
ಆತ ಕ್ರೈಸ್ಥ ಮತ ಪ್ರಚಾರಕ ಮೈಕೆಲ್ ದಿ’ಸೂಜ. 1980ರ ದಶಕದ ಆರಂಭದಲ್ಲಿ ಮೊದಲ ಬಾರಿಗೆ ತಮಿಳುನಾಡಿಗೆ ಕಾಲಿಟ್ಟ ಆತನಿಗೆ ಬಹು ಬೇಗನೆ ಒಂದು ವಿಷಯ ಅರ್ಥವಾಗಿತ್ತು. ಅದೇನೆಂದರೆ, ಭಾರತವನ್ನು ಎದುರುಹಾಕಿಕೊಂಡು ಭಾರತೀಯರ ಧರ್ಮವನ್ನು ಪರಿವರ್ತಿಸಲು ಸಾಧ್ಯವಿಲ್ಲ. ಯಾಕೆಂದರೆ ಅವರ ಸಂಪ್ರದಾಯಗಳು ಬಹಳ ಹಳೆಯವು, ಅವರ ನಾಗರಿಕತೆ ಬಹಳ ಆಳವಾಗಿ ಬೇರೂರಿದೆ, ಅವರ ಸಾಂಸ್ಕೃತಿಕ ಸ್ಮೃತಿ ಬಹಳ ಬಲಿಷ್ಠವಾಗಿದೆ ಎಂಬುದು. ಇದು ಶತಮಾನಗಳಿಂದಲೂ ಚರ್ಚ್ಗಳಿಗೆ ತಿಳಿದಿದ್ದ ವಿಷಯವೇ ಆಗಿತ್ತು ಆದರೆ ಎಲ್ಲೂ ಅವು ಇದನ್ನು ಒಪ್ಪಿಕೊಂಡಿರಲಿಲ್ಲ ಅಷ್ಟೇ.

ಅವನಿಗಿಂತ ಮೊದಲು ಬಂದ ಮಿಷನರಿಗಳು ವಿದೇಶಿ ಉಡುಪುಗಳಲ್ಲಿ, ವಿದೇಶಿ ಭಾಷೆಗಳಲ್ಲಿ, ವಿದೇಶಿ ಶೈಲಿಯ ಕಟ್ಟಡಗಳಲ್ಲಿ ಮತ ಪ್ರಚಾರ ಮಾಡಲು ಪ್ರಯತ್ನಿಸಿದ್ದರು. ಆದರೆ ಬಯಸಿದ ಯಶಸ್ಸು ಅವರಿಗೆ ಸಿಗುತ್ತಿರಲಿಲ್ಲ. ಹೀಗಾಗಿ ಮೈಕೆಲ್ ಹೊಸ ರೀತಿಯ ಮಿಷನ್ ಅನ್ನು ಕಾರ್ಯರೂಪಕ್ಕೆ ತರಲು ಯೋಜನೆ ಹಾಕಿಕೊಂಡ. ಅದುವೇ ಚರ್ಚ್ಗಳು ರಹಸ್ಯವಾಗಿ ಇನ್ಕಲ್ಚರೇಷನ್ ಎಂದು ಕರೆಯುತ್ತಿದ್ದ ಮಿಷನ್. ಆತನ ಆಲೋಚನೆ ಬಹಳ ಸರಳವಾಗಿತ್ತು. ಅದೇನೆಂದರೆ “ನಿಮಗೆ ಜನರನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೆ, ಅವರಂತೆಯೇ ಕಾಣುವ ಹಾಗೆ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ” ಎಂಬುದು. ಹೀಗಾಗಿ ಆತನ ಮತ ಪ್ರಚಾರ ನಿಧಾನಕ್ಕೆ ಹಿಂದೂತ್ವ ಮತ್ತು ಅದರ ಆಚರಣೆಗಳ ಕಡೆಗೆ ಹೊರಳಿತು.
