ಕಾರದ ಕಣ್ಣಲ್ಲಿ ಪಂಜಾಬನ್ನು ಉಳಿಸಿದ ಧೀರನಾಗಿದ್ದ. ಬ್ರಿಟನ್ ಪಾರ್ಲಿಮೆಂಟಿನ ’ಹೌಸ್ ಆಫ್ ಲಾರ್ಡ್ಸ್’ ಡಾಯರನ್ನು ’ಪಂಜಾಬ್ನ ರಕ್ಷಕ’ ಎಂದು ಗುಣಗಾನ ಮಾಡಿತ್ತು. ಈ ಘಟನೆ 1857 ರಲ್ಲಿ ನಡೆದ ಸಂಘಟಿತ ಸ್ವಾತಂತ್ರ್ಯ ಸಮರದ ಬಳಿಕ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ಹೋರಾಟದ ದಿಕ್ಕನ್ನೇ ಬದಲಾಯಿಸಿತು. ಒಂದು ಶತಮಾನದ ಹಿಂದೆ ನಡೆದ ಈ ಘಟನೆಯನ್ನು ಇಂದು ನಿಂತು ನೋಡಿದರೆ ವಸಾಹತುಶಾಹಿಯು ತನ್ನ ಸಾಮ್ರಾಜ್ಯವನ್ನು ಉಳಿಸಲು ನಡೆಸಿದ ಕ್ರೌರ್ಯ, ಹಿಂಸೆ, ರಕ್ತಪಾತಗಳು ಒಂದೊಂದಾಗಿ ಕಣ್ಮುಂದೆ ಕಟ್ಟಿದಂತಾಗುತ್ತದೆ. ಈ ಘಟನೆಯನ್ನು ಕೇಳಿದ ಕವಿ ರವೀಂದ್ರನಾಥ ಠಾಗೋರ್ ಬ್ರಿಟಿಷ್ ಸರ್ಕಾರದ ಅಮಾನವೀಯ ನಡವಳಿಕೆಯನ್ನು ಖಂಡಿಸಿ ತನಗೆ ನೀಡಿದ್ದ ನೈಟ್ಹುಡ್ ಗೌರವವನ್ನು ಹಿಂತಿರುಗಿಸುತ್ತಾರೆ. ಹತ್ಯಾಕಾಂಡದ ಪ್ರತ್ಯಕ್ಷದರ್ಶಿ 20 ರ ಹರೆಯದ ಯುವಕ ಉಧಮ್ ಸಿಂಗ್ ತನ್ನ ತಾಯ್ನಾಡಿನ ಬಂಧುಗಳ ಹತ್ಯೆಗೆ ಕಾರಣರಾದವರನ್ನು ಬಲಿಪಡೆಯುವ ಶಪಥ ಮಾಡುತ್ತಾನೆ. 11 ರ ಹರೆಯದ ಬಾಲಕ ಭಗತ್ ಸಿಂಗ್ ಮೈದಾನದ ರಕ್ತಲೇಪಿತ ಮಣ್ಣನ್ನು ಹಿಡಿದು ಎದೆಗೊತ್ತಿಕೊಂಡು ತನ್ನ ನೆಲವನ್ನು ಬ್ರಿಟಿಷರಿಂದ ಬಿಡುಗಡೆಗೊಳಿಸುವ ರಣಸಂಕಲ್ಪವನ್ನು ಮಾಡಿದ್ದ. ಈ ಘಟನೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಸ್ಫೂರ್ತಿಯನ್ನು ಕೊಟ್ಟಿತು. ಅಂದು ಬ್ರಿಟಷ್ ಸೈನ್ಯಾಧಿಕಾರಿ ಅಮಾಯಕ ಭಾರತೀಯರ ಮೇಲೆ ಹಾರಿಸಿದ ಒಂದೊಂದು ಗುಂಡೂ ಕೂಡ ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯನ್ನು ಕೆಡವಿ ಹಾಕುವ ಗುಂಡುಗಳಾಗಿ ಪರಿವರ್ತನೆಯಾಯಿತು. ಇಂದಿಗೂ ಜಲಿಯನ್ವಾಲಾ ಬಾಗ್ನ ಗೋಡೆಗಳಲ್ಲಿ ಅಂದು ಹಾರಿದ ಗುಂಡಿನ ಗುರುತುಗಳಿವೆ. ಇತಿಹಾಸದ ಪುಟಗಳಲ್ಲಿ ದಾಖಲಾದ ಬ್ರಿಟಿಷ್ ಕ್ರೌರ್ಯದ ಸಾಕ್ಷಿಯಂತೆ ಆ ಗೋಡೆಗಳು ನಿಂತಿವೆ.
