ಅದು ದೇಶದ ಮೊದಲ ಸಾರ್ವತ್ರಿಕ ಚುನಾವಣೆ. ಭಾರತದ ಸಂವಿಧಾನ ರಚನೆಯಲ್ಲಿ ಅಪಾರ ಶ್ರಮವಹಿಸಿ ದುಡಿದ್ದಿದ್ದ , ದಲಿತ ದಮನಿತರ ಪರ ನಿರಂತರವಾಗಿ ಶ್ರಮಿಸುತ್ತಿದ್ದ, ದೇಶದ ಮೊದಲ ಕಾನೂನು ಮಂತ್ರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದ ಡಾ. ಭೀಮರಾವ್ ರಾಮ್ ಜೀ ಅಂಬೇಡ್ಕರ್ ಅವರ ಜನಪ್ರಿಯತೆ ಉತ್ತುಂಗದಲ್ಲಿದ್ದ ಕಾಲ ಅದು.
1951-1952 ರಲ್ಲಿ ನಡೆದ ಆ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಭೀಮರಾವ್ ರಾಮ್ ಜೀ ಅಂಬೇಡ್ಕರ್ ಅವರು ತಮ್ಮ ಷೆಡ್ಯೂಲ್ಡ್ ಕ್ಯಾಸ್ಟ್ಸ್ ಫೆಡರೇಶನ್ (ನಂತರದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ) ವತಿಯಿಂದ ಮುಂಬಯಿಯಲ್ಲಿ ಸ್ಪರ್ಧಿಸಿದ್ದರು. ದಲಿತ ದಮನಿತರ ಪರ ಜೀವಮಾನವಿಡೀ ಹೋರಾಡಿದ್ದ ಅಂಬೇಡ್ಕರ್ ಅವರು ಆ ಚುನಾವಣೆಯಲ್ಲಿ ಜನರಿಂದ ಆಯ್ಕೆ ಆಗಿದ್ದೇ ಆಗಿದ್ದರೆ ಈ ದೇಶದ ಸಮಸ್ತ ಬಡ, ಶೋಷಿತ, ದಲಿತ ದಮನಿತ, ಸಾಮಾನ್ಯ ಜನರ ಮತಗಳೂ ಶಾಶ್ವತವಾಗಿ ಅಂಬೇಡ್ಕರ್ ಅವರ ಪಾಲಾಗುತ್ತಿದ್ದವು. ಮತ್ತೆಂದೂ ನೆಹರೂ ಮನೆತನದ ಕಾಂಗ್ರೆಸ್ ಪಕ್ಷ ತಲೆ ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲದೆ ಅಂಬೇಡ್ಕರ್ ಅವರು ಅಷ್ಟೇನೂ ಇಷ್ಟಪಡದಿದ್ದ ಸಿದ್ಧಾಂತವನ್ನು ಪರಿಪಾಲಿಸುತ್ತಿರುವ ಕಮ್ಯುನಿಸ್ಟ್ ಪಕ್ಷಗಳಿಗೂ ಅದೊಂದು ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ಆದ್ದರಿಂದ ಅಂಬೇಡ್ಕರ್ ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕೆಂದು ನಿರ್ಧರಿಸಿದ ಕಾಕ(ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್) ಪಕ್ಷಗಳು ಮಹಾ ಘಟಬಂಧನ ರಚಿಸಿಕೊಂಡವು. ಅವರನ್ನು ಸೋಲಿಸಲು ಕೂಡಾ ಈಗಿನಂಥದ್ದೇ ಒಂದು ವ್ಯೂಹ ರಚನೆಯಾಗಿತ್ತು. ಕಾಂಗ್ರೆಸ್ ಪಕ್ಷವು ದಲಿತ ವರ್ಗ ಸಂಘದ ಸದಸ್ಯರೂ ಆಗಿದ್ದ ಸ್ವತಃ ಅಂಬೇಡ್ಕರ್ ಅವರ ಆಪ್ತ ಸಹಾಯಕನನ್ನೇ ಸೆಳೆದುಕೊಂಡು ಬಾಬಾ ಸಾಹೇಬರ ಎದುರಾಳಿಯಾಗಿ ನಿಲ್ಲಿಸಿಬಿಟ್ಟಿತು!