ದೇವಾಲಯದಂತೆ ಕಾಣುವ ಚರ್ಚ್

ಮೈಕೆಲ್ ತ್ರಿಚಿ ಹೊರಗಿನ ಒಂದು ಹಳ್ಳಿಯಲ್ಲಿ ತನ್ನ ಮಿಷನ್ ಅನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಕ್ಕೆ ಕೈಹಾಕಿದ. ಅಲ್ಲಿ ಸ್ಥಳೀಯ ಚರ್ಚ್ವೊಂದು ನಿರ್ಮಾಣ ಹಂತದಲ್ಲಿತ್ತು, ಅದರ ಆಕಾರವನ್ನು ಬದಲಾಯಿಸಿದರೆ ಹೇಗೆ ಎಂದು ಆತ ಯೋಚಿಸಿದ. ತಕ್ಷಣವೇ ಯೂರೋಪಿಯನ್ ಶೈಲಿಯ ಬದಲಿಗೆ ದೇಗುಲದ ಗೋಪುರದಂತೆ ಕಾಣುವ ಪ್ರವೇಶದ್ವಾರಗಳನ್ನು ವಿನ್ಯಾಸಪಡಿಸಿದ, ಮಂಟಪದಂತೆ ಕಾಣಲು ಕೆತ್ತಿದ ಕಂಬಗಳನ್ನು ಹಾಕಿಸಿದ, ಹಿಂದೂ ದೇವಾಲಯಗಳಲ್ಲಿ ಕಾಣುವ ಕಮಾನುಗಳನ್ನು ಹಾಕಿಸಿದ .
ಇದು ಸ್ವತಃ ಆತನ ಕಲ್ಪನೆನೇನಲ್ಲ. ಭಾರತದಲ್ಲಿ ಅದಾಗಲೇ ಅಂತಹ ಸುಮಾರು ಚರ್ಚ್ಗಳಿದ್ದವು. ಅದರಿಂದಲೇ ಆತ ಪ್ರೇರಣೆ ಪಡೆದಿದ್ದ. ಗ್ರಾಮಸ್ಥರಿಗೆ ಸಾಂಸ್ಕೃತಿಕವಾಗಿ ನಾವಿನ್ನೂ ಮೂಲದಲ್ಲಿಯೇ ಇದ್ದೇವೆ ಎಂದು ಭಾಸವಾಗಲು ಮತ್ತು ಸುಲಭವಾಗಿ ಧರ್ಮ ಪರಿವರ್ತನೆಯ ಹಾದಿ ಹಿಡಿಯುವಂತೆ ಮಾಡಲು ದೇಗುಲದಂತೆ ಕಾಣುವ ಚರ್ಚ್ಗಳ ನಿರ್ಮಾಣ ಸಹಕಾರಿ ಎಂಬುದು ಮಿಷನರಿಗಳಿಗೆ ಚೆನ್ನಾಗಿಯೇ ತಿಳಿದಿತ್ತು. ಮೈಕೆಲ್ ಕೂಡ ದೇವಾಲಯದಂತೆ ವಿನ್ಯಾಸಗೊಳಿಸಿದ ಚರ್ಚ್ ಅನ್ನು ನಿರ್ಮಾಣ ಮಾಡಿಯೇ ಬಿಟ್ಟ. ಅದಕ್ಕೆ ದೇಗುಲ ಎಂದು ಹೆಸರನ್ನೂ ಇಟ್ಟ.
ಹೀಗೆ ಒಂದೊಂದೇ ಹೆಜ್ಜೆ ಮುಂದಿಟ್ಟ ಮೈಕೆಲ್ “ಸ್ವಾಮಿ ಮೈಕೆಲಾನಂದ” ಆಗಿ ಬದಲಾದ. ಕೇಸರಿ ಶಾಲು, ರುದ್ರಾಕ್ಷಿ ಮಾಲೆ ಮತ್ತು ಚಂದನದ ತಿಲಕವನ್ನೂ ಹಚ್ಚಿಕೊಳ್ಳಲಾರಂಭಿಸಿದ. ಇತಿಹಾಸದ ಪುಟ ತಿರುಗಿಸಿದರೆ ಹಲವು ಪಾದ್ರಿಗಳು, ಅಷ್ಟೇ ಯಾಕೆ ಬಂಗಾಳದ ತತ್ವಜ್ಞಾನಿ ಬ್ರಹ್ಮಬಂಧವ ಉಪಾಧ್ಯಾಯ ಸೇರಿದಂತೆ ಮತಾಂತರಗೊಂಡ ಅನೇಕ ಪ್ರಸಿದ್ಧ ವ್ಯಕ್ತಿಗಳು ಕೂಡ ಹಿಂದೂ ಉಡುಪು ಮತ್ತು ಚಿಹ್ನೆಗಳನ್ನು ಬಳಸಿಕೊಂಡು ಜನರ ಕಣ್ಣಿಗೆ ನಾವಿನ್ನೂ ಸಂಸ್ಕೃತಿ ಬಿಟ್ಟಿಲ್ಲ ಎಂದು ತೋರಿಸಿದ್ದನ್ನು ನಾವು ಕಾಣಬಹುದು. ಕೇಸರಿ ಉಡುಪಿನ ಮೇಲೆ ಕ್ರಾಸ್ ಮತ್ತು ರುದ್ರಾಕ್ಷಿ ಎರಡನ್ನೂ ಧರಿಸಿದವರಿದ್ದಾರೆ.
