ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭಾರತ ‘ಮಿಶನ್ ಶಕ್ತಿ’ಯ ಮೂಲಕ ಸಾಧಿಸಿದ ಮಹತ್ವದ ಮೈಲಿಗಲ್ಲಿನ ಬಗ್ಗೆ ಘೋಷಣೆಯನ್ನು ಮಾಡಲು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ಮಿಶನ್ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಿದ ಅವರು, ಈ ಸಾಧನೆಗೆ ಕಾರಣೀಕರ್ತರಾದ ಡಿಆರ್ಡಿಓ ವಿಜ್ಞಾನಿಗಳಿಗೆ ಅಭಿನಂದನೆಯನ್ನು ತಿಳಿಸಿದರು. ಕ್ಷಿಪಣಿಯನ್ನು ಬಳಸಿ ಕೆಳ ಸ್ಥರದಲ್ಲಿರುವ ಉಪಗ್ರಹವನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದ ಅಮೆರಿಕಾ, ರಷ್ಯಾ ಮತ್ತು ಚೀನಾಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.
‘ಪ್ರತಿಯೊಂದು ದೇಶದ ಪಯಣದಲ್ಲೂ, ಅತೀವ ಹೆಮ್ಮೆಪಡುವಂತಹ ಮತ್ತು ತಲೆಮಾರುಗಳಿಗೂ ಐತಿಹಾಸಿ ಪರಿಣಾಮ ಬೀರಬಲ್ಲ ಘಟನೆಗಳು ಘಟಿಸುತ್ತವೆ. ಅಂತಹ ಒಂದು ಕ್ಷಣ ಇಂದು ನಡೆದಿದೆ. 2019ರ ಮಾರ್ಚ್ 27ರಂದು ಭಾರತ ಎ-ಸ್ಯಾಟ್ ಮಿಸೈಲ್ ಅನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಮಿಶನ್ ಶಕ್ತಿಯ ಹಿಂದಿನ ಎಲ್ಲಾ ರುವಾರಿಗಳಿಗೂ ನನ್ನ ಅಭಿನಂದನೆಗಳು’ ಎಂದಿದ್ದರು.
ಇಡೀ ಮಿಶನ್ ಸಂಪೂರ್ಣ ದೇಶೀಯವಾಗಿತ್ತು. ಮಿಸೈಲ್ನಿಂದ ಹೊಡೆದುರುಳಿಸುವ ಸಂದರ್ಭ ಉಪಗ್ರಹವು ಭೂಮಿಯಿಂದ 300 ಕಿಲೋಮೀಟರ್ ಎತ್ತರದ ಆರ್ಬಿಟ್ನಲ್ಲಿತ್ತು. ಭಾರತದ ಸಾಮರ್ಥ್ಯ ಸಂಪೂರ್ಣ ರಕ್ಷಣಾತ್ಮಕವಾಗಿದೆ, ಅದು ಯಾವುದೇ ದೇಶದ ವಿರುದ್ಧ ಅಲ್ಲ ಎಂಬುದನ್ನು ಜಗತ್ತಿಗೆ ಸಾರುವುದು ‘ಮಿಶನ್ ಶಕ್ತಿ’ಯ ಮುಖ್ಯ ಉದ್ದೇಶವಾಗಿತ್ತು.
ಬುಧವಾರದ ಘೋಷಣೆಯ ಮೂಲಕ ಮೋದಿಯವರು ಮತ್ತೊಮ್ಮೆ, ಪಾಕಿಸ್ಥಾನ, ಚೀನಾಗೆ ದಿಟ್ಟ ಸಂದೇಶವನ್ನು ರವಾನಿಸಿದರು. ತನ್ನ ನಾಯಕತ್ವದಲ್ಲಿ ಭಾರತವು ಶಕ್ತಿಶಾಲಿ ಡಿಫೆನ್ಸ್ ಪಾಲಿಸಿಯನ್ನು ಹೊಂದಿದೆ ಮತ್ತು ದೇಶ ಈಗ ಎಲ್ಲಾ ಶಕ್ತಿಗಳ ವಿರುದ್ಧವೂ ಹೋರಾಡಲು ಸಮರ್ಥವಾಗಿದೆ ಎಂಬುದನ್ನು ಸಾರಿಸಿದರು. ಎಸ್ಯಾಟ್ ಯಶಸ್ವಿ ಪರೀಕ್ಷೆಯ ಮೂಲಕ, ಭಾರತ ಬಾಹ್ಯಾಕಾಶದಲ್ಲೂ ತನ್ನ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಿದೆ. ಮೋದಿಯವರ ನಾಯಕತ್ವದಲ್ಲಿ, ಈಗಾಗಲೇ ಭಾರತ ಎರಡು ಸರ್ಜಿಕಲ್ ಸ್ಟ್ರೈಕ್ಗಳನ್ನು ನಡೆಸಿದೆ. ಅದೂ ಪಾಕಿಸ್ಥಾನದ ಒಳಗಡೆ. ಮೊದಲ ಸರ್ಜಿಕಲ್ ಸ್ಟ್ರೈಕ್ ಅನ್ನು 2016 ರ ಸೆ. 28-29ರ ರಾತ್ರಿ ಸೇನೆ ನಡೆಸಿತು. ಎರಡನೆಯ ಸರ್ಜಿಕಲ್ ಸ್ಟ್ರೈಕ್ ಅನ್ನು ವಾಯುಸೇನೆ 2019ರ ಫೆ. 26 ರಂದು ನಡೆಸಿತು.
