ವಿಶ್ವಕ್ಕೆ ಬೆಳಕನ್ನು ನೀಡಿ ಮಾನವ ಸಮುದಾಯಕ್ಕೆ ಉತ್ಕರ್ಷದ ಮಾರ್ಗವನ್ನು ತೋರಿಸಿದ್ದು ಭಾರತೀಯ ಸಂಸ್ಕೃತಿ. ಆದರೆ ಕಾಲಾಂತರದಲ್ಲಿ ನಮ್ಮ ನಾಡಿನ ಮೇಲೆ ನಡೆದ ಬರ್ಬರ ವಿದೇಶಿ ಆಕ್ರಮಣಗಳು, ವಸಾಹತುಶಾಹಿ ಯುರೋಪಿನ ಗುಲಾಮಿತನ, ಮತಾಂತರಿ ಮತಗಳ ಕುಟಿಲ ಸವಾಲುಗಳು ಮತ್ತು ಇವೆಲ್ಲದರ ಪರಿಣಾಮವಾಗಿ ಭಾರತೀಯರಿಗೇ ತಮ್ಮ ನೆಲದ ಸಂಸ್ಕೃತಿ ಕುರಿತು ಅಭಿಮಾನವಿಲ್ಲದೇ ವಿಸ್ಮೃತಿಯುಂಟಾದದ್ದರಿಂದ ಭರತಭೂಮಿಯ ಶ್ರೇಷ್ಠ ಸಾಂಸ್ಕೃತಿಕ ಪರಂಪರೆ ಅವನತಿಯತ್ತ ಸಾಗುವ ದೌರ್ಭಾಗ್ಯ ಎದುರಾಗಿತ್ತು.
ಇಂತಹ ಸನ್ನಿವೇಶದಲ್ಲಿ ಐದು ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಇಂದಿನವರೆಗೂ ಭಾರತದ ಸರ್ವಾಂಗೀಣ ಅಭಿವೃದ್ಧಿಯತ್ತ ಮುನ್ನಡೆಸಲು ಹಗಲಿರುಳೂ ಶ್ರಮಿಸುತ್ತಿದೆ. ಜಾತ್ಯತೀತತೆಯ ಹೆಸರಿನಲ್ಲಿ ಧರ್ಮಾಧಾರಿತ ಒಡೆದಾಳುವ ನೀತಿಗಳನ್ನೇ ಬಂಡವಾಳವಾಗಿಸಿಕೊಂಡಿದ್ದ ಹಿಂದಿನ ಹಲವು ಸರ್ಕಾರಗಳ ಕಾರ್ಯತಂತ್ರಗಳನ್ನೆಲ್ಲವನ್ನೂ ಬದಿಗಿರಿಸಿ ದೇಶದ ಜನತೆಯ ಅಭಿವೃದ್ಧಿಯೊಂದೇ ತನ್ನ ಗುರಿ ಎನ್ನುವುದನ್ನು ತನ್ನ ಕಾರ್ಯಗಳಿಂದಲೇ ಮಾಡಿ ತೋರಿಸುತ್ತಾ ಬಂದಿದೆ. ಜೊತೆಗೆ ಜಾತ್ಯಾತೀತತೆಯ ಹೆಸರಿನಲ್ಲಿ ಭಾರತೀಯ ಸಂಪ್ರದಾಯ ಆಚರಣೆಗಳ ಹೀಗಳಿಕೆ ತೆಗಳುವಿಕೆ – ಭರ್ತ್ಸನೆಗಳ ವಾತಾವರಣದಲ್ಲಿ ಸನಾತನ ಧರ್ಮಕ್ಕೊಂದು ಗೌರವಯುತ ಸ್ಥಾನವನ್ನು ನೀಡುವತ್ತ ಮುನ್ನಡೆಯುತ್ತಿದೆ. ಹಿಂದೂ ಸಂಸ್ಕೃತಿಯ ಮೇಲೆ ನಿರಂತರ ನಡೆದ ಆಕ್ರಮಣಗಳಿಂದ ಕುಗ್ಗಿದ್ದ ಭಾರತೀಯ ಇಂದು ಎದೆಯುಬ್ಬಿಸಿ ನಡೆಯಬಲ್ಲ ಆತ್ಮ ವಿಶ್ವಾಸದಿಂದ ಮೂಡುತ್ತಿದೆ. ಎಲ್ಲಾ ಪಂಥವನ್ನು ಗೌರವಿಸುವ, ಯಾರನ್ನೂ ತುಷ್ಟೀಕರಿಸದ, ಸನಾತನ ಭಾರತೀಯ ಧರ್ಮವನ್ನು ಆಚರಿಸುವ ನಾಯಕತ್ವವನ್ನು ಮೋದಿ ಸರ್ಕಾರ ನೀಡಿದೆ.