ಹೀಗೆ ಮೈಕೆಲ್ ಗ್ರಾಮಸ್ಥರ ಪಾಲಿಗೆ “ಸ್ವಾಮಿ ಮೈಕೆಲಾನಂದ” ಆಗಿ ಹೋದ. ಆತ ಎಂದೂ ತನ್ನನ್ನು ಹಿಂದೂ ಅಥವಾ ಕ್ರೈಸ್ಥ ಸನ್ಯಾಸಿ ಎಂದು ಹೇಳಿಕೊಳ್ಳಲಿಲ್ಲ. ಜನರು ತಮ್ಮ ಸಾಂಸ್ಕೃತಿಕ ಜಗತ್ತಿನಲ್ಲಿ ನನ್ನನ್ನು ಸಹಜವಾಗಿ ಕಾಣಲಿ ಎಂಬುದು ಆತನ ಆಶಯವಾಗಿತ್ತು. ಇದರಿಂದ ಮತ ಪ್ರಚಾರ ಸುಲಭವಾಗುತ್ತದೆ ಎಂಬುದನ್ನು ಆತ ಮೊದಲೇ ತಿಳಿದುಕೊಂಡಿದ್ದ.
ಭಜನೆಗಳು ಮತ್ತು ಯೇಸು ಸಹಸ್ರನಾಮಗಳು
ಆ ಹಳ್ಳಿಯಲ್ಲಿ ಪ್ರತಿ ಶುಕ್ರವಾರ ಸಂಜೆ ಜನರು ಭಜನೆಗಳನ್ನು ಹಾಡುತ್ತಿದ್ದರು. ಇದನ್ನೇ ಬಳಸಿಕೊಂಡ ಮೈಕೆಲ್ ಅಲ್ಲಿಗೆ ತಬಲಾ, ಹಾರ್ಮೋನಿಯಂ ಹಿಡಿದುಕೊಂಡು ಹೋದ, ನಾದಸ್ವರ ನುಡಿಸಿದ ಮತ್ತು ಕರ್ನಾಟಿಕ್ ರಾಗಗಳಲ್ಲಿ ಕೀರ್ತನೆಗಳನ್ನು ಹಾಡಲಾರಂಭಿಸಿದ. ಆದರೆ ಸಾಹಿತ್ಯ ಮಾತ್ರ ಕ್ರೈಸ್ತಮಯವಾಗಿತ್ತು. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಭಜನೆ ಶೈಲಿಯ ಕ್ರೈಸ್ತ ಗೀತೆಗಳನ್ನು ವ್ಯಾಪಕವಾಗಿ ಬಳಸುತ್ತಿರುವುದನ್ನು ನಾವು ಇಂದಿಗೂ ಕಾಣಬಹುದು. ಕ್ರೈಸ್ಥ ಆರಾಧನೆಯನ್ನು ಸಾಂಸ್ಕೃತಿಕವಾಗಿ ಪರಿಚಿತಗೊಳಿಸಲು ಇದು ಅಸ್ತ್ರವೂ ಆಗಿದೆ.
ಗ್ರಾಮಸ್ಥರು ಮೈಕೆಲ್ನಿಂದ ಪ್ರಭಾವಿತರಾಗಿ ಯೇಸು ಸಹಸ್ರನಾಮ, ಯೇಸು ಗೋವಿಂದಂ ಹೀಗೆ ಅನೇಕ ಗೀತೆಗಳನ್ನು ಆತ ಹೇಳಿಕೊಟ್ಟ ಸ್ವರದಲ್ಲಿ ಹಾಡಲಾರಂಭಿಸಿದರು. ತುಸುವೂ ಹಿಂಜರಿಯದಂತೆ ಗ್ರಾಮಸ್ಥರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದನ್ನು ನೋಡಿ ಸ್ವತಃ ಮೈಕಲನಿಗೂ ಆಶ್ಚರ್ಯವಾಗಿತ್ತು. ಹೀಗೆ ಅಲ್ಲಿ ಸೇರುತ್ತಿದ್ದವರ ಧ್ವನಿಗಳು ಒಂದೇ ಆಗಿತ್ತು. ಕೇವಲ ಅರ್ಥ ಮಾತ್ರ ಬದಲಾಗಿತ್ತು ಮತ್ತು ಕ್ರಮೇಣ ಅವರ ಧರ್ಮ ಕೂಡ ಬದಲಾಯಿತು.