ಬಾಲಕೋಟ್ ವೈಮಾನಿಕ ದಾಳಿ
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಜೈಶೇ ಮೊಹಮ್ಮದ್ ಉಗ್ರರು ಪೈಶಾಚಿಕ ಕೃತ್ಯವನ್ನು ನಡೆಸಿ 40 ಮಂದಿ ಸಿಆರ್ ಪಿಎಫ್ ಯೋಧರನ್ನು ಹತ್ಯೆ ಮಾಡಿದ ಘಟನೆ ಘಟಿಸಿ ಕೇವಲ 1 ದಿನ ಮತ್ತು 12 ಗಂಟೆಗಳಲ್ಲಿ, ಭಾರತೀಯ ವಾಯುಸೇನೆಯು ಪಾಕಿಸ್ಥಾನ ಗಡಿಯೊಳಗೆ ನುಗ್ಗಿ ಬಾಲಾಕೋಟ್ನಲ್ಲಿದ್ದ ಜೈಶೇ ಉಗ್ರರ ಶಿಬಿರಗಳ ಮೇಲೆ 1000 ಕೆಜಿ ಬಾಂಬ್ ಅನ್ನು ಎತ್ತಿ ಹಾಕಿ ಬಂದಿತ್ತು. ಇದರಲ್ಲಿ 200-300 ಉಗ್ರರು ಸತ್ತಿರುವ ನಿರೀಕ್ಷೆ ಇದೆ. ರಾತ್ರಿ 3 ಗಂಟೆಗೆ ಈ ಕಾರ್ಯಾಚರಣೆ ನಡೆದಿತ್ತು. 12 ಮಿರಾಜ್ 2000 ಯುದ್ಧ ವಿಮಾನಗಳು ಎಲ್ ಓಸಿಯನ್ನು ದಾಟಿ ಜೈಶೇ ಉಗ್ರರ ಕ್ಯಾಂಪ್ ಮೇಲೆ ದಾಳಿಯನ್ನು ನಡೆಸಿತ್ತು. ಬಳಿಕ ಸರ್ಕಾರ ಇದನ್ನು ಮಿಲಿಟರಿಯೇತರ ದಾಳಿ ಎಂದು ಹೇಳಿತ್ತು. ಜೈಶೇ ಉಗ್ರರು ಭಾರತದ ಮೇಲೆ ಇನ್ನಷ್ಟು ದಾಳಿಗಳನ್ನು ನಡೆಸುವ ಬಗ್ಗೆ ಗುಪ್ತಚರ ಮಾಹಿತಿಗಳು ಬಂದ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಈ ದಾಳಿ ನಡೆಸಿದ್ದಾಗಿ ಜಗತ್ತಿಗೆ ಸ್ಪಷ್ಟಪಡಿಸಿತ್ತು. 21 ನಿಮಿಷದಲ್ಲಿ ಸಂಪೂರ್ಣ ಕಾರ್ಯಾಚರಣೆ ಯಶಸ್ವಿಯಾಗಿದೆ ಮತ್ತು ಎಲ್ಲಾ ಯುದ್ಧ ವಿಮಾನಗಳು ಸುರಕ್ಷಿತವಾಗಿ ವಾಪಾಸ್ ಬಂದಿವೆ ಎಂದು ಭಾರತ ಘೋಷಿಸಿತು. ಪುಲ್ವಾಮ ದಾಳಿಯ ಬಳಿಕ, ಯೋಧರ ಸಾವಿಗೆ ಪ್ರತಿಕಾರ ತೀರಿಸುವುದಾಗಿ ಮೋದಿ ಘೋಷಣೆ ಮಾಡಿದ್ದರು. ಅದರಂತೆಯೇ ನಡೆದುಕೊಂಡರು.
