ಕಳೆದ ಒಂದು ವರ್ಷದಿಂದ ತೀವ್ರ ಸ್ವರೂಪದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಭಾನುವಾರ ಸಂಜೆ ಇಹಲೋಕವನ್ನು ತ್ಯಜಿಸಿದ್ದಾರೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿ ಹೆಸರು ಮಾಡಿದ್ದ ಅವರ ಅಗಲುವಿಕೆ ಭಾರತಕ್ಕಾದ ಅತೀದೊಡ್ಡ ನಷ್ಟವೆಂದರೆ ಅತಿಶಯೋಕ್ತಿಯಲ್ಲ. ಕ್ಯಾನ್ಸರ್ನಿಂದ ಬಳಲುತ್ತಿದ್ದರೂ, ಆಸ್ಪತ್ರೆಗೆ ಪದೇ ಪದೇ ದಾಖಲಾಗಬೇಕಾದ ಸ್ಥಿತಿ ಬಂದರೂ ಕೊನೆಯುಸಿರೆಳೆಯುವವರೆಗೂ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ಕುಂದುಕೊರತೆಯಿಲ್ಲದೆ ಸಮರ್ಥವಾಗಿಯೇ ನಿಭಾಯಿಸಿದ ಹಿರಿಮೆ ಅವರದ್ದು. ಮೂಗಿಗೆ ಪೈಪ್ ಅಳವಡಿಸಿದ ಸ್ಥಿತಿಯಲ್ಲೂ ಬಂದು ಕಾಮಗಾರಿಗಳ ವೀಕ್ಷಣೆ ಮಾಡಿದ್ದಾರೆ, ವಿಧಾನಸಭೆಯಲ್ಲಿ ಬಜೆಟ್ನ್ನೂ ಮಂಡಿಸಿದ್ದಾರೆ. ಸೇವೆಗೆಂದೇ ಜೀವನವನ್ನು ಮುಡುಪಾಗಿಟ್ಟವನಿಗೆ ಮಾತ್ರ ಸಾವಿನ ಅಂಚಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆಯಲು ಸಾಧ್ಯ.
1995ರ ಡಿಸೆಂಬರ್ 13ರಂದು ಗೋವಾದಲ್ಲಿ ಜನಿಸಿದ ಪರಿಕ್ಕರ್ ಅವರು, ನಾಲ್ಕು ಬಾರಿ ಗೋವಾ ಸಿಎಂ ಆಗಿದ್ದಾರೆ. ಸರಳ ಜೀವನಕ್ಕೆ ಹೆಸರಾದ ಅವರು, ಆಗಾಗ ಸಾರ್ವಜನಿಕರ ಕ್ಯೂಗಳಲ್ಲಿ ನಿಂತುಕೊಂಡಿದ್ದನ್ನು ನಾವು ನೋಡಿದ್ದೇವೆ. ಸಿಎಂ ಆದ ಆರಂಭದಲ್ಲಿ ಅವರು ಸ್ಕೂಟಿಯಲ್ಲೇ ತಮ್ಮ ಕಛೇರಿಗೆ ಆಗಮಿಸುತ್ತಿದ್ದರು. ಭದ್ರತೆಯನ್ನೂ ಅವರು ಪಡೆಯುತ್ತಿರಲಿಲ್ಲ. ಸಾಮಾನ್ಯನಂತೆ ಬದುಕುವುದು ಅವರಿಗೆ ಬಹಳ ಇಷ್ಟವಾಗಿತ್ತು. ತಮ್ಮ ಸ್ಕೂಟರ್ನಲ್ಲಿ ಒಮ್ಮೆ ಪ್ರಯಾಣಿಸುತ್ತಿದ್ದಾಗ, ದುಬಾರಿ ಕಾರಿನಲ್ಲಿ ಬಂದ ಯುವಕನೊಬ್ಬ ಇವರಿಗೆ ಗುದ್ದಿ ಅಪಘಾತ ಮಾಡಿದ್ದ. ಬಳಿಕ ಅವರೊಂದಿಗೆ ಜಗಳಕ್ಕಿಳಿದ ವ್ಯಕ್ತಿ, ನಾನು ಗೋವಾ ಪೊಲೀಸ್ ಕಮಿಷನರ್ ಮಗ ಎಂದು ದರ್ಪ ತೋರಿಸಿದ್ದ. ಆತನೊಂದಿಗೆ ವಿನಮ್ರವಾಗಿಯೇ ನಡೆದುಕೊಂಡ ಪರಿಕ್ಕರ್ ಅವರು, ನಾನು ಗೋವಾ ಸಿಎಂ ಎಂದು ಆತನಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಮಾತನ್ನು ಕೇಳಿ ಯುವಕನಿಗೆ ಗರಬಡಿದಂತಾಗಿದೆ. ಅವರ ಸರಳತೆಯನ್ನು ವಿವರಿಸಲು ಇಂತಹ ಹಲವಾರು ಉದಾಹರಣೆಗಳು ಸಿಗುತ್ತವೆ.