ಹೀಗೆ ಯೇಸು ಸಹಸ್ರನಾಮಗಳು ಕೂಡ ಪ್ರಸಿದ್ಧವಾದವು. “ಯೇಸು ಸಹಸ್ರನಾಮ” ಎಂಬ ಹೆಸರಿನ ವೆಬ್ಸೈಟ್ ಕೂಡ ಹುಟ್ಟಿಕೊಂಡಿತು. ಯೇಸು ಸಹಸ್ರನಾಮ ಆಂಡ್ರಾಯ್ಡ್ ಮ್ಯೂಸಿಕ್ ಆಪ್ಗಳೂ ಜನಪ್ರಿಯವಾದವು. ಹಿಂದೂ ದೇವರುಗಳ ಅದರಲ್ಲೂ ವಿಶೇಷವಾಗಿ ಭಗವಾನ್ ವಿಷ್ಣು ಮತ್ತು ಶಿವನ 108 ಹೆಸರುಗಳನ್ನು ನಕಲು ಮಾಡಿ ಯೇಸುವಿಗೆ ಮರುನಾಮಕರಣವನ್ನೂ ಮಾಡಲಾಯಿತು. ತಾಯಿ ಮೇರಿ ಮತ್ತು ಬಾಲ ಯೇಸುವನ್ನು ಹಿಂದೂ ದೇವತೆ ಯಶೋದಾ ಮತ್ತು ಭಗವಾನ್ ಕೃಷ್ಣರೊಂದಿಗೆ ಹೋಲಿಸಿಯೂ ಆಯಿತು.
ಕ್ಯಾಂಡಲ್ ಬದಲಿಗೆ ದೀಪ
ದೀಪ ಬೆಳಗಿಸುವುದು ಹಿಂದೂ ಸಂಪ್ರದಾಯ. ಆದರೆ ಮೈಕಲ ತುಸು ಬುದ್ಧಿ ಉಪಯೋಗಿಸಿ ಯೇಸು ಪ್ರಾರ್ಥನೆಗೂ ಮುನ್ನ ಕ್ಯಾಂಡಲ್ ಬದಲಿಗೆ ದೀಪಗಳನ್ನು ಹಚ್ಚಲಾರಂಭಿಸಿದ. ಗಂಟೆ ಹೊಡೆಯುವುದು, ಧೂಪ ಹಚ್ಚುವುದು ಮತ್ತು ಪ್ರಾರ್ಥನೆಯ ನಂತರ ಸಿಹಿ ಪ್ರಸಾದ ವಿತರಿಸುವುದೂ ಕೂಡ ಆರಂಭವಾಯಿತು. ಹಿಂದೂ ದೇವಾಲಯಗಳಲ್ಲಿ ಬಳಸುವ ಧ್ವಜಸ್ತಂಭವೂ ಚರ್ಚ್ ಮುಂದೆ ಪ್ರತ್ಯಕ್ಷವಾಗಿ ಬಿಟ್ಟಿತು.
ಧರ್ಮ ಬದಲಾದರೂ ಹೆಸರು ಬದಲಾಗಲಿಲ್ಲ
ಹೀಗೆ ಮೈಕಲನ ಪ್ರಭಾವಕ್ಕೆ ಒಳಗಾಗಿ ಕಾಲಾನಂತರ ಕೆಲವು ಗ್ರಾಮಸ್ಥರು ಬ್ಯಾಪ್ಟಿಸಂ ಮಾಡಿಸಿಕೊಂಡರು. ಅವರಲ್ಲಿ ಅನೇಕರು ಕುಮಾರ್, ಲಕ್ಷ್ಮಿ, ಮಾರಿ, ದೇವಾನಂದ ಎಂಬಿತ್ಯಾದಿ ತಮ್ಮ ಹೆಸರುಗಳನ್ನು ಹಾಗೆಯೇ ಉಳಿಸಿಕೊಂಡರು. ಸಾಮಾಜದಿಂದ ಎದುರಾಗಬಹುದಾದ ಕಟು ಪ್ರತಿಕ್ರಿಯೆ ತಡೆಯಲು ಮತ್ತು ಸಾಂಸ್ಕೃತಿಕ ನಿರಂತರತೆಯನ್ನು ಉಳಿಸಿಕೊಂಡಿದ್ದೇವೆ ಎಂದು ತೋರ್ಪಡಿಸಲು ಹೆಸರು ಬದಲಾಯಿಸದೆ ಮತಾಂತರ ಮಾಡಿಸುವುದು ಕೂಡ ಮಿಷನರಿ ಆಚರಣೆಯ ಒಂದು ಭಾಗವೇ ಆಗಿದೆ. ಇಂತಹವರನ್ನು ಕ್ರಿಪ್ಟೋ ಕ್ರಿಶ್ಚಿಯನ್ಗಳು ಎಂದೂ ಕರೆಯುತ್ತಾರೆ.