ಅಂದಿನಿಂದ ಇಂದಿನವರೆಗೂ ಬ್ರಿಟಿಷ್ ಆಳ್ವಿಕೆ ಈ ಹತ್ಯಾಕಾಂಡಕ್ಕೆ ಭಾರತೀಯರ ಕ್ಷಮೆ ಯಾಚಿಸಬೇಕೆಂಬ ಒತ್ತಾಯ ಕೇಳಿ ಬರುತ್ತಲೇ ಇದೆ. ಅತ್ಯಂತ ನಾಚಿಕೆಗೇಡಿನ ಕೃತ್ಯವಾದ ಈ ಹೇಯ ಹತ್ಯಾಕಾಂಡವನ್ನು ಮೂರು ದಿನಗಳ ಹಿಂದೆ ಬ್ರಿಟನ್ ಸಂಸತ್ತಿನಲ್ಲಿ ಪ್ರಧಾನಿ ತೆರೆಸಾ ಮೇ ’ಬ್ರಿಟಿಷ್ ಭಾರತ ಇತಿಹಾಸದಲ್ಲಿ ಕಪ್ಪುಚುಕ್ಕೆ’ ಎಂದಿದ್ದಾರೆ. ಹೀಗಿದ್ದರೂ ಈ ಘಟನೆಯ ಬಗ್ಗೆ ಭಾರತದ ಕ್ಷಮೆಯಾಚಿಸಬೇಕು ಎನ್ನುವ ಲೇಬರ್ ಪಾರ್ಟಿಯ ಒತ್ತಾಯಕ್ಕೆ ಬ್ರಿಟನ್ ಸರ್ಕಾರ ಇನ್ನೂ ಮಣಿದಿಲ್ಲದಿರುವುದು ಕ್ರೌರ್ಯದ ಕುರಿತ ಡಾಯರ್ನ ಮನಸ್ಥಿತಿಗಿಂತ ಇಂದಿನ ಬ್ರಿಟನ್ ಮನಸ್ಥಿಯೂ ಭಿನ್ನವಾಗಿಲ್ಲ ಎನ್ನುವುದರ ಸೂಚಕವೇ ಆಗಿದೆ. ವಸಾಹತು ಸ್ಥಾಪನೆಯ ಸಂದರ್ಭದಲ್ಲಿ ಬ್ರಿಟನ್ ಸರ್ಕಾರ ನಡೆಸಿದ ಅಮಾನವೀಯ ಹತ್ಯಾಕಾಂಡಕ್ಕೆ ವರ್ತಮಾನದ ಸರ್ಕಾರವಾದರೂ ಪ್ರಾಮಾಣಿಕ ಮನಸ್ಸಿನಿಂದ ಕ್ಷಮೆ ಕೇಳಬೇಕಾಗಿದೆ ಎನ್ನುವ ಬೇಡಿಕೆ ಅರ್ಥಪೂರ್ಣವಾಗಿದೆ.