2000ನೇ ಇಸವಿಯಲ್ಲಿ ಪರಿಕ್ಕರ್ ಅವರು ಮೊದಲ ಬಾರಿಗೆ ಅಧಿಕಾರಕ್ಕೆ ಬಂದರು. 11 ತಿಂಗಳುಗಳ ಫ್ರಾನ್ಸಿಸ್ಕೋ ಸರ್ದಿನ್ಹಾ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಬಿಜೆಪಿ ವಾಪಾಸ್ ಪಡೆದ ಬಳಿಕ ಅವರು ಸಿಎಂ ಆದರು. 2002ರ ಫೆಬ್ರವರಿಯಲ್ಲಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಹೊಸದಾಗಿ ಚುನಾವಣೆ ನಡೆಸಲಾಯಿತು. ಚುನಾವಣೆಯಲ್ಲಿ ಗೆದ್ದು ಮತ್ತೆ ಸಿಎಂ ಆದರು, 2005ರ ವರೆಗೂ ಅಧಿಕಾರ ನಡೆಸಿದರು.
2012ರಲ್ಲಿ ಗೋವಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ಪರಿಕ್ಕರ್ ಅವರು ಸಿಎಂ ಆದರು. ಆದರೆ 2014ರ ಲೋಕಸಭಾ ಚುನಾವಣೆಯ ಬಳಿಕ ಅವರು ರಾಷ್ಟ್ರ ಮಟ್ಟಕ್ಕೆ ಹೋದರು. ತಮ್ಮ ಸಿಎಂ ಹುದ್ದೆಯನ್ನು ಲಕ್ಷ್ಮೀಕಾಂತ್ ಪರೆಸ್ಕರ್ಗೆ ಹಸ್ತಾಂತರಿಸಿ ಅವರು, ದೇಶದ ರಕ್ಷಣಾ ಸಚಿವ ಹುದ್ದೆಯನ್ನು ಅಲಂಕರಿಸಿದರು. ಆದರೆ ಎರಡು ವರ್ಷಗಳ ತರುವಾಯ ಮತ್ತೆ ಅವರು ಗೋವಾಗೆ ಬರಬೇಕಾಯಿತು.
2017ರ ಗೋವಾ ಚುನಾವಣೆಯಲ್ಲಿ, ಕಾಂಗ್ರೆಸ್ ಏಕೈಕ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಬಿಜೆಪಿ ಗೋವಾ ಫಾರ್ವ್ರ್ಡ್ ಪಕ್ಷ, ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಮತ್ತು ಸ್ವತಂತ್ರ ಅಭ್ಯರ್ಥಿಗಳ ಬೆಂಬಲದೊಂದಿಗೆ 40 ಸ್ಥಾನಗಳ ವಿಧಾನಸಭೆಯ ಮ್ಯಾಜಿಕ್ ನಂಬರ್ 21ನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಆದರೆ ಮೈತ್ರಿಗಳು ಪರಿಕ್ಕರ್ ಅವರೇ ಸಿಎಂ ಆಗಬೇಕು ಎಂದು ಬೇಡಿಕೆಯಿಟ್ಟರು. ಪರಿಕ್ಕರ್ ಸಿಎಂ ಆದರೆ ಮಾತ್ರ ನಾವು ಬೆಂಬಲ ನೀಡುವುದಾಗಿ ಗೋವಾ ಫಾರ್ವರ್ಡ್ ಪಕ್ಷ ಕಟುವಾಗಿ ಹೇಳಿತು.
