ಇತ್ತೀಚಿಗೆ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿಗಳನ್ನು ಪಡೆದ ಹಲವಾರು ಮೇರು ಪ್ರತಿಭೆಗಳ ಪೈಕಿ ಡಾ.ಮೊಹಮ್ಮದ್ ಹನೀಫ್ ಖಾನ್ ಶಾಸ್ತ್ರೀ ಕೂಡ ಒಬ್ಬರು. ಮಹಾನ್ ಸಂಸ್ಕೃತ ಪಂಡಿತನಾಗಿರುವ ಇವರು, ರಾಷ್ಟ್ರೀಯ ಸಂಸ್ಕೃತಿ ಸಂಸ್ಥಾನ್ ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಖಾನ್ ಮತ್ತು ಶಾಸ್ತ್ರೀ ಎರಡೂ ಉಪನಾಮಗಳು ಇವರ ಹೆಸರಿನಲ್ಲಿರುವುದು ಇವರ ಧಾರ್ಮಿಕ ಸಹಿಷ್ಣುತೆಯನ್ನು ಸಾಂಕೇತಿಸುತ್ತದೆ. ಮುಸ್ಲಿಮನಾಗಿ ಹುಟ್ಟಿದರೂ ಹಿಂದೂ ವೇದ ಶಾಸ್ತ್ರ, ಉಪನಿಷದ್ಗಳ ಬಗ್ಗೆ ಇವರಿಗೆ ಅಮೋಘ ಜ್ಞಾನವಿದೆ. ಸಂಸ್ಕೃತದಲ್ಲಿ ಹತ್ತು ಹಲವು ಪುಸ್ತಕಗಳನ್ನು ಇವರು ಬರೆದಿದ್ದಾರೆ. ಹಿಂದೂ ಪುರಾಣಗಳ ಅಧ್ಯಯನವನ್ನು ಮಾಡಿ ಪಂಡಿತರೆನಿಸಿಕೊಂಡಿದ್ದಾರೆ. ತೌಲನಿಕ ಧಾರ್ಮಿಕಾಧ್ಯಯನದಲ್ಲಿ “ಆಚಾರ್ಯ” ಮತ್ತು “ಶಾಸ್ತ್ರೀ” ಉಪಾದಿಗಳನ್ನೂ ಪಡೆದುಕೊಂಡಿದ್ದಾರೆ.
ಇವರು ಜನಿಸಿದ್ದು ಉತ್ತರಪ್ರದೇಶದ ವಾರಣಾಸಿ ಸಮೀಪದ ಸೋನಭದ್ರಾದಲ್ಲಿ. ಇವರ ಕುಟುಂಬದಲ್ಲಿ 5ನೇ ತರಗತಿಯನ್ನು ಪೂರ್ಣಗೊಳಿಸಿದವರೆಂದರೆ ಖಾನ್ ಶಾಸ್ತ್ರೀ ಒಬ್ಬರೇ. ಇವರ ಮನೆ ಪರಿಸರ ಶಿಕ್ಷಣಕ್ಕೆ ಪೂರಕವಾಗಿರಲಿಲ್ಲ. ಇದೇ ಕಾರಣಕ್ಕೋ ಏನೋ ಹೈಸ್ಕೂಲ್ ನಲ್ಲಿ ಅವರು ಅಣುತ್ತೀರ್ಣಗೊಂಡರು. ಆಗ ಅವರ ಶಿಕ್ಷಕ ಪಂಡಿತ್ ರತ್ನಲಾಲ್ ಶಾಸ್ತ್ರೀ ಅವರು, ಪ್ರತಿನಿತ್ಯ ಭಗವದ್ಗೀತೆಯ ಒಂದು ಅಧ್ಯಾಯವನ್ನು ಓದುವಂತೆ ತಿಳಿಸಿದರು, ಇದರಿಂದ ನಿನ್ನ ಎಲ್ಲಾ ಸಮಸ್ಯೆಗಳೂ ನಿವಾರಣೆಯಾಗುತ್ತದೆ ಎಂದು ಹೇಳಿದ್ದರು. ಈ ಮೂಲಕ ಖಾನ್ ಶಾಸ್ತ್ರೀ ಅವರು, ಭಗವದ್ಗೀತೆಯತ್ತ ಮುಖ ಮಾಡಿದರು, ಅವರಲ್ಲಿ ಆ ಪವಿತ್ರ ಪುಸ್ತಕದ ಬಗ್ಗೆ ಆಸಕ್ತಿ ಸ್ಪುರಣಗೊಂಡಿತು, ಅದರ ಮಹತ್ವವನ್ನು ಇತರರೊಂದಿಗೂ ಹಂಚಿಕೊಳ್ಳಬೇಕು ಎಂಬ ತುಡಿತ ಹೆಚ್ಚಾಯಿತು. ಆ ತುಡಿತವೇ ಅವರನ್ನು ಸಂಸ್ಕೃತ ಪಾಂಡಿತ್ಯದತ್ತ ಕರೆದೊಯ್ಯಿತು.