ರಾಮಸೇತು ರಕ್ಷಣೆ – ಮೋದಿ ಸರ್ಕಾರದ ಹೊಣೆ
2007 ರಲ್ಲಿ ಯುಪಿಎ ಸರ್ಕಾರ ಭಾರತೀಯರ ಶ್ರದ್ಧಾಕೇಂದ್ರ ಮತ್ತು ರಾಷ್ಟ್ರದ ಅಮೂಲ್ಯ ಸ್ಮಾರಕ ದಕ್ಷಿಣದ ಧನುಷ್ಕೋಟಿಯಿಂದ ಶ್ರೀಲಂಕಾವನ್ನು ಸೇರಿಸುವ ರಾಮಸೇತುವನ್ನು ಒಡೆಯಲು ಹೊರಟಿತ್ತು. ಈ ಪ್ರಕರಣವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ ಒಡೆಯದಂತೆ ಕೋರ್ಟ್ ನಿರ್ದೇಶಿಸಿತ್ತು. ತನ್ನ ಸಮರ್ಥನೆಗಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಮ ಅಥವಾ ರಾಮಾಯಣದ ಪಾತ್ರಗಳು ಅಸ್ತಿತ್ವದಲ್ಲಿದ್ದ ಬಗ್ಗೆ ಯಾವುದೇ ಪುರಾವೆ ಇಲ್ಲ ಇವೆಲ್ಲ ಕಾಲ್ಪನಿಕ, ರಾಮಸೇತು ಅಸ್ತಿತ್ವದಲ್ಲಿಲ್ಲ ಇತ್ಯಾದಿ ಅಫಿಡವಿಟ್ ಸಲ್ಲಿಸಿ ರಾಮಸೇತುವನ್ನು ನಾಶಮಾಡಲು ಮುಂದಾಗಿತ್ತು. ಆದರೆ 2018 ರಲ್ಲಿ ಸುಪ್ರಿಂಕೋರ್ಟಿಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಮೋದಿ ಸರ್ಕಾರವು ಹಿಂದಿನ ಯುಪಿಎ ಸರ್ಕಾರದ ನೀತಿಯನ್ನು ಬದಲಾಯಿಸಿ ರಾಮಸೇತುವನ್ನು ರಕ್ಷಿಸಲು ಬದ್ಧ ಎಂದು ಹೇಳಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಸೇತುಸಮುದ್ರಂ ಯೋಜನೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವುದಾಗಿ ಮೋದಿ ಸರ್ಕಾರ ಹೇಳಿದೆ. ಹಾಗೆಯೇ ರಾಮೇಶ್ವರಂ-ಧನುಷ್ಕೋಟಿ ರೈಲುಮಾರ್ಗವನ್ನು ರಾಮಸೇತುವರೆಗೆ ವಿಸ್ತರಣೆ ಮಾಡಲೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಕೋಟ್ಯಾಂತರ ಶ್ರದ್ಧಾವಂತರು ರಾಮಸೇತುವಿನ ದರ್ಶನ ಪಡೆಯಬಹುದು.