ಈ ಹತ್ಯಾಕಾಂಡ ಶತಮಾನವನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಈ ಘಟನೆಯನ್ನು ಸ್ಮರಿಸುತ್ತಲೇ ದೇಶಾದದ್ಯಾಂತ ಸ್ವಾತಂತ್ರ್ಯದ ಬಲಿದಾನಿಗಳನ್ನು ನೆನಪಿಸಿಕೊಳ್ಳುವ ಕಾರ್ಯ ನಡೆಯಬೇಕಾಗಿದೆ. ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷಾಚರಣೆಯ ಸಂಭ್ರಮದ ಕಡೆಗೆ ಹೆಜ್ಜೆ ಇಡುತ್ತಿರುವ ಭಾರತ ಮತ್ತೊಮ್ಮೆ ಇಡೀ ದೇಶದ ಹೋರಾಟದ ಕಥನವನ್ನು ಮೆಲುಕು ಹಾಕಿಕೊಳ್ಳಬೇಕಾದ ಅಗತ್ಯವಿದೆ. ಸ್ವಾತಂತ್ರ್ಯೋತ್ತರ ಭಾರತವು ಇಷ್ಟು ವರ್ಷಗಳ ನಂತರವೂ ಪ್ರಾಮಾಣಿಕವಾಗಿ ವೀರ ಹುತಾತ್ಮರನ್ನು ನೆನಪಿಸಿಕೊಳ್ಳುವಲ್ಲಿ ಸೋತಿದೆ ಎಂದರೆ ನಮಗೆ ಅವಮಾನ. ನಮ್ಮ ಶೈಕ್ಷಣಿಕ ವ್ಯವಸ್ಥೆಯ ಪಠ್ಯಪುಸ್ತಕಗಳಲ್ಲೂ ಇತಿಹಾಸದ ನೈಜ ಕಥನಗಳನ್ನು ಭವಿಷ್ಯದ ಪೀಳಿಗೆಗಳು ಹೆಮ್ಮೆ ಪಡುವಂತೆ ಚಿತ್ರಿಸುವ ಅಗತ್ಯವಿದೆ. ಆದರೆ ಇಂದಿಗೂ ನಮ್ಮ ಇತಿಹಾಸಕಾರರು ಸ್ವಾತಂತ್ರ್ಯದ ಹೋರಾಟದ ಕಥನಗಳನ್ನು ಬ್ರಿಟಿಷ್ ಕನ್ನಡಕಗಳಿಂದಲೇ ನೋಡುವ ಮೂಲಕ ಹೋರಾಟವನ್ನು ದಂಗೆ ಎಂಬುದಾಗಿಯೂ, ಹುತಾತ್ಮರನ್ನು ಭಯೋತ್ಪಾದಕರು ಎಂಬುದಾಗಿಯೂ ಚಿತ್ರಿಸುತ್ತಾ, ಸಂಸ್ಥಾನಗಳ ರಾಜ-ಮಹರಾಜರು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳಿದದ್ದು ಸ್ವದೇಶ ಭಕ್ತಿಯಿಂದಲ್ಲ, ತಮ್ಮ ಸ್ವಂತ ರಾಜ್ಯವನ್ನು ಉಳಿಸಿಕೊಳ್ಳಲು ಎನ್ನುವಂತೆ ಬೋಧಿಸುತ್ತಾ ಭವಿಷ್ಯದ ಪೀಳಿಗೆಗಳನ್ನು ಸತ್ವರಹಿತ ಪ್ರಜೆಗಳನ್ನಾಗಿ ತಯಾರುಗೊಳಿಸುತ್ತಿದ್ದೇವೆ. ಇದರ ಪರಿಣಾಮವೆಂದರೆ ಇಂದಿಗೂ ದೇಶಕ್ಕಾಗಿ ಹುತಾತ್ಮರಾಗುವ ಸೈನಿಕರನ್ನು ’ಸಂಬಳಕ್ಕಾಗಿ ದುಡಿಯಲು ಹೋಗುವ ಬಡವರು’ ಎಂದು ಹೀಯಾಳಿಸುವ ನೀಚ ಪ್ರವೃತ್ತಿ ನಮ್ಮ ಕಣ್ಮುಂದೆ ಕಾಣಿಸಿಕೊಳ್ಳುತ್ತಿದೆ. ಅದು ಸ್ವಾತಂತ್ರ್ಯ ಹೋರಾಟದ ಸಂದರ್ಭವೇ ಇರಬಹುದು, ಅಥವಾ ಇಂದಿನ ಕಾಲವೇ ಇರಬಹುದು ದೇಶಕ್ಕಾಗಿ ಬಲಿದಾನ ಮಾಡುವ ಸಂದರ್ಭ ಬಂದಾಗ ಹಿಂದೆ ಸರಿಯದೆ ದೇಶವಾಸಿಗಳ ಸುರಕ್ಷೆಗಾಗಿ ಹುತಾತ್ಮರಾದ ವೀರರನ್ನು ಸ್ಮರಿಸದೆ, ಗೌರವಿಸದೇ ಹೋಗುವ ನೀಚತನ ಕ್ಷಮಾರ್ಹವಲ್ಲ.