ವಾಸ್ತವ ಗಡಿ ರೇಖೆಯ ಸಮೀಪ ಸರ್ಜಿಕಲ್ ಸ್ಟ್ರೈಕ್
2016ರ ಸೆಪ್ಟಂಬರ್ 28 ಮತ್ತು 29ರ ರಾತ್ರಿ ಭಾರತೀಯ ಸೇನೆಯು ವಾಸ್ತವ ಗಡಿ ರೇಖೆಯ ಸಮೀಪದ ಪಾಕಿಸ್ಥಾನದಲ್ಲಿ ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ಅನ್ನು ನಡೆಸಿತ್ತು. ಇದು ಕೂಡ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, 7 ಉಗ್ರರ ಶಿಬಿರಗಳನ್ನು ನಾಶ ಮಾಡಲಾಗಿತ್ತು. ಇದು 5 ಗಂಟೆಯ ಸುದೀರ್ಘ ಅವಧಿಯ ಕಾರ್ಯಾಚರಣೆಯಾಗಿತ್ತು. ಉರಿಯ ಮೇಲೆ ಭಯೋತ್ಪಾದನಾ ದಾಳಿ ನಡೆದು, 17 ಸೈನಿಕರು ಹುತಾತ್ಮರಾದ ಬಳಿಕ , ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಮೋದಿ ಹೇಳಿಕೊಂಡಿದ್ದರು. ಆ ಪ್ರತಿಕ್ರಿಯೆಯೇ ಸರ್ಜಿಕಲ್ ಸ್ಟ್ರೈಕ್. ಗಡಿರೇಖೆಯ 500 ಮೀಟರ್ನಿಂದ ಮೂರು ಕಿಲೋಮೀಟರ್ನಾದ್ಯಂತ ಈ ಕಾರ್ಯಾಚರಣೆ ನಡೆದಿತ್ತು. ಎಎಲ್ ಎಚ್ ಧ್ರುವ್ ಹೆಲಿಕಾಫ್ಟರ್ ಅನ್ನು ಬಳಕೆ ಮಾಡಿ ಸೇನಾ ಕಮಾಂಡೋಗಳನ್ನು ಪಾಕಿಸ್ಥಾನದ ಗಡಿಯೊಳಗೆ ನುಗ್ಗಿಸಲಾಗಿತ್ತು. ಆಗಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭದ್ರತಾ ಸಲಹೆಗಾರ ಅಜಿತ್ ದೋವಲ್, ಆಗಿನ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಅವರು ಸಂಪೂರ್ಣ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ನಡೆಸಿದ್ದರು.
ಈ ಎರಡು ಮಹತ್ವದ ಕಾರ್ಯಾಚರಣೆಗಳು ಭಾರತದ ಶಕ್ತಿ ಎಂತಹುದು ಎಂಬುದನ್ನು ವಿಶ್ವಕ್ಕೆ ಮನದಟ್ಟು ಮಾಡಿದ್ದವು. ಇದೀಗ ಭಾರತ ಸ್ಪೇಸ್ ಸೂಪರ್ ಪವರ್ ಆಗಿ ಹೊರಹೊಮ್ಮಿದೆ. ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಇನ್ನಷ್ಟು ಬಲ ದೊರೆತಿದೆ. ಬಾಹ್ಯಾಕಾಶದಲ್ಲೂ ಸರ್ಜಿಕಲ್ ಸ್ಟ್ರೈಕ್ ಮಾಡಬಲ್ಲಂತಹ ಸಾಮರ್ಥ್ಯ ಈಗ ಭಾರತಕ್ಕೆ ಸಿಕ್ಕಿದೆ. ಎ ಸ್ಯಾಟ್ ಆ್ಯಂಟಿ ಸೆಟ್ಲೈಟ್ ಮಿಸೈಲ್ ಅನ್ನು ಪ್ರಯಯೋಗ ಮಾಡುವ ಮೂಲಕ ಭಾರತ ತನ್ನ ಶತ್ರು ರಾಷ್ಟ್ರಗಳಾದ ಪಾಕಿಸ್ಥಾನ ಮತ್ತು ಚೀನಾಗೆ ಕಟುವಾದ ಸಂದೇಶ ರವಾನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.