ಪ್ರಜಾಪ್ರಭುತ್ವದ ದೇಗುಲ ಸಂಸತ್ಭವನ
ಜನಪ್ರತಿನಿಧಿಗಳ ಅಸಭ್ಯ ವರ್ತನೆಗಳಿಂದಾಗಿ ಭಾರತೀಯ ಪ್ರಜಾ ಪ್ರಭುತ್ವ ಹಾಗೂ ಸಂಸತ್ತಿನ ಬಗ್ಗೆ ಜನಸಾಮಾನ್ಯರಲ್ಲಿ ಗೌರವ ಕಡಿಮೆಯಾಗುತ್ತಿದ್ದ ಹೊತ್ತಿನಲ್ಲಿ ಪ್ರಧಾನಿಯ ಪಟ್ಟ ಅಲಂಕರಿಸಿದ ಶ್ರೀ ನರೇಂದ್ರ ಮೋದಿಯವರು ಸಂಸತ್ತಿನ ಮೆಟ್ಟಿಲುಗಳಿಗೆ ಅಡ್ಡ ಬಿದ್ದು ನಮಸ್ಕರಿಸಿ ಒಳ ಪ್ರವೇಶಿಸುವ ಮೂಲಕ ಪ್ರಭುತ್ವ ವ್ಯವಸ್ಥೆಯಲ್ಲಿಯೂ ನಿಜವಾದ ಭಾರತೀಯ ಮೌಲ್ಯಗಳನ್ನು ಹೇಗೆ ಉಳಿಸಿಕೊಂಡು ಹೋಗುತ್ತೇವೆ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟರು.ತಮ್ಮ ಪ್ರಥಮ ಲೋಕಸಭಾ ಭಾಷಣದಲ್ಲಿ ಸಂಸತ್ತನ್ನು ಪ್ರಜಾಪ್ರಭುತ್ವದ ದೇಗುಲ ಎಂದೇ ಉಲ್ಲೇಖಿಸಿದ ನರೇಂದ್ರ ಮೋದಿ ಸರ್ಕಾರದ ಧೊರಣೆ ಸಂಪೂರ್ಣ ಭಾರತೀಯವಾಗಿದೆ ಎನ್ನುವ ಸಂದೇಶವನ್ನು ನೀಡಿದ್ದರು. ಕಳೆದ ಐದು ವರ್ಷಗಳ ಮೋದಿ ಸರ್ಕಾರದ ಆಡಳಿತದಲ್ಲಿ ಭಾರತೀಯತೆಯ ಛಾಯೆಯನ್ನು ಕಾಣಬಹುದು.
♦ ದೇಶದ ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಯಬೇಕಾದರೆ ಶ್ರದ್ಧಾಕೇಂದ್ರಗಳಿಗೆ ಭೇಟಿ ನೀಡಬೇಕು. ಅದಕ್ಕಾಗಿ ನಮ್ಮ ದೇಶದಲ್ಲಿ ತೀರ್ಥಯಾತ್ರೆ ಕೈಗೊಳ್ಳುವ ಸಂಪ್ರದಾಯವಿದೆ. ಈ ನಿಟ್ಟಿನಲ್ಲಿ ತೀರ್ಥಯಾತ್ರೆಗಳ ಅನುಕೂಲಕ್ಕಾಗಿ ರಾಮಾಯಣ ಎಕ್ಸ್ಪ್ರೆಸ್ ಸೇರಿದಂತೆ ರೈಲ್ವೆಯ ವಿವಿಧ ಯೋಜನೆಗಳು, ರಾಮಾಯಣ ಪರಿಕ್ರಮ, ಆಧ್ಯಾತ್ಮ ಪರಿಕ್ರಮ ಮೊದಲಾದ 13 ವಿವಿಧ ಪರಿಕ್ರಮಗಳು, ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗಾಗಿ ಪ್ರಸಾದ ಯೋಜನೆ, ಹೃದಯ ಯೋಜನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಎತ್ತಿಕೊಂಡಿದೆ.
♦ ರಾಮಮಂದಿರ ನಿರ್ಮಾಣಕ್ಕೆ ತಾನು ಬದ್ಧ ಎನ್ನುವ ನಿಲುವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೊದಲಿನಿಂದಲೂ ಪ್ರದರ್ಶಿಸಿದೆ. ಸಾಂವಿಧಾನಿಕ ವ್ಯವಸ್ಥೆಯಲ್ಲಿ ನ್ಯಾಯಾಲಯದ ನಿರ್ಣಯವನ್ನು ಗೌರವಿಸಬೇಕಾದ ಅನಿವಾರ್ಯತೆಯ ನಡುವೆ, ರಾಮಮಂದಿರ ನಿರ್ಮಾಣಕ್ಕೆ ವಿವಾದದಲ್ಲಿರದ ಜಾಗವನ್ನು ಹಸ್ತಾಂತರ ಮಾಡಲಿ ಅಗತ್ಯ ಕ್ರಮ ಕೈಗೊಂಡಿದೆ.