ಕರುಣಾರಹಿತ ಪಾತಕಿಗಳು ನಮ್ಮದೇಶದ ಅಮಾಯಕ ಜನರನ್ನು ಬಲಿ ತೆಗೆದುಕೊಂಡ ವಸಾಹತುಶಾಹಿ ಆಳ್ವಿಕೆಯ ಇತಿಹಾಸವನ್ನು ನಮ್ಮ ದೇಶದ ಯುವ ಪೀಳಿಗೆ ಅರಿತುಕೊಳ್ಳಬೇಕಾಗಿದೆ. ಸ್ವದೇಶದಲ್ಲೇ ಸ್ವದೇಶಿ ರಣಮಂತ್ರವನ್ನು ಉದ್ಘೋಶಿಸಿದ ರಾಷ್ಟ್ರಭಕ್ತರನ್ನು ಗುಂಡುಹೊಡೆದು, ಗಲ್ಲಿಗೇರಿಸಿ ಬಲಿತೆಗೆದುಕೊಂಡ ಸತ್ಯ ಕಥನಗಳನ್ನು ನಮ್ಮದೇಶದ ನವಪೀಳಿಗೆಗೆ ತಿಳಿಸಿ ಕೊಡಬೇಕಾಗಿರುವುದು ಇಂದಿನ ಅಗತ್ಯವೂ ಹೌದು. ಯಾಕೆಂದರೆ ಈ ದೇಶಕ್ಕೆ ಸ್ವಾತಂತ್ರ್ಯ ಬಿಕ್ಷೆಯಾಗಿ ಪುಕ್ಕಟೆ ಸಿಕ್ಕಿದ್ದಲ್ಲ, ಅದರ ಹಿಂದೆ ಲಕ್ಷಾಂತರ ಜನ ದೇಶಭಕ್ತರ ರಕ್ತ ಹರಿದಿದೆ. ಅವರು ಕೋವಿ, ಫಿರಂಗಿಗಳ ನಳಿಗೆಗೆ ಎದೆಕೊಟ್ಟಿದ್ದಾರೆ, ಗಲ್ಲಿನ ಉರುಳನ್ನು ಸಂತೋಷದಿಂದಲೇ ಕೊರಳಿಗೇರಿಸಿಕೊಂಡಿದ್ದಾರೆ, ಬ್ರಿಟಿಷ್ ಲಾಠಿ ಬೂಟಿನ ಒದೆತಗಳಿಗೆ ಮೈಒಡ್ಡಿದ್ದಾರೆ. ಸ್ವಾತಂತ್ರ್ಯದ ರಣ ಸಂಗ್ರಾಮಕ್ಕೆ ಇಳಿದ ದೇಶಭಕ್ತನಿಗೆ ಸಿಗುವ ಉಡುಗೊರೆ ಇದೇ ಎಂದು ಗೊತ್ತಿದ್ದಾಗಲೂ ವಂದೇ ಮಾತರಂ ಘೋಷಣೆಯೊಂದಿಗೆ ಘರ್ಜಿಸುತ್ತಾ, ಹೋರಾಟದಿಂದ ಪಲಾಯನ ಮಾಡದೆ ನಿಂತ ಸಾಹಸಿಗಳು ಎನ್ನುವುದನ್ನು ಇಂದಿನ ಪೀಳಿಗೆ ಅರಿತುಕೊಳ್ಳಬೇಕಾಗಿದೆ.
✍✍ ಡಾ. ರೋಹಿಣಾಕ್ಷ ಶಿರ್ಲಾಲು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.