ಹೀಗಾಗಿ ಕೇಂದ್ರ ಬಿಜೆಪಿ ಪರಿಕ್ಕರ್ ಅವರನ್ನು ಅನಿವಾರ್ಯವಾಗಿ ರಕ್ಷಣಾ ಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಗೋವಾಗೆ ಕಳುಹಿಸಿಕೊಟ್ಟಿತು.
ಪರಿಕ್ಕರ್ ಅವರ ಜೀವನದ ಮತ್ತೊಂದು ವಿಷಯವೆಂದರೆ, ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ(ಐಐಟಿ-ಬಾಂಬೆ)ಯಲ್ಲಿ ಮೆಟಲರ್ಜಿಕಲ್ ಎಂಜಿನಿಯರ್ ಪಡೆದವರು. ಎಂಜಿನಿಯರ್ ಪದವಿ ಪಡೆದು ಶಾಸಕನಾದ ಐಐಟಿ-ಬಾಂಬೆಯ ಮೊದಲ ವಿದ್ಯಾರ್ಥಿ. ತಂತ್ರಜ್ಞಾನದ ಬಗೆಗಿನ ಉನ್ನತ ಮಟ್ಟದ ಜ್ಞಾನಗಳು ಇವರಿಗಿದ್ದವು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಸ್ವಯಂಸೇವಕನಾಗಿದ್ದ ಇವರು, ಅದರಲ್ಲಿ ವಿವಿಧ ಹುದ್ದೆಗಳನ್ನು ಕೂಡ ನಿಭಾಯಿಸಿದ್ದಾರೆ.
ಅತ್ಯಂತ ಪ್ರತಿಷ್ಠಿತ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ(ಐಎಫ್ಎಫ್ಐ)ನ್ನು ಗೋವಾಗೆ ತಂದ ಕೀರ್ತಿ ಇವರದ್ದು.
ತೀವ್ರ ಸ್ವರೂಪದ ಕ್ಯಾನ್ಸರ್ ಬಾಧಿಸಿದಾಗಲೂ ಅವರು ವಿಚಲಿತಗೊಂಡಿರಲಿಲ್ಲ, ತಮ್ಮ ಕರ್ತವ್ಯವನ್ನು ಅತ್ಯಂತ ಶಾಂತವಾಗಿಯೇ ಅವರು ನಿಭಾಯಿಸಿದ್ದಾರೆ. ರಾಜಕೀಯ ವಿರೋಧಿಗಳ ಟೀಕೆಯನ್ನು ಅವರು ಲೆಕ್ಕಕ್ಕಿಟ್ಟುಕೊಳ್ಳಲಿಲ್ಲ. ಸಮಾರಂಭವೊಂದರಲ್ಲಿ ಅವರು ಉರಿ-ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದ ಪ್ರಸಿದ್ಧ ಘೋಷಣೆ ‘ಹೌ ಈಸ್ ದಿ ಜೋಶ್’ ಎಂದು ಹೇಳುವ ದೃಶ್ಯ ಸಿಕ್ಕಾಬಟ್ಟೆ ವೈರಲ್ ಆಗಿತ್ತು. ಸಾವಿಗೆ ಹತ್ತಿರದಲ್ಲಿದ್ದರೂ ಅವರು ತಮ್ಮೊಳಗಿನ ಜೋಶ್ನ್ನು ಸದಾ ಹೈ ಲೆವೆಲ್ನಲ್ಲೇ ಇಟ್ಟುಕೊಂಡಿದ್ದರು. ಅವರ ಅಂತರಾತ್ಮ ಸದಾ ಸೇವೆಗಾಗಿಯೇ ತುಡಿಯುತ್ತಿತ್ತು. ಅವರ ಅಗಲುವಿಕೆಯ ಮೂಲಕ ಭಾರತ ಅತ್ಯಮೂಲ್ಯವಾದ ಜನ ಸೇವಕನನ್ನು ಕಳೆದುಕೊಂಡಿದ್ದು, ತುಂಬಲಾರದ ನಷ್ಟವನ್ನು ಅನುಭವಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.