♦ ಸಿಖ್ರ ಪವಿತ್ರ ಕ್ಷೇತ್ರ ಪಾಕಿಸ್ತಾನದ ಪಂಜಾಬ್ ಪ್ರಾಂತದ ಕರ್ತಾರ್ಪುರ ಸಾಹಿಬ್ಗೆ ಯಾತ್ರೆ ಕೈಗೊಳ್ಳಲು ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ. ಈ ಬೇಡಿಕೆ 1947 ರಿಂದ ನಡೆಯುತ್ತಿತ್ತು.
♦ ಪ್ರಯಾಗರಾಜ್, ಅಯೋಧ್ಯಾ ಸೇರಿದಂತೆ ಅನೇಕ ನಗರಗಳು ಮತ್ತೆ ಭಾರತೀಯ ಹೆಸರುಗಳನ್ನು ಪಡೆದು ಮರುನಾಮಕರಣಗೊಂಡಿವೆ.
♦ಸಮಸ್ತ ಭಾರತೀಯರಿಗೆ ಪೂಜ್ಯವಾಗಿರುವ ಗಂಗಾ ನದಿಯನ್ನು ಸ್ವಚ್ಚಗೊಳಿಸಲು ನಮಾಗಿ ಗಂಗೇ ಎನ್ನುವ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೊಳಿಸುತ್ತಿದ್ದು, ಮೊದಲ ಬಾರಿಗೆ ಗಂಗೆ ಸ್ವಚ್ಚಗೊಂಡು ತನ್ನ ಹಳೆಯ ಸ್ಥಿತಿಗೆ ಮರಳುತ್ತಿದೆ.
♦ ಭಾರತಕ್ಕೆ ಬರುವ ವಿದೇಶಿ ಗಣ್ಯರು, ರಾಜತಾಂತ್ರಿಕರಿಗೆ ದೇಶದ ನಿಜವಾದ ಇತಿಹಾಸ ಸಂಸ್ಕೃತಿಯ ಪರಿಚಯ ಮಾಡಿಕೊಡಲಾಗುತ್ತದೆ. ಮೊದಲೆಲ್ಲ ವಿದೇಶಿಯರನ್ನು ತಾಜಮಲ್ಗೆ ಕರೆದೊಯ್ಯುವ ಸಂಪ್ರದಾಯ ಇತ್ತು. ಇಂದು ಅವರು ಗಂಗಾ ಆರತಿಯನ್ನು ನೋಡುತ್ತಾರೆ, ಸಾಬರ್ಮತಿ ಆಶ್ರಮಕ್ಕೆ ಹೋಗುತ್ತಾರೆ, ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ, ಭಾರತೀಯ ಉಡುಗೆ ತೊಡುತ್ತಾರೆ.
♦ ನಾವೇ ಮರೆತಿದ್ದ ಯೋಗ ಆಯುರ್ವೇದಗಳಿಗೆ ಇಂದು ವಿಶ್ವಮಾನ್ಯತೆ ದೊರೆತಿದೆ. ಯೋಗದ ಮೂಲಕ ಭಾರತೀಯ ಜೀವನಶೈಲಿಯನ್ನು ವಿಶ್ವ ಇಂದು ಅಳವಡಿಸಿಕೊಳ್ಳುತ್ತಿದೆ. ಭಾರತೀಯ ಸಾವಯವ ಸಸ್ಯಾಹಾರಗಳೂ ಹೆಚ್ಚು ಜನಪ್ರಿಯವಾಗತೊಡಗಿವೆ.