ಖಾನ್ ಶಾಸ್ತ್ರೀ ಅವರು, ಸಂಸ್ಕೃತದಲ್ಲಿ ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆ. ವಾರಣಾಸಿಯ ಸಂಪೂರ್ಣ ಆನಂದ್ ಅವರ ನೇತೃತ್ವದಲ್ಲಿ ಪುರಾಣಗಳ ಅಧ್ಯಯನ ಮಾಡಿದ್ದಾರೆ. ಆಚಾರ್ಯ ಮತ್ತು ಶಾಸ್ತ್ರೀ ಪದವಿಗಳನ್ನೂ ಪಡೆದುಕೊಂಡಿದ್ದಾರೆ. ತುಲನಾತ್ಮಕ ಧರ್ಮ ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದುಕೊಂಡಿದ್ದಾರೆ. ‘ಮಹಾಮಂತ್ರ ಗಾಯತ್ರಿ ಮತ್ತು ಸುರ್ಹ್ ಫತಿಹ್ಹದ ಅರ್ಥ ಪ್ರಯೋಗ ಮತ್ತು ಮಹಾತ್ಮೆಗಳ ದೃಷ್ಟಿಯಿಂದ ತುಲನಾತ್ಮಕ ಅಧ್ಯಯನ’ ಎಂಬ ವಿಷಯದಲ್ಲೂ ಇವರು ಡಾಕ್ಟರೇಟ್ ಥಿಸಿಸ್ ಮಂಡಿಸಿದ್ದಾರೆ.
ಮುಸ್ಲಿಂನಾಗಿ ಹಿಂದೂ ಧರ್ಮಗ್ರಂಥಗಳ ಪಾಂಡಿತ್ಯ ಪಡೆಯುವ ಇವರ ನಿರ್ಧಾರ ಅಷ್ಟು ಸುಲಭದ್ದಾಗಿರಲಿಲ್ಲ. ತನ್ನ ಸಮುದಾಯದವರ ತೀವ್ರವಾದ ವಿರೋಧವನ್ನೂ ಇವರು ಕಟ್ಟಿಕೊಳ್ಳಬೇಕಾಯಿತು. ಕುರಾನನ್ನು ಹಿಂದೂ ಗ್ರಂಥಗಳಿಗೆ ಹೋಲಿಕೆ ಮಾಡಿ ಬರಿಯುವುದಕ್ಕೆ ಹಲವಾರು ಮಂದಿ ವಿರೋಧ ವ್ಯಕ್ತಪಡಿಸಿದರು. ಬೆದರಿಕೆಯನ್ನೂ ಹಾಕಿದರು. ಆದರೆ ಇದ್ಯಾವುದಕ್ಕೂ ಅವರು ಜಗ್ಗಲಿಲ್ಲ. ತಮ್ಮ ಸಂಸ್ಕೃತ ಅಧ್ಯಯವನ್ನು ಅವರು ಇನ್ನಷ್ಟು ತೀವ್ರಗೊಳಿಸುತ್ತಲೇ ಸಾಗಿದರು. ‘ಮೋಹನಗೀತಾ’, ‘ವೇದ ಮತ್ತು ಖುರಾನ್ ಗಳಲ್ಲಿ ಗಾಯಂತ್ರಿಮಂತ್ರ ಹಾಗೂ ಸುರಾಹ್-ಫತೀಹ’, ‘ವೇದಗಳಲ್ಲಿ ಮಾನವ ಹಕ್ಕು ಮತ್ತು ಅಧಿಕಾರ’, ‘ಗಾಯತ್ರೀ ಮಂತ್ರದ ಬೌದ್ಧಿಕ ಉಪಯೋಗಗಳು’, ‘ಶ್ರೀಮದ್ಭಗವದ್ಗೀತಾ ಮತ್ತು ಖುರಾನ್’ ಮುಂತಾದ ಎಂಟಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರು.
ಮುಸ್ಲಿಂನಾಗಿ ಹುಟ್ಟಿ, ಮುಸ್ಲಿಂ ಧರ್ಮವನ್ನು ಪಾಲನೆ ಮಾಡುತ್ತಿರುವ ಖಾನ್ ಶಾಸ್ತ್ರೀ ಅವರು ಸಂಸ್ಕೃತದಲ್ಲಿ ಮಾಡಿರುವ ಸಾಧನೆ ಅಮೋಘವಾಗಿದೆ. ತನ್ನವರನ್ನೇ ಎದುರು ಹಾಕಿಕೊಂಡು ಅವರಿಂದು ಶಾಸ್ತ್ರೀ ಪದವಿಯನ್ನು ಪಡೆದುಕೊಂಡಿದ್ದಾರೆ. ಪ್ರೊಫೆಸರ್ ಆಗಿದ್ದಾರೆ. ಜಾತಿ ಧರ್ಮದ ಹಂಗಿಲ್ಲದೆ ಭಾರತದ ಧರ್ಮ, ವೇದ, ಗ್ರಂಥಗಳ ಅಧ್ಯಯನವನ್ನು ಮಾಡಬಹುದು, ಪ್ರಾಚೀನ ಪರಂಪರೆಗಳು ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ರಹದಾರಿಗಳು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.
2009ರ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪಡೆದ ಖಾನ್ ಶಾಸ್ತ್ರಿಯವರು, ಇತ್ತೀಚಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪದ್ಮಶ್ರೀ ಪುರಸ್ಕಾರವನ್ನೂ ಪಡೆದುಕೊಂಡಿದ್ದಾರೆ. ಸಂಸ್ಕೃತ ಭಾಷೆಯ ಕಲಿಕೆ ಹಾಗೂ ಉಳಿಕೆ ಮತ್ತು ಹಿಂದೂ ಧರ್ಮಗ್ರಂಥಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಈ ಪುರಸ್ಕಾರ ಅವರಿಗೆ ಇನ್ನಷ್ಟು ಪ್ರೇರಣೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.