ಮೈಕಲರ ಬಳಿ ಅನೇಕರು ನಿಮ್ಮ ಅನುಯಾಯಿಗಳು ಇನ್ನೂ ಯಾಕೆ ಬಿಂದಿ ಧರಿಸುತ್ತಾರೆ ಅಥವಾ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಎಂದು ಕೇಳಿದಾಗ, “ನಾವು ನಿಮ್ಮ ಸಂಸ್ಕೃತಿಯನ್ನು ಕಸಿದುಕೊಳ್ಳುವುದಿಲ್ಲ. ಕೇವಲ ನಿಮ್ಮ ಹೃದಯ ಬದಲಾಗಬೇಕು ಎಂಬುದಷ್ಟೇ ನಮ್ಮ ಆಶಯ” ಎಂದು ಹೇಳುತ್ತಿದ್ದ. ಹೀಗೆ ವರ್ಷಗಳು ಉರುಳಿದವು, ಮೈಕೆಲ್ ತನ್ನ ಮಿಷನ್ ಅನ್ನು ಬಹಳ ನಾಜೂಕಾಗಿ ಅನುಷ್ಠಾನಕ್ಕೆ ತಂದು ಯಶಸ್ವಿಯಾಗಿದ್ದ, ತನ್ನ ಮಿಷನರಿ ಕೆಲಸ ಇತರರಿಗಿಂತ ಭಿನ್ನವಾಗಿರುವುದನ್ನು ಕಂಡು ಸಂತೋಷಪಟ್ಟ. ದೇವಾಲಯದಂತೆ ಕಾಣುವ ಚರ್ಚ್ ನಿರ್ಮಿಸಿದ್ದೇನೆ, ಹಿಂದೂ ಸನ್ಯಾಸಿಯಂತೆ ಉಡುಪು ಧರಿಸಿದ್ದೇನೆ, ಕ್ರೈಸ್ತ ಕೀರ್ತನೆಗಳನ್ನು ಹಿಂದೂ ಭಜನೆಗಳಂತೆ ಹಾಡಿದ್ದೇನೆ, ಹಿಂದೂ ಹೆಸರುಗಳು, ಆಚರಣೆಗಳು ಮತ್ತು ಚಿಹ್ನೆಗಳನ್ನು ಬಳಸಿದ್ದೇನೆ ಮತ್ತು ಅದರ ಮೂಲಕವೇ ಜನರನ್ನು ಅವರಿಗೆಯೇ ತಿಳಿಯದಂತೆ ಕ್ರಿಸ್ತನತ್ತ ಹೊರಳುವಂತೆ ಮಾಡಿದ್ದೇನೆ ಎಂದು ಮನಸ್ಸಲ್ಲಿಯೇ ಹಿರಿ ಹಿರಿ ಹಿಗ್ಗಿದ. ಆದರೆ ಆತ ಭಾರತವನ್ನು ಬದಲಾಯಿಸಲಿಲ್ಲ. ಅವನು ಭಾರತದಲ್ಲಿ ಕ್ರಿಶ್ಚಿಯಾನಿಟಿಯ ಸ್ವರೂಪವನ್ನು ಬದಲಾಯಿಸಿದ್ದ.
ಇದು ಫಾದರ್ ಮೈಕೆಲ್ ದಿ’ಸೂಜ ಕಥೆ, ಈತ ವಾಸ್ತವದ ಆಚರಣೆಗಳಿಂದ ನಿರ್ಮಿತ ಕಾಲ್ಪನಿಕ ಪಾತ್ರ. ಭಾರತದಾದ್ಯಂತ ಹಿಂದೂ ಆಚರಣೆಗಳನ್ನು ಅಳವಡಿಸಿಕೊಂಡು ಮಿಷನರಿಗಳು ಹೇಗೆ ತಮ್ಮ ಬೇಳೆ ಬೇಯಿಸಿಕೊಂಡರು ಎಂಬುದನ್ನು ಈ ಪಾತ್ರ ಪ್ರತಿಬಿಂಬಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