♦ ಇಂದು ನಾವು ಬಳಸುವ ಉತ್ಪನ್ನಗಳು ಸ್ವದೇಶಿಯಾಗಬೇಕು ಎನ್ನುವವರೂ ಹೆಚ್ಚತೊಡಗಿದ್ದಾರೆ. ಮೋದಿವಯರ ಕುರ್ತಾದ ಜೊತೆಗೆ ಖಾದಿ ಉಡುಗೆಗಳನ್ನು ತೊಡುವುದು ಜನಪ್ರಿಯವಾಯಿತು. ಪ್ರಧಾನಿ ಮೋದಿಯವರು ವಿದೇಶಗಳಿಗೆ ಹೋದಾಗ ತಮ್ಮ ಎಂದಿನ ಶೈಲಿಯ ಕುರ್ತಾವನ್ನೇ ಧರಿಸುತ್ತಾರೆ, ಹಿಂದಿ ಭಾಷೆಯಲ್ಲೇ ಮಾತನಾಡುತ್ತಾರೆ. ಇದರಿಂದ ಭಾರತದ ಭಾಷೆ, ಬಟ್ಟೆಗಳು ವಿದೇಶಗಳಿಗೂ ಪರಿಚಯವಾಯಿತು.
“ಹಿಂದೂ”ಗಳಾದ ನಕಲಿ ಸೆಕ್ಯುಲರ್ಗಳು
ಇವೆಲ್ಲವುಗಳ ಜೊತೆಗೆ ಇದುವರೆಗೂ ಜಾತ್ಯತೀತರೆಂದು ಹೇಳಿಕೊಳ್ಳುತ್ತಾ ಕೇವಲ ಕೆಲವು ಕೋಮುಗಳನ್ನು ಮಾತ್ರ ಓಲೈಸುತ್ತಾ, ಚುನಾವಣೆಯ ಸಮಯದಲ್ಲಿ ಕೇವಲ ಅನ್ಯ ಕೋಮುಗಳ ಪ್ರಾರ್ಥನಾ ಮಂದಿರಗಳಿಗೆ ಮಾತ್ರ ಭೇಟಿ ನೀಡುತ್ತಾ, ಹಿಂದೂಗಳಾಗಿದ್ದರೂ ಹಿಂದೂ ಎಂದು ಬಹಿರಂಗವಾಗಿ ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ತಥಾಕಥಿತ ಜಾತ್ಯತೀತ ಪಕ್ಷಗಳ ನಾಯಕರುಗಳೂ ಇದೀಗ ಹಿಂದೂಗಳನ್ನು ಕೂಡಾ ಪರಿಗಣಿಸಲೇ ಬೇಕಾದ, ಭಾರತೀಯ ಸಾಂಸ್ಕೃತಿಕ ಭಾವನೆಗಳನ್ನು ಕೂಡ ಗೌರವಿಸಲೇ ಬೇಕಾದದಂತಹಾ ಅನಿವಾರ್ಯತೆಯನ್ನು ಸೃಷ್ಟಿಸಿರುವುದು ನರೇಂದ್ರ ಮೋದಿಯವರ ಅತ್ಯದ್ಭುತ ಸಾಧನೆಗಳಲ್ಲೊಂದು.
ನಾವು ಇಂದು ಕಾಣುತ್ತಿರುವ ಬದಲಾವಣೆಗಳ ಕೆಲವು ಉದಾಹರಣೆಗಳು ಇವು. ಭಾರತೀಯ ಸಂಸ್ಕೃತಿ ಮತ್ತೆ ಮೇಲೆಳುತ್ತಿದೆ. ಭಾರತೀಯ ಮೌಲ್ಯಗಳು ಪುನಶ್ಚೇತನ ಗೊಂಡಿವೆ. ತಥಾಕಥಿತ ಸೆಕ್ಯುಲರ್ ವಾದಿಗಳು, ಮೆಕಾಲೆ ಮಾನಸ ಪುತ್ರರ ವಾದಗಳಿಗೆ ಭಯಪಟ್ಟು ಒಂದು ಕಾಲದಲ್ಲಿ ನಮ್ಮನ್ನು ಹಿಂದೂ ಎಂದು ಕರೆದುಕೊಳ್ಳಲೂ ಕಷ್ಟವಾಗಬಲ್ಲ ಪರಿಸ್ಥಿತಿ ಇತ್ತು. ಆದರೆ ಇಂದು ಭಾರತೀಯರ ಆತ್ಮಾಭಿಮಾನ ಮರಳಿ ಜಾಗೃತವಾಗುತ್ತಿದೆ. ವಿಶ್ವದ ಅಗ್ರಗಣ್ಯ ದೇಶಗಳ ಸಾಲಿನಲ್ಲಿ ಭಾರತ ಇಂದು ಹೆಮ್ಮೆಯಿಂದ ನಿಲ್ಲಬಲ್ಲದು.