ಕಮ್ಯುನಿಸ್ಟ್ ಪಕ್ಷದ ಅಮೃತ್ ಡಾಂಗೆ ಅವರು ಅಂಬೇಡ್ಕರ್ ಅವರಿಗೆ ಸೋಲುಣಿಸಲು ಶಕ್ತಿ ಮೀರಿ ಶ್ರಮಿಸಿದರು. ಅಂಬೇಡ್ಕರ್ ಅವರೊಬ್ಬ ಆಂಟಿ ನ್ಯಾಷನಲಿಸ್ಟ್ ಎಂದು ಪ್ರಚಾರ ಮಾಡಿದರು. ಕರಪತ್ರ ಹಂಚಿದರು. ಈ ಅಪ ಪ್ರಚಾರವನ್ನು ನಂಬಿದ ದಲಿತರು, ಮುಸ್ಲಿಮರು ಸೇರಿದಂತೆ ಬಹುಸಂಖ್ಯಾತ ಮತದಾರರು ಅಂಬೇಡ್ಕರ್ ಅವರನ್ನು ಕೈ ಬಿಟ್ಟರು. ಅಂಬೇಡ್ಕರ್ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಸುಲಭವಾಗಿ ಗೆದ್ದುಬಿಟ್ಟಿತು. ಮತ್ತೆರಡು ವರ್ಷಗಳ ನಂತರ ಭಂಡಾರಾ ಉಪಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಿದರಾದರೂ ಆಗಲೂ ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯ ರಾಜಕೀಯ ಪಟ್ಟುಗಳನ್ನೂ ಬಳಸಿ ಅಂಬೇಡ್ಕರ್ ಅವರ ವಿರುದ್ಧ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿತು. ಆ ಚುನಾವಣೆಯಲ್ಲಿ ಬಾಬಾ ಸಾಹೇಬರು ಮೂರನೆಯ ಸ್ಥಾನಕ್ಕೆ ತಳ್ಳಲ್ಪಟ್ಟರು. ಮತ್ತೊಂದು ಸಾರ್ವತ್ರಿಕ ಚುನಾವಣೆ ಎದುರಾಗುವಷ್ಟರಲ್ಲಿ ಅವರು ಈ ಲೋಕವನ್ನೇ ತ್ಯಜಿಸಿ ಹೋಗಿಯಾಗಿತ್ತು. ಆ ನಂತರ ಈ ದೇಶದ ದಲಿತರಿಗೆ ಮತ ಹಾಕಲು ಕಾಂಗ್ರೆಸ್ ಹೊರತುಪಡಿಸಿ ಬೇರೆ ಅವಕಾಶವೇ ಇಲ್ಲದಂತಾಯಿತು. ಅವರನ್ನು ಬಳಸಿಕೊಂಡು ಶಾಶ್ವತವಾಗಿ ನೆಹರೂ ಪರಿವಾರ ಈ ದೇಶದಲ್ಲಿ ನೆಲೆಯೂರಿತು. ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ನಡುವಿನ ಮೈತ್ರಿ ಮತ್ತಷ್ಟು ಗಟ್ಟಿಯಾಗಿ ಬೆಳೆಯಿತು.
ಕೊನೆಗೊಮ್ಮೆ 1970 ರಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ಅಂಬೇಡ್ಕರ್ ಅವರ ಎದುರಾಳಿಯಾಗಿ ಸ್ಪರ್ಧಿಸಿ ಅವರನ್ನು ಸೋಲಿಸಿದ್ದ ಕಜ್ರೋಲ್ಕರ್ ಅವರಿಗೆ ನೆಹರೂ ಪುತ್ರಿ ಇಂದಿರಾ ಗಾಂಧಿಯವರ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.
ಇದೀಗ ಮತ್ತೊಮ್ಮೆ ಕಾಂಗ್ರೆಸ್-ಕಮ್ಯುನಿಸ್ಟ್ ಮತ್ತಿತರ ಪಕ್ಷಗಳ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಅದಕ್ಕಾಗಿ ಮತ್ತೊಮ್ಮೆ ಅಂಥದ್ದೇ ಘಟಬಂಧನವೊಂದನ್ನು ರಚಿಸಿಕೊಂಡು ಅದೇ ರೀತಿಯ ಕಾರ್ಯತಂತ್ರದೊಂದಿಗೆ ಕಣಕ್ಕಿಳಿದುಬಿಟ್ಟಿವೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಅಪ ಪ್ರಚಾರವನ್ನು ನಂಬಿ ಅಂದು ಅಂಬೇಡ್ಕರ್ ಅವರನ್ನು ಸೋಲಿಸಿದ್ದ ಅದೇ ವರ್ಗಗಳು ಇಂದು ಮತ್ತೆ ಅದೇ ಪಕ್ಷಗಳ ಅಪ ಪ್ರಚಾರಗಳನ್ನೆಲ್ಲವನ್ನೂ ನಂಬುತ್ತಾ ಅವರ ಹಿಂದೆ ಹೋಗುತ್ತಿರುವಂತೆ ತೋರುತ್ತಿದೆ. ಆದರೆ ಆಗಿಗಿಂತಲೂ ಹೆಚ್ಚು ಅಕ್ಷರಸ್ಥರು ಇದೀಗ ದೇಶದಲ್ಲಿರುವುದರಿಂದ ಈ ಬಾರಿ ಇತಿಹಾಸ ಮರುಕಳಿಸುವುದು ಅಷ್ಟು ಸುಲಭವಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.