ಭಾರತೀಯ ಸಂಸ್ಕೃತಿ ಮತ್ತೆ ವಿಶ್ವಮಾನ್ಯವಾಗಬೇಕಾದರೆ ದೇಶದ ನೇತೃತ್ವ ವಹಿಸುವ ಸರ್ಕಾರ, ದೇಶವನ್ನು ಮುನ್ನಡೆಸುವ ಜನರಿಗೆ ನಮ್ಮ ಸಂಪ್ರದಾಯ ಪರಂಪರೆಗಳ ಬಗ್ಗೆ ಗೌರವ ಇರಬೇಕು. ಇತಿಹಾಸದ ಪ್ರಜ್ಞೆ ಮತ್ತು ಸಾವಿರಾರು ವರ್ಷಗಳಿಂದ ಅಖಂಡವಾಗಿ ಈ ಮಣ್ಣಿನಲ್ಲಿ ವಿಕಾಸವಾದ ಮೌಲ್ಯಗಳ ಆಧಾರದ ಮೇಲೆ ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಕಾಳಜಿ ಇರಬೇಕು. ರಕ್ತಪೀಪಾಸು ಜಿಹಾದಿಗಳ, ಕುಟಿಲ ಮತಾಂತರಿ ಮಿಶನರಿಗಳ, ಸೋಗಲಾಡಿ ತನವೇ ಮೂಲ ಬಂಡವಾಳ ವಾಗಿರುವ ಅರಾಜಕವಾದಿ ಕಮ್ಯುನಿಸ್ಟರು, ನಕಲಿ ಜಾತ್ಯಾತೀತ ವಾದಿಗಳು, ಯಾರದೋ ಕೈಗೊಂಬೆಗಳಾದ ಬಹುರಾಷ್ಟ್ರಿಯ ಎನ್ಜಿಓಗಳು ಇವರೆಲ್ಲರ ಪ್ರತಿರೋಧವನ್ನು ತಡೆದು ಸ್ವಾಭಿಮಾನಿ ಭಾರತೀಯತೆ ಯನ್ನು ಎತ್ತಿಹಿಡಿಯುವ ಸಮರ್ಥ ಸರ್ಕಾರ ಇಂದು ದೇಶಕ್ಕೆ ಬೇಕಿದೆ. ಹಾಗೆಯೇ ವಸುಧೈವ ಕುಟುಂಬಕಮ್ ಸೂತ್ರದಂತೆ, ಕೃಣ್ವಂತೋ ವಿಶ್ವಮಾರ್ಯಮ್ ಎನ್ನುವಂತೆ ವಿಶ್ವವನ್ನೇ ಶ್ರೇಷ್ಠಗೊಳಿಸಸಬೇಕೆಂಬ ಸನಾತನ ಉದಾತ್ತ ಚಿಂತನೆಗಳನ್ನು ವಿಶ್ವದೆಲ್ಲೆಡ ಪಸರಿಸುವ ಜವಾಬ್ದಾರಿ ಹೊರಬಲ್ಲ ಪ್ರಜ್ಞಾವಂತರು ನಮ್ಮ ರಾಷ್ಟ್ರವನ್ನು ಮತ್ತೆ ಮುನ್ನಡೆಸಬೇಕಾಗಿದೆ. ಎಲ್ಲ ಸಂಪ್ರದಾಯಗಳನ್ನೂ ಗೌರವಿಸುವ, ಯಾರ ತುಷ್ಟೀಕರಣವನ್ನೂ ಮಾಡದ ನಾಯಕತ್ವದಿಂದ ಮಾತ್ರ ಇದು ಸಾಧ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.